
ಆನೆ-ಮಾನವ ಸಂಘರ್ಷ: 201 ಕೋಟಿ ರೂ. ವೆಚ್ಚದಲ್ಲಿ 116 ಕಿ.ಮೀ ರೈಲ್ವೆ ಬ್ಯಾರಿಕೇಡ್ ನಿರ್ಮಾಣ
ಮಳವಳ್ಳಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಆನೆ ಹಾವಳಿ ತಡೆಯಲು 9 ಕೋಟಿ 38 ಲಕ್ಷ ರೂ. ವೆಚ್ಚದಲ್ಲಿ 5.5 ಕಿ.ಮೀ ರೈಲ್ವೆ ಬ್ಯಾರಿಕೇಡ್ ನಿರ್ಮಾಣಕ್ಕೆ ಮಂಜೂರಾತಿ ನೀಡಲಾಗಿದೆ ಎಂದು ಸಚಿವರು ಹೇಳಿದರು.
ಮೂಲಸೌಕರ್ಯ ಅಭಿವೃದ್ಧಿ ಕಾಮಗಾರಿಗಳು ಹಾಗೂ ಎಕ್ಸ್‌ಪ್ರೆಸ್ ಹೆದ್ದಾರಿಗಳ ನಿರ್ಮಾಣದಿಂದಾಗಿ 'ಗಜಪಥ' (ಆನೆ ಕಾರಿಡಾರ್) ಛಿದ್ರಗೊಂಡಿದ್ದು, ಪರಿಣಾಮವಾಗಿ ನಾಡಿನಲ್ಲಿ ಆನೆ ಹಾವಳಿ ಹೆಚ್ಚಾಗಿದೆ. ಇದನ್ನು ನಿಯಂತ್ರಿಸಲು ಪ್ರಸಕ್ತ ವರ್ಷ ರಾಜ್ಯಾದ್ಯಂತ 201 ಕೋಟಿ ರೂ. ವೆಚ್ಚದಲ್ಲಿ 116 ಕಿ.ಮೀ ಉದ್ದದ ರೈಲ್ವೆ ಬ್ಯಾರಿಕೇಡ್ (ರೈಲು ಹಳಿ ತಡೆಗೋಡೆ) ನಿರ್ಮಿಸಲಾಗುತ್ತಿದೆ ಎಂದು ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಬಿ. ಖಂಡ್ರೆ ವಿಧಾನಸಭೆಯಲ್ಲಿ ತಿಳಿಸಿದ್ದಾರೆ.
ಮಾ.12ರಂದು ನಡೆದ ಪ್ರಶ್ನೋತ್ತರ ಕಲಾಪದಲ್ಲಿ ಶಾಸಕ ಪಿ.ಎಂ. ನರೇಂದ್ರ ಸ್ವಾಮಿ ಅವರ ಪ್ರಶ್ನೆಗೆ ಉತ್ತರಿಸಿದ ಸಚಿವರು, ಮಾನವ-ವನ್ಯಜೀವಿ ಸಂಘರ್ಷ ತಡೆಗಟ್ಟಲು ಸರ್ಕಾರ ಪ್ರಥಮ ಆದ್ಯತೆ ನೀಡಿದೆ. ಆನೆಗಳ ಸಂಖ್ಯೆ ಗಣನೀಯವಾಗಿ ಹೆಚ್ಚಾಗಿರುವುದು ಮತ್ತು ಅವುಗಳ ಸಾಂಪ್ರದಾಯಿಕ ಮಾರ್ಗಗಳಿಗೆ ಅಡ್ಡಿಯಾಗಿರುವುದು ಸಂಘರ್ಷಕ್ಕೆ ಪ್ರಮುಖ ಕಾರಣವಾಗಿದೆ. ಹೀಗಾಗಿ, ಮಂಜೂರಾಗಿರುವ 116 ಕಿ.ಮೀ ರೈಲ್ವೆ ಬ್ಯಾರಿಕೇಡ್ ಕಾಮಗಾರಿಗಳು ವಿವಿಧ ಹಂತಗಳಲ್ಲಿ ಪ್ರಗತಿಯಲ್ಲಿವೆ ಎಂದು ಸದನಕ್ಕೆ ಮಾಹಿತಿ ನೀಡಿದರು.
