ಬೆಂಗಳೂರು ಪೊಲೀಸ್ ಆಯುಕ್ತಾಲಯ 5 ವಿಭಾಗಗಳಾಗಿ ವಿಭಜನೆ: ಸಚಿವ ಸಂಪುಟ ಒಪ್ಪಿಗೆ
x

ಬೆಂಗಳೂರು ಪೊಲೀಸ್ ಆಯುಕ್ತಾಲಯ 5 ವಿಭಾಗಗಳಾಗಿ ವಿಭಜನೆ: ಸಚಿವ ಸಂಪುಟ ಒಪ್ಪಿಗೆ

ಐದು ವಿಭಾಗಗಳು ಮುಖ್ಯ ಪೊಲೀಸ್ ಆಯುಕ್ತರ ಮೇಲ್ವಿಚಾರಣೆಯಡಿ ಕಾರ್ಯನಿರ್ವಹಿಸಲಿವೆ. ಪ್ರಸ್ತುತ ಇರುವ ಪೊಲೀಸ್ ಆಯುಕ್ತ ಹುದ್ದೆಯನ್ನು ಮುಖ್ಯ ಪೊಲೀಸ್ ಆಯುಕ್ತ ಎಂದು ಉನ್ನತೀಕರಿಸಲಾಗುತ್ತದೆ.


Click the Play button to hear this message in audio format

ಬೆಳೆಯುತ್ತಿರುವ ಬೆಂಗಳೂರಿನ ಭೌಗೋಳಿಕ ವ್ಯಾಪ್ತಿ ಮತ್ತು ಹೆಚ್ಚುತ್ತಿರುವ ಜನಸಂಖ್ಯೆಗೆ ಅನುಗುಣವಾಗಿ, ನಗರದ ಕಾನೂನು ಮತ್ತು ಸುವ್ಯವಸ್ಥೆಯನ್ನು ಸುಧಾರಿಸಲು ರಾಜ್ಯ ಸರ್ಕಾರವು ಐತಿಹಾಸಿಕ ತೀರ್ಮಾನವೊಂದನ್ನು ಕೈಗೊಂಡಿದೆ. ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿ ನಡೆದ ರಾಜ್ಯ ಸಚಿವ ಸಂಪುಟ ಸಭೆಯು, ಬೆಂಗಳೂರು ನಗರ ಪೊಲೀಸ್ ಆಯುಕ್ತಾಲಯವನ್ನು ಸಮಗ್ರವಾಗಿ ಪುನರ್‌ಸಂಘಟಿಸಲು ಅನುಮೋದನೆ ನೀಡಿದೆ. 5 ಪ್ರತ್ಯೇಕ ಕಮಿಷನರೇಟ್‌ಗಳ ಸ್ಥಾಪನೆಗಳ ಸಚಿವ ಸಂಪುಟ ಸಭೆ ಹಸಿರುನಿಶಾನೆ ತೋರಿದ್ದು, 1,022 ಹೊಸ ಹುದ್ದೆಗಳನ್ನು ಸೃಷ್ಟಿಸಲಾಗುವುದು.

ಬೆಂಗಳೂರು ನಗರದ ಜನಸಂಖ್ಯೆ ಈಗಾಗಲೇ ಸುಮಾರು 1.56 ಕೋಟಿ ಗಡಿ ದಾಟಿದೆ. ನಗರದ ವಿಸ್ತಾರವು ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಗ್ರೇಟರ್ ಬೆಂಗಳೂರು ಪ್ರಾಧಿಕಾರದ (ಜಿಬಿಎ) ರಚನೆಯ ಹಿನ್ನೆಲೆಯಲ್ಲಿ ಹಳೆಯ ಪೊಲೀಸ್ ಆಡಳಿತ ಮಾದರಿಯು ಸವಾಲುಗಳನ್ನು ಎದುರಿಸಲು ಅಸಮರ್ಥವಾಗುತ್ತಿತ್ತು. ನಾಗರಿಕರಿಗೆ ತ್ವರಿತ ಸ್ಪಂದನೆ ಮತ್ತು ಅತ್ಯಂತ ದಕ್ಷ ಆಡಳಿತವನ್ನು ಒದಗಿಸುವುದು ಸರ್ಕಾರದ ಪ್ರಮುಖ ಆದ್ಯತೆಯಾಗಿದ್ದು, ಈ ಹಿನ್ನೆಲೆಯಲ್ಲಿ ಈ ಪುನರ್ ರಚನೆ ಅನಿವಾರ್ಯವಾಗಿದೆ.

