GBA Election Part-4| ಬೆಂಗಳೂರಿನ ಮೂಲಸೌಕರ್ಯ ಕೊರತೆಯೇ ಜಿಬಿಎ ಚುನಾವಣೆಗೆ ಅಸ್ತ್ರ
x

GBA Election Part-4| ಬೆಂಗಳೂರಿನ ಮೂಲಸೌಕರ್ಯ ಕೊರತೆಯೇ ಜಿಬಿಎ ಚುನಾವಣೆಗೆ ಅಸ್ತ್ರ

ಬೆಂಗಳೂರು ನಗರದಲ್ಲಿ 1.2 ಕೋಟಿ ವಾಹನಗಳು ಸಂಚರಿಸುತ್ತಿವೆ. ಪ್ರತಿದಿನ 2-3 ಸಾವಿರ ವಾಹನಗಳು ನೋಂದಣಿಯಾಗುತ್ತಿವೆ. ಜನಸಂಖ್ಯೆಯಷ್ಟೇ ವಾಹನಗಳ ಸಂಖ್ಯೆ ಬೆಳೆಯುತ್ತಿದ್ದು, 18 ವರ್ಷ ತುಂಬಿದ ಪ್ರತಿ ವ್ಯಕ್ತಿಯೂ ಒಂದೊಂದು ವಾಹನ ಹೊಂದಿದ್ದಾರೆ. ಇದರಿಂದ ವಾಹನ ದಟ್ಟಣೆ ವಿಪರೀತವಾಗಿದೆ.


Click the Play button to hear this message in audio format

ಗ್ರೇಟರ್‌ ಬೆಂಗಳೂರು ಪ್ರಾಧಿಕಾರ(ಜಿಬಿಎ) ಅಸ್ತಿತ್ವಕ್ಕೆ ಬಂದ ನಂತರದಲ್ಲಿ ನಡೆಯಲಿರುವ ಸಿಲಿಕಾನ್‌ ಸಿಟಿಯ ʼಪಂಚ ಪಾಲಿಕೆʼಗಳ ಚುನಾವಣೆಗೆ ಕಸರತ್ತು ತೀವ್ರಗೊಂಡಿದೆ. ಬೆಂಗಳೂರಿನ ಆಡಳಿತದ ಮೇಲೆ ಹಿಡಿತ ಸಾಧಿಸಲು ರಾಜಕೀಯ ಪಕ್ಷಗಳು ಮೂಲಸೌಕರ್ಯ ವಿಚಾರವನ್ನೇ ಚುನಾವಣಾ ಅಸ್ತ್ರವನ್ನಾಗಿ ಮಾಡಿಕೊಳ್ಳಲು ಸಜ್ಜಾಗಿವೆ.

ರಸ್ತೆ ಗುಂಡಿ ಹಾಗೂ ಸಂಚಾರ ದಟ್ಟಣೆಯು ಜಾಗತಿಕ ಮಟ್ಟದಲ್ಲಿ ಬೆಂಗಳೂರಿನ ಮಾನ ಹರಾಜು ಹಾಕಿತ್ತು. ಇದರಿಂದ ವಿವಿಧ ಕಂಪನಿಗಳು ಬೆಂಗಳೂರು ತೊರೆಯುವ ಬೆದರಿಕೆ ಹಾಕಿದ್ದವು. ಉದ್ಯಮಿಗಳು ಸರ್ಕಾರದ ವಿರುದ್ಧ ಟೀಕಾಸ್ತ್ರ ಪ್ರಯೋಗಿಸಿದ್ದರು. ಇಷ್ಟೆಲ್ಲಾ ಅವಾಂತರಗಳಿಗೆ ಸಾಕ್ಷಿಯಾಗಿದ್ದ ಸಿಲಿಕಾನ್‌ ಸಿಟಿಯಲ್ಲಿ ಚುನಾವಣಾ ಅಬ್ಬರ ನಿಧಾನವಾಗಿ ಗರಿಗೆದರುತ್ತಿದೆ.

