ಗ್ರಾಮೀಣ ಭಾಗದ ಸಾವಿರ ಹಳ್ಳಿಗಳಿಗೆ ಬಸ್ ತಂಗುದಾಣ ಭಾಗ್ಯ: ಸಚಿವ ಈಶ್ವರ ಖಂಡ್ರೆ
x

ಗ್ರಾಮೀಣ ಭಾಗದ ಸಾವಿರ ಹಳ್ಳಿಗಳಿಗೆ ಬಸ್ ತಂಗುದಾಣ ಭಾಗ್ಯ: ಸಚಿವ ಈಶ್ವರ ಖಂಡ್ರೆ

ಗುರುತಿಸಲಾದ ಹಳ್ಳಿಗಳ ಪಟ್ಟಿ, ಮಾದರಿ ವಿನ್ಯಾಸ, ಯೋಜನಾ ವೆಚ್ಚದ ಸಮಗ್ರ ಕಡತವನ್ನು ಮುಂದಿನ 15 ದಿನಗಳ ಒಳಗಾಗಿ ಸಚಿವರ ಮುಂದೆ ಅನುಮೋದನೆಗೆ ಸಲ್ಲಿಸಬೇಕು ಎಂದು ಲಿಖಿತವಾಗಿ ಆದೇಶಿಸಿದ್ದಾರೆ.


Click the Play button to hear this message in audio format

ರಾಜ್ಯದ ಗ್ರಾಮೀಣ ಭಾಗದ ಸಾರ್ವಜನಿಕರು, ಶಾಲಾ-ಕಾಲೇಜು ವಿದ್ಯಾರ್ಥಿಗಳು ಹಾಗೂ ಮಹಿಳೆಯರ ಬಹುದಿನಗಳ ಬೇಡಿಕೆಯಾಗಿದ್ದ ಸುಸಜ್ಜಿತ ಬಸ್ ತಂಗುದಾಣಗಳ ನಿರ್ಮಾಣಕ್ಕೆ ರಾಜ್ಯ ಸರ್ಕಾರ ಮಹತ್ವದ ಹೆಜ್ಜೆ ಇಟ್ಟಿದೆ. ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಹೆಚ್ಚಿನ ಸಂಚಾರ ದಟ್ಟಣೆ ಹೊಂದಿರುವ ಬರೋಬ್ಬರಿ 1,000 ಹಳ್ಳಿಗಳಲ್ಲಿ ವಿಬಿಜಿ ರಾಮ್ ಜಿ ಅಡಿಯಲ್ಲಿ ನೂತನ ಬಸ್ ತಂಗುದಾಣಗಳನ್ನು ನಿರ್ಮಿಸಲು ಸಮಗ್ರ ಯೋಜನೆ ರೂಪಿಸುವಂತೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಈಶ್ವರ ಬಿ. ಖಂಡ್ರೆ ಅವರು ಅಧಿಕಾರಿಗಳಿಗೆ ಕಟ್ಟುನಿಟ್ಟಿನ ನಿರ್ದೇಶನ ನೀಡಿದ್ದಾರೆ.

