ಸದ್ಯಕ್ಕಿಲ್ಲ ಸ್ಥಳೀಯ ಸಂಸ್ಥೆಗಳ ಚುನಾವಣೆ: ಮೀಸಲು ಪ್ರಕ್ರಿಯೆ ಪೂರ್ಣಗೊಳಿಸಲು 3 ತಿಂಗಳು ಕೇಳಿದ ಸರ್ಕಾರ!
x
ಸಂಗ್ರಹ ಚಿತ್ರ.

ಸದ್ಯಕ್ಕಿಲ್ಲ ಸ್ಥಳೀಯ ಸಂಸ್ಥೆಗಳ ಚುನಾವಣೆ: ಮೀಸಲು ಪ್ರಕ್ರಿಯೆ ಪೂರ್ಣಗೊಳಿಸಲು 3 ತಿಂಗಳು ಕೇಳಿದ ಸರ್ಕಾರ!

ರಾಜ್ಯದಲ್ಲಿ ಒಟ್ಟು 5,950 ಗ್ರಾಮ ಪಂಚಾಯಿತಿಗಳಿದ್ದು, 96 ಸಾವಿರಕ್ಕೂ ಅಧಿಕ ಸದಸ್ಯರಿದ್ದಾರೆ. ಜನಗಣತಿಯನ್ನು ಆಧರಿಸಿ, ಪ್ರತಿ ಗ್ರಾಮ ಪಂಚಾಯಿತಿಗೆ ಎಷ್ಟು ಸದಸ್ಯರು ಆಯ್ಕೆಯಾಗಬೇಕು ಎಂಬುದನ್ನು ರಾಜ್ಯ ಕ್ಷೇತ್ರ ಮರುವಿಂಗಡಣಾ ಆಯೋಗವು ನಿರ್ಧರಿಸಬೇಕಿದೆ.


Click the Play button to hear this message in audio format

ರಾಜ್ಯದಲ್ಲಿ ಅವಧಿ ಮುಗಿದಿರುವ ಗ್ರಾಮ ಪಂಚಾಯಿತಿಗಳ ಚುನಾವಣೆ ಸದ್ಯಕ್ಕಂತೂ ನಡೆಯುವ ಯಾವುದೇ ಲಕ್ಷಣಗಳು ಗೋಚರಿಸುತ್ತಿಲ್ಲ. ಗ್ರಾಮ ಪಂಚಾಯಿತಿಗಳ ಚುನಾವಣಾ ಮೀಸಲಾತಿ ಪ್ರಕ್ರಿಯೆಯನ್ನು ಅಂತಿಮಗೊಳಿಸಿ ರಾಜ್ಯ ಚುನಾವಣಾ ಆಯೋಗಕ್ಕೆ ಪಟ್ಟಿಯನ್ನು ಸಲ್ಲಿಸಲು ಕನಿಷ್ಠ ಮೂರು ತಿಂಗಳ ಕಾಲಾವಕಾಶ ಬೇಕಾಗುತ್ತದೆ ಎಂದು ರಾಜ್ಯ ಸರ್ಕಾರವು ಕರ್ನಾಟಕ ಹೈಕೋರ್ಟ್‌ಗೆ ಮೌಖಿಕವಾಗಿ ತಿಳಿಸಿದೆ.

ಹೊಸದಾಗಿ ಜನಸಂಖ್ಯೆಗೆ ಅನುಗುಣವಾಗಿ ಒಟ್ಟು ಸದಸ್ಯರ ಸಂಖ್ಯೆಯನ್ನು ಗುರುತಿಸಲು ಕನಿಷ್ಠ ನಾಲ್ಕು ವಾರಗಳ ಕಾಲಾವಕಾಶ ಅಗತ್ಯವಿದೆ ಎಂದು ಲಿಖಿತ ರೂಪದಲ್ಲಿಯೂ ಮನವಿ ಮಾಡಿದ್ದು, ಇದರಿಂದಾಗಿ ಸ್ಥಳೀಯ ಸಂಸ್ಥೆಗಳ ಚುನಾವಣೆ ಮತ್ತಷ್ಟು ವಿಳಂಬವಾಗುವುದು ಖಚಿತವಾಗಿದೆ.

