
GBA Budget: ಬೀದಿ ನಾಯಿಗಳ ಆಶ್ರಯ ಕೇಂದ್ರಗಳಿಗೆ ಕೋಟಿ ಕೋಟಿ ಅನುದಾನ
ಬೆಂಗಳೂರು ಪೂರ್ಣ ಪಾಲಿಕೆ ಹಾಗೂ ಕೇಂದ್ರ ಪಾಲಿಕೆ ಜತೆ ಸೇರಿ ಒಟ್ಟು 17 ಕೋಟಿ ರೂಪಾಯಿ ಮೀಸಲಿಟ್ಟಿದ್ದು, ಸುಪ್ರೀಂ ಕೋರ್ಟ್ ಆದೇಶ ಪಾಲನೆಗೆ ಒತ್ತು ನೀಡಿದೆ.
ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಬೆಂಗಳೂರಿನ ಪೂರ್ವ ಮತ್ತು ಕೇಂದ್ರ ನಗರ ಪಾಲಿಕೆಗಳು 2026-27ನೇ ಸಾಲಿನ ಬಜೆಟ್‌ನಲ್ಲಿ ಬೀದಿ ನಾಯಿಗಳ ನಿಯಂತ್ರಣ ಹಾಗೂ ಆಶ್ರಯ ಕೇಂದ್ರಗಳ ನಿರ್ಮಾಣಕ್ಕೆ ಭರ್ಜರಿ ಅನುದಾನ ಮೀಸಲಿಟ್ಟಿವೆ. ಸುಪ್ರೀಂ ಕೋರ್ಟ್ ಕಟ್ಟುನಿಟ್ಟಿನ ಮಾರ್ಗಸೂಚಿಗಳ ಅನ್ವಯ ಈ ಹೆಜ್ಜೆ ಇಡಲಾಗಿದೆ. ಪ್ರಾಣಿದಯೆ ಹಾಗೂ ಸಾರ್ವಜನಿಕರ ಸುರಕ್ಷತೆ ಎರಡನ್ನೂ ಸರಿದೂಗಿಸುವ ನಿಟ್ಟಿನಲ್ಲಿ ಈ ಬೃಹತ್ ಯೋಜನೆಗಳನ್ನು ರೂಪಿಸಲಾಗಿದೆ.
ಪೂರ್ವ ಪಾಲಿಕೆಯ ಬೃಹತ್ ಯೋಜನೆ
ಬೆಂಗಳೂರು ಪೂರ್ವ ನಗರ ಪಾಲಿಕೆಯು ಬೀದಿ ನಾಯಿಗಳ ನಿರ್ವಹಣೆಗೆ ಹೆಚ್ಚಿನ ಒತ್ತು ನೀಡಿದ್ದು, ಬರೋಬ್ಬರಿ ಹನ್ನೆರಡು ಕೋಟಿ ರೂಪಾಯಿಗಳನ್ನು ಮೀಸಲಿಟ್ಟಿದೆ. ಸುಪ್ರೀಂ ಕೋರ್ಟ್ ಮಾರ್ಗಸೂಚಿಗಳ ಅನ್ವಯ ಐನೂರು ನಾಯಿಗಳ ಸಾಮರ್ಥ್ಯವಿರುವ ಸುಸಜ್ಜಿತ ಆಶ್ರಯ ಕೇಂದ್ರಗಳ ನಿರ್ಮಾಣ, ನಿರ್ವಹಣೆ ಹಾಗೂ ಅವುಗಳಿಗೆ ನಿತ್ಯ ಆಹಾರದ ವ್ಯವಸ್ಥೆ ಕಲ್ಪಿಸಲು ಈ ಬೃಹತ್ ಮೊತ್ತವನ್ನು ವಿನಿಯೋಗಿಸಲಾಗುವುದು. ನಗರದಲ್ಲಿ ಬೀದಿ ನಾಯಿಗಳಿಗೆ ಪೌಷ್ಟಿಕ ಆಹಾರ ಒದಗಿಸುವ ಯೋಜನೆಗಳು ಈ ಹಿಂದೆಯೂ ಚರ್ಚೆಯಲ್ಲಿದ್ದು, ಇದು ಸಾರ್ವಜನಿಕರ ಸುರಕ್ಷತೆಗೆ ಪೂರಕವಾಗಲಿದೆ ಎನ್ನಲಾಗಿದೆ.
