ಕಬ್ಬು ಕಟಾವು, ಬೆಲೆ ನಿಗದಿ ಕುರಿತು ವೈಜ್ಞಾನಿಕ ಅಧ್ಯಯನಕ್ಕೆ ಸಚಿವರ ಆದೇಶ
x

ಕಬ್ಬು ಕಟಾವು, ಬೆಲೆ ನಿಗದಿ ಕುರಿತು ವೈಜ್ಞಾನಿಕ ಅಧ್ಯಯನಕ್ಕೆ ಸಚಿವರ ಆದೇಶ

ಕಬ್ಬು ಬೆಳೆಗಾರರು ಎದುರಿಸುತ್ತಿರುವ ಕಟಾವು ಅವಧಿ, ತೂಕದಲ್ಲಿನ ಮೋಸ, ಸಕ್ಕರೆ ರಿಕವರಿ ಪ್ರಮಾಣ, ಅನ್ಯಾಯಯುತ ಪಾವತಿ ಪದ್ಧತಿಗಳಿಗೆ ಶಾಶ್ವತ ಪರಿಹಾರ ಕಂಡುಕೊಳ್ಳಲು ರಾಜ್ಯ ಸರ್ಕಾರ ಮುಂದಾಗಿದೆ.


Click the Play button to hear this message in audio format

ಕಬ್ಬು ಬೆಳೆಗಾರರು ದಶಕಗಳಿಂದ ಎದುರಿಸುತ್ತಿರುವ ಕಟಾವು ಅವಧಿ, ತೂಕದಲ್ಲಿನ ಮೋಸ, ಸಕ್ಕರೆ ರಿಕವರಿ ಪ್ರಮಾಣ ಹಾಗೂ ಅನ್ಯಾಯಯುತ ಪಾವತಿ ಪದ್ಧತಿಗಳಿಗೆ ಶಾಶ್ವತ ಪರಿಹಾರ ಕಂಡುಕೊಳ್ಳಲು ರಾಜ್ಯ ಸರ್ಕಾರ ಮುಂದಾಗಿದೆ. ಈ ಕುರಿತು ದೆಹಲಿಯಲ್ಲಿ ಕೇಂದ್ರ ಕೃಷಿ ಸಚಿವ ಶಿವರಾಜ್ ಸಿಂಗ್ ಚೌಹಾಣ್ ಮತ್ತು ಕೇಂದ್ರ ಆಹಾರ ಸಚಿವ ಪ್ರಲ್ಹಾದ ಜೋಶಿ ಅವರೊಂದಿಗೆ ನಡೆದ ಉನ್ನತ ಮಟ್ಟದ ಸಭೆಯ ನಂತರ ಸಕ್ಕರೆ ಮತ್ತು ಜವಳಿ ಸಚಿವ ರುದ್ರಪ್ಪ ಲಮಾಣಿ ಈ ವಿಷಯ ಹೇಳಿದ್ದಾರೆ.

ಕಬ್ಬು ಕಟಾವು ಮಾಡುವ ಅವಧಿಯು ರೈತರ ಆದಾಯದ ಮೇಲೆ ನೇರ ಪರಿಣಾಮ ಬೀರುತ್ತದೆ. ಸಕ್ಕರೆ ರಿಕವರಿ ಪ್ರಮಾಣವು ಕಬ್ಬು ಕಟಾವು ಮಾಡಿದ ದಿನದಿಂದ ಕಾರ್ಖಾನೆಗೆ ತಲುಪುವ ಅವಧಿಯ ಮೇಲೆ ಅವಲಂಬಿತವಾಗಿರುತ್ತದೆ. ಈ ಹಿನ್ನೆಲೆಯಲ್ಲಿ, ಕರ್ನಾಟಕದ ವಿವಿಧ ಪ್ರದೇಶಗಳ ಕಬ್ಬಿನ ಗುಣಮಟ್ಟ ಮತ್ತು ರಿಕವರಿ ಸಾಮರ್ಥ್ಯದ ಕುರಿತು ವೈಜ್ಞಾನಿಕ ಅಧ್ಯಯನ ನಡೆಸಲು ಸರ್ಕಾರ ತೀರ್ಮಾನಿಸಿದೆ. ಕೇಂದ್ರ ಸರ್ಕಾರವು ಕರ್ನಾಟಕ ಮತ್ತು ಮಹಾರಾಷ್ಟ್ರದ ಕಬ್ಬು ಬೆಳೆಗಾರರ ಸಮಸ್ಯೆಗಳನ್ನು ಪರಿಹರಿಸಲು ಒಂದು ಜಂಟಿ ಉನ್ನತ ಮಟ್ಟದ ಸಮಿತಿಯನ್ನು ರಚಿಸುತ್ತಿದೆ. ಈ ಸಮಿತಿಗೆ ರಾಜ್ಯವು ತನ್ನ ಸಮಗ್ರ ವರದಿಯನ್ನು ಸಲ್ಲಿಸಲಿದೆ. ಕಬ್ಬನ್ನು ಯಾವ ಹಂತದಲ್ಲಿ ಕಟಾವು ಮಾಡಿದರೆ ರೈತರಿಗೆ ಗರಿಷ್ಠ ತೂಕ ಮತ್ತು ಉತ್ತಮ ರಿಕವರಿ ದೊರೆಯುತ್ತದೆ ಎಂಬುದನ್ನು ವೈಜ್ಞಾನಿಕವಾಗಿ ನಿರ್ಧರಿಸುವುದು ನಮ್ಮ ಗುರಿ. ರೈತರ ಆದಾಯಕ್ಕೆ ಕತ್ತರಿ ಹಾಕುವ ಯಾವುದೇ ವ್ಯವಸ್ಥೆಯನ್ನು ನಾವು ಒಪ್ಪುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ತೂಕದಲ್ಲಿ ಪಾರದರ್ಶಕತೆ: ಸರ್ಕಾರದ ಕಠಿಣ ನಿಲುವು

