
ಜಿಬಿಎ ಕೇಂದ್ರ ಕಚೇರಿ ಸುತ್ತಮುತ್ತ ಝಗಮಗಿಸುತ್ತಿರುವ ದೀಪಾಲಂಕಾರ
Bangalore Karaga|ಬೆಂಗಳೂರು ಕರಗಕ್ಕೆ ರಾಜಧಾನಿ ಸಜ್ಜು; ಧರ್ಮರಾಯಸ್ವಾಮಿ ದೇವಸ್ಥಾನದ ಸುತ್ತ ದೀಪಾಲಂಕಾರದ ವೈಭವ!
ಕರಗ ಸಂಚರಿಸುವ ಮುಖ್ಯ ರಸ್ತೆಗಳು, ಉಪ ರಸ್ತೆಗಳು ಹಾಗೂ ಕಿರಿದಾದ ಗಲ್ಲಿಗಳಲ್ಲಿನ ರಸ್ತೆ ಗುಂಡಿಗಳನ್ನು ಪತ್ತೆಹಚ್ಚಿ ಮುಚ್ಚಲಾಗಿದೆ. ಭಕ್ತರ ಹಾಗೂ ಕರಗ ಹೊತ್ತವರ ಸುಗಮ ಸಂಚಾರಕ್ಕೆ ಆದ್ಯತೆ ನೀಡಲಾಗಿದೆ.
ನಾಡಿನ ಇತಿಹಾಸ ಪ್ರಸಿದ್ಧ 'ಬೆಂಗಳೂರು ಕರಗ' ಮಹೋತ್ಸವಕ್ಕೆ ರಾಜಧಾನಿ ಸಜ್ಜಾಗುತ್ತಿದೆ. ಈ ಹಿನ್ನೆಲೆಯಲ್ಲಿ ಕೇಂದ್ರ ನಗರ ಪಾಲಿಕೆ ಅಧಿಕಾರಿಗಳು ಧರ್ಮರಾಯಸ್ವಾಮಿ ದೇವಸ್ಥಾನ ಹಾಗೂ ಕರಗ ಸಂಚರಿಸುವ ಮಾರ್ಗಗಳಲ್ಲಿ ಸಂಚರಿಸಿ, ಪಾಲಿಕೆಯಿಂದ ಕೈಗೊಳ್ಳಲಾಗಿರುವ ಸಿದ್ಧತೆಗಳ ಬಗ್ಗೆ ಖುದ್ದು ಪರಿಶೀಲನೆ ನಡೆಸಿದ್ದಾರೆ.
ಉತ್ಸವಕ್ಕೆ ಬರುವ ಭಕ್ತಾದಿಗಳಿಗೆ ಯಾವುದೇ ಅಡಚಣೆಯಾಗದಂತೆ ಹಾಗೂ ಕಾರ್ಯಕ್ರಮ ಅಚ್ಚುಕಟ್ಟಾಗಿ ನಡೆಯುವಂತೆ ನೋಡಿಕೊಳ್ಳಲು ವಿವಿಧ ಇಲಾಖೆಗಳ ಅಧಿಕಾರಿಗಳಿಗೆ ಕೇಂದ್ರ ಪಾಲಿಕೆ ಆಯುಕ್ತ ರಾಜೇಂದ್ರ ಚೋಳನ್ ಸೂಚನೆ ನೀಡಿದ್ದಾರೆ.
ಪಾಲಿಕೆ ಸಿದ್ಧತೆ ಹೇಗಿದೆ ?
ಬಣ್ಣ ಬಣ್ಣದ ದೀಪಾಲಂಕಾರ: ಕರಗ ಉತ್ಸವದ ಮೆರುಗು ಹೆಚ್ಚಿಸಲು ಧರ್ಮರಾಯ ಸ್ವಾಮಿ ದೇವಸ್ಥಾನ, ಜಿಬಿಎ ಕೇಂದ್ರ ಕಚೇರಿ, ಕಾರ್ಪೋರೇಷನ್ ವೃತ್ತ, ಮೈಸೂರು ಬ್ಯಾಂಕ್ ರಸ್ತೆ, ಟೌನ್ ಹಾಲ್ ಮತ್ತು ಜೆಸಿ ರಸ್ತೆಗಳಲ್ಲಿ ಅದ್ಭುತವಾಗಿ ವಿದ್ಯುತ್ ದೀಪಾಲಂಕಾರ ಮಾಡಲಾಗಿದೆ. ಏಳು ಸುತ್ತಿನಕೋಟೆ ಸಪ್ತ ಮಾತ್ರಿಕಾ ದೇವಸ್ಥಾನವೂ ಈಗ ವಿದ್ಯುತ್ ಬೆಳಕಿನಲ್ಲಿ ಝಗಮಗಿಸುತ್ತಿದೆ.
