ಪಿರಿಯಾಪಟ್ಟಣ: ಗುಂಡೇಟಿನಿಂದ ಹೆಣ್ಣು ಚಿರತೆ ಸಾವು, ಕೊಂದವರು ಯಾರು? ತನಿಖೆಗೆ ಆದೇಶ
x
ಸಾಂದರ್ಭಿಕ ಚಿತ್ರ (ಸಂಗ್ರಹ ಚಿತ್ರ)

ಪಿರಿಯಾಪಟ್ಟಣ: ಗುಂಡೇಟಿನಿಂದ ಹೆಣ್ಣು ಚಿರತೆ ಸಾವು, ಕೊಂದವರು ಯಾರು? ತನಿಖೆಗೆ ಆದೇಶ

ಸುಮಾರು ಎರಡು ವರ್ಷ ವಯಸ್ಸಿನ ಹೆಣ್ಣು ಚಿರತೆಯೊಂದು ಗುಂಡೇಟಿನಿಂದ ಮೃತಪಟ್ಟಿರುವ ಘಟನೆ ವನ್ಯಜೀವಿ ಪ್ರಿಯರಲ್ಲಿ ತೀವ್ರ ಆತಂಕ ಮೂಡಿಸಿದೆ.


Click the Play button to hear this message in audio format

ಹುಣಸೂರು ವಿಭಾಗದ ಪಿರಿಯಾಪಟ್ಟಣ ವ್ಯಾಪ್ತಿಯಲ್ಲಿ ಗುಂಡೇಟಿಗೆ ಬಲಿಯಾದ ಚಿರತೆಯ ಸಾವಿನ ಕುರಿತು ಸಮಗ್ರ ತನಿಖೆ ನಡೆಸುವಂತೆ ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಖಾತೆ ಸಚಿವ ಈಶ್ವರ ಬಿ. ಖಂಡ್ರೆ ಆದೇಶಿಸಿದ್ದಾರೆ. ಗುಳ್ಳೆದಹಳ್ಳ ರಾಜ್ಯ ಅರಣ್ಯದಿಂದ ಕೇವಲ ಎರಡು ಕಿಲೋಮೀಟರ್ ದೂರದಲ್ಲಿರುವ ಕೊಪ್ಪ ವಿಭಾಗದಲ್ಲಿ ಈ ಅಮಾನವೀಯ ಘಟನೆ ನಡೆದಿದ್ದು, ತಪ್ಪಿತಸ್ಥರನ್ನು ಪತ್ತೆಹಚ್ಚಿ ಕಠಿಣ ಶಿಕ್ಷೆ ವಿಧಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

ಸುಮಾರು ಎರಡು ವರ್ಷ ವಯಸ್ಸಿನ ಹೆಣ್ಣು ಚಿರತೆಯೊಂದು ಗುಂಡೇಟಿನಿಂದ ಮೃತಪಟ್ಟಿರುವ ಘಟನೆ ವನ್ಯಜೀವಿ ಪ್ರಿಯರಲ್ಲಿ ತೀವ್ರ ಆತಂಕ ಮೂಡಿಸಿದೆ. ಮೃತ ಚಿರತೆಯ ಮರಣೋತ್ತರ ಪರೀಕ್ಷೆ ನಡೆಸಿದ ಪಶುವೈದ್ಯಾಧಿಕಾರಿ ಡಾ. ಆದರ್ಶ್ ಅವರು, ಚಿರತೆಯ ದೇಹದಲ್ಲಿ ಮೂರು ಗುಂಡುಗಳು ಪತ್ತೆಯಾಗಿರುವುದನ್ನು ದೃಢಪಡಿಸಿದ್ದಾರೆ. ವನ್ಯಜೀವಿಗಳ ಅಂಗಾಂಗಗಳಿಗಾಗಿ ಕಳ್ಳಬೇಟೆ ಜಾಲ ಇನ್ನೂ ಸಕ್ರಿಯವಾಗಿದೆ ಎಂಬುದಕ್ಕೆ ಈ ಘಟನೆ ಪುಷ್ಟಿ ನೀಡಿದೆ ಎಂದು ಸಚಿವರು ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ.

ಈ ಕುರಿತು ಮುಖ್ಯ ವನ್ಯಜೀವಿ ಪರಿಪಾಲಕರಿಗೆ ಲಿಖಿತ ಸೂಚನೆ ರವಾನಿಸಿರುವ ಸಚಿವರು, ಕಳ್ಳಬೇಟೆಗಾರರನ್ನು ತಕ್ಷಣವೇ ಪತ್ತೆಹಚ್ಚಿ ಕಾನೂನು ರೀತಿಯಲ್ಲಿ ಶಿಕ್ಷೆ ಕೊಡಿಸುವಂತೆ ತಾಕೀತು ಮಾಡಿದ್ದಾರೆ. ಅಲ್ಲದೆ, ಅರಣ್ಯ ಪ್ರದೇಶದಲ್ಲಿ ಗಸ್ತು ವೈಫಲ್ಯ ಕಂಡುಬಂದಲ್ಲಿ ಸಂಬಂಧಪಟ್ಟ ಸಿಬ್ಬಂದಿ ವಿರುದ್ಧ ಕಟ್ಟುನಿಟ್ಟಿನ ಶಿಸ್ತುಕ್ರಮ ಕೈಗೊಳ್ಳಬೇಕು ಎಂದು ಎಚ್ಚರಿಕೆ ನೀಡಿದ್ದಾರೆ. ಭವಿಷ್ಯದಲ್ಲಿ ಇಂತಹ ಘಟನೆಗಳು ಮರುಕಳಿಸದಂತೆ ಅರಣ್ಯ ಅಪರಾಧ ನಿಯಂತ್ರಣ ಕೋಶವನ್ನು ಇನ್ನಷ್ಟು ಸಕ್ರಿಯಗೊಳಿಸುವಂತೆ ಕಟ್ಟುನಿಟ್ಟಿನ ನಿರ್ದೇಶನ ನೀಡಿದ್ದಾರೆ.

