ಪಡಿತರ ಅಕ್ಕಿ ಕಳ್ಳಸಾಗಣೆ ವಿರುದ್ಧ ಸಮರ: 4.75 ಕೋಟಿ ಮೌಲ್ಯದ ಅಕ್ಕಿ, ವಾಹನಗಳು ವಶ
x

ಪಡಿತರ ಅಕ್ಕಿ ಕಳ್ಳಸಾಗಣೆ ವಿರುದ್ಧ ಸಮರ: 4.75 ಕೋಟಿ ಮೌಲ್ಯದ ಅಕ್ಕಿ, ವಾಹನಗಳು ವಶ

ಕಳೆದ ಮೂರು ದಿನಗಳಲ್ಲಿ ರಾಜ್ಯಾದ್ಯಂತ ನಡೆಸಿದ ದಾಳಿಯಲ್ಲಿ ಬರೋಬ್ಬರಿ 5.64 ಲಕ್ಷ ಕೆಜಿಗೂ ಹೆಚ್ಚು ಅಕ್ರಮ ಪಡಿತರ ಅಕ್ಕಿ ಮತ್ತು 24 ಲಾರಿಗಳನ್ನು ವಶಪಡಿಸಿಕೊಳ್ಳಲಾಗಿದೆ.


Click the Play button to hear this message in audio format

ಬಡವರ ಹಸಿವು ನೀಗಿಸಲು ಸರ್ಕಾರ ಪೂರೈಸುವ ಪಡಿತರ ಅಕ್ಕಿಯನ್ನು ಅಕ್ರಮವಾಗಿ ಕಾಳಸಂತೆಯಲ್ಲಿ ಮಾರಾಟ ಮಾಡುವ ಮತ್ತು ರಾಜ್ಯದ ಗಡಿ ದಾಟಿಸುವ ಜಾಲದ ವಿರುದ್ಧ ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯು ಭರ್ಜರಿ ಕಾರ್ಯಾಚರಣೆ ನಡೆಸಿದೆ. ಕಳೆದ ಮೂರು ದಿನಗಳಲ್ಲಿ ರಾಜ್ಯಾದ್ಯಂತ ನಡೆಸಿದ ದಾಳಿಯಲ್ಲಿ ಬರೋಬ್ಬರಿ 5.64 ಲಕ್ಷ ಕೆಜಿಗೂ ಹೆಚ್ಚು ಅಕ್ರಮ ಪಡಿತರ ಅಕ್ಕಿ ಮತ್ತು 24 ಲಾರಿಗಳನ್ನು ವಶಪಡಿಸಿಕೊಳ್ಳಲಾಗಿದೆ.

ಆಹಾರ ಸಚಿವ ರಿಜ್ವಾನ್ ಅರ್ಷದ್ ಅವರ ಕಟ್ಟುನಿಟ್ಟಿನ ನಿರ್ದೇಶನದ ಮೇರೆಗೆ, ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಆಹಾರ ಇಲಾಖೆ ಅಧಿಕಾರಿಗಳು, ವಾಣಿಜ್ಯ ತೆರಿಗೆ ಇಲಾಖೆ, ಎಪಿಎಂಸಿ ಮತ್ತು ಪೊಲೀಸ್ ಇಲಾಖೆಯ ಸಹಯೋಗದೊಂದಿಗೆ ಈ ದಾಳಿಗಳನ್ನು ನಡೆಸಿದ್ದಾರೆ. ಈ ದಾಳಿಯಲ್ಲಿ ವಶಪಡಿಸಿಕೊಂಡ ಒಟ್ಟು ಅಕ್ರಮ ಪಡಿತರ ಅಕ್ಕಿಯ ಪ್ರಮಾಣ 5,64,992 ಕೆಜಿ. ಇದರ ಅಂದಾಜು ಮೌಲ್ಯ 1.34 ಕೋಟಿ ರೂಪಾಯಿಗಳು. ಇದರೊಂದಿಗೆ ಕಳ್ಳಸಾಗಣೆಗೆ ಬಳಸುತ್ತಿದ್ದ 24 ವಿವಿಧ ರೀತಿಯ ವಾಹನಗಳನ್ನು ವಶಕ್ಕೆ ಪಡೆಯಲಾಗಿದ್ದು, ಅವುಗಳ ಮೌಲ್ಯ 3.41 ಕೋಟಿ ರೂಪಾಯಿಗಳಾಗಿವೆ. ಒಟ್ಟಾರೆಯಾಗಿ, ಈ ಕಾರ್ಯಾಚರಣೆಯಲ್ಲಿ ಸರ್ಕಾರ ಸುಮಾರು 4.75 ಕೋಟಿ ರೂ. ಮೌಲ್ಯದ ಸ್ವತ್ತುಗಳನ್ನು ಮುಟ್ಟುಗೋಲು ಹಾಕಿಕೊಂಡಿದೆ.

