
ಬಂಡೀಪುರ, ನಾಗರಹೊಳೆ ಸಫಾರಿ ಸ್ಥಗಿತ ಸಮರ್ಥಿಸಿಕೊಂಡ ಈಶ್ವರ ಖಂಡ್ರೆ
ಬಂಡೀಪುರದ 314 ಕಿ.ಮೀ ಗಡಿಯ ಪೈಕಿ 100 ಕಿ.ಮೀ ಪ್ರದೇಶವು ಅತಿ ಹೆಚ್ಚು ಸಂಘರ್ಷ ವಲಯವಾಗಿದೆ. ಅಲ್ಲಿ 25 ಕಳ್ಳಬೇಟೆ ನಿಗ್ರಹ ಶಿಬಿರಗಳನ್ನು ಸ್ಥಾಪಿಸಿ, 14 ಗಂಟೆಗಳ ನಿರಂತರ ಗಸ್ತು ವ್ಯವಸ್ಥೆ ಮಾಡಲಾಗಿದೆ ಎಂದು ಸಚಿವರು ಹೇಳಿದ್ದಾರೆ.
ಬಂಡೀಪುರ ಮತ್ತು ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶಗಳಲ್ಲಿ ಸಫಾರಿಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿ, ಬಳಿಕ ಷರತ್ತುಬದ್ಧವಾಗಿ ಪುನಾರಂಭಿಸಿರುವ ಸರ್ಕಾರದ ಕ್ರಮವನ್ನು ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಬಿ. ಖಂಡ್ರೆ ಅವರು ವಿಧಾನಸಭೆಯಲ್ಲಿ ಬಲವಾಗಿ ಸಮರ್ಥಿಸಿಕೊಂಡಿದ್ದಾರೆ. ವನ್ಯಜೀವಿ-ಮಾನವ ಸಂಘರ್ಷ ತಡೆಗಟ್ಟಿ, ಅಮೂಲ್ಯ ಜೀವಗಳನ್ನು ಉಳಿಸುವ ಅನಿವಾರ್ಯತೆಯಿಂದಾಗಿ ಈ ಕ್ರಮ ಕೈಗೊಳ್ಳಲಾಗಿತ್ತು ಎಂದು ಅವರು ಸದನಕ್ಕೆ ಸ್ಪಷ್ಟಪಡಿಸಿದ್ದಾರೆ.
ಮಾ.12ರ ಗುರುವಾರದಂದು ವಿಧಾನಸಭೆಯ ಪ್ರಶ್ನೋತ್ತರ ಕಲಾಪದಲ್ಲಿ ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಅವರು ಸಫಾರಿ ಸ್ಥಗಿತದ ವಿಚಾರವನ್ನು ಪ್ರಸ್ತಾಪಿಸಿದರು. "ಯಾವುದೇ ಪೂರ್ವ ಸಮೀಕ್ಷೆ ನಡೆಸದೆ, ವರ್ಷಗಳಿಂದ ನಡೆಯುತ್ತಿದ್ದ ಸಫಾರಿಯನ್ನು ಏಕಾಏಕಿ ನಿಲ್ಲಿಸಿದ್ದರಿಂದ 4 ಸಾವಿರಕ್ಕೂ ಹೆಚ್ಚು ಸ್ಥಳೀಯರು ಉದ್ಯೋಗ ಕಳೆದುಕೊಂಡಿದ್ದರು," ಎಂದು ಸರ್ಕಾರದ ನಡೆಯನ್ನು ಆಕ್ಷೇಪಿಸಿದರು.
ಹುಲಿ ದಾಳಿ ಮತ್ತು ಜನರ ಆಕ್ರೋಶವೇ ಕಾರಣ
ವಿಪಕ್ಷ ನಾಯಕರ ಪ್ರಶ್ನೆಗೆ ಉತ್ತರಿಸಿದ ಸಚಿವ ಖಂಡ್ರೆ, "ಸಫಾರಿಯನ್ನು ಏಕಾಏಕಿ ನಿಲ್ಲಿಸಿಲ್ಲ. ಕಳೆದ ನವೆಂಬರ್‌ನಲ್ಲಿ ಕೇವಲ 15 ದಿನಗಳ ಅಂತರದಲ್ಲಿ ಹುಲಿ ದಾಳಿಗೆ ಸಿಲುಕಿ ಮೂವರು ಪ್ರಾಣ ಕಳೆದುಕೊಂಡಿದ್ದರು ಹಾಗೂ ಒಬ್ಬರು ಶಾಶ್ವತ ಅಂಗವೈಕಲ್ಯಕ್ಕೀಡಾಗಿದ್ದರು. ವಿಪರೀತ ಪ್ರವಾಸಿಗರ ಭೇಟಿ ಹಾಗೂ ವಾಹನಗಳ ದಟ್ಟಣೆಯಿಂದಾಗಿ ವನ್ಯಜೀವಿಗಳು ವಿಚಲಿತಗೊಂಡು ಕಾಡಿನಿಂದ ಹೊರಬರುತ್ತಿವೆ ಎಂದು ರೈತ ಸಂಘಟನೆಗಳು ಕಳವಳ ವ್ಯಕ್ತಪಡಿಸಿದ್ದವು. ಜನರ ಜೀವ ರಕ್ಷಣೆಗಾಗಿ ಸಫಾರಿಯನ್ನು ತಾತ್ಕಾಲಿಕವಾಗಿ ನಿಲ್ಲಿಸಿ, ಸಫಾರಿ ವಾಹನಗಳು ಮತ್ತು ಸಿಬ್ಬಂದಿಯನ್ನು ಕಾಡಂಚಿನ ಗ್ರಾಮಗಳಲ್ಲಿ ನಿಗಾ ಇಡಲು (ಗಸ್ತು) ಬಳಸಿಕೊಳ್ಳಲಾಯಿತು," ಎಂದು ವಿವರಿಸಿದರು.
