Bengaluru will not be allowed to become another gas chamber: Minister Khandre issues instructions to prevent air pollution
x
ರಸ್ತೆಯಲ್ಲಿನ ಹೊಗೆಯಿಂದ ಮೂಗು ಮುಚ್ಚಿಕೊಂಡು ಹೋಗುತ್ತಿರುವ ಸಾರ್ವಜನಿಕರು. (ಸಂಗ್ರಹ ಚಿತ್ರ)

ದೆಹಲಿಯಂತೆ ಬೆಂಗಳೂರು 'ಗ್ಯಾಸ್ ಚೇಂಬರ್' ಆಗಲು ಬಿಡೆವು : ವಾಯು ಮಾಲಿನ್ಯ ತಡೆಗೆ ಸಚಿವ ಖಂಡ್ರೆ ಸೂಚನೆ

ಮಕ್ಕಳಲ್ಲಿ ಉಸಿರಾಟದ ಸಮಸ್ಯೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಬೆಂಗಳೂರು ಹೊರ ವಲಯಕ್ಕೆ ಹೋಗುವಂತೆ ವೈದ್ಯರು ಸಲಹೆ ನೀಡುತ್ತಿದ್ದಾರೆ ಎಂದು ಸಚಿವ ಈಶ್ವರ್‌ ಖಂಡ್ರೆ ತಿಳಿಸಿದರು.


Click the Play button to hear this message in audio format

ರಾಷ್ಟ್ರ ರಾಜಧಾನಿ ದೆಹಲಿ ತನ್ನ ಕಳಪೆ ವಾಯುಗುಣಮಟ್ಟದಿಂಲೇ ಅಪಖ್ಯಾತಿಗೆ ಒಳಗಾಗಿದ್ದು, ಮಕ್ಕಳು ಹಾಗೂ ವಯೋವೃದ್ಧರಿಗೆ ಉಸಿರಾಡುವುದೇ ಕಷ್ಟ ಎನ್ನುವಂತಾಗಿದೆ. ಇದೀಗ ಉದ್ಯಾನನಗರಿ ಬೆಂಗಳೂರಿನಲ್ಲಿಯೂ ಅಂತಹ ಪರಿಸ್ಥಿತಿ ನಿರ್ಮಾಣವಾಗಿದ್ದು, ಧೂಳು ಹಾಗೂ ವಾಯುಮಾಲಿನ್ಯದಿಂದ ಜನರು ಹೈರಾಣಾಗಿದ್ದಾರೆ.

ವಾಯುಗುಣಮಟ್ಟದ ಬಗ್ಗೆ ಎಚ್ಚೆತ್ತುಕೊಂಡಿರುವ ಸಚಿವ ಈಶ್ವರ್‌ ಖಂಡ್ರೆ, "ರಾಷ್ಟ್ರ ರಾಜಧಾನಿ ದೆಹಲಿಯಂತೆ ಬೆಂಗಳೂರು ಸಹ ಮತ್ತೊಂದು ಗ್ಯಾಸ್ ಛೇಂಬರ್ ಆಗದಂತೆ ಕ್ರಮ ವಹಿಸಲು ಶೀಘ್ರವೇ ನಗರದ ಎಲ್ಲ 28 ಶಾಸಕರೊಂದಿಗೆ ಸಭೆ ನಡೆಸಲಾಗುವುದು" ಎಂದು ತಿಳಿಸಿದ್ದಾರೆ.