ಆಡಳಿತ ವಿಕೇಂದ್ರೀಕರಿಸುವ ಸಲುವಾಗಿ ಬಿಬಿಎಂಪಿಯನ್ನು ಗ್ರೇಟರ್‌ ಬೆಂಗಳೂರು ಪ್ರಾಧಿಕಾರ ಎಂದು ಹೆಸರಿಸಿ ಐದು ಪಾಲಿಕೆಗಳನ್ನಾಗಿ ವಿಭಜಿಸಲಾಗಿದೆ. ಒಟ್ಟು 369 ವಾರ್ಡ್‌ಗಳನ್ನು ರಚಿಸಲಾಗಿದೆ. ಕಳೆದ ಐದು ವರ್ಷಗಳಿಂದ ಜನಪ್ರತಿನಿಧಿಗಳಲ್ಲೇ ಸೊರಗಿದ್ದ ಬೆಂಗಳೂರಿನಲ್ಲಿ ಇದೀಗ ಚುನಾವಣೆ ಪ್ರಕ್ರಿಯೆ ಆರಂಭವಾಗಿರುವುದು ಹೊಸ ಭರವಸೆ ಮೂಡಿಸಿದೆ.

ರಸ್ತೆ ಗುಂಡಿಗಳದ್ದೇ ಸಮಸ್ಯೆ

ಬೆಂಗಳೂರಿನ ಪ್ರಮುಖ ರಸ್ತೆಗಳಲ್ಲಿ ಸಾವಿರಾರು ಗುಂಡಿಗಳಿವೆ. ಈಗಾಗಲೇ ಜಿಬಿಎ ವತಿಯಿಂದ ಸುಮಾರು 7ಸಾವಿರ ಗುಂಡಿಗಳನ್ನು ಮುಚ್ಚಿದರೂ ಇನ್ನೂ 5 ಸಾವಿರ ಗುಂಡಿಗಳಿವೆ ಎನ್ನಲಾಗಿದೆ. ರಸ್ತೆ ಗುಂಡಿಗಳಿಂದ ಅಪಘಾತಗಳು ಸಾಮಾನ್ಯವಾಗಿದ್ದು, ಆಡಳಿತಕ್ಕೆ ಹಿಡಿಶಾಪ ಹಾಕುವಂತಾಗಿದೆ.

ಬೆಂಗಳೂರಿನ ಹೊರವರ್ತುಲ ರಸ್ತೆಯಲ್ಲಿ ಸಂಚಾರ ದಟ್ಟಣೆ ಹಾಗೂ ರಸ್ತೆ ಗುಂಡಿಗಳ ಸಮಸ್ಯೆಯಿಂದಾಗಿಯೇ ಇತ್ತೀಚೆಗೆ ಬ್ಲಾಕ್ಬಕ್ ಎಂಬ ಕಂಪನಿಯು ಬೆಳ್ಳಂದೂರಿನಿಂದ ಕಚೇರಿ ಸ್ಥಳಾಂತರಿಸಲು ಮುಂದಾಗಿತ್ತು. ಬ್ಲಾಕ್‌ಬಕ್‌ ಕಂಪನಿಯ ಟ್ವೀಟ್‌ಗೆ ಉದ್ಯಮಿಗಳಾದ ಮೋಹನ್‌ದಾಸ್‌ ಪೈ, ಕಿರಣ್‌ ಮಜುಂದಾರ್ ಸೇರಿದಂತೆ ಹಲವರು ದನಿಗೂಡಿಸಿದ್ದರಿಂದ ಸರ್ಕಾರ ತೀವ್ರ ಮುಜುಗರಕ್ಕೆ ಒಳಗಾಗಿತ್ತು. ಆ ಬಳಿಕ ರಾಜ್ಯ ಸರ್ಕಾರ ಸಮಾರೋಪಾದಿಯಲ್ಲಿ ರಸ್ತೆ ಗುಂಡಿ ಕೆಲಸ ಮುಚ್ಚುವ ಕೆಲಸ ಆರಂಭಿಸಿತ್ತು.