ಸಂತಾನೋತ್ಪತ್ತಿ ನಿಯಂತ್ರಣಕ್ಕೆ ಒತ್ತು
ನಗರದಲ್ಲಿ ಮಿತಿಮೀರುತ್ತಿರುವ ಬೀದಿ ನಾಯಿಗಳ ಸಂಖ್ಯೆಯನ್ನು ವೈಜ್ಞಾನಿಕವಾಗಿ ನಿಯಂತ್ರಿಸಲು ಪೂರ್ವ ಪಾಲಿಕೆ ವಿಶೇಷ ಗಮನ ಹರಿಸಿದೆ. ಎಬಿಸಿ ಕಾರ್ಯಕ್ರಮವನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲು ಬರೋಬ್ಬರಿ ಆರು ಕೋಟಿ ರೂಪಾಯಿಗಳ ಅನುದಾನ ಒದಗಿಸಲಾಗಿದೆ. ಇದರ ಜೊತೆಗೆ, ಮಹದೇವಪುರ ವಲಯದಲ್ಲಿ ನಾಯಿಗಳ ಜನನ ನಿಯಂತ್ರಣ ಶಸ್ತ್ರಚಿಕಿತ್ಸಾ ಕೇಂದ್ರವನ್ನು ಹೊಸದಾಗಿ ಸ್ಥಾಪಿಸಲು ಪ್ರತ್ಯೇಕವಾಗಿ ನಾಲ್ಕು ಕೋಟಿ ರೂಪಾಯಿಗಳನ್ನು ಮೀಸಲಿಡುವ ಮೂಲಕ ಶಾಶ್ವತ ಪರಿಹಾರದತ್ತ ಹೆಜ್ಜೆ ಇಡಲಾಗಿದೆ. ಬೆಂಗಳೂರಿನಲ್ಲಿ ಬೀದಿ ನಾಯಿಗಳ ಸಂಖ್ಯೆ 2.79 ಲಕ್ಷ ದಾಟಿದ್ದು, ಎಬಿಸಿ ಕಾರ್ಯಕ್ರಮಗಳಿಗೆ ಬಿಬಿಎಂಪಿ ನಿರಂತರವಾಗಿ ಕೋಟಿಗಟ್ಟಲೆ ಅನುದಾನ ನೀಡುತ್ತಾ ಬಂದಿದೆ.
ಕೇಂದ್ರ ಪಾಲಿಕೆಯ ಬಜೆಟ್ ವಿವರ
ಮತ್ತೊಂದೆಡೆ, ಬೆಂಗಳೂರು ಕೇಂದ್ರ ನಗರ ಪಾಲಿಕೆಯು ತನ್ನ ಪಶುಪಾಲನಾ ವಿಭಾಗದ ಸಮಗ್ರ ಕಾರ್ಯಕ್ರಮಗಳಿಗಾಗಿ ಒಟ್ಟಾರೆಯಾಗಿ ಐದು ಕೋಟಿ ರೂಪಾಯಿಗಳನ್ನು ಮೀಸಲಿಟ್ಟಿದೆ. ಇದರಲ್ಲಿ ಬೀದಿ ನಾಯಿಗಳಿಗಾಗಿ ವೈಜ್ಞಾನಿಕ ಮಾದರಿಯ ವಿಶೇಷ ಸಂರಕ್ಷಣಾ ಕೇಂದ್ರಗಳನ್ನು ಸ್ಥಾಪಿಸಲು ಎರಡು ಕೋಟಿ ರೂಪಾಯಿ ವೆಚ್ಚ ಮಾಡಲಾಗುವುದು ಎಂದು ಬಜೆಟ್‌ನಲ್ಲಿ ಸ್ಪಷ್ಟಪಡಿಸಲಾಗಿದೆ. ಈ ಮೂಲಕ ಬೀದಿ ನಾಯಿಗಳ ಹಾವಳಿ ತಪ್ಪಿಸುವ ಜೊತೆಗೆ ಅವುಗಳಿಗೆ ಸೂಕ್ತ ನೆಲೆ ಮತ್ತು ವೈದ್ಯಕೀಯ ನೆರವು ಕಲ್ಪಿಸುವ ಉದ್ದೇಶವನ್ನು ಎರಡೂ ಪಾಲಿಕೆಗಳು ಹೊಂದಿವೆ.