ಜಿಲ್ಲಾವಾರು ಕಾರ್ಯಾಚರಣೆಯ ಮುಖ್ಯಾಂಶಗಳು

ಬೆಳಗಾವಿ ಲೋಕೂರು ದಾಳಿ - ಇದು ಈ ಕಾರ್ಯಾಚರಣೆಯ ಅತಿ ದೊಡ್ಡ ಸಾಧನೆ. ಕಾಗವಾಡ ತಾಲೂಕಿನ ಲೋಕೂರು ಗ್ರಾಮದ ಶ್ರೀ ಬನಶಂಕರಿ ಅಗ್ರೋ ಪ್ರೊಸೆಸಿಂಗ್‌ ಪ್ರೈ.ಲಿ. ಅಕ್ಕಿ ಗಿರಣಿಯ ಮೇಲೆ ನಡೆಸಿದ ದಾಳಿಯಲ್ಲಿ 4,22,800 ಕೆಜಿ ಅಕ್ರಮ ಅಕ್ಕಿಯನ್ನು ಪತ್ತೆಹಚ್ಚಲಾಗಿದೆ. ಈ ಗೋದಾಮನ್ನು ಸೀಜ್ ಮಾಡಲಾಗಿದ್ದು, 19 ಲಾರಿಗಳನ್ನು ವಶಕ್ಕೆ ಪಡೆಯಲಾಗಿದೆ.

ಅತ್ತಿಬೆಲೆ ಅಂತಾರಾಜ್ಯ ಜಾಲ- ಬೆಂಗಳೂರು ಗ್ರಾಮಾಂತರದ ಅತ್ತಿಬೆಲೆ ಚೆಕ್‌ಪೋಸ್ಟ್ ಬಳಿ ತಮಿಳುನಾಡಿಗೆ ಸಾಗಿಸುತ್ತಿದ್ದ 35 ಸಾವಿರ ಕೆಜಿ ಅಕ್ಕಿಯನ್ನು ವಶಪಡಿಸಿಕೊಳ್ಳಲಾಗಿದೆ. ಮಂಡ್ಯದ ಎಂಟರ್‌ಪ್ರೈಸಸ್ ಮಾಲೀಕರು ಮತ್ತು ಇಂದೋರ್‌ನ ಕಂಪನಿಯ ಮಾಲೀಕರು ಸೇರಿ ನಾಲ್ವರ ವಿರುದ್ಧ ಪ್ರಕರಣ ದಾಖಲಾಗಿದೆ.

ಮಹಾರಾಷ್ಟ್ರಕ್ಕೆ ಸಾಗಾಟದ ಪ್ರಯತ್ನ - ಬೆಳಗಾವಿಯಲ್ಲಿ ಮಹಾರಾಷ್ಟ್ರಕ್ಕೆ ಅಕ್ರಮವಾಗಿ ಅಕ್ಕಿ ಸಾಗಿಸುತ್ತಿದ್ದ ಲಾರಿಗಳನ್ನು ಹಿಡಿಯಲಾಗಿದೆ. ಬಣ್ಣದ ಪ್ಯಾಕೆಟ್‌ಗಳಲ್ಲಿ ಪ್ಯಾಕ್ ಮಾಡಿ ಮಾರುಕಟ್ಟೆಗೆ ಸಾಗಿಸುವ ಜಾಲವನ್ನು ಭೇದಿಸಲಾಗಿದೆ.

ವಿಜಯಪುರ ಕಾರ್ಯಾಚರಣೆ - ಜಾಲನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ 35,392 ಕೆಜಿ ಅಕ್ಕಿ ಮತ್ತು ಲಾರಿಯನ್ನು ವಶಕ್ಕೆ ಪಡೆಯಲಾಗಿದೆ.

