ಸಾಮಾನ್ಯರ ವಾಹನಗಳ ರಿಪೇರಿ ಖರ್ಚು ಯಾರು ಕೊಡ್ತಾರೆ? ಸಚಿವ ರಿಜ್ವಾನ್ ಅರ್ಷದ್ ಕಿಡಿ
x

ಸಾಮಾನ್ಯರ ವಾಹನಗಳ ರಿಪೇರಿ ಖರ್ಚು ಯಾರು ಕೊಡ್ತಾರೆ? ಸಚಿವ ರಿಜ್ವಾನ್ ಅರ್ಷದ್ ಕಿಡಿ

ಕೇಂದ್ರ ಸರ್ಕಾರವು ವಾಹನಗಳ ಇಂಧನದಲ್ಲಿ ಮಿತಿಮೀರಿ ಎಥೆನಾಲ್ ಮಿಶ್ರಣ ಮಾಡುವ ಮೂಲಕ ಸಾಮಾನ್ಯ ವಾಹನ ಸವಾರರ ಜೇಬಿಗೆ ಕನ್ನ ಹಾಕುತ್ತಿದೆ ಎಂದು ಸಚಿವ ರಿಜ್ವಾನ್ ಅರ್ಷದ್ ವಾಗ್ದಾಳಿ ನಡೆಸಿದ್ದಾರೆ.


Click the Play button to hear this message in audio format

ಕೇಂದ್ರ ಸರ್ಕಾರವು ವಾಹನಗಳ ಇಂಧನದಲ್ಲಿ ಮಿತಿಮೀರಿ ಎಥೆನಾಲ್ ಮಿಶ್ರಣ ಮಾಡುವ ಮೂಲಕ ಸಾಮಾನ್ಯ ವಾಹನ ಸವಾರರ ಜೇಬಿಗೆ ಕನ್ನ ಹಾಕುತ್ತಿದೆ ಎಂದು ರಾಜ್ಯ ಆಹಾರ ಮತ್ತು ನಾಗರಿಕ ಸರಬರಾಜು ಹಾಗೂ ಗ್ರಾಹಕರ ವ್ಯವಹಾರಗಳ ಸಚಿವ ರಿಜ್ವಾನ್ ಅರ್ಷದ್ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಪೆಟ್ರೋಲ್‌ನಲ್ಲಿ ನಿಗದಿತ ಪ್ರಮಾಣಕ್ಕಿಂತ ಹೆಚ್ಚಿನ ಎಥೆನಾಲ್ ಬೆರೆಸುತ್ತಿರುವ ಪರಿಣಾಮ ವಾಹನಗಳ ಮೈಲೇಜ್ ಕುಸಿಯುತ್ತಿದ್ದು, ಎಂಜಿನ್‌ಗಳು ಕೆಟ್ಟು ರಿಪೇರಿಗೆ ಬರುತ್ತಿವೆ. ಇದರ ಆರ್ಥಿಕ ಹೊರೆಯನ್ನು ಜನಸಾಮಾನ್ಯರ ಮೇಲೆ ಹೊರಿಸಲಾಗುತ್ತಿದೆ ಎಂದು ಆರೋಪಿಸಿದರು.

ದಾವಣಗೆರೆಯಲ್ಲಿ ಮಾತನಾಡಿದ ಅವರು, ಎಥೆನಾಲ್ ಮಿಶ್ರಣ ಕೇಂದ್ರದ ಮಲತಾಯಿ ಧೋರಣೆ, ಬರ ಪರಿಹಾರ ವಿಳಂಬ ಹಾಗೂ ಬಿಪಿಎಲ್ ಕಾರ್ಡ್ ಪರಿಷ್ಕರಣೆಯ ಕುರಿತು ಸುದೀರ್ಘವಾಗಿ ಮಾತನಾಡಿ, ಕೇಂದ್ರ ಸಚಿವರಾದ ಪ್ರಲ್ಹಾದ್ ಜೋಶಿ ಮತ್ತು ಹರ್ದೀಪ್ ಸಿಂಗ್ ಪೂರಿ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.

