ಕೇಂದ್ರದ ಸೂಚನೆಗೆ ಬಗ್ಗದ ಬಿಎಂಆರ್‌ಸಿಎಲ್‌; ನಾಳೆಯಿಂದಲೇ ಮೆಟ್ರೋ ಪ್ರಯಾಣ ದರ ಏರಿಕೆ
x
ಮೆಟ್ರೋ ನಿಲ್ದಾಣ

ಕೇಂದ್ರದ ಸೂಚನೆಗೆ ಬಗ್ಗದ ಬಿಎಂಆರ್‌ಸಿಎಲ್‌; ನಾಳೆಯಿಂದಲೇ ಮೆಟ್ರೋ ಪ್ರಯಾಣ ದರ ಏರಿಕೆ

ಮೆಟ್ರೋ ಪ್ರಯಾಣ ದರ ಏರಿಕೆ ಸಂಬಂಧ ಸಂಸದ ತೇಜಸ್ವಿ ಸೂರ್ಯ, ಶಾಸಕ ಸಿ.ಕೆ. ರಾಮಮೂರ್ತಿ ಅವರು ಬೆಂಗಳೂರಿನ ಜಯನಗರ, ಲಾಲ್‌ಬಾಗ್‌ ಇತ್ಯಾದಿ ಕಡೆಗಳಲ್ಲಿ ಪ್ರಯಾಣಿಕರೊಂದಿಗೆ ಚರ್ಚೆ ನಡೆಸಿದರು.


ಬೆಂಗಳೂರಿನ ಸಂಚಾರ ಜೀವನಾಡಿಯಾಗಿರುವ 'ನಮ್ಮ ಮೆಟ್ರೋ' ಪ್ರಯಾಣ ದರ ಏರಿಕೆ ವಿಚಾರದಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರದ ಮಧ್ಯೆ ಜಟಾಪಟಿ ಮುಂದುವರಿದಿದೆ. ಫೆ.೯ ರಿಂದ ಮೆಟ್ರೋ ಟಿಕೆಟ್ ದರವನ್ನು ಶೇ. 5ರಷ್ಟು ಏರಿಸಲು ಬಿಎಂಆರ್‌ಸಿಎಲ್‌ ಸಜ್ಜಾಗುತ್ತಿದ್ದಂತೆ ತೀವ್ರ ಆಕ್ರೋಶ ವ್ಯಕ್ತವಾಗಿತ್ತು. ದರ ಏರಿಕೆ ಸಂಬಂಧ ರಾಜ್ಯ ಹಾಗೂ ಕೇಂದ್ರ ಸರ್ಕಾರ ಪರಸ್ಪರ ಆರೋಪ-ಪ್ರತ್ಯಾರೋಪದಲ್ಲಿ ತೊಡಗಿದ್ದವು.

ಶನಿವಾರ ಸಂಜೆ ಕೇಂದ್ರ ನಗರಾಭಿವೃದ್ಧಿ ಸಚಿವಾಲಯ ಮೆಟ್ರೋ ಪ್ರಯಾಣ ದರ ಏರಿಕೆಗೆ ತಾತ್ಕಾಲಿಕ ತಡೆ ನೀಡಿತ್ತು. ಕೇಂದ್ರ ವಸತಿ ಮತ್ತು ನಗರಾಭಿವೃದ್ಧಿ ಸಚಿವ ಮನೋಹರ್ ಲಾಲ್ ಖಟ್ಟರ್ ಅವರು ದರ ಏರಿಕೆ ಕುರಿತಂತೆ ಸೂಕ್ತ ವಿವರಣೆ ನೀಡುವಂತೆ ಅಧಿಕಾರಿಗಳಿಗೆ ಸೂಚಿಸಿದ್ದರು. ಆದಾಗ್ಯೂ, ಯಾವುದೇ ಅಧಿಕೃತ ಆದೇಶ ಅಥವಾ ಅಧಿಸೂಚನೆ ಬಾರದ ಹಿನ್ನೆಲೆ ಪ್ರಯಾಣ ದರ ಏರಿಕೆಗೆ ಬಿಎಂಆರ್‌ಸಿಎಲ್‌ ಅಧಿಕಾರಿಗಳು ತೀರ್ಮಾನಿಸಿದ್ದಾರೆ.

ಮೆಟ್ರೋ ಪ್ರಯಾಣ ದರ ಏರಿಕೆಗೆ ಕೇಂದ್ರ ಸರ್ಕಾರ ತಡೆ ನೀಡಿದೆ ಎಂಬುದು ರಾಜಕೀಯ ಪ್ರೇರಿತ ಹೇಳಿಕೆಗಳು. ನಿಗದಿಯಂತೆ ನಾಳೆಯಿಂದ (ಫೆ.9) ಮೆಟ್ರೋ ಪ್ರಯಾಣದರ ಶೇ 5ರಷ್ಟು ಹೆಚ್ಚಲಿದೆ ಎಂದು ಬಿಎಂಆರ್‌ಸಿಎಲ್‌ ಅಧಿಕಾರಿಗಳು ಹೇಳಿದ್ದಾರೆ. ಇದೀಗ ಬಿಎಂಆರ್‌ಸಿಎಲ್‌ ನಡೆ ಹಾಗೂ ರಾಜಕಾರಣಿಗಳ ಹೇಳಿಕೆಗಳು ಪ್ರಯಾಣಿಕರನ್ನು ಇನ್ನಷ್ಟು ಗೊಂದಲಕ್ಕೆ ದೂಡಿವೆ.