ಮಳವಳ್ಳಿಗೆ 5.5 ಕಿ.ಮೀ ಬ್ಯಾರಿಕೇಡ್, ವಿಶೇಷ ಕಾರ್ಯಪಡೆ
ಮಳವಳ್ಳಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಆನೆ ಹಾವಳಿ ತಡೆಯಲು 9 ಕೋಟಿ 38 ಲಕ್ಷ ರೂ. ವೆಚ್ಚದಲ್ಲಿ 5.5 ಕಿ.ಮೀ ರೈಲ್ವೆ ಬ್ಯಾರಿಕೇಡ್ ನಿರ್ಮಾಣಕ್ಕೆ ಮಂಜೂರಾತಿ ನೀಡಲಾಗಿದ್ದು, ಶೀಘ್ರವೇ ಕಾಮಗಾರಿ ಆರಂಭವಾಗಲಿದೆ. ಇದರ ಜೊತೆಗೆ ನಾಡಿಗೆ ಬರುವ ಆನೆಗಳನ್ನು ಮರಳಿ ಕಾಡಿಗಟ್ಟಲು ‘ಆನೆ ಕಾರ್ಯಪಡೆ’ ಹಾಗೂ ಚಿರತೆ ಹಾವಳಿ ತಡೆಯಲು ‘ಚಿರತೆ ಕಾರ್ಯಪಡೆ’ ರಚಿಸಲಾಗಿದೆ. ಮಳವಳ್ಳಿ ಭಾಗಕ್ಕೆ ಅಗತ್ಯವಿರುವ ಚಿರತೆ ಕಾರ್ಯಪಡೆ ಮತ್ತು ವಾಹನಗಳನ್ನು ಶೀಘ್ರದಲ್ಲೇ ಒದಗಿಸಲು ಸರ್ಕಾರ ಬದ್ಧವಾಗಿದೆ ಎಂದು ಭರವಸೆ ನೀಡಿದರು.
ಡ್ರೋನ್ ಕಣ್ಗಾವಲು, ಹೈಟೆಕ್ ಬೇಲಿ ಅಳವಡಿಕೆ
ವನ್ಯಜೀವಿಗಳ ಸಂಚಾರದ ಮೇಲೆ ನಿಗಾ ಇಡಲು ಅರಣ್ಯ ಇಲಾಖೆ ಇದೀಗ ಡ್ರೋನ್ ಕ್ಯಾಮೆರಾಗಳನ್ನು ವ್ಯಾಪಕವಾಗಿ ಬಳಸಿಕೊಳ್ಳುತ್ತಿದೆ. ರೈಲ್ವೆ ಬ್ಯಾರಿಕೇಡ್ ಜೊತೆಗೆ ಟೆಂಟಕಲ್ ಫೆನ್ಸಿಂಗ್ ಮತ್ತು ಆನೆ ಕಂದಕಗಳನ್ನು ಸಹ ನಿರ್ಮಿಸಲಾಗುತ್ತಿದೆ. ಮುಂದಿನ ದಿನಗಳಲ್ಲಿ ಶಾಸಕರುಗಳಿಂದ ಹೆಚ್ಚಿನ ರೈಲ್ವೆ ಬ್ಯಾರಿಕೇಡ್‌ಗಳಿಗೆ ಬೇಡಿಕೆ ಬಂದರೆ ಪ್ರಾಮಾಣಿಕವಾಗಿ ಸ್ಪಂದಿಸಲಾಗುವುದು ಹಾಗೂ ಅಗತ್ಯವಿರುವ ಕಡೆಗಳಲ್ಲಿ ಉಪ ವಲಯ ಅರಣ್ಯಾಧಿಕಾರಿಗಳನ್ನು (DRFO) ಶೀಘ್ರವೇ ನೇಮಕ ಮಾಡಲಾಗುವುದು ಎಂದು ಸಚಿವ ಈಶ್ವರ ಖಂಡ್ರೆ ಸ್ಪಷ್ಟಪಡಿಸಿದರು.

