ಇದೇ ಕೊನೆಯ ಅವಕಾಶ: ಆ.31ರೊಳಗೆ ಜಿಬಿಎ ಚುನಾವಣೆ ಮುಗಿಸಲು ಸುಪ್ರೀಂ ಖಡಕ್ ಆದೇಶ
x

'ಇದೇ ಕೊನೆಯ ಅವಕಾಶ': ಆ.31ರೊಳಗೆ ಜಿಬಿಎ ಚುನಾವಣೆ ಮುಗಿಸಲು ಸುಪ್ರೀಂ ಖಡಕ್ ಆದೇಶ

ಜಿಬಿಎ ಚುನಾವಣೆಯ ಅರ್ಜಿಯನ್ನು ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್, ಸರ್ಕಾರದ ಮನವಿಯನ್ನು ಪುರಸ್ಕರಿಸಿದೆ. ಸೆಪ್ಟೆಂಬರ್‌ ವರೆಗಿನ ಗಡುವನ್ನು ನಿರಾಕರಿಸಿ, ಆ. 31ರೊಳಗೆ ಅಂತಿಮ ಅವಕಾಶ ನೀಡಿದೆ.


Click the Play button to hear this message in audio format

ರಾಜಧಾನಿ ಬೆಂಗಳೂರಿನ ಸ್ಥಳೀಯ ಆಡಳಿತದ ಚುಕ್ಕಾಣಿಯನ್ನು ಜನಪ್ರತಿನಿಧಿಗಳ ಕೈಗೆ ನೀಡುವ ಪ್ರಕ್ರಿಯೆ ಕಳೆದ ಐದು ವರ್ಷಗಳಿಂದ ಕೇವಲ ಕಾಗದದ ಮೇಲೆ ಉಳಿದಿದೆ. ಕೋವಿಡ್ ಸಾಂಕ್ರಾಮಿಕ, ವಾರ್ಡ್ ಮರು ವಿಂಗಡಣೆ, ಮೀಸಲಾತಿ ಗೊಂದಲ ಮತ್ತು ಆಡಳಿತಾತ್ಮಕ ವಿಳಂಬಗಳ ಸರಣಿಯಲ್ಲಿ ಸಿಲುಕಿರುವ ಗ್ರೇಟರ್‌ ಬೆಂಗಳೂರು ಪ್ರಾಧಿಕಾರ (ಜಿಬಿಎ) ಚುನಾವಣೆಗೆ ಇದೀಗ ಸುಪ್ರೀಂ ಕೋರ್ಟ್‌ ಕಟ್ಟುನಿಟ್ಟಿನ ಆದೇಶ ನೀಡಿದೆ. ಆಗಸ್ಟ್‌ 31ರೊಳಗೆ ಚುನಾವಣೆ ಮುಕ್ತಾಯಗೊಳಿಸುವಂತೆ ನಿರ್ದೇಶನ ನೀಡಿದೆ.

ಚುನಾವಣೆಯನ್ನು ಜೂನ್ ತಿಂಗಳೊಳಗೆ ಪೂರ್ಣಗೊಳಿಸಬೇಕೆಂದು ಈ ಹಿಂದೆ ಸುಪ್ರೀಂ ಕೋರ್ಟ್ ಆದೇಶ ನೀಡಿತ್ತು. ಆದರೆ, ರಾಷ್ಟ್ರೀಯ ಜನಗಣತಿ ಕಾರ್ಯಗಳು ಮತ್ತು ಮತದಾರರ ಪಟ್ಟಿಯ ವಿಶೇಷ ಪರಿಷ್ಕರಣೆ (ಎಸ್‌ಐಆರ್‌) ಕಾರಣದಿಂದಾಗಿ ಸಿಬ್ಬಂದಿ ಕೊರತೆ ಉಂಟಾಗಲಿದೆ ಎಂದು ರಾಜ್ಯ ಸರ್ಕಾರ ಕಾಲಾವಕಾಶ ಕೋರಿ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದವು. ಈ ಅರ್ಜಿಯನ್ನು ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್, ಸರ್ಕಾರದ ಮನವಿಯನ್ನು ಭಾಗಶಃ ಮಾತ್ರ ಪುರಸ್ಕರಿಸಿದೆ. ಸೆಪ್ಟೆಂಬರ್ ವರೆಗಿನ ಗಡುವನ್ನು ನಿರಾಕರಿಸಿರುವ ನ್ಯಾಯಪೀಠ, ಆ. 31, 2026ರವರೆಗೆ ಮಾತ್ರ ಅಂತಿಮ ಅವಕಾಶ ನೀಡಿದೆ. ಯಾವುದೇ ಕಾರಣಕ್ಕೂ ಇನ್ಮುಂದೆ ಕಾಲಾವಕಾಶ ವಿಸ್ತರಣೆ ಮಾಡುವುದಿಲ್ಲ ಎಂದು ಖಡಕ್ ಎಚ್ಚರಿಕೆ ನೀಡಿದ್ದು, ರಾಜ್ಯ ಸರ್ಕಾರದ ಪಾಲಿಗೆ ಇದು ಅಗ್ನಿಪರೀಕ್ಷೆಯಾಗಿದೆ.