ಈ ಸಂಬಂಧ ಇಲಾಖೆಯ ಕಾರ್ಯದರ್ಶಿಗಳಿಗೆ ಹಾಗೂ ಉದ್ಯೋಗ ಖಾತ್ರಿ ಆಯುಕ್ತರಿಗೆ ಅಧಿಕೃತ ಲಿಖಿತ ಸೂಚನೆ ನೀಡಿರುವ ಸಚಿವರು, ಯೋಜನೆಗೆ ಸಂಬಂಧಿಸಿದಂತೆ ಅಗತ್ಯ ಪ್ರಸ್ತಾವನೆಯನ್ನು 15 ದಿನಗಳ ಒಳಗಾಗಿ ಕಡತದಲ್ಲಿ ಮಂಡಿಸುವಂತೆ ಗಡುವು ವಿಧಿಸಿದ್ದಾರೆ. ರಾಜ್ಯದಲ್ಲಿ ಒಟ್ಟು 5,927 ಗ್ರಾಮ ಪಂಚಾಯತಿಗಳಿದ್ದು, ಸಾವಿರಾರು ಹಳ್ಳಿಗಳಿಗೆ ಕೆಎಸ್‌ಆರ್‌ಟಿಸಿ ಕೆಂಪು ಬಸ್‌ಗಳು ಸಂಚರಿಸುತ್ತಿವೆ. ಆದರೆ, ಬಸ್ ನಿಲುಗಡೆ ಇರುವ ಬಹುತೇಕ ಸ್ಥಳಗಳಲ್ಲಿ ಪ್ರಯಾಣಿಕರಿಗೆ ಕನಿಷ್ಠ ನೆರಳಿನ ಆಸರೆಯೂ ಇಲ್ಲದಿರುವುದು ಕಟು ವಾಸ್ತವವಾಗಿದೆ. ಹಳ್ಳಿಗಳಲ್ಲಿ ಬಸ್‌ಗಳಿಗಾಗಿ ಕಾಯುವ ಸಾರ್ವಜನಿಕರು, ಹಿರಿಯ ನಾಗರಿಕರು, ಕೃಷಿ ಉತ್ಪನ್ನಗಳನ್ನು ಹೊತ್ತು ಪಟ್ಟಣಕ್ಕೆ ಸಾಗಿಸುವ ರೈತರು ಹಾಗೂ ವಿದ್ಯಾರ್ಥಿಗಳು ಸುಡುಬಿಸಿಲು ಮತ್ತು ಧಾರಾಕಾರ ಮಳೆಯಲ್ಲಿ ರಸ್ತೆಬದಿಯಲ್ಲೇ ನಿಲ್ಲಬೇಕಾದ ಅನಿವಾರ್ಯತೆ ಇದೆ. ಇನ್ನೂ ಕೆಲವು ಹಳ್ಳಿಗಳಲ್ಲಿ ದಶಕಗಳ ಹಿಂದೆ ನಿರ್ಮಿಸಲಾದ ತಂಗುದಾಣಗಳು ನಿರ್ವಹಣೆಯಿಲ್ಲದೆ ಬಿರುಕು ಬಿಟ್ಟು, ಶಿಥಿಲಾವಸ್ಥೆ ತಲುಪಿದ್ದು, ಯಾವುದೇ ಕ್ಷಣದಲ್ಲಾದರೂ ಕುಸಿದು ಬೀಳುವ ಅಪಾಯಕಾರಿ ಸ್ಥಿತಿಯಲ್ಲಿವೆ. ಈ ಸಂಕಷ್ಟವನ್ನು ಗಂಭೀರವಾಗಿ ಪರಿಗಣಿಸಿದ ಸಚಿವರು, ಈ ಮೂಲಸೌಕರ್ಯ ಕೊರತೆಯನ್ನು ನೀಗಿಸಲು ಉದ್ಯೋಗ ಖಾತ್ರಿ ಯೋಜನೆಯನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳಲು ಮುಂದಾಗಿದ್ದಾರೆ.