ರಾಜಾಜಿನಗರ ಶಾಸಕ ಸುರೇಶ್ ಕುಮಾರ್ ಕೋರಿಕೆಯ ಮೇರೆಗೆ ಶುಕ್ರವಾರ (ಫೆ.27) ಉನ್ನತಾಧಿಕಾರಿಗಳ ಸಭೆ ನಡೆಸಿದ ಅವರು, ಬೆಂಗಳೂರು ನಗರದಲ್ಲಿ ವಾಯು ಮಾಲಿನ್ಯ, ಜಲ ಮಾಲಿನ್ಯ ಮತ್ತು ಶಬ್ದ ಮಾಲಿನ್ಯ ಹೆಚ್ಚಾಗುತ್ತಿದ್ದು ಇದರ ನಿಯಂತ್ರಣಕ್ಕೆ ಪಕ್ಷಾತೀತವಾಗಿ ಎಲ್ಲಾ ಜನಪ್ರತಿನಿಧಿಗಳ ಸಹಕಾರದ ಅಗತ್ಯವಿದೆ. ನಗರದಲ್ಲಿ ರಸ್ತೆಯಲ್ಲಿನ ಧೂಳಿನಿಂದಾಗಿ ವಾಯು ಗುಣಮಟ್ಟ ಕ್ಷೀಣಿಸುತ್ತಿದ್ದು, ಮಕ್ಕಳಲ್ಲಿ ಉಸಿರಾಟದ ಸಮಸ್ಯೆ ಹೆಚ್ಚುತ್ತಿದೆ. ಈ ನಿಟ್ಟಿನಲ್ಲಿ ವೈದ್ಯರು ಬೆಂಗಳೂರು ಹೊರ ವಲಯಕ್ಕೆ ಹೋಗುವಂತೆ ಸಲಹೆ ನೀಡುತ್ತಿದ್ದಾರೆ. ವಾಯು ಗುಣಮಟ್ಟ ಕಾಪಾಡಲು ತುರ್ತು ಕ್ರಮ ಕೈಗೊಳ್ಳಬೇಕು ಎಂದರು.

ಸ್ಥಳೀಯ ಸಂಸ್ಥೆಗೆ ನೋಟಿಸ್ ನೀಡಲು ಸೂಚನೆ

ಈಗಾಗಲೇ ಬೆಂಗಳೂರಿನ 11 ಸ್ಥಳಗಳಲ್ಲಿ ಸ್ಥಾಪಿತ ಮತ್ತು 13 ಸಂಚಾರಿ ಘಟಕಗಳ ಮೂಲಕ ವಾಯು ಗುಣಮಟ್ಟ ಸೂಚ್ಯಂಕದ ಮೌಲ್ಯಮಾಪನ ಮಾಡಲಾಗುತ್ತಿದೆ. ವಾಯು ಗುಣಮಟ್ಟ ಸೂಚ್ಯಂಕ ಮೌಲ್ಯವು 100 ದಾಟಿದರೆ ಸಂಬಂಧಿತ ಸ್ಥಳೀಯ ಸಂಸ್ಥೆಗಳಿಗೆ ನೋಟಿಸ್ ಜಾರಿ ಮಾಡಿ ನಿಗದಿತ ಕಾಲಮಿತಿಯಲ್ಲಿ ನಿಯಂತ್ರಿಸಲು ಸೂಚಿಸಿ. ಕ್ರಮ ವಹಿಸದಿದ್ದರೆ ನಿಯಮಾನುಸಾರ ಮೊಕದ್ದಮೆ ದಾಖಲಿಸಿ ಎಂದು ಸೂಚನೆ ನೀಡಿದರು.

