
ರಿಕ್ಕಿ ರೈಗೆ ಮತ್ತೆ ಸಂಕಷ್ಟ; ಲ್ಯಾಂಬೋರ್ಗಿನಿ ಕಾರಿನ ನಂಬರ್ ವಂಚನೆ ಕೇಸಲ್ಲಿ ನೋಟಿಸ್
ದೆಹಲಿಯಲ್ಲಿ ಖರೀದಿ ಮಾಡಿದ್ದ ಲ್ಯಾಂಬೋರ್ಗಿನಿ ಕಾರಿಗೆ ಕರ್ನಾಟಕದಲ್ಲಿ KA 05 NR 0009 ಎಂಬ ಫ್ಯಾನ್ಸಿ ನಂಬರ್ ಪಡೆಯಲು ರಿಕ್ಕಿ ರೈ ಅವರು ಆರ್ಟಿಒಗೆ 5 ಲಕ್ಷ ರೂ. ಪಾವತಿಸಿದ್ದರು ಎನ್ನಲಾಗಿದೆ.
ಸಿಲಿಕಾನ್ ಸಿಟಿಯ ರಸ್ತೆಗಳಲ್ಲಿ ಐಷಾರಾಮಿ ಲ್ಯಾಂಬೋರ್ಗಿನಿ ಕಾರಿನ ಮೂಲಕ ಅಪಾಯಕಾರಿ ಡ್ರಿಫ್ಟಿಂಗ್ ಸ್ಟಂಟ್ ನಡೆಸಿ ಸುದ್ದಿಯಾಗಿದ್ದ ಮಾಜಿ ಡಾನ್ ಮುತ್ತಪ್ಪ ರೈ ಪುತ್ರ ರಿಕ್ಕಿ ರೈಗೆ ಕಬ್ಬನ್ ಪಾರ್ಕ್ ಸಂಚಾರಿ ಪೊಲೀಸರು ಶಾಕ್ ನೀಡಿದ್ದಾರೆ. ನಕಲಿ ನಂಬರ್ ಪ್ಲೇಟ್ ಬಳಸಿ ಸರ್ಕಾರಕ್ಕೆ ತೆರಿಗೆ ವಂಚಿಸಿದ ಆರೋಪದ ಮೇಲೆ ವಿಚಾರಣೆಗೆ ಹಾಜರಾಗುವಂತೆ ಪೊಲೀಸರು ನೋಟಿಸ್ ಜಾರಿ ಮಾಡಿದ್ದಾರೆ.
ನೋಂದಣಿ ಮುನ್ನವೇ ನಂಬರ್ ಪ್ಲೇಟ್ ಅಳವಡಿಕೆ
ದೆಹಲಿಯಲ್ಲಿ ಖರೀದಿ ಮಾಡಿದ್ದ ಲ್ಯಾಂಬೋರ್ಗಿನಿ ಕಾರಿಗೆ ಕರ್ನಾಟಕದಲ್ಲಿ KA 05 NR 0009 ಎಂಬ ಫ್ಯಾನ್ಸಿ ನಂಬರ್ ಪಡೆಯಲು ರಿಕ್ಕಿ ರೈ ಅವರು ಆರ್ಟಿಒಗೆ 5 ಲಕ್ಷ ರೂ. ಪಾವತಿಸಿದ್ದರು. ಆದರೆ, ನಿಯಮದಂತೆ ರಸ್ತೆ ತೆರಿಗೆ ಪಾವತಿಸಿ, ಅಧಿಕೃತ ನೋಂದಣಿ ಪ್ರಕ್ರಿಯೆ ಪೂರ್ಣಗೊಳ್ಳುವ ಮೊದಲೇ ಅವರು ಕಾರಿಗೆ ನಂಬರ್ ಪ್ಲೇಟ್ ಅಳವಡಿಸಿ ಸಂಚರಿಸುತ್ತಿದ್ದರು. ಇದು ಮೋಟಾರು ವಾಹನ ಕಾಯ್ದೆಯಡಿ ಗಂಭೀರ ವಂಚನೆಯ ಪ್ರಕರಣವಾಗಿದೆ ಎನ್ನಲಾಗಿದೆ.
ದಂಡ ವಿಧಿಸಿದ್ದ ಅಧಿಕಾರಿಗಳು
ತೆರಿಗೆ ಉಲ್ಲಂಘನೆಗಾಗಿ ಕಳೆದ ಅಕ್ಟೋಬರ್ನಲ್ಲಿ ಆರ್ಟಿಒ ಅಧಿಕಾರಿಗಳು ರಿಕ್ಕಿ ರೈಗೆ 35 ಲಕ್ಷ ರೂ. ದಂಡ ವಿಧಿಸಿದ್ದರು. ಬೆಂಗಳೂರಿನ ಎಂ.ಜಿ.ರಸ್ತೆಯ ಅನಿಲ್ ಕುಂಬ್ಳೆ ಸರ್ಕಲ್ನಲ್ಲಿ ಸಾರ್ವಜನಿಕರ ಜೀವಕ್ಕೆ ಅಪಾಯ ತರುವಂತೆ ಕಾರು ಚಲಾಯಿಸಿದ ಆರೋಪದಡಿ ಪ್ರಕರಣ ದಾಖಲಾಗಿತ್ತು. ಪ್ರಕರಣ ದಾಖಲಾದ ಬೆನ್ನಲ್ಲೇ ರಿಕ್ಕಿ ರೈ ರಷ್ಯಾಕ್ಕೆ ತೆರಳಿದ್ದರು ಎನ್ನಲಾಗಿದೆ.
ರೈ ಪರ ವಕೀಲರ ವಾದವೇನು?
ಇತ್ತೀಚೆಗೆ ವೈರಲ್ ಆದ ಹೈ ಸ್ಪೀಡ್ ಡ್ರಿಫ್ಟಿಂಗ್ ವಿಡಿಯೊ ಬಗ್ಗೆ ಪ್ರತಿಕ್ರಿಯಿಸಿದ್ದ ರಿಕ್ಕಿ ರೈ ಪರ ವಕೀಲರು, "ಅದು ಉದ್ದೇಶಪೂರ್ವಕ ಸ್ಟಂಟ್ ಅಲ್ಲ. ಕಾರಿನ ಬ್ರೇಕ್ನಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡಿತ್ತು. ರಸ್ತೆಯಲ್ಲಿದ್ದ ಮರಳಿನ ಕಾರಣದಿಂದ ಕಾರು ಸ್ಕಿಡ್ ಆಗಿದೆ" ಎಂದು ಸಮರ್ಥಿಸಿಕೊಂಡಿದ್ದರು.
ಪೊಲೀಸ್ ಕಣ್ಗಾವಲಿನಲ್ಲಿ ರಿಕ್ಕಿ ರೈ
ಸರ್ಕಾರಕ್ಕೆ ತೆರಿಗೆ ವಂಚಿಸಿದ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಪೊಲೀಸರು, ನೋಟಿಸ್ ನೀಡುವ ಮೂಲಕ ವಿಚಾರಣೆಗೆ ಕರೆದಿದ್ದಾರೆ. ಒಂದು ವೇಳೆ ವಿಚಾರಣೆಗೆ ಹಾಜರಾಗದಿದ್ದರೆ ಮುಂದಿನ ದಿನಗಳಲ್ಲಿ ಕಠಿಣ ಕ್ರಮ ಎದುರಿಸಬೇಕಾಗಬಹುದು ಎಂದು ಮೂಲಗಳು ತಿಳಿಸಿವೆ.