ಸಂಚಾರ ದಟ್ಟಣೆಯ ಅಪಖ್ಯಾತಿ

ಐಟಿ ಸಿಟಿ, ಉದ್ಯಾನ ನಗರಿ ಎಂಬ ವಿಶೇಷತೆಗಳಿಂದ ಅಂತಾರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿ ಗಳಿಸಿರುವ ಬೆಂಗಳೂರು ನಗರವು ಸಂಚಾರ ದಟ್ಟಣೆಯಲ್ಲಿ ಮಾತ್ರ ಕುಖ್ಯಾತಿ ಪಡೆದಿದೆ.

ಬೆಂಗಳೂರು ನಗರದಲ್ಲಿ 1.2 ಕೋಟಿ ವಾಹನಗಳು ಸಂಚರಿಸುತ್ತಿವೆ. ಪ್ರತಿದಿನ 2-3 ಸಾವಿರ ವಾಹನಗಳು ನೋಂದಣಿಯಾಗುತ್ತಿವೆ. ಜನಸಂಖ್ಯೆಯಷ್ಟೇ ವಾಹನಗಳ ಸಂಖ್ಯೆ ಬೆಳೆಯುತ್ತಿದ್ದು, 18 ವರ್ಷ ತುಂಬಿದ ಪ್ರತಿ ವ್ಯಕ್ತಿಯೂ ಒಂದೊಂದು ವಾಹನ ಹೊಂದಿದ್ದಾರೆ. ಇದರಿಂದ ವಾಹನ ದಟ್ಟಣೆ ವಿಪರೀತವಾಗಿದೆ.

ಇತ್ತೀಚೆಗೆ ಟಾಮ್ ಟಾಮ್ ಸಂಸ್ಥೆ ಬಿಡುಗಡೆ ಮಾಡಿದ ವರದಿಯ ಪ್ರಕಾರ ಬೆಂಗಳೂರು ವಿಶ್ವದಲ್ಲೇ 2ನೇ ಅತಿ ಹೆಚ್ಚು ಟ್ರಾಫಿಕ್ ದಟ್ಟಣೆಯ ನಗರವಾಗಿದೆ. ಬೆಂಗಳೂರಿನಲ್ಲಿ 16 ಕಿ.ಮೀ ಪ್ರಯಾಣಕ್ಕೆ ಸರಾಸರಿ 1.5 ರಿಂದ 2 ಗಂಟೆ ಪ್ರಯಾಣಿಸಬೇಕಾಗಿರುವ ಹಿನ್ನೆಲೆ ಉತ್ಪಾದಕತೆಯ ಮೇಲೆ ಪರಿಣಾಮ ಬೀರಿದೆ ಎಂದು ಹೇಳಿದೆ. ಇದು ಮತ್ತೆ ಬೆಂಗಳೂರಿನ ಮಾನವನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಹರಾಜು ಹಾಕಿದೆ. ಇದು ಸಹ ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಚುನಾವಣೆಗೆ ಪ್ರಮುಖ ಅಸ್ತ್ರವಾಗಿ ಬಳಕೆಯಾಗಲಿದೆ ಎನ್ನಲಾಗಿದೆ.