ಐದು ಪ್ರತ್ಯೇಕ ಕಮಿಷನರೇಟ್‌ಗಳು

ಸದ್ಯ ಅಸ್ತಿತ್ವದಲ್ಲಿರುವ ಏಕೈಕ ಬೆಂಗಳೂರು ನಗರ ಪೊಲೀಸ್ ಆಯುಕ್ತಾಲಯವನ್ನು ಐದು ಸ್ವತಂತ್ರ ಕಮಿಷನರೇಟ್‌ಗಳಾಗಿ ವಿಭಜಿಸಲಾಗುವುದು. ಪೂರ್ವ ವಿಭಾಗ, ಪಶ್ಚಿಮ ವಿಭಾಗ, ಉತ್ತರ ವಿಭಾಗ, ದಕ್ಷಿಣ ವಿಭಾಗ, ಕೇಂದ್ರ ವಿಭಾಗವಾಗಿ ವಿಂಗಡಿಸಲಾಗುವುದು. ಈ ಐದೂ ವಿಭಾಗಗಳು ಮುಖ್ಯ ಪೊಲೀಸ್ ಆಯುಕ್ತರ ಒಟ್ಟಾರೆ ಮೇಲ್ವಿಚಾರಣೆಯಡಿ ಕಾರ್ಯನಿರ್ವಹಿಸಲಿವೆ. ಪ್ರಸ್ತುತ ಇದ್ದ ಪೊಲೀಸ್ ಆಯುಕ್ತ ಹುದ್ದೆಯನ್ನು ಮುಖ್ಯ ಪೊಲೀಸ್ ಆಯುಕ್ತ ಎಂದು ಉನ್ನತೀಕರಿಸಲಾಗಿದೆ. ಈ ಕ್ರಮದಿಂದಾಗಿ ಆಡಳಿತಾತ್ಮಕವಾಗಿ ಜವಾಬ್ದಾರಿಗಳು ಹಂಚಿಕೆಯಾಗಲಿದ್ದು, ಸ್ಥಳೀಯ ಮಟ್ಟದ ಸಮಸ್ಯೆಗಳಿಗೆ ತ್ವರಿತ ಪರಿಹಾರ ಸಿಗಲಿದೆ. ಈ ಬೃಹತ್ ಬದಲಾವಣೆಗೆ ಪೂರಕವಾಗಿ ಸರ್ಕಾರವು ಭಾರೀ ಪ್ರಮಾಣದ ಮಾನವ ಸಂಪನ್ಮೂಲವನ್ನು ಒದಗಿಸಲು ನಿರ್ಧರಿಸಿದೆ ಒಟ್ಟು 1,022 ಹೊಸ ಹುದ್ದೆಗಳನ್ನು ಸೃಜಿಸಲು ಆರ್ಥಿಕ ಇಲಾಖೆ ಒಪ್ಪಿಗೆ ನೀಡಿದೆ. ಆಯುಕ್ತಾಲಯದ ಸಂಪೂರ್ಣ ಕಾರ್ಯನಿರ್ವಹಣೆಗಾಗಿ (ಅಪರಾಧ ನಿಯಂತ್ರಣ, ಸಂಚಾರ ಮತ್ತು ಸಾರ್ವಜನಿಕ ಭದ್ರತೆ) ಒಟ್ಟು 6,550 ಹುದ್ದೆಗಳ ಅಗತ್ಯವನ್ನು ಸರ್ಕಾರ ಗುರುತಿಸಿದೆ. ಈ ಪೈಕಿ ಹೊಸ ಹುದ್ದೆಗಳ ಜೊತೆಗೆ, ಚಾಲ್ತಿಯಲ್ಲಿರುವ ಹುದ್ದೆಗಳನ್ನು ಮರುನಿಯೋಜಿಸುವ ಮೂಲಕ ದಕ್ಷತೆಯನ್ನು ಹೆಚ್ಚಿಸಲಾಗುವುದು. ನಗರದ ಹೊರವಲಯದ ಪೊಲೀಸ್ ಠಾಣೆಗಳು ಸೇರಿದಂತೆ ಒಟ್ಟು 11 ಪ್ರಮುಖ ಠಾಣೆಗಳಿಗೆ ಪ್ರಥಮ ಹಂತದಲ್ಲಿ 276 ಹೊಸ ಸಿಬ್ಬಂದಿಗಳನ್ನು ನೇಮಿಸಲಾಗುವುದು.