ದರ ಏರಿಕೆ ಗೊಂದಲ ಏಕೆ?

ಸೋಮವಾರದಿಂದ ಜಾರಿಯಾಗಲಿರುವ ಮೆಟ್ರೋ ಪ್ರಯಾಣ ದರ ಏರಿಕೆಯ ಕುರಿತಂತೆ ಸಾಕಷ್ಟು ಗೊಂದಲಗಳು ಸೃಷ್ಟಿಯಾಗಿವೆ. ಬಿಎಂಆರ್‌ಸಿಎಲ್‌ ವ್ಯವಸ್ಥಾಪಕ ನಿರ್ದೇಶಕರ ರವಿಶಂಕರ್‌ ಅವರು ಮಾತನಾಡಿ, ದರ ಏರಿಕೆ ತಡೆಹಿಡಿದಿರುವ ಬಗ್ಗೆ ಕೇಂದ್ರ ಅಥವಾ ರಾಜ್ಯ ಸರ್ಕಾರದಿಂದ ಯಾವುದೇ ಅಧಿಕೃತ ಲಿಖಿತ ಅಧಿಸೂಚನೆ ಬಂದಿಲ್ಲ. ಹೀಗಾಗಿ, ಸದ್ಯದ ಮಟ್ಟಿಗೆ ನಾಳೆಯಿಂದಲೇ ಹೊಸ ದರ ಜಾರಿಯಾಗಲಿದೆ ಎಂದು ಸ್ಪಷ್ಟಪಡಿಸಿದ್ದಾರೆ.

ಶನಿವಾರವಷ್ಟೇ ಬೆಂಗಳೂರು ದಕ್ಷಿಣ ಕ್ಷೇತ್ರದ ಸಂಸದ ತೇಜಸ್ವಿ ಸೂರ್ಯ ಅವರು, ಕೇಂದ್ರ ಸಚಿವ ಮನೋಹರ್ ಲಾಲ್ ಖಟ್ಟರ್ ಅವರು ದರ ಏರಿಕೆಗೆ ತಾತ್ಕಾಲಿಕ ತಡೆ ನೀಡಿದ್ದಾರೆ ಎಂದು ಸಾಮಾಜಿಕ ಜಾಲತಾಣ ಹಾಗೂ ಮಾಧ್ಯಮಗಳ ಮೂಲಕ ಹೇಳಿದ್ದರು. ಆದರೆ ದರ ಏರಿಕೆಗೆ ಯಾವುದೇ ಅಧಿಕೃತ ಆದೇಶ ಬಾರದ ಹಿನ್ನೆಲೆಯಲ್ಲಿ ಬಿಎಂಆರ್‌ಸಿಎಲ್‌ ಈ ಕ್ರಮಕ್ಕೆ ಮುಂದಾಗಿದೆ.

ಹೊಸ ದರಗಳ ಪ್ರಕಾರ ಕನಿಷ್ಠ 1 ರೂ.ನಿಂದ ಗರಿಷ್ಠ 5 ರೂ.ಗಳವರೆಗೆ ಪ್ರಯಾಣ ದರ ಏರಿಕೆಯಾಗಲಿದೆ. ಎರಡು ಕಿ.ಮೀ.ವರೆಗಿನ ಪ್ರಯಾಣಕ್ಕೆ ಪ್ರಸ್ತುತ 10ರೂ. ದರವಿದೆ. ಹೊಸದರ 11 ರೂ.ಗಳಾಗಲಿದೆ. 11ರಿಂದ 15 ಕಿ.ಮೀ. ಪ್ರಯಾಣಕ್ಕೆ 60 ರೂ. ಇದೆ. ಹೊಸ ದರ 63 ರೂ. ಆಗಲಿದೆ. 25 ಕಿ.ಮೀ.ಗಿಂತ ಹೆಚ್ಚು ದೂರದ ಪ್ರಯಾಣಕ್ಕೆ 90 ರೂ. ಗಳಿರುವ ಪ್ರಯಾಣ ದರ 95 ರೂ.ಗಳಿಗೆ ಏರಿಕೆಯಾಗಲಿದೆ.

ದರ ಏರಿಕೆಗೆ ಕಾರಣವೇನು?

