
ಬೆಂಗಳೂರು ಉತ್ತರ ಪಾಲಿಕೆ ಬಜೆಟ್| ಬೀದಿ ನಾಯಿಗಳ ನಿಯಂತ್ರಣಕ್ಕೆ 13 ಕೋಟಿ ರೂ.
ಪಾಲಿಕೆ ವ್ಯಾಪ್ತಿಯಲ್ಲಿ ಶಿಕ್ಷಣಕ್ಕಾಗಿ ಒಟ್ಟು 23 ಕೋಟಿ ರೂ. ಮೀಸಲಿಡಲಾಗಿದೆ. ಸ್ಮಾರ್ಟ್ ಕ್ಲಾಸ್ ಸೌಲಭ್ಯಕ್ಕಾಗಿ 1 ಕೋಟಿ ರೂ., ಎಂ.ಎಸ್. ಪಾಳ್ಯದಲ್ಲಿ ನೂತನ ಶಾಲಾ ಕಟ್ಟಡಕ್ಕೆ 2 ಕೋಟಿ ರೂ. ಹಾಗೂ ಹೊಸ ಶಾಲೆ-ಕಾಲೇಜು ನಿರ್ಮಾಣಕ್ಕೆ 50 ಲಕ್ಷ ರೂ. ತೆಗೆದಿರಿಸಲಾಗಿದೆ.
ಗ್ರೇಟರ್ ಬೆಂಗಳೂರಿನಲ್ಲಿ ಬೀದಿ ನಾಯಿಗಳ ನಿರ್ವಹಣೆ ಹಾಗೂ ನಿಯಂತ್ರಣವೇ ದೊಡ್ಡ ಸವಾಲಾಗಿದ್ದು, ದುಬಾರಿಯಾಗಿ ಪರಿಣಮಿಸಿದೆ. ಶನಿವಾರ ಮಂಡಿಸಲಾದ ಬೆಂಗಳೂರು ಉತ್ತರ ಪಾಲಿಕೆಯ ವಾರ್ಷಿಕ ಬಜೆಟ್‌ನಲ್ಲಿ ಬೀದಿನಾಯಿಗಳ ನಿರ್ವಹಣೆ, ಚಿಕಿತ್ಸೆ ಮತ್ತು ಲಸಿಕೆಗಾಗಿಯೇ ಸುಮಾರು 13.3 ಕೋಟಿ ರೂ. ಮೀಸಲಿಟ್ಟಿರುವುದು ಅಚ್ಚರಿ ಮೂಡಿಸಿದೆ.
ನಗರ ಪಾಲಿಕೆ ಆಯುಕ್ತ ಪೊಮ್ಮಲ ಸುನಿಲ್ ಕುಮಾರ್ ಅವರು ಮಂಡಿಸಿದ ಒಟ್ಟು 4,341 ಕೋಟಿ ರೂ. ಗಾತ್ರದ 2026-27ನೇ ಸಾಲಿನ ವಾರ್ಷಿಕ ಆಯವ್ಯಯದಲ್ಲಿ 2.80 ಕೋಟಿ ರೂ.ಗಳ ಉಳಿತಾಯ ತೋರಿಸಲಾಗಿದೆ. ನಗರದ ಸರ್ವಾಂಗೀಣ ಅಭಿವೃದ್ಧಿಗೆ ಹಲವು ಮಹತ್ವದ ಯೋಜನೆಗಳನ್ನೂ ಬಜೆಟ್‌ನಲ್ಲಿ ಘೋಷಿಸಲಾಗಿದೆ.
ಪಾಲಿಕೆ ವ್ಯಾಪ್ತಿಯಲ್ಲಿ ಶಿಕ್ಷಣಕ್ಕಾಗಿ ಒಟ್ಟು 23 ಕೋಟಿ ರೂ. ಮೀಸಲಿಡಲಾಗಿದೆ. ಸ್ಮಾರ್ಟ್ ಕ್ಲಾಸ್ ಸೌಲಭ್ಯಕ್ಕಾಗಿ 1 ಕೋಟಿ ರೂ., ಎಂ.ಎಸ್. ಪಾಳ್ಯದಲ್ಲಿ ನೂತನ ಶಾಲಾ ಕಟ್ಟಡಕ್ಕೆ 2 ಕೋಟಿ ರೂ. ಹಾಗೂ ಹೊಸ ಶಾಲೆ-ಕಾಲೇಜು ನಿರ್ಮಾಣಕ್ಕೆ 50 ಲಕ್ಷ ರೂ. ತೆಗೆದಿರಿಸಲಾಗಿದೆ.
