
ವಿವಾದದ ನಡುವೆಯೂ ‘ಬಿಡದಿ ಟೌನ್‌ಶಿಪ್ʼಗೆ ಅಂತಿಮ ಅಧಿಸೂಚನೆ ; ಮೊದಲ ಹಂತದಲ್ಲಿ 519 ಎಕರೆ ಸ್ವಾಧೀನ
ಬಿಡದಿ ಟೌನ್‌ಶಿಪ್ ಯೋಜನೆಗಾಗಿ ಮಂಡಲಹಳ್ಳಿ ವ್ಯಾಪ್ತಿಯಲ್ಲಿ 71.13 ಎಕರೆ, ಹಾರೋಹಳ್ಳಿ ತಾಲೂಕಿನ ವಡೇರಹಳ್ಳಿ ಗ್ರಾಮದ 63.10 ಎಕರೆ ಹಾಗೂ ರಾಮನಗರ ತಾಲೂಕಿನ ಕೆಂಪಯ್ಯನಪಾಳ್ಯದಲ್ಲಿ 384.22 ಎಕರೆ ಜಮೀನು ಸ್ವಾಧೀನಕ್ಕೆ ಅಂತಿಮ ಅಧಿಸೂಚನೆ ಪ್ರಕಟಿಸಲಾಗಿದೆ.
ತೀವ್ರ ರಾಜಕೀಯ ತಿಕ್ಕಾಟ ಹಾಗೂ ರೈತರ ನಿರಂತರ ಪ್ರತಿಭಟನೆ ನಡುವೆಯೂ ರಾಜ್ಯ ಸರ್ಕಾರವು ಮಹತ್ವಾಕಾಂಕ್ಷಿಯ ಗ್ರೇಟರ್ ಬೆಂಗಳೂರು ಸಮಗ್ರ ಉಪನಗರ ಯೋಜನೆಗೆ ಅಂತಿಮ ಅಧಿಸೂಚನೆ ಹೊರಡಿಸಿದೆ. ನಗರಾಭಿವೃದ್ಧಿ ಇಲಾಖೆಯು ಪ್ರಸ್ತಾಪಿತ 9 ಕಂದಾಯ ಗ್ರಾಮಗಳ ಪೈಕಿ ಮೊದಲ ಹಂತದಲ್ಲಿ 3 ಗ್ರಾಮಗಳ ಒಟ್ಟು 519 ಎಕರೆ ಭೂಮಿ ಸ್ವಾಧೀನಪಡಿಸಿಕೊಳ್ಳಲು ಹಸಿರು ನಿಶಾನೆ ತೋರಿದೆ. ರಾಮನಗರ ಹಾಗೂ ಹಾರೋಹಳ್ಳಿ ತಾಲ್ಲೂಕು ವ್ಯಾಪ್ತಿಯ ಮೂರು ಗ್ರಾಮಗಳಾದ ಕೆಂಪಯ್ಯನಪಾಳ್ಯ, ಮಂಡಲಹಳ್ಳಿ ಹಾಗೂ ವಡೇರಹಳ್ಳಿ ಗ್ರಾಮಗಳಲ್ಲಿ ಒಟ್ಟು 754 ರೈತರ ಜಮೀನುಗಳನ್ನು ಮೊದಲ ಹಂತದಲ್ಲಿ ಸ್ವಾಧೀನಪಡಿಸಿಕೊಳ್ಳಲು ಅಧಿಸೂಚನೆ ಹೊರಡಿಸಲಾಗಿದೆ.
ಯಾವ ಗ್ರಾಮದಲ್ಲಿ ಎಷ್ಟು ಭೂಮಿ ಸ್ವಾಧೀನ?
ಬಿಡದಿ ಟೌನ್‌ಶಿಪ್ ಯೋಜನೆಗೆ ಮೂರು ಗ್ರಾಮಗಳ ಒಟ್ಟು 519 ಎಕರೆ ಭೂಮಿ ಸ್ವಾಧೀನಕ್ಕೆ ತೀರ್ಮಾನಿಸಲಾಗಿದೆ. ಅದರಂತೆ ಬಿಡದಿ ಹೋಬಳಿಯ ಮಂಡಲಹಳ್ಳಿ ವ್ಯಾಪ್ತಿಯಲ್ಲಿ 71.13 ಎಕರೆ, ಹಾರೋಹಳ್ಳಿ ತಾಲೂಕಿನ ವಡೇರಹಳ್ಳಿ ಗ್ರಾಮದ 63.10 ಎಕರೆ ಹಾಗೂ ರಾಮನಗರ ತಾಲೂಕಿನ ಕೆಂಪಯ್ಯನಪಾಳ್ಯದಲ್ಲಿ 384.22 ಎಕರೆ ಜಮೀನು ಸ್ವಾಧೀನಕ್ಕೆ ಅಂತಿಮ ಅಧಿಸೂಚನೆ ಪ್ರಕಟಿಸಲಾಗಿದೆ. ಇನ್ನು ಭೂಮಿ ಕಳೆದುಕೊಳ್ಳುವ ರೈತರ ಆಕ್ರೋಶ ತಣಿಸಲು ಸರ್ಕಾರವು ಎರಡು ಪ್ರಮುಖ ಪರಿಹಾರದ ಆಯ್ಕೆಗಳನ್ನು ಸೂಚಿಸಿದೆ.