ಕರಗದ ಸಿದ್ಧತೆ ಪರಿಶೀಲಿಸಿದ ಕೇಂದ್ರ ಪಾಲಿಕೆ ಆಯುಕ್ತ ರಾಜೇಂದ್ರ ಚೋಳನ್
ಗುಂಡಿ ಮುಕ್ತ, ಸ್ವಚ್ಛ ರಸ್ತೆಗಳು:ಕರಗ ಸಂಚರಿಸುವ ಮುಖ್ಯ ರಸ್ತೆಗಳು, ಉಪ ರಸ್ತೆಗಳು ಹಾಗೂ ಕಿರಿದಾದ ಗಲ್ಲಿಗಳಲ್ಲಿನ ರಸ್ತೆ ಗುಂಡಿಗಳನ್ನು ಪತ್ತೆಹಚ್ಚಿ ಮುಚ್ಚಲಾಗಿದೆ. ಭಕ್ತರ ಹಾಗೂ ಕರಗ ಹೊತ್ತವರ ಸುಗಮ ಸಂಚಾರಕ್ಕೆ ಆದ್ಯತೆ ನೀಡಲಾಗಿದೆ. ಕರಗ ನಡೆಯುವ ಪ್ರದೇಶಗಳಲ್ಲಿ ಎರಡು ಪಾಳಿಗಳಲ್ಲಿ ಸ್ವಚ್ಛತಾ ಕಾರ್ಯ ನಡೆಯುತ್ತಿದೆ. ಹೆಚ್ಚುವರಿ ಪೌರಕಾರ್ಮಿಕರು ಹಾಗೂ ಆಟೋ ಟಿಪ್ಪರ್‌ಗಳನ್ನು ನಿಯೋಜಿಸಲಾಗಿದ್ದು, ನಗರದಲ್ಲಿದ್ದ 'ಬ್ಲ್ಯಾಕ್ ಸ್ಪಾಟ್'ಗಳನ್ನು ಸಂಪೂರ್ಣವಾಗಿ ತೆರವುಗೊಳಿಸಲಾಗಿದೆ. ನಗರದ ಪ್ರಮುಖ ವೃತ್ತಗಳು ಹಾಗೂ ರಸ್ತೆಗಳ ಡಿವೈಡರ್‌ಗಳಿಗೆ ಪೇಂಟಿಂಗ್ ಮಾಡಲಾಗಿದ್ದು, ರಸ್ತೆ ಬದಿಯ ಗಿಡಗಳಿಗೆ ಪ್ರತಿನಿತ್ಯ ನೀರುಣಿಸಿ ಹಸಿರು ಕಾಪಾಡಲಾಗುತ್ತಿದೆ.
ತುರ್ತು ಆರೋಗ್ಯ ಸೇವೆ: ಸಹಸ್ರಾರು ಸಂಖ್ಯೆಯಲ್ಲಿ ಭಕ್ತರು ಸೇರುವುದರಿಂದ ಮುಂಜಾಗ್ರತಾ ಕ್ರಮವಾಗಿ ಪಾಲಿಕೆಯ ಆರೋಗ್ಯ ಇಲಾಖೆಯಿಂದ ವಿಶೇಷ ವೈದ್ಯಕೀಯ ತಂಡ, ನರ್ಸಿಂಗ್ ಸಿಬ್ಬಂದಿ ಹಾಗೂ ಆಂಬುಲೆನ್ಸ್ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ. ಉತ್ಸವ ಮುಗಿಯುವವರೆಗೂ ನಿರಂತರವಾಗಿ ಸ್ವಚ್ಛತೆ ಕಾಪಾಡಬೇಕು. ಪೊಲೀಸ್ ಮತ್ತು ಮುಜರಾಯಿ ಇಲಾಖೆಯೊಂದಿಗೆ ಸಮನ್ವಯ ಸಾಧಿಸಿ ಕೆಲಸ ಮಾಡಬೇಕು. ಭದ್ರತೆಯ ದೃಷ್ಟಿಯಿಂದ ಅಳವಡಿಸಲಾಗಿರುವ ಸಿಸಿಟಿವಿ ಕ್ಯಾಮೆರಾಗಳ ಕಾರ್ಯಕ್ಷಮತೆಯನ್ನು ಮತ್ತೊಮ್ಮೆ ಪರಿಶೀಲಿಸಬೇಕು ಎಂದು ಆಯುಕ್ತರು ಅಧಿಕಾರಿಗಳಿಗೆ ಸಲಹೆ ನೀಡಿದ್ದಾರೆ.