ಎಥೆನಾಲ್ ಕಲಬೆರಕೆ ಕುರಿತು ತಾಂತ್ರಿಕ ಅಂಶಗಳನ್ನು ಮುಂದಿಟ್ಟ ಸಚಿವರು, "ಪೆಟ್ರೋಲ್‌ಗೆ ಮಿತಿಮೀರಿ ಎಥೆನಾಲ್ ಮಿಶ್ರಣ ಮಾಡಲಾಗುತ್ತಿದೆ ಎಂಬ ದೂರುಗಳ ಹಿನ್ನೆಲೆಯಲ್ಲಿ ನಮ್ಮ ಇಲಾಖೆಯಿಂದ 63 ಮಾದರಿಗಳನ್ನು (ಸ್ಯಾಂಪಲ್ಸ್) ಅಧಿಕೃತ ಪರೀಕ್ಷೆಗೆ ಕಳುಹಿಸಲಾಗಿತ್ತು. ಆದರೆ ಕೇಂದ್ರದ ಅಧೀನದಲ್ಲಿರುವ ಲ್ಯಾಬ್‌ಗಳು ಈವರೆಗೆ ಅದರ ಪರೀಕ್ಷಾ ವರದಿಯನ್ನೇ ನೀಡಿಲ್ಲ. ಸತ್ಯಾಂಶವನ್ನು ಮುಚ್ಚಿಡುವ ಹುನ್ನಾರ ಇದರ ಹಿಂದೆ ಸ್ಪಷ್ಟವಾಗಿ ಕಾಣುತ್ತಿದೆ" ಎಂದು ದೂರಿದರು.

"ಇಂಧನದಲ್ಲಿ ಕೇವಲ ಶೇ. 20ರಷ್ಟು (E-20) ಎಥೆನಾಲ್ ಬೆರೆಸಿದರೆ ವಾಹನಗಳ ಮೈಲೇಜ್ ಗಣನೀಯವಾಗಿ ಕುಸಿಯುತ್ತದೆ. ಇನ್ನು E-30, E-40 ರಷ್ಟು ಪ್ರಮಾಣದಲ್ಲಿ ಎಥೆನಾಲ್ ಬೆರೆಸಿದರೆ ವಾಹನಗಳ ಸ್ಥಿತಿ ಏನಾಗಬೇಕು? ಮೈಲೇಜ್ ಪಾತಾಳಕ್ಕೆ ಕುಸಿಯುತ್ತದೆ. ವಾಹನಗಳು ನಿರಂತರವಾಗಿ ಗ್ಯಾರೇಜ್ ಸೇರುತ್ತಿವೆ. ಬಡ ಮತ್ತು ಮಧ್ಯಮ ವರ್ಗದ ಜನರು ವಾಹನ ರಿಪೇರಿಗೆ ಸಾವಿರಾರು ರೂಪಾಯಿ ಸುರಿಯಬೇಕಾಗಿದೆ. ಈ ಹೆಚ್ಚುವರಿ ಖರ್ಚನ್ನು ಕೇಂದ್ರ ಸರ್ಕಾರ ಕೊಡುತ್ತದೆಯೇ ಅಥವಾ ಪೆಟ್ರೋಲಿಯಂ ಕಂಪನಿಗಳು ಭರಿಸುತ್ತವೆಯೇ?" ಎಂದು ಪ್ರಶ್ನಿಸಿದರು. ನಾವು ಮೂರನೇ ವ್ಯಕ್ತಿಯ ಸ್ವತಂತ್ರ ಲ್ಯಾಬ್‌ಗಳ ಮೂಲಕವೂ ಪರಿಶೀಲನೆ ನಡೆಸಿದ್ದೇವೆ. ಇ-20 ಕ್ಕಿಂತ ಹೆಚ್ಚು ಎಥೆನಾಲ್ ಮಿಶ್ರಣ ಮಾಡಬೇಡಿ ಎಂದು ಜನಸಾಮಾನ್ಯರ ಪರವಾಗಿ ಧ್ವನಿ ಎತ್ತಿದ್ದೇ ತಪ್ಪಾ? ಕಡಿಮೆ ದರದ ಎಥೆನಾಲ್ ಅನ್ನು ಹೆಚ್ಚಿನ ಪ್ರಮಾಣದಲ್ಲಿ ಬೆರೆಸುವುದಾದರೆ, ಅದರ ಲಾಭವನ್ನು ಗ್ರಾಹಕರಿಗೆ ವರ್ಗಾಯಿಸಿ, ಪೆಟ್ರೋಲ್ ದರದಲ್ಲಿ ರಿಯಾಯಿತಿ ನೀಡಬೇಕು ಎಂದು ನಾವು ಒತ್ತಾಯಿಸುತ್ತಿದ್ದೇವೆ ಎಂದು ಹೇಳಿದರು.

