
ED Raid|ಮಂತ್ರಿ ಡೆವಲಪರ್ಸ್ ಮೇಲೆ ಇಡಿ ರೇಡ್; ಬೆಂಗಳೂರಿನ 8 ಕಡೆ ಶೋಧ
ಫ್ಲ್ಯಾಟ್ ಬುಕ್ಕಿಂಗ್ ವೇಳೆ ಸಂಸ್ಥೆಯು ಬಹುತೇಕ ವ್ಯವಹಾರಗಳನ್ನು ನಗದು ರೂಪದಲ್ಲೇ ನಡೆಸಿದೆ. ಇದನ್ನು ಅಪಾರ್ಟ್‌ಮೆಂಟ್ ನಿರ್ಮಾಣಕ್ಕೆ ಬಳಸುವ ಬದಲಾಗಿ, ವಿದೇಶಗಳಲ್ಲಿ ಬಂಡವಾಳ ಹೂಡಿಕೆಗೆ ಬಳಸಲಾಗಿದೆ ಎನ್ನಲಾಗಿದೆ.
ದಕ್ಷಿಣ ಭಾರತದ ಪ್ರಮುಖ ರಿಯಲ್ ಎಸ್ಟೇಟ್ ಸಂಸ್ಥೆಯಾಗಿರುವ ಮಂತ್ರಿ ಡೆವಲಪರ್ಸ್ ಮತ್ತು ಬಿಲ್ಡರ್ಸ್ ಮೇಲೆ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಗುರುವಾರ ದಾಳಿ ನಡೆಸಿದ್ದಾರೆ. ಅಕ್ರಮ ಹಣ ವರ್ಗಾವಣೆ ಮತ್ತು ಗ್ರಾಹಕರಿಗೆ ಫ್ಲ್ಯಾಟ್ ನೀಡದೆ ವಂಚಿಸಿದ ಗಂಭೀರ ಆರೋಪಗಳ ಹಿನ್ನೆಲೆ ಈ ಕಾರ್ಯಾಚರಣೆ ನಡೆಸಲಾಗಿದೆ.
ದೆಹಲಿಯಿಂದ ಆಗಮಿಸಿದ 10ಕ್ಕೂ ಹೆಚ್ಚು ಇಡಿ ಅಧಿಕಾರಿಗಳ ತಂಡವು ಬೆಂಗಳೂರಿನ ಎಂಟು ಕಡೆಗಳಲ್ಲಿ ಏಕಕಾಲಕ್ಕೆ ಶೋಧ ಕಾರ್ಯ ಆರಂಭಿಸಿದೆ. ಬೆಂಗಳೂರಿನ ವಿಠ್ಠಲ ಮಲ್ಯ ರಸ್ತೆಯಲ್ಲಿರುವ ಮಂತ್ರಿ ಡೆವಲಪರ್ಸ್ ಕೇಂದ್ರ ಕಚೇರಿ ಹಾಗೂ ಸಂಸ್ಥಾಪಕ ಸುಶೀಲ್ ಮಂತ್ರಿ ನಿವಾಸದ ಮೇಲೂ ದಾಳಿ ನಡೆದಿದೆ. ಮುಂಜಾನೆಯಿಂದ ಕಡತಗಳು ಮತ್ತು ಕಂಪ್ಯೂಟರ್ ದಾಖಲೆಗಳ ಪರಿಶೀಲನೆ ನಡೆಯುತ್ತಿದೆ.
ದಾಳಿಗೆ ಕಾರಣಗಳೇನು?
ದೆಹಲಿ, ಬೆಂಗಳೂರು ಸೇರಿದಂತೆ ವಿವಿಧೆಡೆ ಫ್ಲ್ಯಾಟ್ ನೀಡುವುದಾಗಿ ಸಾರ್ವಜನಿಕರಿಂದ ಕೋಟ್ಯಂತರ ರೂ. ಸಂಗ್ರಹಿಸಿ ವಂಚಿಸಿರುವ ಆರೋಪದ ಮೇರೆಗೆ ಇಡಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ.