ಮೆಟ್ರೋ ನಿಗಮವು ಪ್ರತಿ ವರ್ಷ ಶೇ 5ರಷ್ಟು ಸ್ವಯಂಚಾಲಿತ ದರ ಏರಿಕೆಯ ಪ್ರಸ್ತಾವವನ್ನು ಸರ್ಕಾರದ ಮುಂದಿಟ್ಟಿತ್ತು. ಕಾರ್ಯಾಚರಣೆ ಹಾಗೂ ನಿರ್ವಹಣಾ ವೆಚ್ಚದಲ್ಲಿ ಗಣನೀಯ ಏರಿಕೆಯಾಗಿರುವುದರಿದ ಪ್ರಯಾಣ ದರ ಏರಿಕೆ ಅನಿವಾರ್ಯ ಎಂದು ಬಿಎಂಆರ್‌ಸಿಎಲ್‌ ಪ್ರತಿಪಾದಿಸಿತ್ತು.

ಮೆಟ್ರೋ ಯೋಜನೆಗಳಿಗಾಗಿ ಮಾಡಿರುವ ಸಾಲದ ಮರುಪಾವತಿ ತುರ್ತಾಗಿರುವ ಹಿನ್ನೆಲೆಯಲ್ಲಿ ದರ ಹೆಚ್ಚಳಕ್ಕೆ ಪ್ರಸ್ತಾಪಿಸಿತ್ತು. ಒಂದು ವೇಳೆ ಈ ವರ್ಷ ಶೇ 5 ರಷ್ಟು ದರ ಏರಿಕೆ ಮಾಡದಿದ್ದರೆ, ಮುಂದಿನ ವರ್ಷ ಒಟ್ಟಿಗೆ ಶೇ 10 ರಷ್ಟು ಪ್ರಯಾಣ ದರ ಏರಿಕೆ ಮಾಡಬೇಕಾದ ಅನಿವಾರ್ಯತೆ ಎದುರಾಗಲಿದೆ ಎಂದು ಅಧಿಕಾರಿಗಳು ಎಚ್ಚರಿಸಿದ್ದಾರೆ.

ಮೆಟ್ರೋ ನಿಲ್ದಾಣಗಳಲ್ಲಿ ಬಂದೋಬಸ್ತ್

ದರ ಏರಿಕೆಯ ವಿರುದ್ಧ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುವ ಸಾಧ್ಯತೆ ಇರುವುದರಿಂದ, ಮುಂಜಾಗ್ರತಾ ಕ್ರಮವಾಗಿ ಬೆಂಗಳೂರಿನ ಪ್ರಮುಖ ಮೆಟ್ರೋ ನಿಲ್ದಾಣಗಳಲ್ಲಿ ಪೊಲೀಸ್‌ ಭದ್ರತೆ ಹೆಚ್ಚಿಸಲಾಗಿದೆ.

ನ್ಯಾಷನಲ್ ಕಾಲೇಜು ಸೇರಿದಂತೆ ಹಲವು ನಿಲ್ದಾಣಗಳಿಗೆ ಹೆಚ್ಚುವರಿ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸುವಂತೆ ಬಿಎಂಆರ್‌ಸಿಎಲ್‌ ಅಧಿಕಾರಿಗಳು ಶಂಕರಪುರಂ ಪೊಲೀಸ್ ಠಾಣೆಗೆ ಪತ್ರ ಬರೆದಿದ್ದಾರೆ. ಫೆಬ್ರವರಿ 9 ರಿಂದ 11 ರವರೆಗೆ ನಿಲ್ದಾಣದ ಒಳಗೆ ಮತ್ತು ಹೊರಗೆ ವಿಶೇಷ ನಿಗಾ ಇರಿಸಲಿದ್ದಾರೆ.

ಸಾರ್ವಜನಿಕರೊಂದಿಗೆ ತೇಜಸ್ವಿ ಸೂರ್ಯ ಚರ್ಚೆ

ಮೆಟ್ರೋ ಪ್ರಯಾಣ ದರ ಏರಿಕೆ ಸಂಬಂಧ ಸಂಸದ ತೇಜಸ್ವಿ ಸೂರ್ಯ, ಶಾಸಕ ಸಿ.ಕೆ. ರಾಮಮೂರ್ತಿ ಅವರು ಬೆಂಗಳೂರಿನ ಜಯನಗರ, ಲಾಲ್‌ಬಾಗ್‌ ಇತ್ಯಾದಿ ಕಡೆಗಳಲ್ಲಿ ಪ್ರಯಾಣಿಕರೊಂದಿಗೆ ಚರ್ಚೆ ನಡೆಸಿದರು.

ಪ್ರಯಾಣ ದರ ಏರಿಕೆ ಸಂಬಂಧ ತಾವು ನಡೆಸುತ್ತಿರುವ ಹೋರಾಟಕ್ಕೆ ಕೈ ಜೋಡಿಸುವಂತೆ ಪ್ರಯಾಣಿಕರಲ್ಲಿ ಮನವಿ ಮಾಡಿದರು.

Read More
Next Story