ಬೆಂಗಳೂರಿನ 142 ಕೆರೆಗಳ ನೀರು ಕುಡಿಯಲು ಅಯೋಗ್ಯ: ಜಲಚರಗಳಿಗೂ ಸಂಚಕಾರ
x
ಬೆಂಗಳೂರಿನ ಸ್ಯಾಂಕಿ ಕೆರೆ

ಬೆಂಗಳೂರಿನ 142 ಕೆರೆಗಳ ನೀರು ಕುಡಿಯಲು ಅಯೋಗ್ಯ: ಜಲಚರಗಳಿಗೂ ಸಂಚಕಾರ

ನಗರದ ಕೆರೆಗಳ ನೀರು 'ಡಿ' ಶ್ರೇಣಿಗೆ ಕುಸಿದಿದ್ದು, ಕುಡಿಯಲು ಮತ್ತು ಸ್ನಾನಕ್ಕೆ ಬಳಸದಂತೆ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಎಚ್ಚರಿಸಿದೆ.


ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿನ 142 ಕೆರೆಗಳ ನೀರು ಕುಡಿಯಲು ಸಂಪೂರ್ಣವಾಗಿ ಯೋಗ್ಯವಲ್ಲ ಎಂಬ ವರದಿಯನ್ನು ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ನೀಡಿದೆ. ಕೇವಲ ಮನುಷ್ಯರಿಗಷ್ಟೇ ಅಲ್ಲದೆ, ಕೆಲವು ಕೆರೆಗಳ ನೀರು ಜಲಚರಗಳ ಬದುಕಿಗೂ ಮಾರಕವಾಗಿ ಪರಿಣಮಿಸಿದೆ ಎಂಬುದಾಗಿ ವರದಿಯಲ್ಲಿದೆ.

ನಗರದ ಬಹುತೇಕ ಕೆರೆಗಳ ನೀರು 'ಡಿ' (Class D) ಶ್ರೇಣಿಗೆ ಸೇರಿವೆ. ಅಂದರೆ, ಈ ನೀರನ್ನು ಕುಡಿಯಲು ಅಥವಾ ಸ್ನಾನ ಮಾಡಲು ಬಳಸುವಂತಿಲ್ಲ. ಕೆಲವು ಕೆರೆಗಳ ನೀರು ಕೇವಲ ವನ್ಯಜೀವಿಗಳ ಕುಡಿಯುವಿಕೆಗೆ ಮತ್ತು ಕೈಗಾರಿಕಾ ಉದ್ದೇಶಕ್ಕೆ ಮಾತ್ರ ಸೀಮಿತ ಎಂದು ವರದಿ ಹೇಳಿದೆ.

ಇಲ್ಲಿನ ಕೆರೆಗಳ ನೀರಿನ ಗುಣಮಟ್ಟ ಅತ್ಯಂತ ಕಳಪೆಯಾಗಿದ್ದು, ಸಂಸ್ಕರಿಸಿದರೂ ಕುಡಿಯಲು ಯೋಗ್ಯವಲ್ಲ ಎಂದು ತಿಳಿಸಲಾಗಿದೆ. 2025ರ ಏಪ್ರಿಲ್‌ನಿಂದ ನವೆಂಬರ್‌ವರೆಗೂ ಕೆರೆಗಳ ನೀರನ್ನು ಸಂಗ್ರಹಿಸಿ ಮಾಲಿನ್ಯ ನಿಯಂತ್ರಣ ಮಂಡಳಿ ಪ್ರತಿ ತಿಂಗಳು ಪರೀಕ್ಷೆ ನಡೆಸಿತ್ತು. ಈ ಎಲ್ಲ ಕೆರೆಗಳ ನೀರನ್ನು ಸಾಂಪ್ರದಾಯಿಕ ಮಾರ್ಗಗಳಲ್ಲಿ ಸಂಸ್ಕರಿಸಿದರೂ ಕುಡಿಯಲು ಯೋಗ್ಯವಲ್ಲ. ಜೊತೆಗೆ ಜಲಚರಗಳು ಮತ್ತು ಪಕ್ಷಿಗಳು ಮಾತ್ರ ಜೀವಿಸಬಹುದು ಎಂದು ವಿವರಿಸಲಾಗಿದೆ.