ಪಾಲಿಕೆ ವ್ಯಾಪ್ತಿಯಲ್ಲಿರುವ ಶಾಲೆಗಳ ವಿದ್ಯಾರ್ಥಿಗಳಿಗೆ ಶೂ, ಸಾಕ್ಸ್ ಮತ್ತು ಸ್ವೆಟರ್ ವಿತರಣೆಗಾಗಿ 4 ಕೋಟಿ ರೂ. ಮೀಸಲಿಡಲಾಗಿದೆ.
ಬ್ರ್ಯಾಂಡ್ ಬೆಂಗಳೂರು ಅಭಿವೃದ್ಧಿಗೆ ಒತ್ತು
ಬ್ರ್ಯಾಂಡ್ ಬೆಂಗಳೂರು ಯೋಜನೆಯಡಿ ವಿವಿಧ ಅಭಿವೃದ್ಧಿ ಕಾರ್ಯಗಳಿಗೆ 35 ಕೋಟಿ ರೂ. ನೀಡಲಾಗಿದೆ. 30.5 ಕಿ.ಮೀ. ಉದ್ದದ 12 ರಸ್ತೆಗಳ ಅಗಲೀಕರಣಕ್ಕೆ ಕ್ರಮ ಕೈಗೊಳ್ಳಲಾಗಿದೆ. ಟ್ಯಾನರಿ ರಸ್ತೆ, ಬಾಗಲೂರು ರಸ್ತೆ ಹಾಗೂ ಜಕ್ಕೂರು ಡಬಲ್ ರೋಡ್ ನಿರ್ಮಾಣಕ್ಕೆ 25 ಕೋಟಿ ರೂ. ಮೀಸಲಿಡಲಾಗಿದೆ.
ಪಾಲಿಕೆ ವ್ಯಾಪ್ತಿಯಲ್ಲಿ ಬರುವ 53.42 ಕಿ.ಮೀ. ಉದ್ದದ ರಾಜಕಾಲುವೆ ಅಭಿವೃದ್ಧಿಗೆ ವಿಶ್ವಬ್ಯಾಂಕ್‌ನಿಂದ 532 ಕೋಟಿ ರೂ. ಸಾಲ ಪಡೆಯಲು ನಿರ್ಧರಿಸಲಾಗಿದ್ದು, ಮಳೆಗಾಲದ ಪ್ರವಾಹ ತಡೆಗೆ 10 ಕೋಟಿ ರೂ. ವ್ಯಯಿಸಲಾಗುವುದು.
ಪರಿಸರ ಮತ್ತು ಕೆರೆಗಳ ಪುನಶ್ಚೇತನ
ಮಾಲಿನ್ಯ ನಿಯಂತ್ರಣಕ್ಕೆ 20 ಕೋಟಿ ರೂ. ಹಾಗೂ ಕೆರೆಗಳಲ್ಲಿ ಬೋಟಿಂಗ್ ವ್ಯವಸ್ಥೆ ಜಾರಿಗೆ ತರಲು ನಿರ್ಧರಿಸಲಾಗಿದೆ. ಬಾಣಸವಾಡಿ, ಲಿಂಗರಾಜಪುರ ಮತ್ತು ಬ್ಯಾಟಗುಂಟೆಪಾಳ್ಯ ಕೆರೆಗಳ ಅಭಿವೃದ್ಧಿಗೆ 48 ಕೋಟಿ ರೂ. ಅನುದಾನ ನೀಡಲಾಗಿದೆ.
ಹೊಸದಾಗಿ 'ಹಸಿರು ಉದ್ಯಾನವನ ಸೆಸ್' ಸಂಗ್ರಹಿಸಲು ಮುಂದಾಗಿದ್ದು, ಇದರಿಂದ 25 ಕೋಟಿ ರೂ. ಆದಾಯದ ನಿರೀಕ್ಷೆಯಿದೆ ಎಂದು ಆಯುಕ್ತರು ತಿಳಿಸಿದರು.