ಬೆಂಗಳೂರಿನಲ್ಲಿ ರಸ್ತೆ ಗುಂಡಿಗಳ ಸಮಸ್ಯೆ ಬಗೆಹರಿದಿಲ್ಲ. ರಸ್ತೆಗಳಿಗೆ ಡಾಂಬರು ಹಾಕಿಲ್ಲ. ಕಳೆದ ಎರಡೂವರೆ ವರ್ಷದಲ್ಲಿ ಯಾವುದೇ ಹೊಸ ಯೋಜನೆ ಘೋಷಿಸಿಲ್ಲ. ಕೇವಲ ಬೆಂಗಳೂರಿಗರಿಂದ ತೆರಿಗೆ ಸಂಗ್ರಹಿಸುವ ಕೆಲಸವನ್ನಷ್ಟೇ ಸರ್ಕಾರ ಮಾಡುತ್ತಿದೆ ಎಂದು ಮಾಜಿ ಉಪಮೇಯರ್‌ ಹರೀಶ್ ʼದ ಫೆಡರಲ್‌ ಕರ್ನಾಟಕʼಕ್ಕೆ ತಿಳಿಸಿದರು.

ಕಾಂಗ್ರೆಸ್‌ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದ ಬೆಂಗಳೂರಿನ ಪಾಲಿಕೆಗೆ ಆದಾಯ ಇಲ್ಲದಂತಾಗಿದೆ. ಸಿಬ್ಬಂದಿಗೆ ವೇತನ ಕೊಡುವುದಕ್ಕೂ ಸಮಸ್ಯೆ ಆಗುತ್ತಿದೆ. ರಸ್ತೆ ಗುಂಡಿ, ದೂಳು ಹಾಗೂ ಸಂಚಾರ ದಟ್ಟಣೆಯಿಂದ ಬೆಂಗಳೂರಿನ ಮಾನ ಜಾಗತಿಕ ಮಟ್ಟದಲ್ಲಿ ಕಳೆದು ಹೋಗಿದೆ ಎಂದು ಟೀಕಿಸಿದರು.

ದೆಹಲಿ ಹಾಗೂ ಮುಂಬೈನಲ್ಲಿ ಪಾಲಿಕೆ ವಿಭಜನೆ ಮಾಡಿದ್ದರೂ ಆದಾಯ ಸಂಗ್ರಹ ಸಾಧ್ಯವಾಗದೇ ಮೊದಲಿನ ಸ್ಥಿತಿಗೆ ತರಲಾಯಿತು. ರಾಜ್ಯ ಹಣಕಾಸು ಆಯೋಗದಿಂದ ಪಾಲಿಕೆಗೆ ಈ ಹಿಂದಿನಂತೆ 2 ಸಾವಿರ ಕೋಟಿ ಅನುದಾನ ಸಿಗಲಿದೆ. ಜನಪ್ರತಿನಿಧಿಗಳಿಲ್ಲದ ಕಾರಣ ಕೇಂದ್ರದಿಂದ ಅನುದಾನ ಸಿಗುತ್ತಿಲ್ಲ. ರಾಜ್ಯ ಸರ್ಕಾರ ಬೆಂಗಳೂರಿನ ಮೇಲೆ ಹಿಡಿತ ಸಾಧಿಸುವ ಸಲುವಾಗಿಯೇ ಬೇಕಾಬಿಟ್ಟಿಯಾಗಿ ಪಾಲಿಕೆ ರಚನೆ ಮಾಡಿದೆ ಎಂದು ದೂರಿದರು.

