
ಬೇಸಿಗೆ ಆರಂಭದಲ್ಲೇ ʻಕರೆಂಟ್ ಶಾಕ್ʼ: ಏಪ್ರಿಲ್ನಿಂದ ಯೂನಿಟ್ಗೆ 50 ಪೈಸೆ ದರ ಏರಿಕೆ ಸಾಧ್ಯತೆ!
Electricity Bill| ರಾಜ್ಯದ ಎಸ್ಕಾಂಗಳು ಅನುಭವಿಸುತ್ತಿರುವ ನಷ್ಟದ ಹಿನ್ನೆಲೆಯಲ್ಲಿ ವಿದ್ಯುತ್ ದರ ಏರಿಕೆಗೆ ಎಸ್ಕಾಂ ಮುಂದಾಗಿದೆ.
ಬೇಸಿಗೆ ಆರಂಭದ ಬೆನ್ನಲ್ಲೇ ಗ್ರಾಹಕರಿಗೆ ವಿದ್ಯುತ್ ಬಿಲ್ ಶಾಕ್ ನೀಡಲು ಕೆ.ಇ.ಬಿ ಮುಂದಾಗಿದೆ. ಏಪ್ರಿಲ್ ಪ್ರಾರಂಭದಲ್ಲೇ ಗೃಹಬಳಕೆ ವಿದ್ಯುತ್ ದರ ಯೂನಿಟ್ಗೆ ಅಂದಾಜು 50 ಪೈಸೆಯಷ್ಟು ಹೆಚ್ಚಳವಾಗುವ ಸಾಧ್ಯತೆ ಇದೆ. ರಾಜ್ಯದ ವಿವಿಧ ಎಸ್ಕಾಂಗಳು ವಿದ್ಯುತ್ ಖರೀದಿ ವೆಚ್ಚ, ನಿರ್ವಹಣಾ ವೆಚ್ಚ ಹಾಗೂ ನಷ್ಟದ ನೆಪವೊಡ್ಡಿ ದರ ಏರಿಕೆ ಮಾಡುವಂತೆ ಕೆ.ಇ.ಆರ್.ಸಿ (Karnataka Electricity Regulatory Commission)ಗೆ ಪ್ರಸ್ತಾವನೆ ಸಲ್ಲಿಸಿವೆ. ಈ ಮನವಿಗಳನ್ನು ಪರಿಗಣಿಸಿರುವ ಕೆ.ಇ.ಆರ್.ಸಿ, ಸಾರ್ವಜನಿಕ ಅಭಿಪ್ರಾಯ ಸಂಗ್ರಹಿಸಿ ವಿದ್ಯುತ್ ದರ ಪರಿಷ್ಕರಣೆ ಕುರಿತು ಅಂತಿಮ ನಿರ್ಧಾರ ಪ್ರಕಟಿಸಲಿದೆ.
ಬೆಸ್ಕಾಂ, ಮೆಸ್ಕಾಂ, ಸೆಸ್ಕಾಂ, ಹೆಸ್ಕಾಂ, ಜೆಸ್ಕಾಂ ಸೇರಿ ಒಟ್ಟು ರಾಜ್ಯದ ಐದು ವಿದ್ಯುತ್ ಸರಬರಾಜು ಕಂಪನಿಗಳು 2025-26ನೇ ಸಾಲಿನ ವಿದ್ಯುತ್ ದರವನ್ನು ಪರಿಷ್ಕರಿಸಿ ಯೂನಿಟ್ಗೆ ಸರಾಸರಿ 68 ಪೈಸೆ ಹೆಚ್ಚಳ ಮಾಡುವಂತೆ ಕೋರಿದ್ದವು. ಹೀಗಾಗಿ ಆಯೋಗವು 14 ರಿಂದ 18 ಪೈಸೆ ಹೆಚ್ಚಳ ಮಾಡುವ ಉದ್ದೇಶ ಹೊಂದಿತ್ತು. ಇದಲ್ಲದೆ ಬಹುವಾರ್ಷಿಕ ದರ ಪದ್ಧತಿಗೆ ಅನುಗುಣವಾಗಿ 2026-27ನೇ ಸಾಲಿನ ದರ ಹೆಚ್ಚಳವನ್ನು ಕಳೆದ ವರ್ಷದ ಮಾರ್ಚ್ನಲ್ಲಿ ಪ್ರಕಟಿಸಲಾಗಿದೆ. ಆ ಪ್ರಕಾರ ಬರುವ ಏಪ್ರಿಲ್ ಒಂದರಿಂದ ಯೂನಿಟ್ಗೆ 35 ಪೈಸೆ ಹೆಚ್ಚಳವಾಗಲಿದೆ. ಈ 35 ಪೈಸೆ ಹಾಗೂ ಈಗ ಪರಿಷ್ಕರಣೆಯಾಗಲಿರುವ ದರ ಎರಡೂ ಸೇರಿ ಯೂನಿಟ್ಗೆ 50 ಪೈಸೆ ಹೆಚ್ಚಳವಾಗಬಹುದು ಎಂದು ಆಯೋಗದ ಮೂಲಗಳು ಮಾಹಿತಿ ನೀಡಿವೆ.