ನ್ಯಾಯಾಲಯಕ್ಕೆ ಸರ್ಕಾರದ ವಸ್ತುಸ್ಥಿತಿ ವರದಿ

ಗ್ರಾಮ ಪಂಚಾಯಿತಿ ಹಾಗೂ ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆಗಳನ್ನು ಸಕಾಲದಲ್ಲಿ ನಡೆಸಲು ಅನುಕೂಲವಾಗುವಂತೆ, ಶೀಘ್ರವೇ ಅಂತಿಮ ಮೀಸಲಾತಿ ಅಧಿಸೂಚನೆ ಹೊರಡಿಸಲು ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡುವಂತೆ ಕೋರಿ ರಾಜ್ಯ ಚುನಾವಣಾ ಆಯೋಗವು ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿತ್ತು. ಈ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ವಿಭು ಬಖ್ರು ನೇತೃತ್ವದ ವಿಭಾಗೀಯ ನ್ಯಾಯಪೀಠವು ಸೋಮವಾರ ವಿಚಾರಣೆ ನಡೆಸಿತು. ವಿಚಾರಣೆಯ ವೇಳೆ ರಾಜ್ಯ ಸರ್ಕಾರದ ಪರ ಹೆಚ್ಚುವರಿ ಅಡ್ವೊಕೇಟ್ ಜನರಲ್ ಪ್ರತಿಮಾ ಹೊನ್ನಾಪುರ ಅವರು, ಚುನಾಯಿತ ಸದಸ್ಯರ ಸಂಖ್ಯೆ ಅಂತಿಮಗೊಂಡ ಬಳಿಕ ಮೀಸಲಾತಿ ಪ್ರಕ್ರಿಯೆ ಪೂರ್ಣಗೊಳಿಸಲು ಕನಿಷ್ಠ ಮೂರು ತಿಂಗಳು ಬೇಕಾಗಬಹುದು ಎಂದು ವಿವರಿಸಿ ವಸ್ತುಸ್ಥಿತಿ ವರದಿ ಸಲ್ಲಿಸಿದರು. ಸರ್ಕಾರದ ಈ ಹೇಳಿಕೆಗಳನ್ನು ದಾಖಲಿಸಿಕೊಂಡ ನ್ಯಾಯಪೀಠವು, ಮುಂದಿನ ವಿಚಾರಣೆಯನ್ನು ಏಪ್ರಿಲ್ 29ಕ್ಕೆ ಮುಂದೂಡಿದೆ.

ವಿಳಂಬಕ್ಕೆ ಕಾರಣವಾದ ಸುದೀರ್ಘ ಪ್ರಕ್ರಿಯೆ

ರಾಜ್ಯದಲ್ಲಿ ಒಟ್ಟು 5,950 ಗ್ರಾಮ ಪಂಚಾಯಿತಿಗಳಿದ್ದು, 96 ಸಾವಿರಕ್ಕೂ ಅಧಿಕ ಸದಸ್ಯರಿದ್ದಾರೆ. ಚಾಲ್ತಿಯಲ್ಲಿರುವ ಹಿಂದಿನ ಜನಗಣತಿಯನ್ನು ಆಧರಿಸಿ, ಪ್ರತಿ ಗ್ರಾಮ ಪಂಚಾಯಿತಿಗೆ ಎಷ್ಟು ಸದಸ್ಯರು ಆಯ್ಕೆಯಾಗಬೇಕು ಎಂಬುದನ್ನು ರಾಜ್ಯ ಕ್ಷೇತ್ರ ಮರುವಿಂಗಡಣಾ ಆಯೋಗವು ನಿರ್ಧರಿಸಬೇಕಿದೆ. ಇದಕ್ಕಾಗಿ ಅಗತ್ಯ ಅಂಕಿ-ಸಂಖ್ಯೆಗಳನ್ನು ಹದಿನೈದು ದಿನಗಳ ಒಳಗಾಗಿ ಒದಗಿಸುವಂತೆ ಮಾರ್ಚ್ ೧೮ರಂದು ಎಲ್ಲಾ ಜಿಲ್ಲಾಧಿಕಾರಿಗಳಿಗೆ ಸೂಚಿಸಲಾಗಿದೆ. ಜಿಲ್ಲಾಧಿಕಾರಿಗಳಿಂದ ಆಯೋಗಕ್ಕೆ ಮಾಹಿತಿ ಬರಲು ಎರಡು ವಾರ ಬೇಕು, ಅದನ್ನು ಪರಿಶೀಲಿಸಿ ಸರ್ಕಾರಕ್ಕೆ ಶಿಫಾರಸು ಮಾಡಲು ಆಯೋಗಕ್ಕೆ ಒಂದು ವಾರ ಹಾಗೂ ಆ ಶಿಫಾರಸನ್ನು ಪರಿಶೀಲಿಸಿ ಒಟ್ಟು ಸದಸ್ಯರ ಸಂಖ್ಯೆ ನಿಗದಿಪಡಿಸಲು ಸರ್ಕಾರಕ್ಕೆ ಮತ್ತೊಂದು ವಾರ ಬೇಕಾಗುತ್ತದೆ. ಈ ಸುದೀರ್ಘ ಪ್ರಕ್ರಿಯೆ ಮುಗಿದು ಅಂತಿಮ ಸಂಖ್ಯೆ ನಿಗದಿಯಾದ ಬಳಿಕವಷ್ಟೇ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಹಿಂದುಳಿದ ವರ್ಗ ಮತ್ತು ಮಹಿಳೆಯರಿಗೆ ಮೀಸಲಾತಿ ನಿಗದಿಪಡಿಸುವ ಪ್ರಕ್ರಿಯೆ ಶುರುವಾಗಲಿದೆ. ಈ ಎಲ್ಲಾ ಕಾರಣಗಳಿಂದ ಚುನಾವಣೆ ಸದ್ಯಕ್ಕೆ ಅಸಾಧ್ಯವಾಗಿದೆ.