ಡಿಸಿಎಂ ಅಧ್ಯಕ್ಷತೆಯಲ್ಲಿ ಸಭೆ

ಬೆಂಗಳೂರು ನಗರಾಭಿವೃದ್ಧಿ ಸಚಿವ, ಡಿಸಿಎಂ ಡಿ.ಕೆ. ಶಿವಕುಮಾರ್ ಅವರೊಂದಿಗೆ ಚರ್ಚಿಸಿ ಶೀಘ್ರವೇ ಅವರ ಅಧ್ಯಕ್ಷತೆಯಲ್ಲೇ ನಗರದ ಎಲ್ಲ ಜನಪ್ರತಿನಿಧಿಗಳು ಮತ್ತು ನಗರ ಸ್ಥಳೀಯ ಸಂಸ್ಥೆಗಳ ಉನ್ನತಾಧಿಕಾರಿಗಳೊಂದಿಗೆ ಸಭೆ ನಡೆಸಲಾಗುವುದು. ಕೆಲವೇ ದಶಕಗಳ ಹಿಂದೆ ನಿವೃತ್ತರ ಸ್ವರ್ಗ, ಹವಾನಿಯಂತ್ರಿತ ನಗರ ಎಂದು ಖ್ಯಾತಿ ಪಡೆದಿದ್ದು ಉದ್ಯಾನ ನಗರಿ ಬೆಂಗಳೂರಿನಲ್ಲೂ ಇಂದು ಬಿಸಿಲ ಬೇಗೆ ಹೆಚ್ಚುತ್ತಿದೆ. ಜಾಗತಿಕ ತಾಪಮಾನ ಏರಿಕೆ ಮತ್ತು ಹವಾಮಾನ ಬದಲಾವಣೆ ಇದಕ್ಕೆ ಕಾರಣವಾಗಿದ್ದರೂ, ನಗರದ ಹಸಿರು ಹೊದಿಕೆ ಹೆಚ್ಚಿಸಿ ನಗರದ ವಾಯು ಗುಣಮಟ್ಟ ರಕ್ಷಿಸಲು ಎಲ್ಲ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದರು.

ಏಕ ಬಳಕೆ ಪ್ಲಾಸ್ಟಿಕ್: ಜಾಗೃತಿ ಅಗತ್ಯ

ಏಕ ಬಳಕೆ ಪ್ಲಾಸ್ಟಿಕ್ ತ್ಯಾಜ್ಯ ಸಮಸ್ಯೆ ನಗರದಲ್ಲಿ ವಿಪರೀತವಾಗಿದ್ದು, ಇದರ ನಿಯಂತ್ರಣಕ್ಕೆ ಸ್ಥಳೀಯ ಸಂಸ್ಥೆಗಳು ಹಾಗೂ ಇನ್ನಿತರ ಇಲಾಖೆಗಳ ಸಹಯೋಗದಲ್ಲಿ ಜಾಗೃತ ದಳ ರಚಿಸಿ ಕ್ರಮ ವಹಿಸಬೇಕು. ಬೆಂಗಳೂರು ಸೇರಿದಂತೆ ರಾಜ್ಯದಲ್ಲಿ ಎಷ್ಟು ತ್ಯಾಜ್ಯ ಶುದ್ಧೀಕರಣ ಘಟಕಗಳಿವೆ. ಅವುಗಳ ಪೈಕಿ ಎಷ್ಟು ಕಾರ್ಯನಿರ್ವಹಿಸುತ್ತಿದೆ. ಅವುಗಳ ಸ್ಥಾಪಿತ ಸಾಮರ್ಥ್ಯ ಎಷ್ಟು ಮತ್ತು ಪ್ರಸ್ತುತ ಎಷ್ಟು ಎಂಎಲ್‌ಡಿ ದ್ರವ ತ್ಯಾಜ್ಯ ಸಂಸ್ಕರಣೆಯಾಗುತ್ತಿದೆ. ಎಷ್ಟು ಎಂಎಲ್‌ಡಿ ನೀರು ಸಂಸ್ಕರಣೆ ಆಗದೆ ಜಲ ಮೂಲ ಸೇರುತ್ತಿದೆ ಎಂಬ ಬಗ್ಗೆ ಪರಿಸರ ಇಲಾಖೆಯಿಂದ ಖುದ್ದು ಪರಿಶೀಲನೆ ನಡೆಸಿ ಒಂದು ತಿಂಗಳೊಳಗೆ ವರದಿ ಸಲ್ಲಿಸುವಂತೆ ತಿಳಿಸಿದರು.

ಉತ್ತಮ ಗಾಳಿ ಗುಣಮಟ್ಟು ಎಷ್ಟು ?