ಮೊದಲ ಆಯ್ಕೆಯಾಗಿ ಪ್ರತಿ ಎಕರೆ ಭೂಮಿಗೆ ಕನಿಷ್ಠ 2.07 ಕೋಟಿ ರೂ. ನಿಂದ 2.50 ಕೋಟಿ ರೂ.ವರೆಗೂ ದರ ನಿಗದಿ ಮಾಡಲಾಗಿದೆ. ಯಾವುದೇ ಕಾರಣಕ್ಕೂ ಕನಿಷ್ಠ 2.14 ಕೋಟಿ ರೂ.ಗಿಂತ ಕಡಿಮೆ ದರ ಇರಬಾರದು ಎಂದು ಆದೇಶದಲ್ಲಿ ಹೇಳಿದೆ.
ಎರಡನೇ ಆಯ್ಕೆಯಲ್ಲಿ ನಗದು ಬೇಡ ಎನ್ನುವ ರೈತರಿಗೆ, ಅವರು ನೀಡುವ ಜಮೀನಿನ ಶೇ. 50 ರಷ್ಟು ಭಾಗವನ್ನು ಸಂಪೂರ್ಣವಾಗಿ ಅಭಿವೃದ್ಧಿಪಡಿಸಿ ಮರಳಿ ನೀಡುವ ವ್ಯವಸ್ಥೆ ಮಾಡಲಾಗಿದೆ.
ಭೂಮಿ ಕಳೆದುಕೊಳ್ಳುವ 754 ರೈತರು ತಮ್ಮ ಜಮೀನಿಗೆ ಸಂಬಂಧಿಸಿದ ಎಲ್ಲಾ ಸೂಕ್ತ ಮೂಲ ದಾಖಲೆಗಳನ್ನು ಸಲ್ಲಿಸಿ, ನಿಗದಿತ ಅವಧಿಯಲ್ಲಿ ಪರಿಹಾರ ಪಡೆಯಲು ಸೂಚಿಸಲಾಗಿದೆ.
ಸರ್ಕಾರದ ಸಮರ್ಥನೆ ಏನು?
ಬೆಂಗಳೂರಿನ ಸಂಚಾರ ದಟ್ಟಣೆ ಕಡಿಮೆ ಮಾಡುವುದು ಮತ್ತು ಐಟಿ-ಬಿಟಿ ತಂತ್ರಜ್ಞಾನ ಆಧಾರಿತ ಹೊಸ ಕೈಗಾರಿಕಾ ವಲಯ ನಿರ್ಮಿಸುವುದು ಸರ್ಕಾರದ ಗುರಿಯಾಗಿದೆ.
"ಈ ಟೌನ್ಶಿಪ್ ಯೋಜನೆಯಿಂದ ಜಾಗತಿಕ ಮಟ್ಟದ ಮೂಲಸೌಕರ್ಯ, ಉದ್ಯೋಗಾವಕಾಶಗಳು ಹಾಗೂ ಕೈಗಾರಿಕಾ ಪ್ರಗತಿ ಭಾರೀ ಪ್ರಮಾಣದಲ್ಲಿ ಹೆಚ್ಚಾಗಲಿದೆ" ಎಂದು ನಗರಾಭಿವೃದ್ಧಿ ಇಲಾಖೆ ಸಮರ್ಥಿಸಿಕೊಂಡಿದೆ. ಆದರೆ, ತಲೆಮಾರುಗಳಿಂದ ನಂಬಿದ್ದ ಫಲವತ್ತಾದ ಕೃಷಿ ಭೂಮಿಯನ್ನು ಕಳೆದುಕೊಳ್ಳುವ ಆತಂಕದಲ್ಲಿ ಸ್ಥಳೀಯ ರೈತರಿದ್ದಾರೆ.
