
ಸಾಂದರ್ಭಿಕ ಚಿತ್ರ
ಬೆಂಗಳೂರಿನಲ್ಲಿ ಮತ್ತೆ ಚಿರತೆ ಪ್ರತ್ಯಕ್ಷ: ಸಿಸಿಟಿವಿಯಲ್ಲಿ ಭಯಾನಕ ದೃಶ್ಯ ಸೆರೆ
ಸ್ಥಳೀಯರ ಮಾಹಿತಿ ಮೇರೆಗೆ ತಕ್ಷಣವೇ ಕಾರ್ಯಪ್ರವೃತ್ತರಾಗಿರುವ ಅರಣ್ಯ ಇಲಾಖೆ ಅಧಿಕಾರಿಗಳು ಮತ್ತು ಸಿಬ್ಬಂದಿ ಸ್ಥಳಕ್ಕೆ ಧಾವಿಸಿದ್ದು, ಚಿರತೆ ಪತ್ತೆಗಾಗಿ ತೀವ್ರ ಹುಡುಕಾಟ ನಡೆಸುತ್ತಿದ್ದಾರೆ.
ರಾಜಧಾನಿ ಬೆಂಗಳೂರಿನ ಜನವಸತಿ ಪ್ರದೇಶಗಳಲ್ಲಿ ಚಿರತೆಗಳ ಹಾವಳಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಉದ್ಯಾನ ನಗರಿ ಜನರನ್ನು ತೀವ್ರ ಆತಂಕಕ್ಕೆ ತಳ್ಳಿದೆ. ಇದೀಗ ನಗರದ ಬ್ಯಾಟರಾಯನಪುರ ಪೊಲೀಸ್ ಠಾಣಾ ವ್ಯಾಪ್ತಿಯ ಭಾರತ್ ನಗರದಲ್ಲಿ ಚಿರತೆಯೊಂದು ಪ್ರತ್ಯಕ್ಷವಾಗಿದ್ದು, ಸ್ಥಳೀಯ ನಿವಾಸಿಗಳ ನಿದ್ದೆ ಗೆಡಿಸಿದೆ.
ಸಿಸಿಟಿವಿಯಲ್ಲಿ ಸೆರೆಯಾಯ್ತು ಚಿರತೆ ಸಂಚಾರ!
ಗುರುವಾರ(ಜು.9) ಮುಂಜಾನೆ ಸುಮಾರು 3.50ರ ವೇಳೆಗೆ ಭಾರತ್ ನಗರದ ರಸ್ತೆಯಲ್ಲಿ ಚಿರತೆ ಓಡಾಡಿದೆ. ಬಳಿಕ ಅದು ಸಮೀಪದ ಪಾರ್ಕ್ ಒಂದಕ್ಕೆ ನುಗ್ಗಿದ್ದು, ಈ ಇಡೀ ದೃಶ್ಯವು ಹತ್ತಿರದ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಮುಂಜಾನೆ ಕೆಲಸಕ್ಕೆ ತೆರಳುತ್ತಿದ್ದ ನಿವಾಸಿಯೊಬ್ಬರು ಚಿರತೆಯನ್ನು ಕಂಡು ತಕ್ಷಣವೇ ಸುತ್ತಮುತ್ತಲಿನವರಿಗೆ ಮಾಹಿತಿ ನೀಡಿದ್ದಾರೆ. ಈ ಘಟನೆಯಿಂದಾಗಿ ಮುಂಜಾನೆ ವಾಕಿಂಗ್‌ಗೆ ತೆರಳುವವರು ಹಾಗೂ ಶಾಲಾ ಮಕ್ಕಳು ಮನೆಯಿಂದ ಹೊರಬರಲು ತೀವ್ರ ಭಯಪಡುವಂತಾಗಿದೆ.