ಸಾಮಾನ್ಯವಾಗಿ ಗಾಳಿಯ ಗುಣಮಟ್ಟವನ್ನು ವಾಯು ಗುಣಮಟ್ಟ ಸೂಚ್ಯಂಕದ ಮೂಲಕ ಅಳೆಯಲಾಗುತ್ತದೆ. ಭಾರತದ ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ (CPCB) ಪ್ರಕಾರ, ಗಾಳಿಯ ಗುಣಮಟ್ಟವನ್ನು ಅದರ ತೀವ್ರತೆಯ ಆಧಾರದ ಮೇಲೆ 6 ಪ್ರಮುಖ ವಿಧಗಳಾಗಿ ವರ್ಗೀಕರಿಸಲಾಗಿದೆ.

ಗಾಳಿಯ ಗುಣಮಟ್ಟದ ವರ್ಗಗಳು ಸೂಚ್ಯಂಕದ ಮೌಲ್ಯ (AQI) ಗುಣಮಟ್ಟದ ಸ್ಥಿತಿ ಆರೋಗ್ಯದ ಮೇಲೆ ಪರಿಣಾಮ ಬೀರಲಿದೆ. 0 ರಿಂದ 50 ಉತ್ತಮ ಗಾಳಿಯು ಶುದ್ಧವಾಗಿದ್ದು ಆರೋಗ್ಯಕ್ಕೆ ಯಾವುದೇ ಅಪಾಯವಿರುವುದಿಲ್ಲ. 51 ರಿಂದ 100 ತೃಪ್ತಿದಾಯಕವಾಗಿದ್ದು, ಸ್ವಲ್ಪ ಮಟ್ಟದ ಮಾಲಿನ್ಯವಿರುತ್ತದೆ. ಸೂಕ್ಷ್ಮ ವ್ಯಕ್ತಿಗಳಿಗೆ ಸಣ್ಣದಾಗಿ ಉಸಿರಾಟದ ತೊಂದರೆಯಾಗಬಹುದು.101 ರಿಂದ 200 ಮಧ್ಯಮ ಮಟ್ಟದ ಮಾಲಿನ್ಯವಾಗಿದ್ದು, ಶ್ವಾಸಕೋಶದ ಕಾಯಿಲೆ ಅಥವಾ ಅಸ್ತಮಾ ಇರುವವರಿಗೆ ಉಸಿರಾಟದ ಸಮಸ್ಯೆ ಉಂಟಾಗಬಹುದು.

201 ರಿಂದ 300 ಕಳಪೆ ಗುಣಮಟ್ಟದಾಗಿದ್ದು, ದೀರ್ಘಕಾಲದವರೆಗೆ ಈ ಗಾಳಿಯಲ್ಲಿ ಓಡಾಡಿದರೆ ಹೆಚ್ಚಿನ ಜನರಿಗೆ ಉಸಿರಾಟದ ತೊಂದರೆಯಾಗಬಹುದು. 301 ರಿಂದ 400 ಅತಿ ಕಳಪೆ ವಾಯುಗುಣಮಟ್ಟವಿದ್ದು ಆರೋಗ್ಯವಂತ ಜನರಿಗೂ ಶ್ವಾಸಕೋಶದ ತೊಂದರೆಯಾಗಬಹುದು. ಇದು ಹಿರಿಯರಿಗೆ ತೀವ್ರ ಅಪಾಯವನ್ನುಂಟು ಮಾಡುತ್ತದೆ. 401 ರಿಂದ 500 ತೀವ್ರ ಅಪಾಯಕಾರಿ ಗುಣಮಟ್ಟದ ಗಾಳಿಯು ಆರೋಗ್ಯವಂತರಿಗೂ ಗಂಭೀರ ಉಸಿರಾಟದ ಸಮಸ್ಯೆ ಮತ್ತು ದೈಹಿಕ ಚಟುವಟಿಕೆ ಮಾಡಲು ಕಷ್ಟವಾಗುತ್ತದೆ.

Read More
Next Story