ಮಲ್ಲೇಶ್ವರದ ಸ್ಯಾಂಕಿ ಕೆರೆಯ ನೀರು ಕೂಡ 'ಡಿ ವರ್ಗ'ದಲ್ಲಿದೆ. ಇಲ್ಲಿನ ನೀರು ಸಹ ಕುಡಿಯಲು ಯೋಗ್ಯವಲ್ಲ ಎಂದಿದ್ದು, ಇದೇ ರೀತಿ ಮಾಚೋಹಳ್ಳಿ ಕೆರೆ, ಆಂಧ್ರಹಳ್ಳಿ ಕೆರೆ, ಮಾದಾವರ ಕೆರೆ, ರಾಯಸಂದ್ರ ಕೆರೆ, ಮಹದೇವಪುರ ಕೆರೆ, ಚಿಕ್ಕಗುಬ್ಬಿ ಕೆರೆ, ದೊಡ್ಡಗುಬ್ಬಿ ಕೆರೆ, ಕಣ್ಣೂರು ಕೆರೆ, ಯಲ್ಲಮಲ್ಲಪ್ಪ ಚೆಟ್ಟಿ ಟ್ಯಾಂಕ್ ಹಾಗೂ ವೆಂಗಯ್ಯನ ಕೆರೆಯಲ್ಲಿ ಜಲಚರಗಳು ಹಾಗೂ ಪಕ್ಷಿಗಳು ಕೂಡ ವಾಸಿಸಲು ಯೋಗ್ಯವಿಲ್ಲ. ಕೇವಲ ಕೈಗಾರಿಕೆಗಳಿಗೆ ಮಾತ್ರವೇ ಇಲ್ಲಿನ ನೀರನ್ನು ಬಳಕೆ ಮಾಡಿಕೊಳ್ಳಬಹುದು ಎನ್ನಲಾಗಿದೆ.

ಎ, ಬಿ, ಸಿ, ಡಿ, ಇ ಎಂಬ ಐದು ವಿಭಾಗಗಳಲ್ಲಿ ನೀರಿನ ಗುಣಮಟ್ಟವನ್ನು ವರ್ಗೀಕರಿಸಲಾಗಿದೆ. ಆದರೆ, ನಗರದ ಯಾವ ಕೆರೆಯೂ ಎ, ಬಿ, ಸಿ ವಿಭಾಗಗಳಲ್ಲಿಲ್ಲ. ಈ ವಿಭಾಗಗಳಲ್ಲಿನ ಕೆರೆಗಳ ನೀರನ್ನು ಶುದ್ಧೀಕರಿಸಿ ಕುಡಿಯಬಹುದು. ಆದರೆ, ನಗರದ ಯಾವ ಕೆರೆಯೂ ಈ ಪಟ್ಟಿಯಲ್ಲಿಲ್ಲ.

ಈ 142 ಕೆರೆಗಳ ಪೈಕಿ ಕೆಲವು ಕೆರೆಗಳಲ್ಲಿ ಅತಿಯಾದ ಪಾಚಿ (Algal Bloom) ಬೆಳೆದು ನೀರು ಹಸಿರು ಬಣ್ಣಕ್ಕೆ ತಿರುಗಿದೆ. ಇದು ಸೂರ್ಯನ ಬೆಳಕು ಕೆರೆಯ ಆಳಕ್ಕೆ ತಲುಪದಂತೆ ಮಾಡುತ್ತದೆ. ಇದರಿಂದ ಸಸ್ಯಗಳು ಮತ್ತು ಮೀನುಗಳ ಸಂತತಿ ನಾಶವಾಗುತ್ತಿದೆ.

ಕೆರೆಗಳಲ್ಲಿ ಆಮ್ಲಜನಕದ ಮಟ್ಟ (Dissolved Oxygen) ತೀವ್ರವಾಗಿ ಕುಸಿಯುತ್ತಿರುವುದರಿಂದ ಮೀನುಗಳು ಮತ್ತು ಇತರ ಜಲಚರಗಳು ಉಸಿರುಗಟ್ಟಿ ಸಾಯುತ್ತಿವೆ. ಇತ್ತೀಚೆಗೆ ಹಲವು ಕೆರೆಗಳಲ್ಲಿ ರಾಶಿ ರಾಶಿ ಮೀನುಗಳು ಸತ್ತು ತೇಲುತ್ತಿರುವುದಕ್ಕೆ ಇದೇ ಮುಖ್ಯ ಕಾರಣವಾಗಿದೆ. ಕೈಗಾರಿಕಾ ತ್ಯಾಜ್ಯ ಮತ್ತು ಸಂಸ್ಕರಿಸದ ಒಳಚರಂಡಿ ನೀರು ನೇರವಾಗಿ ಕೆರೆಗೆ ಸೇರುತ್ತಿರುವುದರಿಂದ ಸೀಸ (Lead), ಪಾದರಸ (Mercury) ಮತ್ತು ಇತರ ಘನತ್ಯಾಜ್ಯಗಳ ಪ್ರಮಾಣ ನೀರಿನಲ್ಲಿ ಹೆಚ್ಚಾಗಿದೆ.