ಸಕ್ಕರೆ ಕಾರ್ಖಾನೆಗಳಲ್ಲಿ ಕಬ್ಬಿನ ತೂಕ ಮಾಡುವಾಗ ಅಕ್ರಮ ನಡೆಯುತ್ತಿದೆ ಎಂಬುದು ರೈತರ ಬಹುದಿನಗಳ ಆರೋಪ. ಇದನ್ನು ಗಂಭೀರವಾಗಿ ಪರಿಗಣಿಸಿರುವ ರಾಜ್ಯ ಸರ್ಕಾರ, ಇನ್ನು ಮುಂದೆ ತೂಕದ ವಿಷಯದಲ್ಲಿ ಯಾವುದೇ ಅನುಮಾನಕ್ಕೆ ಅವಕಾಶ ನೀಡದಂತೆ ಕಠಿಣ ಕ್ರಮ ಕೈಗೊಳ್ಳಲು ನಿರ್ಧರಿಸಿದೆ. ಅಗತ್ಯವಿರುವ ಕಡೆಗಳಲ್ಲಿ ಸರ್ಕಾರದ ನೇರ ಮೇಲ್ವಿಚಾರಣೆಯಲ್ಲಿ ಸ್ವತಂತ್ರ ತೂಕದ ವ್ಯವಸ್ಥೆಯನ್ನು ಕಲ್ಪಿಸುವ ಕುರಿತು ಚಿಂತನೆ ನಡೆಸಲಾಗುತ್ತಿದೆ. ರೈತ ಬೆಳೆದ ಒಂದು ಕಿಲೋ ಕಬ್ಬಿಗೂ ಅನ್ಯಾಯವಾಗದಂತೆ ತಾಂತ್ರಿಕತೆಯನ್ನು ಬಳಸಲಾಗುವುದು. ಈ ಕುರಿತು ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿ ಪಾರದರ್ಶಕ ತೂಕದ ಪದ್ಧತಿಯನ್ನು ಜಾರಿಗೆ ತರಲಾಗುವುದು ಎಂದು ಭರವಸೆ ನೀಡಿದ್ದಾರೆ.

ಎಫ್‌ಆರ್‌ಪಿ ಹಾಗೂ ಬೆಲೆ ನಿಗದಿ ಪದ್ಧತಿ

ಕೇಂದ್ರ ಸರ್ಕಾರವು ಕಬ್ಬಿಗೆ ನಿಗದಿಪಡಿಸುವ ಎಫ್‌ಆರ್‌ಪಿ ಜತೆಗೆ, ರಾಜ್ಯ ಸರ್ಕಾರವು ಹೆಚ್ಚುವರಿ ಕಬ್ಬಿನ ದರ ನಿಗದಿಪಡಿಸುವ ಪದ್ಧತಿಯನ್ನು ಹೊಂದಿದೆ. ಆದರೂ, ರೈತರಿಗೆ ಇನ್ನಷ್ಟು ಲಾಭದಾಯಕ ಬೆಲೆ ಸಿಗುವಂತೆ ಮಾಡಲು, ಇತರ ರಾಜ್ಯಗಳಲ್ಲಿ ಚಾಲ್ತಿಯಲ್ಲಿರುವ ಬೆಲೆ ನಿಗದಿ ಮಾದರಿಗಳನ್ನು ಸರ್ಕಾರ ಅಧ್ಯಯನ ಮಾಡುತ್ತಿದೆ. ಸಕ್ಕರೆ ರಿಕವರಿ ಲೆಕ್ಕಾಚಾರ, ಕಟಾವಿನ ನಂತರ ಕಡಿತಗೊಳಿಸುವ ವೇಸ್ಟೇಜ್ ಮತ್ತು ಇತರ ಅಸಂಗತ ಕಡಿತಗಳನ್ನು ವೈಜ್ಞಾನಿಕವಾಗಿ ಪರಿಶೀಲಿಸಲು ಸರ್ಕಾರ ಬದ್ಧವಾಗಿದೆ. ಈ ಎಲ್ಲ ವಿಚಾರಗಳನ್ನು ಕೇಂದ್ರದ ಜಂಟಿ ಸಮಿತಿಯ ಮುಂದೆ ವಿಸ್ತೃತವಾಗಿ ಮಂಡಿಸಲಾಗುವುದು.