ಕಾಡಿನಂತಾದ ಪಾರ್ಕ್, ನಿವಾಸಿಗಳ ಆಕ್ರೋಶ
ಭಾರತ್ ನಗರದಲ್ಲಿರುವ ಈ ಪಾರ್ಕ್ ಸರಿಯಾದ ನಿರ್ವಹಣೆ ಇಲ್ಲದೆ, ದಟ್ಟವಾದ ಪೊದೆಗಳು ಬೆಳೆದು ಕಾಡಿನಂತಾಗಿದೆ. ಇದೇ ಕಾರಣಕ್ಕೆ ಚಿರತೆ ಅಡಗಿ ಕುಳಿತುಕೊಳ್ಳಲು ಪೂರಕವಾದ ವಾತಾವರಣ ನಿರ್ಮಾಣವಾಗಿದೆ ಎಂದು ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಅಧಿಕಾರಿಗಳ ವಿರುದ್ಧ ಸ್ಥಳೀಯ ನಿವಾಸಿಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಅರಣ್ಯ ಇಲಾಖೆಯಿಂದ ಹೈ ಅಲರ್ಟ್
ಸ್ಥಳೀಯರ ಮಾಹಿತಿ ಮೇರೆಗೆ ತಕ್ಷಣವೇ ಕಾರ್ಯಪ್ರವೃತ್ತರಾಗಿರುವ ಅರಣ್ಯ ಇಲಾಖೆ ಅಧಿಕಾರಿಗಳು ಮತ್ತು ಸಿಬ್ಬಂದಿ ಸ್ಥಳಕ್ಕೆ ಧಾವಿಸಿದ್ದು, ಚಿರತೆ ಪತ್ತೆಗಾಗಿ ತೀವ್ರ ಹುಡುಕಾಟ ನಡೆಸುತ್ತಿದ್ದಾರೆ. ಮುನ್ನೆಚ್ಚರಿಕಾ ಕ್ರಮವಾಗಿ ಪಾರ್ಕ್ ಸುತ್ತಮುತ್ತ ಪೊಲೀಸ್ ಬಂದೋಬಸ್ತ್ ಕಲ್ಪಿಸಲಾಗಿದ್ದು, ಸಾರ್ವಜನಿಕರು ಜಾಗರೂಕರಾಗಿರುವಂತೆ ಧ್ವನಿವರ್ಧಕಗಳ ಮೂಲಕ ಸೂಚನೆ ನೀಡಲಾಗುತ್ತಿದೆ. ಚಿರತೆಯನ್ನು ಸೆರೆಹಿಡಿಯಲು ಅರಣ್ಯ ಇಲಾಖೆ ಅಧಿಕಾರಿಗಳು ಈಗಾಗಲೇ 3 ಬೋನುಗಳನ್ನು ಸಿದ್ಧಪಡಿಸಿಕೊಂಡು ಸ್ಥಳಕ್ಕೆ ತಂದಿದ್ದಾರೆ. ಬೋನಿನೊಳಗೆ ನಾಯಿ ಅಥವಾ ಕುರಿಯನ್ನು ಆಮಿಷವಾಗಿ ಇಟ್ಟು ಚಿರತೆಯನ್ನು ಸೆರೆಹಿಡಿಯಲು ಸಿದ್ದತೆ ನಡೆಸಿದೆ.
ಅಧಿಕಾರಿಗಳ ಶಂಕೆ ಏನು?
"ಸದ್ಯಕ್ಕೆ ಪಾರ್ಕ್ ಒಳಗೆ ಚಿರತೆ ಇರುವ ಸಾಧ್ಯತೆ ಕೇವಲ ಶೇ. 10 ರಷ್ಟಿದೆ. ಅದು ಈಗಾಗಲೇ ಬೇರೆಡೆಗೆ ಸ್ಥಳಾಂತರಗೊಂಡಿರುವ ಸಾಧ್ಯತೆಯೂ ಇದೆ. ಆದರೂ ಮುನ್ನೆಚ್ಚರಿಕಾ ಕ್ರಮವಾಗಿ ಬೋನುಗಳನ್ನು ಇರಿಸಲಾಗುತ್ತಿದ್ದು, ಕಾರ್ಯಾಚರಣೆ ಮುಂದುವರಿದಿದೆ. ಈ ಚಿರತೆಯು ಆಹಾರ ಅರಸಿ ಸಮೀಪದ ತುರಹಳ್ಳಿ ಅಥವಾ ಕೊಮ್ಮಘಟ್ಟ ಅರಣ್ಯ ಪ್ರದೇಶದಿಂದ ಬಂದಿರಬಹುದು," ಎಂದು ಅಧಿಕಾರಿಗಳು ಶಂಕೆ ವ್ಯಕ್ತಪಡಿಸಿದ್ದಾರೆ.