ವರ್ಷದಿಂದ ವರ್ಷಕ್ಕೆ ಹೆಚ್ಚಿದ ದಟ್ಟಣೆ

ಬೆಂಗಳೂರು ಬೆಳೆದಂತೆ ವಾಹನಗಳ ಸಂಖ್ಯೆಯೂ ಹೆಚ್ಚಳವಾಗುತ್ತಿದೆ. ರಾಜ್ಯ ಸರ್ಕಾರ ಬಿಎಂಟಿಸಿ ಬಸ್ಗಳ ಸಂಪರ್ಕ ವ್ಯವಸ್ಥೆಯನ್ನು ಮೂಲೆ ಮೂಲೆಗೂ ಒದಗಿಸಿದೆ. ಬೆಂಗಳೂರಿನ ನಾಲ್ಕು ಭಾಗಗಳಲ್ಲಿ ಮೆಟ್ರೋ ಜಾಲ ವಿಸ್ತರಣೆಯಾಗುತ್ತಿದೆ. ಆದರೂ, ಬೆಂಗಳೂರಿನ ಹೊರವರ್ತುಲ ರಸ್ತೆಗಳು, ಕೆಲ ಪ್ರಮುಖ ಬಡಾವಣೆಗಳಲ್ಲಿ ಸಂಚಾರ ದಟ್ಟಣೆಯು ಜನರ ನೆಮ್ಮದಿ ಕಸಿಯುವಂತಿದೆ. 2025 ರ ವಿಶ್ವದ ಅತ್ಯಂತ ಜನದಟ್ಟಣೆಯ ನಗರಗಳ ಪಟ್ಟಿಯಲ್ಲಿ ಬೆಂಗಳೂರು ಎರಡನೇ ಸ್ಥಾನದಲ್ಲಿದೆ. ಇಲ್ಲಿ ವಾಹನಗಳ ದಟ್ಟಣೆ ಪ್ರಮಾಣ ಶೇ 74.4 ರಷ್ಟಿದೆ. ಮೆಕ್ಸಿಕೋ ನಗರವು ಮೊದಲ ಸ್ಥಾನದಲ್ಲಿದೆ.

2023ರ ಜನದಟ್ಟಣೆಯ ನಗರಗಳಲ್ಲಿ ಬೆಂಗಳೂರು 6 ನೇ ಸ್ಥಾನದಲ್ಲಿತ್ತು. 2024 ರಲ್ಲಿ 3 ನೇ ಸ್ಥಾನಕ್ಕೆ ಏರಿತ್ತು. ಈಗ 2025 ರಲ್ಲಿ 2 ನೇ ಸ್ಥಾನಕ್ಕೆ ಏರಿರುವುದು ಆತಂಕ ಮೂಡಿಸಿದೆ. ಸಂಚಾರ ದಟ್ಟಣೆಗೆ ಸೂಕ್ತ ಪರಿಹಾರೋಪಾಯ ಕಂಡುಕೊಳ್ಳದಿದ್ದರೆ ಮೊದಲ ಸ್ಥಾನಕ್ಕೇರುವ ಸಾಧ್ಯತೆಯನ್ನು ತಳ್ಳಿ ಹಾಕುವಂತಿಲ್ಲ. ಹಾಗಾಗಿ, ಬೆಂಗಳೂರಿನ ವಾಹನ ದಟ್ಟಣೆಯು ನಗರಪಾಲಿಕೆ ಚುನಾವಣೆ ಮೇಲೆ ಪರಿಣಾಮ ಬೀರಲಿದೆ ಎನ್ನಲಾಗಿದೆ.

ಸರ್ಕಾರ ಕೈಗೊಂಡ ಸುಧಾರಣಾ ಕ್ರಮವೇನು?

ಬೆಂಗಳೂರಿನ ಮೂಲ ಸೌಕರ್ಯ ಹಾಗೂ ಸಂಚಾರ ದಟ್ಟಣ ಬಗ್ಗೆ ತೀವ್ರ ಟೀಕೆಗಳು ವ್ಯಕ್ತವಾದ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಹಲವು ಉಪಕ್ರಮಗಳನ್ನು ಕೈಗೊಂಡರೂ ಪೂರ್ಣ ಪ್ರಮಾಣದಲ್ಲಿ ಪರಿಹಾರ ಸಾಧ್ಯವಾಗಿಲ್ಲ.