ಪ್ರಲ್ಹಾದ್ ಜೋಶಿ ವಿರುದ್ಧ ವಾಗ್ದಾಳಿ: ನಾವು ಮೂರ್ಖರಲ್ಲ, ಜನರಂತೂ ಅಲ್ವೇ ಅಲ್ಲ

ಎಥೆನಾಲ್ ಹಗರಣವನ್ನು ಬಯಲಿಗೆಳೆದಿದ್ದಕ್ಕೆ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಅವರು ನೀಡಿದ ಹೇಳಿಕೆಗೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ ರಿಜ್ವಾನ್ ಅರ್ಷದ್, "ಈ ವಿಚಾರವನ್ನು ನಾನು ಬಹಿರಂಗಪಡಿಸಿದ್ದಕ್ಕೆ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಅವರು ನನ್ನನ್ನು ಮೂರ್ಖ ಎಂದು ಕರೆದಿದ್ದಾರೆ. ನಾವೇನಾದರೂ ಅವರ ಕಣ್ಣಿಗೆ ಮೂರ್ಖರಂತೆ ಕಂಡಿರಬಹುದು, ಆದರೆ ಈ ದೇಶದ ಜನ ಮೂರ್ಖರಲ್ಲ. ಕೇಂದ್ರ ಪೆಟ್ರೋಲಿಯಂ ಸಚಿವ ಹರ್ದೀಪ್ ಸಿಂಗ್ ಪೂರಿ ಅವರು ಈ ಗಂಭೀರ ವಿಚಾರದ ಬಗ್ಗೆ ತುಟಿಕ್ ಪಿಟಿಕ್ ಎನ್ನದೆ ಮೌನಕ್ಕೆ ಶರಣಾಗಿದ್ದಾರೆ. ತಮ್ಮ ಇಲಾಖೆಯಲ್ಲಿ ಇಷ್ಟೆಲ್ಲಾ ಅಕ್ರಮ ನಡೆಯುತ್ತಿದ್ದರೂ ಪೂರಿ ಅವರಿಗೆ ಗೊತ್ತಿಲ್ಲವೇ? ಅಥವಾ ಜೋಶಿ ಅವರನ್ನೇ ಮುಂದೆ ಬಿಟ್ಟು ಮಾತನಾಡಿಸುತ್ತಿದ್ದಾರೆಯೇ? ಎಂದು ಹರಿಹಾಯ್ದರು.

ಮಾಜಿ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರೇ ಎಥೆನಾಲ್ ಮಿಶ್ರಣದಿಂದ ವಾಹನಗಳಿಗೆ ಹಾನಿಯಾಗುತ್ತಿರುವ ಸತ್ಯವನ್ನು ಪರೋಕ್ಷವಾಗಿ ಒಪ್ಪಿಕೊಂಡಿದ್ದಾರೆ. ಕೇಂದ್ರ ಸರ್ಕಾರ ಇ-20, ಇ-20 ಜಾರಿಗೆ ತರುವ ಮುನ್ನ ಈ ದೇಶದ ವಾಹನ ಸವಾರರ ಅಭಿಪ್ರಾಯ ಕೇಳಬೇಕಿತ್ತಲ್ಲವೇ? ಬಿಜೆಪಿ ಆಡಳಿತವಿರುವ 20 ರಾಜ್ಯಗಳ ಸಚಿವರು ಅಥವಾ ನಾಯಕರು ಕೇಂದ್ರಕ್ಕೆ ಹೆದರಿ ಬಾಯಿ ಮುಚ್ಚಿಕೊಂಡಿರಬಹುದು. ಆದರೆ ನಾನು ಕರ್ನಾಟಕದ ಗ್ರಾಹಕರ ವ್ಯವಹಾರಗಳ ಸಚಿವನಾಗಿ ಜನರ ಹಿತ ಕಾಯಲು ಬದ್ಧನಾಗಿದ್ದೇನೆ. ನಮ್ಮ ಬಳಿ ಎಲ್ಲಾ ಅಕ್ರಮಗಳ ನಿಖರ ದಾಖಲೆಗಳಿವೆ, ಇದರ ವಿರುದ್ಧ ಕಾನೂನಾತ್ಮಕ ಹಾಗೂ ಜನಪರ ಹೋರಾಟ ಮುಂದುವರಿಸುತ್ತೇವೆ" ಎಂದು ಸ್ಪಷ್ಟಪಡಿಸಿದರು.