ಕಟ್ಟುನಿಟ್ಟಿನ ಭದ್ರತೆ ಬಳಿಕವಷ್ಟೇ ಪುನಾರಂಭ
ಬಂಡೀಪುರದ 314 ಕಿ.ಮೀ ಗಡಿಯ ಪೈಕಿ 100 ಕಿ.ಮೀ ಪ್ರದೇಶವು ಅತಿ ಹೆಚ್ಚು ಸಂಘರ್ಷ ವಲಯವಾಗಿದೆ. ಅಲ್ಲಿ 25 ಕಳ್ಳಬೇಟೆ ನಿಗ್ರಹ ಶಿಬಿರಗಳನ್ನು ಸ್ಥಾಪಿಸಿ, 14 ಗಂಟೆಗಳ ನಿರಂತರ ಗಸ್ತು ವ್ಯವಸ್ಥೆ ಮಾಡಲಾಗಿದೆ. ಸಮಗ್ರ ಕಮಾಂಡ್ ಸೆಂಟರ್ ಆರಂಭಿಸಿ, ಮುಂದೆ ಯಾವುದೇ ಅನಾಹುತ ನಡೆಯದಂತೆ ಮುನ್ನೆಚ್ಚರಿಕೆ ವಹಿಸಲಾಗಿದೆ. ಮುಖ್ಯಮಂತ್ರಿಗಳ ನೇತೃತ್ವದ ವನ್ಯಜೀವಿ ಮಂಡಳಿ ಸಭೆಯಲ್ಲಿ ಚರ್ಚಿಸಿ, ಕೇಂದ್ರ ವನ್ಯಜೀವಿ ಸಂಸ್ಥೆಯ ಪ್ರತಿನಿಧಿಗಳನ್ನೊಳಗೊಂಡ ತಜ್ಞರ ಸಮಿತಿಯ ಪ್ರಾಥಮಿಕ ವರದಿಯ ಆಧಾರದ ಮೇಲಷ್ಟೇ ಸಫಾರಿಯನ್ನು ಷರತ್ತುಬದ್ಧವಾಗಿ ಮರುಪ್ರಾರಂಭಿಸಲಾಗಿದೆ ಎಂದು ಸಚಿವರು ಮಾಹಿತಿ ನೀಡಿದರು.
ಏರಿಕೆಯಾದ ಹುಲಿಗಳ ಸಂಖ್ಯೆ, ಆದಾಯ ಹಂಚಿಕೆಗೆ ಹೊಸ ನಿಯಮ
"1972ರಲ್ಲಿ ಬಂಡೀಪುರದಲ್ಲಿ ಕೇವಲ 12 ಹುಲಿಗಳಿದ್ದವು. ಮೂರು ವರ್ಷಗಳ ಹಿಂದಿನ ಗಣತಿಯಲ್ಲಿ 150 ಇದ್ದ ಹುಲಿಗಳ ಸಂಖ್ಯೆ, ಇದೀಗ 175ಕ್ಕೆ ಏರಿಕೆಯಾಗಿದೆ. ಆದರೆ, ಅರಣ್ಯ ಪ್ರದೇಶ ವಿಸ್ತರಣೆಯಾಗುತ್ತಿಲ್ಲ. ಹೀಗಾಗಿ ಕಾಡಿನ ಧಾರಣಾ ಸಾಮರ್ಥ್ಯದ ಬಗ್ಗೆ ಅಧ್ಯಯನ ನಡೆಸಲು ತಜ್ಞರ ವರದಿ ಕೇಳಿದ್ದೇವೆ," ಎಂದರು.
ಅಲ್ಲದೆ, "ಸಫಾರಿಯಿಂದ ಬರುವ ಆದಾಯದಲ್ಲಿ ಶೇ.35ರಷ್ಟನ್ನು ಇನ್ನುಮುಂದೆ ಕಾಡಂಚಿನ ಗ್ರಾಮಗಳ ಮೂಲಸೌಕರ್ಯ ಅಭಿವೃದ್ಧಿ, ಶಿಕ್ಷಣ, ಉದ್ಯೋಗ ಸೃಷ್ಟಿ ಹಾಗೂ ಜನಸಂಪರ್ಕ ಕಾರ್ಯಕ್ರಮಗಳಿಗೆ ಬಳಸಲು ಪ್ರತಿಷ್ಠಾನಕ್ಕೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ," ಎಂದು ಈಶ್ವರ ಖಂಡ್ರೆ ಮಹತ್ವದ ಘೋಷಣೆ ಮಾಡಿದರು.