ನಗರದ ಶೇ. 40ಕ್ಕೂ ಹೆಚ್ಚು ಒಳಚರಂಡಿ ನೀರು ಇಂದಿಗೂ ಸಂಸ್ಕರಣೆಯಾಗದೆ ನೇರವಾಗಿ ರಾಜಕಾಲುವೆಗಳ ಮೂಲಕ ಕೆರೆಗಳನ್ನು ಸೇರುತ್ತಿದೆ. ಕೆರೆಯಂಗಳದಲ್ಲಿ ಪ್ಲಾಸ್ಟಿಕ್ ಮತ್ತು ಕಟ್ಟಡ ನಿರ್ಮಾಣದ ತ್ಯಾಜ್ಯಗಳನ್ನು ಸುರಿಯುವುದು ಮಾಲಿನ್ಯಕ್ಕೆ ದೊಡ್ಡ ಕಾರಣವಾಗಿದೆ. ಪೀಣ್ಯ, ಜಿಗಣಿ ಸೇರಿದಂತೆ ಸುತ್ತಮುತ್ತಲ ಕೈಗಾರಿಕಾ ಪ್ರದೇಶಗಳ ರಾಸಾಯನಿಕಯುಕ್ತ ನೀರು ಕೆರೆಯ ಒಡಲನ್ನು ಸೇರುತ್ತಿದೆ ಎನ್ನುತ್ತಾರೆ ಅಧಿಕಾರಿಗಳು.

ಡಿಕೆಶಿ ಹೇಳಿದ್ದೇನು?

"ಬೆಂಗಳೂರಿನ ಕೆರೆ ನೀರನ್ನು ಕುಡಿಯಲು ಹಾಗೂ ಸ್ನಾನಕ್ಕೆ ಬಳಸಿ ಎಂದು ಸರ್ಕಾರ ಹೇಳಿಲ್ಲ. ಈ ಕೆರೆಗಳು ಇರುವುದು ಅಂತರ್ಜಲ ಹೆಚ್ಚಳ ಮಾಡಲು ಮಾತ್ರ. ತಿಪ್ಪಗೊಂಡನಹಳ್ಳಿ ಕೆರೆ ನೀರನ್ನು ಜಲಮಂಡಳಿಯಿಂದ ಶುದ್ಧೀಕರಿಸಲಾಗುತ್ತಿದೆ. ಬೆಂಗಳೂರಿನ ಕೆರೆಗಳ ನೀರು ಕುಡಿಯಲು ಅಥವಾ ಸ್ನಾನ ಮಾಡಲು ಅಲ್ಲ," ಎಂದು ಸಚಿವ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ.

ನಗರದ ಕೆರೆಗಳಿಗೆ ಒಳಚರಂಡಿ ನೀರು (Sewage) ಸೇರುತ್ತಿರುವುದು ನಿಜ. ಇದನ್ನು ತಡೆಗಟ್ಟಲು ವ್ಯವಸ್ಥಿತ ಯೋಜನೆಗಳ ಅಗತ್ಯವಿದೆ. ಬೆಂಗಳೂರಿನಲ್ಲಿ ಉತ್ಪತ್ತಿಯಾಗುವ ಒಳಚರಂಡಿ ನೀರನ್ನು ಶೇ. 100ರಷ್ಟು ಸಂಸ್ಕರಿಸುವ ಗುರಿಯನ್ನು ಹೊಂದಿದ್ದೇವೆ. ಇದಕ್ಕಾಗಿ ಹೊಸ ಎಸ್‌ಟಿಪಿ (STP) ಘಟಕಗಳನ್ನು ಸ್ಥಾಪಿಸಲು ಮತ್ತು ಹಳೆಯ ಘಟಕಗಳನ್ನು ಮೇಲ್ದರ್ಜೆಗೇರಿಸಲು ಜಲಮಂಡಳಿಗೆ ಸೂಚನೆ ನೀಡಲಾಗಿದೆ. ಕೆರೆಗಳಿಗೆ ವಿಷಕಾರಿ ತ್ಯಾಜ್ಯ ಮತ್ತು ರಾಸಾಯನಿಕಗಳನ್ನು ಬಿಡುವ ಕಾರ್ಖಾನೆಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು. ಕೆರೆಗಳ ಬಫರ್ ಝೋನ್ ಅತಿಕ್ರಮಣ ಮಾಡಿಕೊಂಡಿರುವುದು ಮಾಲಿನ್ಯಕ್ಕೆ ಒಂದು ಕಾರಣವಾಗಿದೆ. ರಾಜಕಾಲುವೆಗಳ ಸ್ವಚ್ಛತೆ ಮತ್ತು ಕೆರೆಗಳ ಪುನಶ್ಚೇತನಕ್ಕೆ ಆದ್ಯತೆ ನೀಡಲಾಗುವುದು ಎಂದು ಅವರು ಭರವಸೆ ನೀಡಿದ್ದಾರೆ.

Read More
Next Story