ಸಂಚಾರ ನಿರ್ವಹಣೆಗೆ ವಿಶೇಷ ಒತ್ತು

ಬೆಂಗಳೂರಿನ ಟ್ರಾಫಿಕ್ ಸಮಸ್ಯೆ ಜಾಗತಿಕ ಮಟ್ಟದಲ್ಲಿ ಚರ್ಚೆಯಾಗುತ್ತಿರುವ ಹಿನ್ನೆಲೆಯಲ್ಲಿ, ಸಂಚಾರ ವಿಭಾಗವನ್ನು ಬಲಪಡಿಸಲು ಸರ್ಕಾರ ವಿಶೇಷ ಗಮನ ಹರಿಸಿದೆ. ಜಂಟಿ ಅಥವಾ ಅಪರ ಪೊಲೀಸ್ ಆಯುಕ್ತರು (ಸಂಚಾರ) ಹುದ್ದೆಯನ್ನು ಪೊಲೀಸ್ ಆಯುಕ್ತರು (ಸಂಚಾರ) ಎಂದು ಮರುಪದನಮೀಕರಿಸಲಾಗುವುದು.

ಸಂಚಾರ ನಿರ್ವಹಣೆಗೆ ಅನುಕೂಲವಾಗುವಂತೆ ಹೊಸದಾಗಿ 6 ಎಸಿಪಿ ಹುದ್ದೆಗಳನ್ನು ಸೃಜಿಸಲಾಗಿದೆ. ಕೇಂದ್ರ ಸಂಚಾರ ವಿಭಾಗಕ್ಕೆ - 2, ಪಶ್ಚಿಮ ಸಂಚಾರ ವಿಭಾಗಕ್ಕೆ - 1, ಉತ್ತರ ಸಂಚಾರ ವಿಭಾಗಕ್ಕೆ - 1, ಪಶ್ಚಿಮ ಕಾನೂನು ಸುವ್ಯವಸ್ಥೆ ವಿಭಾಗಕ್ಕೆ - 2, ಪ್ರತಿಯೊಂದು ಎಸಿಪಿ ಕಚೇರಿಗೆ ತಲಾ 5 ಕಾರ್ಯಕಾರಿ ಹುದ್ದೆಗಳನ್ನು ನೀಡುವ ಮೂಲಕ ಸ್ಥಳೀಯ ಮಟ್ಟದ ಕಣ್ಗಾವಲು ಹೆಚ್ಚಿಸಲಾಗುವುದು. ಪೂರ್ವ ವಿಭಾಗಕ್ಕಾಗಿ ಹೊಸ ಸಿಎಆರ್ ಘಟಕವನ್ನು ರಚಿಸಲಾಗುವುದು.

ಗೃಹ ಸಚಿವ ಪ್ರಿಯಾಂಕ್ ಖರ್ಗೆ ಹೇಳಿರುವಂತೆ, ಈ ಪುನರ್ ರಚನೆಯು ಕೇವಲ ಹುದ್ದೆಗಳ ಹೆಚ್ಚಳವಲ್ಲ, ಬದಲಾಗಿ ಆಡಳಿತದಲ್ಲಿ ಪಾರದರ್ಶಕತೆ ಮತ್ತು ವೇಗವನ್ನು ತರುವ ಪ್ರಯತ್ನವಾಗಿದೆ. ಪ್ರಸ್ತುತ ನಡೆಯುತ್ತಿರುವ ನೇಮಕಾತಿ ಪ್ರಕ್ರಿಯೆಗಳು ಪೂರ್ಣಗೊಂಡ ನಂತರ, ಹೊಸ ಪೊಲೀಸ್ ಠಾಣೆಗಳ ಸ್ಥಾಪನೆ ಮತ್ತು ಸಿಬ್ಬಂದಿ ನಿಯೋಜನೆಯನ್ನು ಹಂತ-ಹಂತವಾಗಿ ಜಾರಿಗೊಳಿಸಲಾಗುವುದು. ಈ ಐತಿಹಾಸಿಕ ತೀರ್ಮಾನವು ಬೆಂಗಳೂರಿನ ಕಾನೂನು ಸುವ್ಯವಸ್ಥೆಗೆ ಹೊಸ ವೇಗ ನೀಡಲಿದೆ. ಇದರಿಂದ ಅಪರಾಧಗಳ ತಡೆಗಟ್ಟುವಿಕೆ ಮತ್ತು ಸಂಚಾರ ದಟ್ಟಣೆಯ ನಿರ್ವಹಣೆಯಲ್ಲಿ ಪೊಲೀಸರು ಇನ್ನಷ್ಟು ಸಕ್ರಿಯವಾಗಿ ಕಾರ್ಯನಿರ್ವಹಿಸಲು ಸಾಧ್ಯವಾಗುತ್ತದೆ ಎಂದರು.

Read More
Next Story