ಫ್ಲ್ಯಾಟ್ ಬುಕ್ಕಿಂಗ್ ವೇಳೆ ಸಂಸ್ಥೆಯು ಬಹುತೇಕ ವ್ಯವಹಾರಗಳನ್ನು ನಗದು ರೂಪದಲ್ಲೇ ನಡೆಸಿದೆ. ಇದನ್ನು ಅಪಾರ್ಟ್‌ಮೆಂಟ್ ನಿರ್ಮಾಣಕ್ಕೆ ಬಳಸುವ ಬದಲಾಗಿ, ವಿದೇಶಗಳಲ್ಲಿ ಬಂಡವಾಳ ಹೂಡಿಕೆಗೆ ಬಳಸಲಾಗಿದೆ ಎಂದು ಇಡಿ ಅಧಿಕಾರಿಗಳು ಶಂಕಿಸಿದ್ದಾರೆ.
ಹಳೆಯ ಪ್ರಕರಣಗಳ ನಂಟು
ಮಂತ್ರಿ ಡೆವಲಪರ್ಸ್ ಮೇಲೆ ಇಡಿ ದಾಳಿ ನಡೆಸುತ್ತಿರುವುದು ಇದೇ ಮೊದಲಲ್ಲ. 2022 ಮತ್ತು 2023ರಲ್ಲೂ ಸಂಸ್ಥೆಯ ವಿರುದ್ಧ ಕ್ರಮ ಕೈಗೊಳ್ಳಲಾಗಿತ್ತು. 2023ರಲ್ಲಿ ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಮಾರು 300 ಕೋಟಿ ರೂಪಾಯಿ ಮೌಲ್ಯದ ಸ್ಥಿರಾಸ್ತಿಯನ್ನು ಜಾರಿ ನಿರ್ದೇಶನಾಲಯ ಜಪ್ತಿ ಮಾಡಿತ್ತು. ಅಕ್ರಮ ಹಣ ವರ್ಗಾವಣೆ ಆರೋಪದ ಮೇಲೆ 2022ರ ಜೂನ್ನಲ್ಲಿ ಸುಶೀಲ್ ಮಂತ್ರಿ ಅವರನ್ನು ಇಡಿ ಬಂಧಿಸಿತ್ತು. ನಂತರ ಅವರು ಜಾಮೀನಿನ ಮೇಲೆ ಹೊರಬಂದಿದ್ದರು. ಇದೀಗ ಮತ್ತೆ ಸಿಐಡಿ ವಿಶೇಷ ತಂಡವು ಸುಶೀಲ್ ಮಂತ್ರಿ ಅವರನ್ನು ಬಂಧಿಸಿದ್ದು, ತನಿಖೆ ತೀವ್ರಗೊಂಡಿದೆ.
1999ರಲ್ಲಿ ಬೆಂಗಳೂರಿನಲ್ಲಿ ಮಂತ್ರಿ ಡೆವಲಪರ್ಸ್ ಕೇಂದ್ರ ಕಚೇರಿ ಸ್ಥಾಪಿಸಲಾಯಿತು. ನಂತರ ಚೆನ್ನೈ, ಹೈದರಾಬಾದ್ ಮತ್ತು ಪುಣೆ ನಗರಗಳಲ್ಲಿ ಶಾಖೆಗಳನ್ನು ಆರಂಭಿಸಲಾಯಿತು. ವಸತಿ, ವಾಣಿಜ್ಯ ಮತ್ತು ರಿಟೇಲ್ ಕ್ಷೇತ್ರದಲ್ಲಿ ದೊಡ್ಡ ಹೆಸರು ಮಾಡಿದ್ದರೂ ಕಳೆದ ಕೆಲ ವರ್ಷಗಳಿಂದ ಕಾನೂನು ಸಂಘರ್ಷ ಮತ್ತು ಆರ್ಥಿಕ ಅವ್ಯವಹಾರದ ಆರೋಪಗಳಿಂದ ಮಂತ್ರಿ ಡೆವಲಪರ್ಸ್ ಸುದ್ದಿಯಲ್ಲಿದೆ.

