ಗತಿ ಶಕ್ತಿ ವಿಶ್ವವಿದ್ಯಾಲಯ-ಸಿಎಸ್‌ಐಆರ್‌-ಎನ್‌ಎಎಲ್‌ ನಡುವೆ ಐತಿಹಾಸಿಕ ಒಪ್ಪಂದ
x

ಗತಿ ಶಕ್ತಿ ವಿಶ್ವವಿದ್ಯಾಲಯ-ಸಿಎಸ್‌ಐಆರ್‌-ಎನ್‌ಎಎಲ್‌ ನಡುವೆ ಐತಿಹಾಸಿಕ ಒಪ್ಪಂದ

ಗತಿ ಶಕ್ತಿ ವಿವಿ - ಎನ್‌ಎಎಲ್‌ ಒಪ್ಪಂದಯು ಭಾರತದ ವಾಯುಯಾನ ವಲಯದಲ್ಲಿ ಶಿಕ್ಷಣ, ಸಂಶೋಧನೆ ಮತ್ತು ನಾವೀನ್ಯತೆಯನ್ನು ಉನ್ನತ ಮಟ್ಟಕ್ಕೆ ಕೊಂಡೊಯ್ಯುವ ಗುರಿಯನ್ನು ಹೊಂದಿದೆ.


Click the Play button to hear this message in audio format

ದೇಶದ ಸಾರಿಗೆ ಹಾಗೂ ಲಾಜಿಸ್ಟಿಕ್ಸ್ ವಲಯದ ಅಭಿವೃದ್ಧಿಗಾಗಿ ಸ್ಥಾಪಿಸಲಾದ ದೇಶದ ಮೊದಲ ಮತ್ತು ಪ್ರಮುಖ ವಿಶ್ವವಿದ್ಯಾಲಯವಾದ ಗತಿ ಶಕ್ತಿ ವಿಶ್ವವಿದ್ಯಾಲಯ, ಇತ್ತೀಚೆಗೆ ಬೆಂಗಳೂರಿನಲ್ಲಿರುವ ಭಾರತದ ಅತಿದೊಡ್ಡ ನಾಗರಿಕ ವಾಯುಯಾನ ಸಂಶೋಧನಾ ಸಂಸ್ಥೆಯಾದ ಸಿಎಸ್ಐಆರ್‌-ನ್ಯಾಷನಲ್ ಏರೋಸ್ಪೇಸ್ ಲ್ಯಾಬೊರೇಟರೀಸ್ ನೊಂದಿಗೆ ತಿಳಿವಳಿಕೆ ಒಪ್ಪಂದಕ್ಕೆ ಸಹಿ ಹಾಕಿದೆ. ಈ ಪಾಲುದಾರಿಕೆಯು ಭಾರತದ ವಾಯುಯಾನ ವಲಯದಲ್ಲಿ ಶಿಕ್ಷಣ, ಸಂಶೋಧನೆ ಮತ್ತು ನಾವೀನ್ಯತೆಯನ್ನು ಉನ್ನತ ಮಟ್ಟಕ್ಕೆ ಕೊಂಡೊಯ್ಯುವ ಗುರಿಯನ್ನು ಹೊಂದಿದೆ.

ಈ ಸಹಯೋಗವು ಕೇವಲ ಸಾಂಸ್ಥಿಕ ಒಪ್ಪಂದವಾಗಿರದೆ, ದೇಶದ ವಾಯುಯಾನ ವಲಯದಲ್ಲಿ ಕ್ರಾಂತಿಕಾರಿ ಬದಲಾವಣೆಗಳನ್ನು ತರುವ ದೃಷ್ಟಿಕೋನವನ್ನು ಹೊಂದಿದೆ. ವಾಯುಯಾನ ಉದ್ಯಮದ ಇಂದಿನ ಅಗತ್ಯಗಳಿಗೆ ಅನುಗುಣವಾಗಿ ಶೈಕ್ಷಣಿಕ ಪಠ್ಯಕ್ರಮವನ್ನು ವಿನ್ಯಾಸಗೊಳಿಸುವುದು. ಕೈಗಾರಿಕಾ ತಜ್ಞರು ಮತ್ತು ಶಿಕ್ಷಣ ತಜ್ಞರು ಜಂಟಿಯಾಗಿ ಕೋರ್ಸ್‌ಗಳನ್ನು ಅಭಿವೃದ್ಧಿಪಡಿಸುವ ಮೂಲಕ ವಿದ್ಯಾರ್ಥಿಗಳಿಗೆ ಉತ್ತಮ ಕೌಶಲಗಳನ್ನು ಒದಗಿಸುವುದು. ಸಂಶೋಧನೆಗಾಗಿ ಅತ್ಯಾಧುನಿಕ ಸೌಲಭ್ಯಗಳು ಮತ್ತು ಪರೀಕ್ಷಾ ಕೇಂದ್ರಗಳನ್ನು ಸ್ಥಾಪಿಸುವುದು. ಇದು ವಿದ್ಯಾರ್ಥಿಗಳಿಗೆ ಮತ್ತು ಸಂಶೋಧಕರಿಗೆ ಪ್ರಾಯೋಗಿಕ ಜ್ಞಾನವನ್ನು ಪಡೆಯಲು ನೆರವಾಗುತ್ತದೆ.