ಆರೋಗ್ಯ ಮತ್ತು ಸಾಮಾಜಿಕ ಕಲ್ಯಾಣ
ಸರ್ವಜ್ಞನಗರ, ಬ್ಯಾಟರಾಯನಪುರ ಮತ್ತು ಪುಲಿಕೇಶಿನಗರದಲ್ಲಿ 100 ಹಾಸಿಗೆಗಳ ಆಸ್ಪತ್ರೆಗಳು ನಿರ್ಮಾಣವಾಗಲಿವೆ. ʼನಮ್ಮ ಕ್ಲಿನಿಕ್ʼ ಮತ್ತು PHCಗಳಿಗೆ 35 ಕೋಟಿ ರೂ. ಹಾಗೂ ಹೆಬ್ಬಾಳ, ದಾಸರಹಳ್ಳಿಗಳಲ್ಲಿ ಹೊಸ ಡಯಾಲಿಸಿಸ್ ಕೇಂದ್ರಗಳ ಸ್ಥಾಪನೆಗೆ ನಿರ್ಧರಿಸಲಾಗಿದೆ.
ಇಂದಿರಾ ಕ್ಯಾಂಟೀನ್‌ನಲ್ಲಿ ವಾರದಲ್ಲಿ 3 ದಿನ ಸಿರಿಧಾನ್ಯದ ಆಹಾರ ನೀಡಲು ನಿರ್ಧರಿಸಲಾಗಿದ್ದು, ನಿರ್ವಹಣೆಗೆ 11.15 ಕೋಟಿ ರೂ. ಮೀಸಲಿಡಲಾಗಿದೆ. ಒಂಟಿ ಮನೆ ಯೋಜನೆಯ ಆರ್ಥಿಕ ಸಹಾಯವನ್ನು 5 ಲಕ್ಷ ರೂ.ಗಳಿಗೆ ಏರಿಕೆ ಮಾಡಲಾಗಿದೆ. ವೈಜ್ಞಾನಿಕ ಕಸಾಯಿಖಾನೆ ನಿರ್ಮಾಣಕ್ಕೆ 14 ಕೋಟಿ ರೂ. ಯೋಜನೆ ರೂಪಿಸಲಾಗಿದೆ.
ಪೌರಕಾರ್ಮಿಕರ ವೇತನಕ್ಕೆ 150 ಕೋಟಿ ರೂ. ಹಾಗೂ ಅವರಿಗೆ ದ್ವಿಚಕ್ರ ವಾಹನ ನೀಡಲು 1 ಕೋಟಿ ರೂ. ಮೀಸಲಿಡಲಾಗಿದೆ. ಪಾಲಿಕೆಯ ಆದಾಯ ಹೆಚ್ಚಿಸಲು ಜಿಪಿಎಸ್ ಮತ್ತು ಡ್ರೋಣ್ ಮೂಲಕ ಆಸ್ತಿ ತೆರಿಗೆ ಪರಿಷ್ಕರಣೆಗೂ ಕ್ರಮ ಕೈಗೊಳ್ಳಲಾಗಿದೆ.
'ಎ' ನಿಂದ 'ಬಿ' ಖಾತಾ ವಿತರಣೆಯಿಂದ 680 ಕೋಟಿ ರೂ. ಹಾಗೂ ಪ್ರೀಮಿಯಂ ಎಫ್‌ಎಆರ್‌ನಿಂದ 817 ಕೋಟಿ ರೂ. ಆದಾಯ ನಿರೀಕ್ಷಿಸಲಾಗಿದೆ. ಆಡಳಿತದಲ್ಲಿ ಪಾರದರ್ಶಕತೆ ತರಲು ದಾಖಲೆಗಳ ಡಿಜಿಟಲೀಕರಣ ಮತ್ತು ಬಯೋಮೆಟ್ರಿಕ್ ಹಾಜರಾತಿ ಕಡ್ಡಾಯಗೊಳಿಸಲಾಗಿದೆ.

