ದೊಡ್ಡಬಳ್ಳಾಪುರ: ರೈಲು ಹಳಿ ದಾಟುವಾಗ  ಅಪಘಾತ; ಮಹಿಳೆ ಹಾಗೂ ಇಬ್ಬರು ಮೊಮ್ಮಕ್ಕಳ ದುರ್ಮರಣ
x

ರೈಲು ಡಿಕ್ಕಿ ಹೊಡೆದು ಅಜ್ಜಿ ಹಾಗೂ ಇಬ್ಬರು ಮೊಮ್ಮಕ್ಕಳು ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ದೊಡ್ಡಬಳ್ಳಾಪುರ: ರೈಲು ಹಳಿ ದಾಟುವಾಗ ಅಪಘಾತ; ಮಹಿಳೆ ಹಾಗೂ ಇಬ್ಬರು ಮೊಮ್ಮಕ್ಕಳ ದುರ್ಮರಣ

ದೊಡ್ಡಬಳ್ಳಾಪುರದಲ್ಲಿ ರೈಲು ಹಳಿ ದಾಟುತ್ತಿದ್ದ ವೇಳೆ ವೇಗವಾಗಿ ಬಂದ ರೈಲು ಡಿಕ್ಕಿ ಹೊಡೆದು ಅಜ್ಜಿ ಸೇರಿ ಇಬ್ಬರು ಮೊಮ್ಮಕ್ಕಳು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ತನಿಖೆ ಮುಂದುವರಿದಿದೆ.


Click the Play button to hear this message in audio format

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ನಗರದ ರೈಲು ನಿಲ್ದಾಣದಲ್ಲಿ ರೈಲು ಹಳಿ ದಾಟುತ್ತಿದ್ದ ವೇಳೆ ವೇಗವಾಗಿ ಬಂದ ರೈಲೊಂದು ಡಿಕ್ಕಿ ಹೊಡೆದು ಮಹಿಳೆ ಹಾಗೂ ಇಬ್ಬರು ಮೊಮ್ಮಕ್ಕಳು ಸ್ಥಳದಲ್ಲೇ ಮೃತಪಟ್ಟಿರುವ ದಾರುಣ ಘಟನೆ ವರದಿಯಾಗಿದೆ. ಮೂಲಭೂತ ಸೌಕರ್ಯಗಳ ಕೊರತೆಯಿಂದಾಗಿ ಹಳಿ ದಾಟಲು ಹೋಗಿ ಒಂದೇ ಕುಟುಂಬದ ಮೂವರು ಪ್ರಾಣ ಕಳೆದುಕೊಂಡಿರುವುದು ಸಾರ್ವಜನಿಕ ವಲಯದಲ್ಲಿ ತೀವ್ರ ಆತಂಕಕ್ಕೆ ಕಾರಣವಾಗಿದೆ.

ಮೃತರನ್ನು ದೊಡ್ಡಬಳ್ಳಾಪುರ ತಾಲೂಕಿನ ಪಳನಜೋಗಹಳ್ಳಿ ನಿವಾಸಿ ಇರ್ಫಾನಾ (46) ಹಾಗೂ ಅವರ ಮೊಮ್ಮಕ್ಕಳಾದ ರುಕಿಯಾ (13) ಮತ್ತು ರಕಿಯಾ (8) ಎಂದು ಗುರುತಿಸಲಾಗಿದೆ. ಶಾಲಾ ರಜೆಯ ಹಿನ್ನೆಲೆಯಲ್ಲಿ ಆಂಧ್ರಪ್ರದೇಶದ ಹಿಂದೂಪುರದಿಂದ ಇಬ್ಬರು ಮಕ್ಕಳು ದೊಡ್ಡಬಳ್ಳಾಪುರದಲ್ಲಿರುವ ಅಜ್ಜಿಯ ಮನೆಗೆ ಬಂದಿದ್ದರು. ರಜೆ ಮುಗಿದಿದ್ದರಿಂದ ಮೊಮ್ಮಕ್ಕಳನ್ನು ವಾಪಸ್ ಶಾಲೆಗೆ ಕಳುಹಿಸಲು ಅಜ್ಜಿ ಇರ್ಫಾನಾ ಅವರೊಂದಿಗೆ ಹಿಂದೂಪುರಕ್ಕೆ ತೆರಳುತ್ತಿದ್ದರು. ಈ ಪ್ರಯಾಣಕ್ಕಾಗಿ ರೈಲು ಹತ್ತಲು ನಿಲ್ದಾಣಕ್ಕೆ ಬಂದಿದ್ದಾಗ ಈ ಘೋರ ದುರಂತ ಸಂಭವಿಸಿದೆ.

ಸ್ಕೈವಾಕ್ ಇಲ್ಲದಿದ್ದೇ ಅವಘಡಕ್ಕೆ ಕಾರಣ

ದೊಡ್ಡಬಳ್ಳಾಪುರ ರೈಲು ನಿಲ್ದಾಣದಲ್ಲಿ ಒಂದು ಪ್ಲಾಟ್‌ಫಾರ್ಮ್‌ನಿಂದ ಮತ್ತೊಂದು ಪ್ಲಾಟ್‌ಫಾರ್ಮ್‌ಗೆ ತೆರಳಲು ಸ್ಕೈವಾಕ್ (ಮೇಲ್ಸೇತುವೆ) ವ್ಯವಸ್ಥೆ ಇಲ್ಲದಿರುವುದೇ ಈ ಅಪಘಾತಕ್ಕೆ ಪ್ರಮುಖ ಕಾರಣ ಎಂದು ಹೇಳಲಾಗಿದೆ. ಸ್ಕೈವಾಕ್ ಇಲ್ಲದ ಕಾರಣ ಅಜ್ಜಿ ಮತ್ತು ಇಬ್ಬರು ಮಕ್ಕಳು ರೈಲು ಹತ್ತಲು ಅನಿವಾರ್ಯವಾಗಿ ಹಳಿಗಳನ್ನು ದಾಟಲು ಮುಂದಾಗಿದ್ದಾರೆ. ಈ ವೇಳೆ ಏಕಾಏಕಿ ವೇಗವಾಗಿ ಬಂದ ರೈಲು ಮೂವರಿಗೂ ಡಿಕ್ಕಿ ಹೊಡೆದಿದೆ. ರೈಲಿನ ಅತಿ ವೇಗದ ಪರಿಣಾಮವಾಗಿ ಮೂವರೂ ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಪ್ರಕರಣ ದಾಖಲು, ತನಿಖೆ ಆರಂಭ

ಘಟನೆಯ ಮಾಹಿತಿ ತಿಳಿದ ಕೂಡಲೇ ಯಶವಂತಪುರ ರೈಲ್ವೆ ಪೊಲೀಸ್ ಠಾಣೆಯ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ್ದಾರೆ. ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ರವಾನಿಸಲಾಗಿದ್ದು, ಯಶವಂತಪುರ ರೈಲ್ವೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ನಿಲ್ದಾಣದಲ್ಲಿ ಮೂಲಭೂತ ಸೌಕರ್ಯಗಳ ಕೊರತೆ ಮತ್ತು ಘಟನೆಯ ನಿಖರ ಕಾರಣಗಳ ಕುರಿತು ಪೊಲೀಸರು ಹೆಚ್ಚಿನ ತನಿಖೆ ಕೈಗೊಂಡಿದ್ದಾರೆ.

Read More
Next Story