ಸಿದ್ಧತೆಗಳು - ಮತದಾರರ ಸಂಖ್ಯೆ

ಜಿಬಿಎ ಕಳೆದ ಏಪ್ರಿಲ್ ತಿಂಗಳಲ್ಲೇ ಚುನಾವಣಾ ಸಿದ್ಧತೆಗಳನ್ನು ಆರಂಭಿಸಿತ್ತು. ಅಂತಿಮ ಮತದಾರರ ಪಟ್ಟಿಯನ್ನು ಈಗಾಗಲೇ ಪ್ರಕಟಿಸಲಾಗಿದ್ದು, ಜಿಬಿಎ ವ್ಯಾಪ್ತಿಯಲ್ಲಿ ಒಟ್ಟು 89 ಲಕ್ಷ ಮತದಾರರಿದ್ದಾರೆ. ಒಟ್ಟು 369 ವಾರ್ಡ್‌ಗಳಿಗೆ ಚುನಾವಣೆ ನಡೆಸಲು ಆಯೋಗ ಸಿದ್ಧತೆ ನಡೆಸಿದೆ. ವಿಶೇಷವೆಂದರೆ, ದಶಕಗಳ ಬಳಿಕ ಬೆಂಗಳೂರಿನಲ್ಲಿ ಇವಿಎಂ ಬದಲಿಗೆ ಸಾಂಪ್ರದಾಯಿಕ 'ಬ್ಯಾಲೆಟ್ ಪೇಪರ್' ಬಳಸಿ ಮತದಾನ ನಡೆಸಲು ಚುನಾವಣಾ ಆಯೋಗ ತೀರ್ಮಾನಿಸಿದೆ.

2020ರ ಸೆಪ್ಟೆಂಬರ್‌ನಿಂದಲೇ ಬೆಂಗಳೂರಿನಲ್ಲಿ ಚುನಾಯಿತ ಪ್ರತಿನಿಧಿಗಳ ಆಡಳಿತವಿಲ್ಲ. 2020ರ ಅವಧಿಯಲ್ಲಿ ಕೋವಿಡ್ ಸಾಂಕ್ರಾಮಿಕವು ಚುನಾವಣೆ ನಡೆಸಲು ದೊಡ್ಡ ಅಡ್ಡಿಯಾಯಿತು. ಆಡಳಿತ ಪಕ್ಷವು ವಾರ್ಡ್‌ಗಳ ಸಂಖ್ಯೆಯನ್ನು 198ರಿಂದ 243ಕ್ಕೆ ಏರಿಸುವ ಮೂಲಕ ಮರು ವಿಂಗಡಣೆ ಪ್ರಕ್ರಿಯೆಗೆ ಚಾಲನೆ ನೀಡಿತು. ನಂತರ ಇದನ್ನು 369 ವಾರ್ಡ್‌ಗಳವರೆಗೆ ವಿಸ್ತರಿಸುವ ಚರ್ಚೆಗಳಾದವು. ಪ್ರತಿ ಬಾರಿಯೂ ಒಂದಲ್ಲ ಒಂದು ನೆಪ ಹೇಳಿ ಚುನಾವಣೆಯನ್ನು ಮುಂದೂಡುತ್ತಾ ಬಂದಿರುವುದು ಸ್ಥಳೀಯ ಆಡಳಿತದಲ್ಲಿ ಅಧಿಕಾರಶಾಹಿಯ ಹಿಡಿತ ಹೆಚ್ಚಾಗಲು ಕಾರಣವಾಯಿತು.