ಸ್ಥಳೀಯ ಹಿರಿಮೆ ಬಿಂಬಿಸುವ ವಿನ್ಯಾಸಕ್ಕೆ ಒತ್ತು

ಸಚಿವರು ನೀಡಿರುವ ಸೂಚನೆಯಲ್ಲಿ ಕೇವಲ ಸಿಮೆಂಟ್ ಕಟ್ಟಡಗಳನ್ನು ನಿರ್ಮಿಸದೆ, ಆಯಾ ಪ್ರದೇಶದ ಸಂಸ್ಕೃತಿ ಮತ್ತು ಗ್ರಾಮೀಣ ಸೊಗಡನ್ನು ಮೈಗೂಡಿಸಿಕೊಳ್ಳಲು ನಿರ್ದೇಶಿಸಲಾಗಿದೆ. ಬಸ್ ತಂಗುದಾಣಗಳ ವಿನ್ಯಾಸವು ಕೇವಲ ಆಧುನಿಕವಾಗಿರದೆ, ಆಯಾ ಪ್ರದೇಶದ ಐತಿಹಾಸಿಕ ಹಿನ್ನೆಲೆ, ಗ್ರಾಮೀಣ ವಾಸ್ತುಶಿಲ್ಪ ಹಾಗೂ ಸ್ಥಳೀಯ ಕಲಾ ಪರಂಪರೆಯನ್ನು (ಉದಾಹರಣೆಗೆ ಮಣ್ಣಿನ ಕಲೆ, ಕಲ್ಲಿನ ಕೆತ್ತನೆ ಅಥವಾ ಜಾನಪದ ಚಿತ್ರಕಲೆ) ಬಿಂಬಿಸುವಂತಿರಬೇಕು. ಕುಳಿತುಕೊಳ್ಳಲು ಆಸನ ವ್ಯವಸ್ಥೆ, ಮಳೆ-ಗಾಳಿಗೆ ರಕ್ಷಣೆ ನೀಡುವ ಚಾವಣಿ, ಬೆಳಕಿನ ವ್ಯವಸ್ಥೆ ಹಾಗೂ ಕಸದ ತೊಟ್ಟಿಗಳಂತಹ ಕನಿಷ್ಠ ಮೂಲಸೌಕರ್ಯಗಳನ್ನು ಕಡ್ಡಾಯವಾಗಿ ಒಳಗೊಂಡಿರಬೇಕು. ನಿತ್ಯ ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರು ಬಸ್ ಹತ್ತುವ ಮತ್ತು ಇಳಿಯುವ ಪ್ರಮುಖ 1,000 ಜಂಕ್ಷನ್ ಅಥವಾ ಹಳ್ಳಿಗಳನ್ನು ಮೊದಲ ಹಂತದಲ್ಲಿ ಸಮೀಕ್ಷೆ ನಡೆಸಿ ಗುರುತಿಸಲಾಗುತ್ತದೆ.

ಈ ಯೋಜನೆಯನ್ನು ಮಹಾತ್ಮ ಗಾಂಧಿ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ಕೈಗೆತ್ತಿಕೊಳ್ಳುತ್ತಿರುವುದರಿಂದ ಹಳ್ಳಿಯ ಜನರಿಗೆ ಎರಡು ರೀತಿಯಲ್ಲಿ ನೇರ ಪ್ರಯೋಜನ ಸಿಗಲಿದೆ. ಗ್ರಾಮೀಣ ಪ್ರದೇಶಗಳಲ್ಲಿ ಕೇವಲ ಮಣ್ಣಿನ ಕೆಲಸಗಳಿಗೆ ಸೀಮಿತವಾಗಿದ್ದ ಉದ್ಯೋಗ ಖಾತ್ರಿ ಯೋಜನೆಯನ್ನು ಶಾಶ್ವತ ಸಮುದಾಯ ಆಸ್ತಿಗಳನ್ನು ನಿರ್ಮಿಸಲು ಬಳಸಿಕೊಳ್ಳಲಾಗುತ್ತಿದೆ. ತಂಗುದಾಣಗಳ ನಿರ್ಮಾಣಕ್ಕೆ ಗ್ರಾಮೀಣ ಭಾಗದ ಅಕುಶಲ ಕಾರ್ಮಿಕರನ್ನು ಬಳಸಿಕೊಳ್ಳುವುದರಿಂದ ಸ್ಥಳೀಯರಿಗೆ ಉದ್ಯೋಗ ಮತ್ತು ಕೂಲಿ ಸಿಗಲಿದೆ. ಹೊಸದಾಗಿ 1,000 ತಂಗುದಾಣಗಳನ್ನು ನಿರ್ಮಿಸುವುದರ ಜೊತೆಗೆ, ಈಗಾಗಲೇ ಶಿಥಿಲಗೊಂಡಿರುವ ಹಳೆಯ ತಂಗುದಾಣಗಳಿಗೆ ಸುಣ್ಣ-ಬಣ್ಣ ಬಳಿದು, ಅಗತ್ಯ ದುರಸ್ತಿ ನಡೆಸಿ ಪುನಶ್ಚೇತನಗೊಳಿಸಲು ಕೂಡ ಈ ಯೋಜನೆಯಡಿ ಅವಕಾಶ ಕಲ್ಪಿಸಲಾಗಿದೆ.