ನಗರ ಸ್ಥಳೀಯ ಸಂಸ್ಥೆಗಳ ಮೀಸಲಾತಿಯೂ ಬಾಕಿ

ಕೇವಲ ಗ್ರಾಮ ಪಂಚಾಯಿತಿಗಳು ಮಾತ್ರವಲ್ಲದೆ, ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆಯೂ ಸದ್ಯಕ್ಕೆ ನಡೆಯುವ ಸಾಧ್ಯತೆಗಳಿಲ್ಲ. ರಾಜ್ಯದ 47 ನಗರಸಭೆಗಳು, 91 ಪುರಸಭೆಗಳು ಹಾಗೂ 49 ಪಟ್ಟಣ ಪಂಚಾಯಿತಿಗಳು ಸೇರಿದಂತೆ ಅವಧಿ ಮುಗಿದಿರುವ ಒಟ್ಟು 182 ನಗರ ಸ್ಥಳೀಯ ಸಂಸ್ಥೆಗಳ ಪೈಕಿ 167 ಸಂಸ್ಥೆಗಳ ವಾರ್ಡ್ ಮರುವಿಂಗಡಣಾ ಕಾರ್ಯ ಮಾತ್ರ ಮುಗಿದಿದೆ. ಇನ್ನು ಮೀಸಲಾತಿ ಪ್ರಕ್ರಿಯೆಗೆ ಸಂಬಂಧಿಸಿದಂತೆ, 23 ನಗರ ಸ್ಥಳೀಯ ಸಂಸ್ಥೆಗಳ ಕರಡು ಮೀಸಲಾತಿ ಅಧಿಸೂಚನೆ ಹೊರಡಿಸಲಾಗಿದ್ದು ಅದರ ಅಂತಿಮ ಪರಿಶೀಲನೆ ಬಾಕಿಯಿದೆ. ಉಳಿದ 143 ನಗರ ಸ್ಥಳೀಯ ಸಂಸ್ಥೆಗಳ ವಾರ್ಡ್‌ವಾರು ಕರಡು ಮೀಸಲಾತಿ ಪ್ರಕಟಣೆಯ ಪ್ರಕ್ರಿಯೆಯು ಸಹ ಸರ್ಕಾರದ ಹಂತದಲ್ಲಿ ಇನ್ನು ಪರಿಶೀಲನೆಯಲ್ಲಿಯೇ ಉಳಿದುಕೊಂಡಿದೆ ಎಂದು ಹೈಕೋರ್ಟ್‌ಗೆ ಮಾಹಿತಿ ನೀಡಲಾಗಿದೆ.

Read More
Next Story