
ಅವಘಡ ಸ್ಥಳದಲ್ಲಿ ಅಗ್ನಿಶಾಮಕದಳದ ಸಿಬ್ಬಂದಿ ಕಾರ್ಯಾಚರಣೆ ನಡೆಸಿದರು.
ಚಿಕ್ಕಪೇಟೆ ಅಗ್ನಿ ದುರಂತ| 20ಕ್ಕೂ ಹೆಚ್ಚು ಅಂಗಡಿಗಳು ಸುಟ್ಟು ಕರಕಲು
ಕುಂಬಾರಪೇಟೆಯ ಹಾರ್ಡ್‌ವೇರ್ ಗೋದಾಮಿನಲ್ಲಿ ಮೊದಲು ಕಾಣಿಸಿಕೊಂಡ ಬೆಂಕಿ, ಅಲ್ಲಿ ಸಂಗ್ರಹಿಸಲಾಗಿದ್ದ ಪ್ಲಾಸ್ಟಿಕ್ ಪೈಪ್‌ಗಳು ಹಾಗೂ ಇತರೆ ದಹನಕಾರಿ ವಸ್ತುಗಳಿಂದಾಗಿ ವೇಗವಾಗಿ ಹರಡಿದೆ.
ಸಿಲಿಕಾನ್ ಸಿಟಿ ಬೆಂಗಳೂರಿನ ಅತ್ಯಂತ ಜನನಿಬಿಡ ಪ್ರದೇಶವಾದ ಚಿಕ್ಕಪೇಟೆಯ ಕುಂಬಾರಪೇಟೆಯಲ್ಲಿ ಭೀಕರ ಅಗ್ನಿ ದುರಂತ ಸಂಭವಿಸಿದೆ. ಮೂರು ಅಂತಸ್ತಿನ ವಾಣಿಜ್ಯ ಸಂಕೀರ್ಣದಲ್ಲಿದ್ದ ಹಾರ್ಡ್‌ವೇರ್ ಗೋದಾಮಿನಲ್ಲಿ ಕಾಣಿಸಿಕೊಂಡ ಬೆಂಕಿ ಕ್ಷಣಾರ್ಧದಲ್ಲಿ ರೌದ್ರಾವತಾರ ತಾಳಿದ್ದು, ಸುತ್ತಮುತ್ತಲಿನ ವ್ಯಾಪಾರಿಗಳಲ್ಲಿ ತೀವ್ರ ಆತಂಕ ಮೂಡಿಸಿದೆ.
ಬುಧವಾರ (ಫೆ.25) ಕುಂಬಾರಪೇಟೆಯ ಹಾರ್ಡ್‌ವೇರ್ ಗೋದಾಮಿನಲ್ಲಿ ಮೊದಲು ಕಾಣಿಸಿಕೊಂಡ ಬೆಂಕಿ, ಅಲ್ಲಿ ಸಂಗ್ರಹಿಸಲಾಗಿದ್ದ ಪ್ಲಾಸ್ಟಿಕ್ ಪೈಪ್‌ಗಳು ಹಾಗೂ ಇತರೆ ದಹನಕಾರಿ ವಸ್ತುಗಳಿಂದಾಗಿ ವೇಗವಾಗಿ ಹರಡಿತು. ಪ್ಲಾಸ್ಟಿಕ್ ವಸ್ತುಗಳು ಉರಿಯುತ್ತಿರುವುದರಿಂದ ಇಡೀ ಪ್ರದೇಶದಲ್ಲಿ ದಟ್ಟವಾದ ಕಪ್ಪು ಹೊಗೆ ಆವರಿಸಿದ್ದು, ಸ್ಥಳೀಯರಿಗೆ ಉಸಿರಾಟದ ತೊಂದರೆಯೂ ಕಾಣಿಸಿಕೊಂಡಿದೆ.
ಅಗ್ನಿಶಾಮಕ ದಳದ ಹರಸಾಹಸ
ವಿಷಯ ತಿಳಿದ ತಕ್ಷಣ ಸ್ಥಳಕ್ಕೆ 4 ಅಗ್ನಿಶಾಮಕ ವಾಹನಗಳು ಧಾವಿಸಿದ್ದು, ಬೆಂಕಿ ನಂದಿಸಲು ಸಿಬ್ಬಂದಿ ಸತತ ಪ್ರಯತ್ನ ನಡೆಸುತ್ತಿದ್ದಾರೆ. ಗೋದಾಮಿನಿಂದ ಆರಂಭವಾದ ಬೆಂಕಿ ಕೆಳಮಹಡಿಯ ಅಂಗಡಿಗಳಿಗೂ ಹರಡುತ್ತಿದ್ದು, ಸುಮಾರು 20ಕ್ಕೂ ಹೆಚ್ಚು ಅಂಗಡಿಗಳು ಬೆಂಕಿಯ ಕೆನ್ನಾಲಿಗೆಗೆ ಆಹುತಿಯಾಗುವ ಭೀತಿ ಎದುರಾಗಿದೆ.
ಕೋಟ್ಯಂತರ ರೂ. ಹಾನಿ
ಮುನ್ನೆಚ್ಚರಿಕಾ ಕ್ರಮವಾಗಿ ಪೊಲೀಸರು ಕಟ್ಟಡದಲ್ಲಿದ್ದ ಜನರನ್ನು ಹಾಗೂ ಪಕ್ಕದ ಅಂಗಡಿಗಳ ವ್ಯಾಪಾರಿಗಳನ್ನು ತಕ್ಷಣವೇ ತೆರವುಗೊಳಿಸಿದ್ದಾರೆ. ಅದೃಷ್ಟವಶಾತ್ ಈ ಘಟನೆಯಲ್ಲಿ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ ಎಂದು ಪ್ರಾಥಮಿಕ ವರದಿಗಳು ತಿಳಿಸಿವೆ. ಆದರೆ ಕೋಟ್ಯಂತರ ರೂಪಾಯಿ ಮೌಲ್ಯದ ಆಸ್ತಿಪಾಸ್ತಿ ಹಾನಿಯಾಗಿರುವ ಶಂಕೆ ವ್ಯಕ್ತವಾಗಿದೆ.
ಶಾರ್ಟ್ ಸರ್ಕ್ಯೂಟ್ ಶಂಕೆ
ಕಳೆದ ಕೆಲವು ದಿನಗಳ ಹಿಂದಷ್ಟೇ ಇದೇ ಭಾಗದಲ್ಲಿ ನಡೆದ ಅಗ್ನಿ ಅವಘಡದಲ್ಲಿ ಒಂದೇ ಕುಟುಂಬದ ಮೂವರು ಮೃತಪಟ್ಟಿದ್ದರು. ಆ ಘಟನೆಯ ಭೀತಿ ಮಾಸುವ ಮುನ್ನವೇ ಮತ್ತೊಂದು ದೊಡ್ಡ ದುರಂತ ಸಂಭವಿಸಿರುವುದು ಸ್ಥಳೀಯ ನಿವಾಸಿಗಳಲ್ಲಿ ಆತಂಕ ಹೆಚ್ಚಿಸಿದೆ. ಬೆಂಕಿ ಕಾಣಿಸಿಕೊಳ್ಳಲು ನಿಖರ ಕಾರಣವೇನು ಎಂಬುದು ಇನ್ನು ತಿಳಿದುಬಂದಿಲ್ಲ. ಶಾರ್ಟ್ ಸರ್ಕ್ಯೂಟ್‌ನಿಂದ ಈ ಅವಘಡ ಸಂಭವಿಸಿರಬಹುದು ಎಂದು ಶಂಕಿಸಲಾಗಿದೆ.