ರೈತರ ಭಾವನೆ ಗೌರವಿಸಿ ಯೋಜನೆ ನಿಲ್ಲಿಸಿದ್ದೆ: ಎಚ್‌ಡಿಕೆ
ಸರ್ಕಾರದ ಏಕಪಕ್ಷೀಯ ನಿರ್ಧಾರದ ವಿರುದ್ಧ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಕಳೆದ 470 ದಿನಗಳಿಂದ ರೈತರು ಶಾಂತಿಯುತವಾಗಿ ಪ್ರತಿಭಟನೆ ನಡೆಸುತ್ತಿದ್ದಾರೆ. ಆ ಜಾಗದಲ್ಲಿ ಅತ್ಯುತ್ತಮವಾಗಿ ಕೃಷಿ ನಡೆಯುತ್ತಿದೆ. ಆದರೆ, ಸರ್ಕಾರ ಇವತ್ತು ಅವರನ್ನು ಒಕ್ಕಲೆಬ್ಬಿಸುವ ಕೆಲಸಕ್ಕೆ ಕೈಹಾಕಿದೆ. ಪ್ರತಿಭಟನೆ ನಡೆಸುವ ರೈತರ ಮೇಲೆ ಎಫ್ಐಆರ್ ದಾಖಲಿಸಲಾಗುತ್ತಿದೆ. ಗೃಹ ಸಚಿವರು ಎಫ್ಐಆರ್ ದಾಖಲಿಸಿಲ್ಲ ಎಂದು ಹೇಳುತ್ತಿದ್ದಾರೆ. ಆದರೆ ಪೊಲೀಸ್ ಇಲಾಖೆ ಮಾತ್ರ ದೌರ್ಜನ್ಯ ಎಸಗುತ್ತಿದೆ. ರೈತ ವಿರೋಧಿ ನೀತಿ ಅನುಸರಿಸುತ್ತಿರುವ ಜನಪ್ರತಿನಿಧಿಗಳು ಇಲ್ಲಿ ಕೈಜೋಡಿಸಿದ್ದಾರೆ." ಎಚ್.ಡಿ. ಕುಮಾರಸ್ವಾಮಿ ಆಕ್ರೋಶ ಹೊರಹಾಕಿದ್ದಾರೆ.
2006ರಲ್ಲಿ ಬೆಂಗಳೂರಿನ ಜನದಟ್ಟಣೆ ಕಡಿಮೆ ಮಾಡಲು ಸುತ್ತಲಿನ 30 ಕಿ.ಮೀ ವ್ಯಾಪ್ತಿಯಲ್ಲಿ 5 ಟೌನ್ಶಿಪ್ಗಳನ್ನು ಮಾಡಲು ನಾನು ಸಿಎಂ ಆಗಿದ್ದಾಗ ಯೋಜನೆ ರೂಪಿಸಿದ್ದೆ. ಆಗ ಕಾಂಗ್ರೆಸ್ನವರೇ ತೀವ್ರವಾಗಿ ವಿರೋಧಿಸಿದ್ದರು. ನಾನು ಅಂದು ರೈತರ ಭಾವನೆ ಮತ್ತು ವಿರೋಧಕ್ಕೆ ಗೌರವ ಕೊಟ್ಟು ಯೋಜನೆ ಸ್ಥಗಿತಗೊಳಿಸಿದ್ದೆ. ಆದರೆ ಇಂದು ಸರ್ಕಾರ ಯಾವುದೇ ಸಭೆ, ಸಂಧಾನ ನಡೆಸದೆ, ಶೇ. 80ರಷ್ಟು ರೈತರ ವಿರೋಧದ ನಡುವೆಯೂ ದಬ್ಬಾಳಿಕೆಯಿಂದ ಅಧಿಸೂಚನೆ ಹೊರಡಿಸಿದೆ ಎಂದು ಕಿಡಿಕಾರಿದ್ದಾರೆ.
ಅಂತಿಮ ಅಧಿಸೂಚನೆ ಪ್ರಕಟವಾಗಿರುವುದರಿಂದ ಭೂಸ್ವಾಧೀನ ಪ್ರಕ್ರಿಯೆ ಕಾನೂನುಬದ್ಧವಾಗಿ ಆರಂಭವಾಗಲಿದೆ. ಆದರೆ, ಭೂಮಿ ಕೊಡಲ್ಲ ಎಂದು ಪಟ್ಟು ಹಿಡಿದಿರುವ ರೈತರು ಹಾಗೂ ಅವರಿಗೆ ಬೆಂಬಲವಾಗಿ ನಿಂತಿರುವ ಪ್ರತಿಪಕ್ಷಗಳ ಮುಂದಿನ ಕಾನೂನು ಹಾಗೂ ರಾಜಕೀಯ ಹೋರಾಟ ಯಾವ ತಿರುವು ಪಡೆದುಕೊಳ್ಳಲಿದೆ ಎಂಬುದು ಕುತೂಹಲಕಾರಿಯಾಗಿದೆ.