ಕರ್ತವ್ಯಲೋಪ ಎಸಗಿದ ಅಧಿಕಾರಿಗಳ ಅಮಾನತು

ಕೇವಲ ಅಕ್ರಮ ಸಾಗಾಟಗಾರರ ವಿರುದ್ಧವಲ್ಲದೆ, ಈ ದಂಧೆಗೆ ಕುಮ್ಮಕ್ಕು ನೀಡಿದ ಅಥವಾ ನಿರ್ಲಕ್ಷ್ಯ ವಹಿಸಿದ ಸ್ವಂತ ಇಲಾಖೆಯ ಅಧಿಕಾರಿಗಳ ವಿರುದ್ಧವೂ ಸರ್ಕಾರ ಕಠಿಣ ಕ್ರಮ ಕೈಗೊಂಡಿದೆ. ಹುಕ್ಕೇರಿ ತಾಲ್ಲೂಕಿನ ಬಸ್ತವಾಡ ಗ್ರಾಮದ ಗೋದಾಮಿನಲ್ಲಿ ಅಕ್ರಮವಾಗಿ ಸಂಗ್ರಹಿಸಿದ್ದ ಅಕ್ಕಿ ಮತ್ತು ಲಾರಿಯನ್ನು ಯಾವುದೇ ಕ್ರಮ ಕೈಗೊಳ್ಳದೆ ಬಿಡುಗಡೆಗೊಳಿಸಿದ್ದ ಆರೋಪದ ಹಿನ್ನೆಲೆಯಲ್ಲಿ, ಆಹಾರ ನಿರೀಕ್ಷಕ ಪ್ರವೀಣ ಸಾಗರ ಹಾಗೂ ಶಿರಸ್ತೆದಾರ ಎಲ್.ಬಿ. ಡಾಂಗೆ ಅವರನ್ನು ಆಯುಕ್ತರು ಅಮಾನತುಗೊಳಿಸಿದ್ದಾರೆ. ಇವರ ವಿರುದ್ಧ ಇಲಾಖಾ ವಿಚಾರಣೆಯೂ ನಡೆಯಲಿದೆ.

ಆಹಾರ ಸಚಿವ ರಿಜ್ವಾನ್ ಅರ್ಷದ್ ಅವರು ಮಾತನಾಡಿ, "ಬಡವರ ಪಾಲಿನ ಅಕ್ಕಿಯನ್ನು ಕದ್ದು ಲಾಭ ಮಾಡಿಕೊಳ್ಳುವುದು ಅತ್ಯಂತ ಹೀನ ಕೃತ್ಯ. ಇದನ್ನು ಸಹಿಸಲು ಸಾಧ್ಯವಿಲ್ಲ," ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪಡಿತರ ಅಕ್ಕಿ ಕಳ್ಳಸಾಗಣೆಯನ್ನು ಸಂಪೂರ್ಣವಾಗಿ ತಡೆಗಟ್ಟುವವರೆಗೆ ಅಧಿಕಾರಿಗಳು ವಿಶ್ರಮಿಸಬಾರದು ಎಂದು ಸೂಚನೆ ನೀಡಿದ್ದಾರೆ. ಅಕ್ರಮದಲ್ಲಿ ಭಾಗಿಯಾಗುವ ಪ್ರತಿಯೊಬ್ಬ ವ್ಯಕ್ತಿ ಮತ್ತು ಇಲಾಖೆಯ ಸಿಬ್ಬಂದಿಗಳ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳುವುದಾಗಿ ಎಚ್ಚರಿಸಿದ್ದಾರೆ.

ಈ ದಾಳಿಗಳು ರಾಜ್ಯದಲ್ಲಿ ನಡೆಯುತ್ತಿರುವ ಬೃಹತ್ ಪಡಿತರ ಅಕ್ಕಿ ಕಾಳಸಂತೆ ದಂಧೆಯ ಒಂದು ಸಣ್ಣ ಭಾಗವನ್ನು ಮಾತ್ರ ಬಯಲಿಗೆಳೆದಿದೆ. ಅಕ್ರಮವಾಗಿ ಸಂಗ್ರಹಿಸಿ, ಅವುಗಳನ್ನು ಬಣ್ಣದ ಪ್ಯಾಕೆಟ್‌ಗಳಲ್ಲಿ ಹಾಕಿ ಮುಕ್ತ ಮಾರುಕಟ್ಟೆಯಲ್ಲಿ ದುಬಾರಿ ಬೆಲೆಗೆ ಮಾರಾಟ ಮಾಡುವ ದಂಧೆ ನಡೆಸುವ ಮಾಫಿಯಾಗಳ ಬೆನ್ನು ಬಿದ್ದಿರುವ ಸರ್ಕಾರ, ಈ ಕಾರ್ಯಾಚರಣೆಯನ್ನು ರಾಜ್ಯವ್ಯಾಪಿ ಮುಂದುವರಿಸಲು ನಿರ್ಧರಿಸಿದೆ. ಒಟ್ಟಾರೆಯಾಗಿ, ಈ ಕಾರ್ಯಾಚರಣೆಯು ಪಡಿತರ ಅಕ್ಕಿಯ ಪಾವಿತ್ರ್ಯತೆಯನ್ನು ಕಾಪಾಡುವಲ್ಲಿ ಮತ್ತು ಬಡವರಿಗೆ ಅಕ್ಕಿ ಸಮರ್ಪಕವಾಗಿ ತಲುಪುವಂತೆ ಮಾಡುವಲ್ಲಿ ಮಹತ್ವದ ಹೆಜ್ಜೆಯಾಗಿದೆ.

Read More
Next Story