ಪ್ರಾಧ್ಯಾಪಕರು ಮತ್ತು ವಿದ್ಯಾರ್ಥಿಗಳ ವಿನಿಮಯ ಕಾರ್ಯಕ್ರಮಗಳನ್ನು ಆಯೋಜಿಸುವುದು. ಇದರಿಂದ ಜ್ಞಾನ ಹಂಚಿಕೆ ಮತ್ತು ಜಾಗತಿಕ ಗುಣಮಟ್ಟದ ತರಬೇತಿ ಸಾಧ್ಯವಾಗುತ್ತದೆ. ವಾಯುಯಾನ ವಲಯದಲ್ಲಿನ ತಾಂತ್ರಿಕ ಸವಾಲುಗಳನ್ನು ಎದುರಿಸಲು ಜಂಟಿ ಸಂಶೋಧನಾ ಯೋಜನೆಗಳನ್ನು ಕೈಗೊಳ್ಳುವುದು. ಸ್ಥಳೀಯ ತಂತ್ರಜ್ಞಾನಗಳ ಅಭಿವೃದ್ಧಿಗೆ ಆದ್ಯತೆ ನೀಡುವುದಾಗಿದೆ.

ಪಾಲುದಾರಿಕೆಯು ಮೈಲಿಗಲ್ಲು

ಸಿಎಸ್‌ಐಆರ್‌-ಎನ್‌ಎಎಲ್‌ನ ನಿರ್ದೇಶಕ ಡಾ. ಅಭಯ್ ಪಾಶೀಲ್ಕರ್ ಅವರು ಈ ಒಪ್ಪಂದದ ಬಗ್ಗೆ ಮಾತನಾಡಿ, ಈ ಪಾಲುದಾರಿಕೆಯು ಸಿಎಸ್‌ಐಆರ್‌-ಎನ್‌ಎಎಲ್‌ನ ಪಯಣದಲ್ಲಿ ಒಂದು ಪ್ರಮುಖ ಮೈಲಿಗಲ್ಲಾಗಿದೆ. ನಾವೀನ್ಯತೆ, ಶಿಕ್ಷಣ ಮತ್ತು ಉದ್ಯಮದ ಪರಿಣತಿಯನ್ನು ಒಟ್ಟುಗೂಡಿಸುವ ಮೂಲಕ, ನಾವು ಸಂಶೋಧನೆ ಮತ್ತು ಅಭಿವೃದ್ಧಿ ಪ್ರಯತ್ನಗಳನ್ನು ಬಲಪಡಿಸುತ್ತೇವೆ. ಇದು ಭಾರತದ ವಾಯುಯಾನ ವಲಯದ ಭವಿಷ್ಯದ ಬೆಳವಣಿಗೆಗೆ ಭದ್ರ ಬುನಾದಿ ಹಾಕಲಿದೆ ಎಂದು ತಿಳಿಸಿದರು. ಗತಿ ಶಕ್ತಿ ವಿಶ್ವವಿದ್ಯಾಲಯದ ಕುಲಪತಿಗಳಾದ ಪ್ರೊ. ಮನೋಜ್ ಚೌಧರಿ ಮಾತನಾಡಿ, ಸಾರಿಗೆ ಮತ್ತು ಲಾಜಿಸ್ಟಿಕ್ಸ್ ವಲಯಕ್ಕೆ ಮೀಸಲಾದ ದೇಶದ ಏಕೈಕ ವಿಶ್ವವಿದ್ಯಾಲಯವಾಗಿ, ನಾವು ವಾಯುಯಾನದ ಭವಿಷ್ಯವನ್ನು ರೂಪಿಸಲು ಬದ್ಧರಾಗಿದ್ದೇವೆ. ಸಿಎಸ್‌ಐಆರ್‌-ಎನ್‌ಎಎಲ್‌ನೊಂದಿಗಿನ ನಮ್ಮ ಸಹಯೋಗವು ನಾಗರಿಕ ವಾಯುಯಾನ ಉದ್ಯಮದ ವಿಕಾಸಶೀಲ ಅಗತ್ಯಗಳನ್ನು ಪೂರೈಸಲು, ಸ್ಥಳೀಯ ತಂತ್ರಜ್ಞಾನ ಅಭಿವೃದ್ಧಿಯನ್ನು ಉತ್ತೇಜಿಸಲು ಮತ್ತು ವಿಕಸಿತ ಭಾರತದ ಕನಸನ್ನು ಸಾಕಾರಗೊಳಿಸಲು ಸಹಾಯ ಮಾಡುತ್ತದೆ ಎಂದು ಅಭಿಪ್ರಾಯಪಟ್ಟರು.