ರಾಜ್ಯದಲ್ಲಿ ಹೆಚ್ಚುತ್ತಿರುವ ವನ್ಯಜೀವಿ ಅಪರಾಧಗಳು

ಇತ್ತೀಚಿನ ದಿನಗಳಲ್ಲಿ ಕರ್ನಾಟಕದಲ್ಲಿ ವನ್ಯಮೃಗಗಳ ಸಾವಿನ ಸರಣಿ ಹಾಗೂ ಕಳ್ಳಬೇಟೆ ಪ್ರಕರಣಗಳು ಮರುಕಳಿಸುತ್ತಿವೆ. ಇತ್ತೀಚೆಗಷ್ಟೇ ಶಿವಮೊಗ್ಗದ ಭದ್ರಾ ಅಭಯಾರಣ್ಯದಲ್ಲಿ ಅರಣ್ಯ ರಕ್ಷಕರ ಕಣ್ಗಾವಲಿನ ನಡುವೆಯೂ ಪ್ರಾಣಿಗಳ ಮಾಂಸ ಹಾಗೂ ಚರ್ಮಕ್ಕಾಗಿ ಕಳ್ಳಬೇಟೆ ಜಾಲ ಸಕ್ರಿಯವಾಗಿರುವ ಬಗ್ಗೆ ವರದಿಗಳು ಬಹಿರಂಗವಾಗಿದ್ದವು. ಇದಲ್ಲದೆ, ಬೆಂಗಳೂರಿನ ಯಶವಂತಪುರ ಸಮೀಪದ ಅಕ್ರಮ ಕಲ್ಲು ಗಣಿಗಾರಿಕೆಯಲ್ಲಿ ನಡೆದ ಬಂಡೆ ಸ್ಫೋಟಕ್ಕೆ ಗರ್ಭಿಣಿ ಚಿರತೆ ಹಾಗೂ ಅದರ ಹೊಟ್ಟೆಯಲ್ಲಿದ್ದ ಮೂರು ಮರಿಗಳು ಬಲಿಯಾದ ದಾರುಣ ಘಟನೆಯೂ ನಡೆದಿತ್ತು.

ಆತಂಕ ಮೂಡಿಸಿರುವ ಮಾನವ-ವನ್ಯಜೀವಿ ಸಂಘರ್ಷ

ಕೇಂದ್ರ ಸರ್ಕಾರದ ಇತ್ತೀಚಿನ ಗಣತಿ ವರದಿಯ ಪ್ರಕಾರ, ಕರ್ನಾಟಕದಲ್ಲಿ 1,879 ಚಿರತೆಗಳಿದ್ದು, ದೇಶದಲ್ಲೇ ಮೂರನೇ ಅತಿ ಹೆಚ್ಚು ಚಿರತೆಗಳನ್ನು ಹೊಂದಿರುವ ರಾಜ್ಯ ಎಂಬ ಹೆಗ್ಗಳಿಕೆ ಹೊಂದಿದೆ. ಆದರೆ, ಕಳೆದ ಐದು ವರ್ಷಗಳಲ್ಲಿ ರಾಜ್ಯದಲ್ಲಿ ಮಾನವ-ವನ್ಯಜೀವಿ ಸಂಘರ್ಷದ ಪ್ರಕರಣಗಳು ಬರೋಬ್ಬರಿ ಶೇ. 183ರಷ್ಟು ಏರಿಕೆ ಕಂಡಿವೆ.

ಆನೆ, ಹುಲಿ ಹಾಗೂ ಚಿರತೆಗಳೇ ಶೇ. 98ರಷ್ಟು ಸಂಘರ್ಷ ಪ್ರಕರಣಗಳಲ್ಲಿ ಭಾಗಿಯಾಗಿವೆ. ಚಾಮರಾಜನಗರದ ಮಲೆ ಮಹದೇಶ್ವರ ಬೆಟ್ಟದಲ್ಲಿ ಪಾದಯಾತ್ರಿಗಳ ಮೇಲೆ ಹಾಗೂ ದಕ್ಷಿಣ ಕನ್ನಡ, ಬೆಂಗಳೂರಿನ ಹೊರವಲಯದಲ್ಲಿಯೂ ನಿರಂತರವಾಗಿ ಚಿರತೆ ದಾಳಿಗಳು ನಡೆಯುತ್ತಿದ್ದು, ಅರಣ್ಯ ಇಲಾಖೆಗೆ ದೊಡ್ಡ ತಲೆ ನೋವು ತಂದಿದೆ.

Read More
Next Story