ಅಧಿಕಾರಿಗಳಿಗೆ ಸಚಿವರ 15 ದಿನಗಳ ಕಟ್ಟುನಿಟ್ಟಿನ ಗಡುವು

ಯೋಜನೆ ಕೇವಲ ಘೋಷಣೆಗೆ ಸೀಮಿತವಾಗಬಾರದು ಎಂಬ ದೃಢ ನಿಲುವನ್ನು ಹೊಂದಿರುವ ಸಚಿವ ಈಶ್ವರ ಖಂಡ್ರೆ ಅವರು ಅಧಿಕಾರಿಗಳಿಗೆ ಸ್ಪಷ್ಟ ಮಾರ್ಗಸೂಚಿ ನೀಡಿದ್ದಾರೆ. ತಂಗುದಾಣ ನಿರ್ಮಾಣಕ್ಕೆ ತಗಲುವ ಕಚ್ಚಾ ಸಾಮಗ್ರಿಗಳ ವೆಚ್ಚ ಮತ್ತು ಉದ್ಯೋಗ ಖಾತ್ರಿ ಯೋಜನೆಯಡಿ ನೀಡಲಾಗುವ ಕೂಲಿ ವೆಚ್ಚವನ್ನು ಪ್ರತ್ಯೇಕವಾಗಿ, ನಿಖರವಾಗಿ ಅಂದಾಜಿಸಬೇಕು. ಗುರುತಿಸಲಾದ ಹಳ್ಳಿಗಳ ಪಟ್ಟಿ, ಮಾದರಿ ವಿನ್ಯಾಸ ಹಾಗೂ ಒಟ್ಟಾರೆ ಯೋಜನಾ ವೆಚ್ಚದ ಸಮಗ್ರ ಕಡತವನ್ನು ಮುಂದಿನ 15 ದಿನಗಳ ಒಳಗಾಗಿ ಸಚಿವರ ಮುಂದೆ ಅನುಮೋದನೆಗೆ ಸಲ್ಲಿಸಬೇಕು ಎಂದು ಲಿಖಿತವಾಗಿ ಆದೇಶಿಸಿದ್ದಾರೆ. ಈ ಮಹತ್ವಾಕಾಂಕ್ಷೆಯ ಯೋಜನೆಯಿಂದ ಗ್ರಾಮೀಣ ಜನಜೀವನದಲ್ಲಿ ಸಕಾರಾತ್ಮಕ ಬದಲಾವಣೆಗಳು ಉಂಟಾಗಲಿವೆ. ಸಂಜೆ ಮತ್ತು ಮುಂಜಾನೆಯ ವೇಳೆ ಬಸ್‌ಗಳಿಗಾಗಿ ಕಾಯುವ ಗ್ರಾಮೀಣ ಮಹಿಳೆಯರು, ಯುವತಿಯರು ಹಾಗೂ ಶಾಲೆಗೆ ತೆರಳುವ ಮಕ್ಕಳಿಗೆ ಇವು ಸುರಕ್ಷಿತ ತಾಣಗಳಾಗಲಿವೆ. ಹಳ್ಳಿಗಳಲ್ಲಿ ಉತ್ತಮ ಮೂಲಸೌಕರ್ಯ ದೊರೆತಾಗ ಜನರು ಸ್ವಂತ ವಾಹನಗಳ ಬದಲಿಗೆ ಕೆಎಸ್‌ಆರ್‌ಟಿಸಿ ಸಾರಿಗೆ ಬಸ್‌ಗಳನ್ನು ಹೆಚ್ಚಾಗಿ ಬಳಸಲು ಮುಂದಾಗುತ್ತಾರೆ. ಸ್ಥಳೀಯ ಹಿರಿಮೆ ಬಿಂಬಿಸುವ ವಿನ್ಯಾಸದ ತಂಗುದಾಣಗಳು ನಿರ್ಮಾಣವಾಗುವುದರಿಂದ ಊರಿನ ಮುಂಭಾಗಕ್ಕೆ ಹೊಸ ಕಳೆ ಬರಲಿದ್ದು, ಗ್ರಾಮದ ಗರಿಮೆ ಹೆಚ್ಚಲಿದೆ.

Read More
Next Story