ಗತಿ ಶಕ್ತಿ ವಿಶ್ವವಿದ್ಯಾಲಯದ ಹಿನ್ನೆಲೆ

ಗತಿ ಶಕ್ತಿ ವಿಶ್ವವಿದ್ಯಾಲಯವು ಸಾರಿಗೆ ಮತ್ತು ಲಾಜಿಸ್ಟಿಕ್ಸ್ ಕ್ಷೇತ್ರದಲ್ಲಿ ಭಾರತದ ಮೊದಲ ವಿಶ್ವವಿದ್ಯಾಲಯವಾಗಿದೆ. ಇದನ್ನು ಆಗಸ್ಟ್ 2022 ರಲ್ಲಿ ಸಂಸತ್ತಿನಲ್ಲಿ ಅಂಗೀಕರಿಸಲ್ಪಟ್ಟ ಕೇಂದ್ರೀಯ ವಿಶ್ವವಿದ್ಯಾಲಯಗಳ (ತಿದ್ದುಪಡಿ) ಕಾಯ್ದೆ-2022ರ ಅಡಿಯಲ್ಲಿ ಸ್ಥಾಪಿಸಲಾಯಿತು. ರೈಲ್ವೆ ಸಚಿವಾಲಯದ ಅಡಿಯಲ್ಲಿ ಕಾರ್ಯನಿರ್ವಹಿಸುವ ಈ ವಿಶ್ವವಿದ್ಯಾಲಯವು ರೈಲ್ವೆ, ಹೆದ್ದಾರಿಗಳು, ಬಂದರುಗಳು, ವಾಯುಯಾನ, ಕಡಲ ಸಾರಿಗೆ, ಶಿಪ್ಪಿಂಗ್, ಒಳನಾಡು ಜಲಮಾರ್ಗಗಳು ಮತ್ತು ನಗರ ಸಾರಿಗೆ ಸೇರಿದಂತೆ ಸಮಗ್ರ ಲಾಜಿಸ್ಟಿಕ್ಸ್ ಮತ್ತು ಪೂರೈಕೆ ಸರಪಳಿ ಜಾಲವನ್ನು ಒಳಗೊಂಡಿದೆ.