ಬಿಜೆಪಿಯ ಹೋರಾಟ ಮೋದಿ ವಿರುದ್ಧ ಇರಲಿ

ಅಗತ್ಯ ವಸ್ತುಗಳ ಬೆಲೆ ಏರಿಕೆಯ ಕುರಿತು ಮಾತನಾಡಿದ ಸಚಿವರು, "ಬೆಲೆ ಏರಿಕೆಯು ಕೇವಲ ಕರ್ನಾಟಕಕ್ಕೆ ಸೀಮಿತವಾಗಿಲ್ಲ, ಇಡೀ ದೇಶಾದ್ಯಂತ ಅಗತ್ಯ ವಸ್ತುಗಳ ಬೆಲೆ ಗಗನಕ್ಕೇರಿದೆ. ಈ ವೈಫಲ್ಯ ಸಂಪೂರ್ಣವಾಗಿ ಕೇಂದ್ರ ಸರ್ಕಾರದ್ದು. ಹೀಗಾಗಿ ರಾಜ್ಯ ಬಿಜೆಪಿಯ ನಾಯಕರು ನಮ್ಮ ಸರ್ಕಾರದ ವಿರುದ್ಧ ಪ್ರತಿಭಟನೆ ಮಾಡುವ ಬದಲು, ಪ್ರಧಾನಿ ನರೇಂದ್ರ ಮೋದಿ ಅವರ ಸರ್ಕಾರದ ವಿರುದ್ಧ ದೆಹಲಿಗೆ ಹೋಗಿ ಹೋರಾಟ ನಡೆಸಲಿ" ಎಂದು ಸವಾಲು ಹಾಕಿದರು. "ಕರ್ನಾಟಕದಲ್ಲಿ ಇತಿಹಾಸದಲ್ಲೇ ಕಾಣದಂತಹ ಭೀಕರ ಬರಗಾಲವಿದೆ. ರೈತರು ಕಂಗಾಲಾಗಿದ್ದಾರೆ. ಕೇಂದ್ರ ಸರ್ಕಾರಕ್ಕೆ ಹಲವು ಬಾರಿ ಮನವಿ ಸಲ್ಲಿಸಿದರೂ ಇಂದಿನವರೆಗೂ ಒಂದು ನಯಾ ಪೈಸೆ ಬರ ಪರಿಹಾರ ಬಿಡುಗಡೆ ಮಾಡಿಲ್ಲ. ಇಂತಹ ಸಂಕಷ್ಟದ ಸ್ಥಿತಿಯಲ್ಲೂ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ನಮ್ಮ ರಾಜ್ಯ ಸರ್ಕಾರವೇ ತನ್ನ ಬೊಕ್ಕಸದಿಂದ ರೈತರಿಗೆ ಮೊದಲ ಹಂತದ ಪರಿಹಾರ ಒದಗಿಸಿದೆ. ಕೇಂದ್ರದಿಂದ ನಯಾಪೈಸೆ ತರದ ರಾಜ್ಯ ಬಿಜೆಪಿ ನಾಯಕರಿಗೆ ನಮ್ಮನ್ನು ಪ್ರಶ್ನಿಸುವ ಯಾವ ನೈತಿಕ ಹಕ್ಕೂ ಇಲ್ಲ" ಎಂದು ಗುಡುಗಿದರು.

ಬಿಪಿಎಲ್ ಕಾರ್ಡ್ ರದ್ದತಿ ಸುಳ್ಳು: 257 ಅಕ್ಕಿ ಕಳ್ಳರ ಬಂಧನ

ರಾಜ್ಯದಲ್ಲಿ ಬಿಪಿಎಲ್ ಕಾರ್ಡ್‌ಗಳ ರದ್ದತಿ ಕುರಿತು ಸಾರ್ವಜನಿಕರಲ್ಲಿರುವ ಗೊಂದಲಗಳಿಗೆ ತೆರೆ ಎಳೆದ ಆಹಾರ ಸಚಿವರು, "ನಾನು ಈ ಇಲಾಖೆಯ ಸಚಿವನಾಗಿ ಅಧಿಕಾರ ವಹಿಸಿಕೊಂಡು ಕೇವಲ ಎರಡು ತಿಂಗಳಷ್ಟೇ ಆಗಿದೆ. ಬಡವರ ಯಾವುದೇ ಬಿಪಿಎಲ್ ಕಾರ್ಡ್‌ಗಳನ್ನು ಡಿಲೀಟ್ ಮಾಡದಂತೆ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಆದೇಶ ನೀಡಿದ್ದೇನೆ. ರಾಜ್ಯ ಸರ್ಕಾರದಿಂದ ಯಾವುದೇ ಕಾರ್ಡ್ ರದ್ದಾಗಿಲ್ಲ. ಕೇಂದ್ರ ಸರ್ಕಾರ ಕಳುಹಿಸಿರುವ ಕೆಲವು ಮಾನದಂಡಗಳ ಪಟ್ಟಿಯ ಆಧಾರದ ಮೇಲೆ ತಾಲೂಕು ಮಟ್ಟದಲ್ಲಿ ಕೆಲವೊಂದು ತಾಂತ್ರಿಕ ಪರಿಶೀಲನೆ ನಡೆದಿರಬಹುದು. ಯಾವುದೇ ಅರ್ಹ ಬಡ ಕುಟುಂಬದ ಕಾರ್ಡ್ ರದ್ದಾಗಲು ನಾವು ಬಿಡುವುದಿಲ್ಲ. ಪಾರದರ್ಶಕತೆಗಾಗಿ ಇ-ಕೆವೈಸಿ ಪ್ರಕ್ರಿಯೆಯನ್ನು ಮುಂದುವರಿಸಲು ಸೂಚಿಸಲಾಗಿದೆ," ಎಂದರು.

Read More
Next Story