ದೆಹಲಿ ಸಭೆಯಲ್ಲಿ ಜಂಟಿ ಸಮಿತಿಯು ಕಬ್ಬು ಬೆಳೆಯುವ ವಿವಿಧ ಜಿಲ್ಲೆಗಳ ಹವಾಗುಣ ಮತ್ತು ಮಣ್ಣಿನ ಗುಣಕ್ಕೆ ಅನುಗುಣವಾಗಿ ರಿಕವರಿ ದರ ನಿಗದಿ ಮಾಡಬೇಕು, ಕಬ್ಬಿನ ಗುಣಮಟ್ಟವನ್ನು ಅಳೆಯಲು ನಿಖರವಾದ ಪ್ರಯೋಗಾಲಯಗಳ ಬಳಕೆ, ರೈತರು ಮತ್ತು ಸಕ್ಕರೆ ಕಾರ್ಖಾನೆಗಳ ನಡುವೆ ಆದಾಯವನ್ನು ಸಮಾನವಾಗಿ ಹಂಚುವ ಮಾದರಿ ಮತ್ತು ವೇಸ್ಟೇಜ್ ಹೆಸರಿನಲ್ಲಿ ನಡೆಯುವ ಅಕ್ರಮಗಳ ನಿಯಂತ್ರಣ ಮಾಡುವ ಕುರಿತು ನಿರ್ಧರಿಸಿದೆ.

ರೈತ ಮತ್ತು ಉದ್ಯಮದ ಸಮತೋಲನ

ರೈತ ಮತ್ತು ಸಕ್ಕರೆ ಉದ್ಯಮ ಎರಡೂ ನಾಣ್ಯದ ಎರಡು ಮುಖಗಳು. ಒಂದು ಉಳಿದರೆ ಇನ್ನೊಂದು ಅಸ್ತಿತ್ವದಲ್ಲಿರುತ್ತದೆ. ಆದರೆ ಈ ಪ್ರಕ್ರಿಯೆಯಲ್ಲಿ ರೈತ ಶೋಷಣೆಗೆ ಒಳಗಾಗಬಾರದು. ನಾವು ತಾತ್ಕಾಲಿಕ ಪರಿಹಾರಗಳಿಗೆ ಸೀಮಿತವಾಗದೆ, ಶಾಶ್ವತ ಮತ್ತು ಪಾರದರ್ಶಕ ವ್ಯವಸ್ಥೆಯನ್ನು ಜಾರಿಗೆ ತರುತ್ತಿದ್ದೇವೆ ಎಂದು ಸಚಿವರು ತಿಳಿಸಿದ್ದಾರೆ. ರಾಜ್ಯ ಸರ್ಕಾರವು ಈ ಎಲ್ಲ ಅಂಶಗಳ ಕುರಿತು ಕೃಷಿ ವಿಜ್ಞಾನಿಗಳು, ರೈತ ಸಂಘಟನೆಗಳು ಮತ್ತು ಕಾರ್ಖಾನೆಗಳ ಪ್ರತಿನಿಧಿಗಳೊಂದಿಗೆ ಸಮಾಲೋಚನೆ ನಡೆಸಲಿದೆ. ದೆಹಲಿ ಸಭೆಯ ನಂತರ, ರಾಜ್ಯದ ಕಬ್ಬು ಬೆಳೆಗಾರರಿಗೆ ಸಿಗುವ ಬೆಲೆ ಮತ್ತು ಸೌಲಭ್ಯಗಳಲ್ಲಿ ದೊಡ್ಡ ಬದಲಾವಣೆಯಾಗುವ ನಿರೀಕ್ಷೆಯಿದೆ. ಈ ಮೂಲಕ ಕಬ್ಬು ಕೃಷಿಯು ಮತ್ತೆ ಲಾಭದಾಯಕವಾಗುವಂತೆ ಮಾಡುವ ದಿಸೆಯಲ್ಲಿ ಸರ್ಕಾರ ದೊಡ್ಡ ಹೆಜ್ಜೆ ಇಟ್ಟಿದೆ.

Read More
Next Story