ಈ ಪಾಲುದಾರಿಕೆಯ ಮಹತ್ವ

ಭಾರತವು ವಾಯುಯಾನ ಕ್ಷೇತ್ರದಲ್ಲಿ ಆಮದು ಮಾಡಿಕೊಳ್ಳುವ ತಂತ್ರಜ್ಞಾನಗಳ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡಿ, ಸ್ಥಳೀಯವಾಗಿ ತಂತ್ರಜ್ಞಾನಗಳನ್ನು ಅಭಿವೃದ್ಧಿಪಡಿಸಲು ಈ ಒಪ್ಪಂದವು ಸಹಕಾರಿಯಾಗಿದೆ. ವಾಯುಯಾನ ವಲಯವು ವೇಗವಾಗಿ ಬೆಳೆಯುತ್ತಿದ್ದು, ಈ ಪಾಲುದಾರಿಕೆಯು ಉದ್ಯಮಕ್ಕೆ ಬೇಕಾದ ನುರಿತ ಮಾನವ ಸಂಪನ್ಮೂಲವನ್ನು ಸೃಷ್ಟಿಸಲಿದೆ. ಇದು ವಿದ್ಯಾರ್ಥಿಗಳಿಗೆ ಉನ್ನತ ಗುಣಮಟ್ಟದ ವೃತ್ತಿಪರ ಅವಕಾಶಗಳನ್ನು ತೆರೆದುಕೊಡಲಿದೆ. ಸಂಶೋಧನಾ ಸಂಸ್ಥೆಯಾದ ಸಿಎಸ್‌ಐಆರ್‌-ಎನ್‌ಎಎಲ್‌ನ ತಾಂತ್ರಿಕ ಸಾಮರ್ಥ್ಯ ಮತ್ತು ಗತಿ ಶಕ್ತಿ ವಿಶ್ವವಿದ್ಯಾಲಯದ ಶೈಕ್ಷಣಿಕ ವೇದಿಕೆಯು ಸೇರಿರುವುದರಿಂದ, ವಾಯುಯಾನದ ಸಂಕೀರ್ಣ ಸಮಸ್ಯೆಗಳಿಗೆ ಪರಿಹಾರ ಹುಡುಕುವುದು ಸುಲಭವಾಗುತ್ತದೆ.

ಈ ಒಪ್ಪಂದವು ಕೇವಲ ಕಾಗದದ ಮೇಲಿನ ಒಪ್ಪಂದವಾಗಿ ಉಳಿಯದೆ, ಕಾರ್ಯರೂಪಕ್ಕೆ ಬರುವ ಮೂಲಕ ಭಾರತದ ವಾಯುಯಾನ ವಲಯದಲ್ಲಿ ಆಮೂಲಾಗ್ರ ಬದಲಾವಣೆಗಳನ್ನು ತರಲಿದೆ ಎಂದು ನಿರೀಕ್ಷಿಸಲಾಗಿದೆ. ಮುಂಬರುವ ದಿನಗಳಲ್ಲಿ, ಜಂಟಿ ಸಂಶೋಧನಾ ಯೋಜನೆಗಳು, ವಿದ್ಯಾರ್ಥಿಗಳಿಗೆ ಇಂಟರ್ನ್‌ಶಿಪ್ ಅವಕಾಶಗಳು ಮತ್ತು ತಂತ್ರಜ್ಞಾನ ವರ್ಗಾವಣೆ ಕಾರ್ಯಕ್ರಮಗಳು ವೇಗ ಪಡೆದುಕೊಳ್ಳಲಿವೆ. ಭಾರತವು ಜಾಗತಿಕ ಮಟ್ಟದಲ್ಲಿ ಒಂದು ಪ್ರಮುಖ ಆರ್ಥಿಕ ಶಕ್ತಿಯಾಗಿ ಹೊರಹೊಮ್ಮುತ್ತಿರುವ ಸಂದರ್ಭದಲ್ಲಿ, ಸಾರಿಗೆ ಮತ್ತು ಲಾಜಿಸ್ಟಿಕ್ಸ್ ವಲಯದ ಆಧುನೀಕರಣ ಅತ್ಯಗತ್ಯ. ಗತಿ ಶಕ್ತಿ ವಿಶ್ವವಿದ್ಯಾಲಯ ಮತ್ತು ಸಿಎಸ್‌ಐಆರ್‌-ಎನ್‌ಎಎಲ್‌ ನಡುವಿನ ಈ ಒಪ್ಪಂದವು ಪ್ರಧಾನ ಮಂತ್ರಿಗಳ 'ಗತಿ ಶಕ್ತಿ' ರಾಷ್ಟ್ರೀಯ ಯೋಜನೆಯ ಆಶಯಗಳಿಗೆ ಅನುಗುಣವಾಗಿದ್ದು, ಇದು ದೇಶದ ಮೂಲಸೌಕರ್ಯ ಮತ್ತು ವಾಯುಯಾನ ವಲಯದ ಭವಿಷ್ಯವನ್ನು ಉಜ್ವಲಗೊಳಿಸುವುದರಲ್ಲಿ ಸಂಶಯವಿಲ್ಲ. ಈ ಸಹಭಾಗಿತ್ವವು ದೇಶದ ಯುವಕರಿಗೆ ಮತ್ತು ತಂತ್ರಜ್ಞಾನ ಕ್ಷೇತ್ರಕ್ಕೆ ಹೊಸ ಚೈತನ್ಯವನ್ನು ನೀಡಲಿದೆ.

Read More
Next Story