ರಸ್ತೆ ಗುಂಡಿಗಳ ಸಮಸ್ಯೆಯನ್ನು ಹೈಕೋರ್ಟ್‌ ಗಂಭೀರವಾಗಿ ಪರಿಗಣಿಸಿದ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ 1000 ಕೋಟಿ ರೂ. ವೆಚ್ಚದಲ್ಲಿ ರಸ್ತೆ ಗುಂಡಿ ಮುಚ್ಚುವ ಕೆಲಸ ಆರಂಭಿಸಿತು. ಸರ್ಕಾರ ಹಾಗೂ ಹೈಕೋರ್ಟ್ ಸಾಕಷ್ಟು ಗಡುವು ನೀಡಿದರೂ ಇಂದಿಗೂ ರಸ್ತೆ ಗುಂಡಿ ಸಮಸ್ಯೆಯಿಂದ ಬೆಂಗಳೂರು ಮುಕ್ತವಾಗಿಲ್ಲ.

ಬೆಂಗಳೂರಿನ ಸಂಚಾರ ದಟ್ಟಣೆ ನಿವಾರಣೆಗಾಗಿ ರಾಜ್ಯ ಸರ್ಕಾರ 27 ಸಾವಿರ ಕೋಟಿ ರೂ. ವೆಚ್ಚದ 117 ಕಿ.ಮೀ ಉದ್ದದ ʼಬೆಂಗಳೂರು ಬಿಸಿನೆಸ್ ಕಾರಿಡಾರ್' ಯೋಜನೆ ಕೈಗೆತ್ತಿಗೊಂಡಿದೆ. ಇದು ಕಾಲಮಿತಿಯಲ್ಲಿ ಅನುಷ್ಠಾನವಾದರೆ ದಟ್ಟಣೆ ಪ್ರಮಾಣ ಕಡಿಮೆಯಾಗಲಿದೆ.

ಇದಲ್ಲದೇ ಬೆಂಗಳೂರಿನ ನಾಲ್ಕು ದಿಕ್ಕುಗಳನ್ನು ಒಂದುಗೂಡಿಸುವ ಟನಲ್‌ ರಸ್ತೆ ಯೋಜನೆಯನ್ನು ಸರ್ಕಾರ ಅನುಷ್ಠಾನಗೊಳಿಸಲು ಮುಂದಾಗಿದೆ. ಯೋಜನೆಗಾಗಿ ಈಗಾಗಲೇ ಟೆಂಡರ್‌ ಕರೆದಿದೆ. ತ್ವರಿತವಾಗಿ ಟನಲ್‌ ರಸ್ತೆ ಯೋಜನೆ ಮುಗಿದರೆ ಸಂಚಾರ ದಟ್ಟಣೆ ಕೊಂಚ ಕಡಿಮೆಯಾಗಲಿದೆ ಎನ್ನಲಾಗಿದೆ.

ಇನ್ನು ಈಜಿಪುರ ಮೇಲ್ಸೇತುವೆ ಕಾಮಗಾರಿ ಆರಂಭವಾಗಿ ದಶಕಗಳೇ ಕಳೆದರೂ ಇಂದಿಗೂ ಯೋಜನೆ ಪೂರ್ಣಗೊಳ್ಳದಿರುವುದು ಸಾರ್ವಜನಿಕರ ಟೀಕೆಗೆ ಗುರಿಯಾಗಿದೆ. ಕೆರೆಗಳ ಪುನರುಜ್ಜೀವನ ಸಾಧ್ಯವಾಗಿಲ್ಲ. ಒತ್ತುವರಿ ತೆರವು ಕಾರ್ಯಾಚರಣೆಗೆ ಗ್ರಹಣ ಹಿಡಿದಿದೆ. ಈ ಎಲ್ಲಾ ವಿಷಯಗಳನ್ನು ಮುಂದಿಟ್ಟುಕೊಂಡು ಬಿಜೆಪಿ ಹಾಗೂ ಇತರೆ ಪಕ್ಷಗಳು ಚುನಾವಣೆ ಎದುರಿಸಲಿವೆ ಎಂದು ತಿಳಿದುಬಂದಿದೆ.

Read More
Next Story