ರಾಜ್ಯದಲ್ಲಿ ಗೃಹಜ್ಯೋತಿ ಯೋಜನೆ ಜಾರಿಯಲ್ಲಿರುವ ನಡುವೆಯೇ ವಿದ್ಯುತ್ ದರ ಏರಿಕೆ ಸಾಧ್ಯತೆ ಚರ್ಚೆಗೆ ಕಾರಣವಾಗಿದೆ. ಉಚಿತ ವಿದ್ಯುತ್ ಯೋಜನೆಯ ಹೊರತಾಗಿ ಹೆಚ್ಚುವರಿ ಬಳಕೆಗೆ ಪ್ರತಿ ಯೂನಿಟ್ ಆಧಾರದ ಮೇಲೆ ದರ ಹೆಚ್ಚಳವಾಗಲಿದೆ. ಬೆಸ್ಕಾಂ ಮತ್ತು ಕೆ.ಪಿ.ಟಿ.ಸಿ.ಎಲ್ ಸಲ್ಲಿಸಿರುವ ವಾರ್ಷಿಕ ಕಾರ್ಯಕ್ಷಮತೆ ವರದಿಯ ಆಧಾರದ ಮೇಲೆ ಆಯೋಗ ಶುಕ್ರವಾರ ಅಹವಾಲುಗಳನ್ನು ಆಲಿಸಿದೆ. ಐದು ವಿದ್ಯುತ್ ಸರಬರಾಜು ಕಂಪನಿಗಳು (ಎಸ್ಕಾಂ) 2024-25ನೇ ಸಾಲಿನ ವಾರ್ಷಿಕ ಕಾರ್ಯಕ್ಷಮತೆ ವರದಿಯನ್ನು ಆಯೋಗಕ್ಕೆ ಸಲ್ಲಿಸಿದ್ದು, ಆದಾಯದಲ್ಲಿ ಸುಮಾರು 4,900 ಕೋಟಿ ರೂ., ನಷ್ಟ ಆಗಿರುವುದನ್ನು ಪ್ರಸ್ತಾಪಿಸಲಾಗಿದೆ. ಇದರೊಂದಿಗೆ ಐದು ಕಂಪನಿಗಳ ಅಹವಾಲುಗಳ ಸಭೆ ಹಾಗೂ ಸಾರ್ವಜನಿಕರ ಸಲಹೆ, ಆಕ್ಷೇಪಣೆ ಮತ್ತು ಅಭಿಪ್ರಾಯಗಳನ್ನು ಆಲಿಸಿದ ನಂತರವೇ ಆಯೋಗವು ದರ ಪರಿಷ್ಕರಣೆ ಬಗ್ಗೆ ಅಂತಿಮ ತೀರ್ಮಾನ ಕೈಗೊಳ್ಳಲಿದೆ.
ಯಾವುದಕ್ಕೆ ಎಷ್ಟೆಷ್ಟು?
ಕೃಷಿ ಪಂಪ್ಸೆಟ್ಗಳಿಗೆ ನಿಗದಿ ಮಾಡಿರುವ ವಿದ್ಯುತ್ ದರವನ್ನು ಕಡಿಮೆ ಮಾಡಿ, ವಾಣಿಜ್ಯ ಸಂಸ್ಥೆಗಳು ಮತ್ತು ಕೈಗಾರಿಕೆಗಳಿಗೆ ನಿಗದಿ ಮಾಡಿರುವ ದರವನ್ನು ಜಾಸ್ತಿ ಮಾಡುವಂತೆ ಎಸ್ಕಾಂಗಳು ಪ್ರತ್ಯೇಕ ಅರ್ಜಿ ಸಲ್ಲಿಸಿದ್ದು, ಈ ತಿಂಗಳ 25ರಂದು ಆ ಅರ್ಜಿಗಳ ವಿಚಾರಣೆಯನ್ನು ಆಯೋಗ ನಡೆಸಲಿದೆ. ಕೈಗಾರಿಕೆ ಮತ್ತು ವಾಣಿಜ್ಯ ಬಳಕೆಯ ವಿದ್ಯುತ್ ದರ ಯೂನಿಟ್ಗೆ 99 ಪೈಸೆ ಹೆಚ್ಚಳವಾಗುವ ಸಾಧ್ಯತೆ ಇದೆ. ಗೃಹೋಪಯೋಗಿ ವಿದ್ಯುತ್ ದರ 50 ಪೈಸೆ ಏರಿಕೆಯಾಗಲಿದೆ. ಕೃಷಿ ಪಂಪ್ಸೆಟ್ಗಳಿಗೆ ಪೂರೈಸುವ ಪ್ರತಿ ಯೂನಿಟ್ ವಿದ್ಯುತ್ಗೆ 6.80 ಇದ್ದ ದರವನ್ನು ಆಯೋಗವು 8.25ಕ್ಕೆ ಹೆಚ್ಚಿಸಿತ್ತು. ಪಂಪ್ಸೆಟ್ಗಳಿಗೆ ಉಚಿತವಾಗಿ ವಿದ್ಯುತ್ ನೀಡುವ ಕಾರಣ, ಇದರ ವೆಚ್ಚವನ್ನು ಸಹಾಯಧನದ ರೂಪದಲ್ಲಿ ಸರ್ಕಾರ ಎಸ್ಕಾಂಗಳಿಗೆ ತುಂಬಿಕೊಡಬೇಕಿದೆ.

