ಕುಸುಮ-ಸಿ ಯೋಜನೆಯಡಿ ರೈತರಿಗೆ ಹಗಲು ವೇಳೆ 7 ಗಂಟೆ ವಿದ್ಯುತ್ ಪೂರೈಕೆಗೆ ಸರ್ಕಾರ ಬದ್ಧ: ಸಚಿವ ಕೆ.ಜೆ. ಜಾರ್ಜ್
x

ಕುಸುಮ-ಸಿ ಯೋಜನೆಯ ಮೂಲಕ ಕೃಷಿ ಉಪಕೇಂದ್ರಗಳನ್ನು ಸೌರೀಕರಣಗೊಳಿಸಿ ಸುಮಾರು 2,500 ಮೆಗಾವ್ಯಾಟ್ ಸೌರ ವಿದ್ಯುತ್ ಉತ್ಪಾದಿಸುವ ಗುರಿ ಹೊಂದಲಾಗಿದೆ. 

ಕುಸುಮ-ಸಿ ಯೋಜನೆಯಡಿ ರೈತರಿಗೆ ಹಗಲು ವೇಳೆ 7 ಗಂಟೆ ವಿದ್ಯುತ್ ಪೂರೈಕೆಗೆ ಸರ್ಕಾರ ಬದ್ಧ: ಸಚಿವ ಕೆ.ಜೆ. ಜಾರ್ಜ್

ಕುಸುಮ-ಸಿ ಯೋಜನೆಯ ಮೂಲಕ ಕೃಷಿ ಉಪಕೇಂದ್ರಗಳನ್ನು ಸೌರೀಕರಣಗೊಳಿಸಿ ಸುಮಾರು 2,500 ಮೆಗಾವ್ಯಾಟ್ ಸೌರ ವಿದ್ಯುತ್ ಉತ್ಪಾದಿಸುವ ಗುರಿ ಹೊಂದಲಾಗಿದೆ.


Click the Play button to hear this message in audio format

ರಾಜ್ಯದ ಅನ್ನದಾತರ ಪಂಪ್‌ಸೆಟ್‌ಗಳಿಗೆ ಹಗಲು ವೇಳೆಯೇ ನಿರಂತರ 7 ಗಂಟೆಗಳ ಕಾಲ ವಿದ್ಯುತ್ ಒದಗಿಸಲು ಸರ್ಕಾರ ಕಟಿಬದ್ಧವಾಗಿದ್ದು, ಈ ನಿಟ್ಟಿನಲ್ಲಿ ಕುಸುಮ-ಸಿ ಯೋಜನೆಯಡಿ ಕೃಷಿ ಫೀಡರ್‌ಗಳ ಸೌರೀಕರಣ ಪ್ರಕ್ರಿಯೆಯನ್ನು ಸಮರೋಪಾದಿಯಲ್ಲಿ ನಡೆಸಲಾಗುತ್ತಿದೆ ಎಂದು ಇಂಧನ ಸಚಿವ ಕೆ.ಜೆ. ಜಾರ್ಜ್ ತಿಳಿಸಿದ್ದಾರೆ.

ಶುಕ್ರವಾರ ನಗರದ ಕೆಪಿಸಿಸಿ ಕಚೇರಿಯಲ್ಲಿ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರ ಅಹವಾಲು ಸ್ವೀಕರಿಸಿದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಇಂಧನ ಇಲಾಖೆಯ ಮಹತ್ವಾಕಾಂಕ್ಷಿ ಯೋಜನೆಗಳ ಕುರಿತು ಮಾಹಿತಿ ನೀಡಿದರು.

ಕೃಷಿ ಕ್ಷೇತ್ರದಲ್ಲಿ ಸೌರ ಕ್ರಾಂತಿ

"ಕುಸುಮ-ಸಿ ಯೋಜನೆಯ ಮೂಲಕ ಕೃಷಿ ಉಪಕೇಂದ್ರಗಳನ್ನು ಸೌರೀಕರಣಗೊಳಿಸಿ ಸುಮಾರು 2,500 ಮೆಗಾವ್ಯಾಟ್ ಸೌರ ವಿದ್ಯುತ್ ಉತ್ಪಾದಿಸುವ ಗುರಿ ಹೊಂದಲಾಗಿದೆ. ಇದರಿಂದ ರೈತರಿಗೆ ಹಗಲು ಹೊತ್ತಿನಲ್ಲೇ ನಿರಂತರ ವಿದ್ಯುತ್ ನೀಡಲು ಸಾಧ್ಯವಾಗಲಿದೆ. ಅಷ್ಟೇ ಅಲ್ಲದೆ, ಕುಸುಮ-ಬಿ ಯೋಜನೆಯಡಿ ದೇಶದಲ್ಲೇ ಅತಿ ಹೆಚ್ಚು ಅಂದರೆ ಶೇ. 80ರಷ್ಟು ಸಬ್ಸಿಡಿಯೊಂದಿಗೆ ಸೋಲಾರ್ ಪಂಪ್‌ಸೆಟ್‌ಗಳನ್ನು ವಿತರಿಸಲಾಗುತ್ತಿದೆ. ಇದು ಕೃಷಿ ವಲಯದಲ್ಲಿ ಇಂಧನ ಇಲಾಖೆಯ ಕ್ರಾಂತಿಕಾರಕ ಹೆಜ್ಜೆಯಾಗಿದೆ," ಎಂದು ಸಚಿವರು ವಿವರಿಸಿದರು. ಸೌರಶಕ್ತಿಯ ಬಳಕೆಯಿಂದ ವಿದ್ಯುತ್ ಪರಿವರ್ತಕಗಳ (Transformers) ಮೇಲಿನ ಒತ್ತಡ ತಗ್ಗುವುದಲ್ಲದೆ, ವಿದ್ಯುತ್ ಕಳ್ಳತನಕ್ಕೂ ಲಗಾಮು ಬೀಳಲಿದೆ ಎಂದರು.