ಆಯೋಗದ ಮುಂದಿರುವ ಸವಾಲುಗಳು

ಸುಪ್ರೀಂ ಕೋರ್ಟ್ ಆಗಸ್ಟ್ ಅಂತ್ಯದೊಳಗೆ ಪ್ರಕ್ರಿಯೆ ಮುಗಿಸಲು ನಿರ್ದೇಶನ ನೀಡಿರುವುದು ಚುನಾವಣಾ ಆಯೋಗದ ಮೇಲೆ ಭಾರಿ ಒತ್ತಡ ಹೇರಿದೆ. ಬ್ಯಾಲೆಟ್ ಪೇಪರ್ ಮೂಲಕ ಚುನಾವಣೆ ನಡೆಯುವುದರಿಂದ ಮತದಾನದ ದಿನ ಮತ್ತು ಮತ ಎಣಿಕೆಯ ದಿನ ಹೆಚ್ಚಿನ ಸಿಬ್ಬಂದಿ ಬೇಕಾಗುತ್ತದೆ. ಜನಗಣತಿ ಕಾರ್ಯಗಳ ನಡುವೆ ಸಿಬ್ಬಂದಿಯನ್ನು ನಿಯೋಜಿಸುವುದು ಸವಾಲಿನ ಕೆಲಸ. 369 ವಾರ್ಡ್‌ಗಳಲ್ಲಿ ಶಾಂತಿಯುತ ಚುನಾವಣೆ ನಡೆಸಲು ಭಾರಿ ಪ್ರಮಾಣದ ಭದ್ರತಾ ಸಿಬ್ಬಂದಿಯ ಅಗತ್ಯವಿದೆ. ಸರ್ಕಾರದ ಬೇಡಿಕೆಯಂತೆ ಸೆಪ್ಟೆಂಬರ್ ವರೆಗೆ ಸಮಯ ಸಿಗದ ಕಾರಣ, ಕೇವಲ ಆಗಸ್ಟ್ ಒಳಗಾಗಿ ಎಲ್ಲವನ್ನೂ ಸಿದ್ಧಪಡಿಸಬೇಕಾದ ಅನಿವಾರ್ಯತೆ ಆಯೋಗಕ್ಕಿದೆ.

ಈಗಿನ ಬೆಂಗಳೂರು ನಗರದ ಆಡಳಿತವು ವಿಕೇಂದ್ರೀಕರಣದತ್ತ ಸಾಗುತ್ತಿದೆ. ಐದು ಹೊಸ ಪಾಲಿಕೆಗಳ ರಚನೆಯ ಭವಿಷ್ಯ ಈ ಚುನಾವಣೆಯ ಮೇಲೆ ನಿಂತಿದೆ. ಬೆಂಗಳೂರಿನ ನಾಗರಿಕರು ಐದು ವರ್ಷಗಳಿಂದ ಕಾರ್ಪೊರೇಟರ್‌ಗಳಿಲ್ಲದೆ ಆಡಳಿತ ಎದುರಿಸುತ್ತಿದ್ದಾರೆ. ಕಸದ ನಿರ್ವಹಣೆ, ರಸ್ತೆಗಳ ದುರಸ್ತಿ, ಕುಡಿಯುವ ನೀರು ಮತ್ತು ಮೂಲಸೌಕರ್ಯಗಳ ಕೊರತೆಯು ಚುನಾಯಿತ ಪ್ರತಿನಿಧಿಗಳ ಅನುಪಸ್ಥಿತಿಯಲ್ಲಿ ಭಾರಿ ಸಮಸ್ಯೆಯಾಗಿದೆ.

Read More
Next Story