ಆರ್ಥಿಕ ಪ್ರಗತಿಯಲ್ಲಿ ಗ್ಯಾರಂಟಿಗಳ ಪಾತ್ರ

ರಾಜ್ಯದ ಆರ್ಥಿಕ ಪ್ರಗತಿಯ ಬಗ್ಗೆ ಮಾತನಾಡಿದ ಸಚಿವರು, "ಗೃಹಜ್ಯೋತಿ ಯೋಜನೆಯಡಿ 1.65 ಕೋಟಿ ಕುಟುಂಬಗಳು ಉಚಿತ ವಿದ್ಯುತ್ ಸೌಲಭ್ಯ ಪಡೆಯುತ್ತಿವೆ. ನಮ್ಮ ಗ್ಯಾರಂಟಿ ಯೋಜನೆಗಳಿಂದಾಗಿ ರಾಜ್ಯದ ತಲಾ ಆದಾಯ ಹೆಚ್ಚಿದ್ದು, ಕರ್ನಾಟಕ ಇಂದು ದೇಶದಲ್ಲೇ ನಂಬರ್ ಒನ್ ಸ್ಥಾನದಲ್ಲಿದೆ. ಸರ್ಕಾರ ಗ್ಯಾರಂಟಿಗಳಿಗಾಗಿ ವಾರ್ಷಿಕ 55,000 ಕೋಟಿ ರೂ. ಮೀಸಲಿಟ್ಟಿದ್ದು, ಇದರಿಂದ ಪ್ರತಿ ಕುಟುಂಬಕ್ಕೆ ಸರಾಸರಿ 5,000 ರೂ. ಆರ್ಥಿಕ ನೆರವು ಸಿಗುತ್ತಿದೆ," ಎಂದು ಪ್ರತಿಪಾದಿಸಿದರು.

ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ

ಇದೇ ವೇಳೆ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ ಜಾರ್ಜ್, "ನಾವು ಕಟ್ಟುವ 4 ಲಕ್ಷ ಕೋಟಿ ರೂ. ತೆರಿಗೆ ಹಣದಲ್ಲಿ ಕೇಂದ್ರವು ರಾಜ್ಯಕ್ಕೆ ವಾಪಸ್ ನೀಡುತ್ತಿರುವುದು ಕೇವಲ 60,000 ಕೋಟಿ ರೂ. ಮಾತ್ರ. ನಮ್ಮ ಅಭಿವೃದ್ಧಿಗೆ ಕೇಂದ್ರವೇ ಅಡ್ಡಿಯಾಗುತ್ತಿದೆ," ಎಂದು ಆರೋಪಿಸಿದರು. ಬಿಜೆಪಿಯ ದೇಶಪ್ರೇಮದ ಕುರಿತು ಟೀಕಿಸಿದ ಅವರು, "ನೆಹರು ಮತ್ತು ಕಾಂಗ್ರೆಸ್ ಪರಿಶ್ರಮದ ಫಲವನ್ನು ಇಂದು ಬಿಜೆಪಿ ಅನುಭವಿಸುತ್ತಿದೆ. ಚುನಾವಣೆ ಸಮಯದಲ್ಲಿ ಕೇವಲ ಪ್ರಚೋದನಾಕಾರಿ ಭಾಷಣ ಮಾಡುವುದು ಅವರ ಬಂಡವಾಳ," ಎಂದು ಕಿಡಿಕಾರಿದರು.

ಈ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡರಾದ ವಾಜೀದ್, ನಂದಕುಮಾರ್, ದೀಪಕ್ ತಿಮ್ಮಯ್ಯ ಸೇರಿದಂತೆ ಸರ್ವಜ್ಞನಗರ ವಿಧಾನಸಭಾ ಕ್ಷೇತ್ರದ ಹಲವು ಕಾರ್ಯಕರ್ತರು ಉಪಸ್ಥಿತರಿದ್ದರು.

Read More
Next Story