
ಸತೀಶ್ ಮೇಲೆ ಇಡಿ ದಾಳಿ: ತನಿಖೆಗಾಗಿ ಖುದ್ದು ಬೆಂಗಳೂರಿಗೆ ಬಂದ ಇಡಿ ನಿರ್ದೇಶಕ ರಾಹುಲ್ ನವೀನ್
ನವದೆಹಲಿಯಿಂದ ಆಗಮಿಸಿರುವ ಇಡಿ ತಾಂತ್ರಿಕ ಸಮಿತಿ ತಂಡವು ಶನಿವಾರವೇ ಬೆಂಗಳೂರಿಗೆ ತಲುಪಿದ್ದು, ಮುಂದಿನ ಎರಡು ದಿನಗಳ ಕಾಲ ಇಲ್ಲೇ ಮೊಕ್ಕಾಂ ಹೂಡಲಿದೆ.
ರಾಜ್ಯ ರಾಜಕಾರಣದಲ್ಲಿ ಮತ್ತೊಮ್ಮೆ ಜಾರಿ ನಿರ್ದೇಶನಾಲಯ ಬಿರುಗಾಳಿ ಎಬ್ಬಿಸಿದೆ.
ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ನಿವಾಸದ ಮೇಲಿನ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ, ಖುದ್ದು ಇಡಿ ನಿರ್ದೇಶಕ ರಾಹುಲ್ ನವೀನ್ ಅವರೇ ರಂಗಕ್ಕಿಳಿದಿದ್ದು, ಇಡೀ ತನಿಖೆಯ ಉಸ್ತುವಾರಿ ವಹಿಸಿಕೊಂಡಿದ್ದಾರೆ.
ನವದೆಹಲಿಯಿಂದ ಆಗಮಿಸಿರುವ ಇಡಿ ತಾಂತ್ರಿಕ ಸಮಿತಿ ತಂಡವು ಶನಿವಾರವೇ ಬೆಂಗಳೂರಿಗೆ ತಲುಪಿದ್ದು, ಮುಂದಿನ ಎರಡು ದಿನಗಳ ಕಾಲ ಇಲ್ಲೇ ಮೊಕ್ಕಾಂ ಹೂಡಲಿದೆ.
ಸಚಿವ ಸತೀಶ್ ಜಾರಕಿಹೊಳಿ ನಿವಾಸದಲ್ಲಿ ಬೃಹತ್ ಪ್ರಮಾಣದ ₹3.3 ಕೋಟಿ ನಗದು ಮತ್ತು ಅಪಾರ ಪ್ರಮಾಣದ ವಿದೇಶಿ ಕರೆನ್ಸಿ ಪತ್ತೆಯಾಗಿರುವ ಹಿನ್ನೆಲೆಯಲ್ಲಿ, ಯಾವುದೇ ಕ್ಷಣದಲ್ಲಿ ಸಚಿವರಿಗೆ ಇಡಿ ಅಧಿಕೃತ ನೋಟಿಸ್ ನೀಡುವ ಸಾಧ್ಯತೆಯಿದೆ.
ಇಡಿ ನಿರ್ದೇಶಕರ ನೇತೃತ್ವದ ವಿಶೇಷ ತಾಂತ್ರಿಕ ತಂಡವು ಇಂದು ಮತ್ತು ನಾಳೆ ಹಿರಿಯ ಅಧಿಕಾರಿಗಳಿಂದ ಪ್ರಕರಣಕ್ಕೆ ಸಂಬಂಧಿಸಿದ ಪ್ರಮುಖ ದಾಖಲೆ ಪರಿಶೀಲಿಸಲಿದೆ.
ಸತೀಶ್ ಜಾರಕಿಹೊಳಿ ಅವರ ವಿದೇಶಿ ಹೂಡಿಕೆಗಳು, ವಿದೇಶಿ ಗಣಿ ಕಂಪನಿಗಳಲ್ಲಿನ ಪಾಲುದಾರಿಕೆ ಹಾಗೂ ವಿದೇಶಿ ವಿನಿಮಯ ನಿರ್ವಹಣಾ ಕಾಯ್ದೆ ಉಲ್ಲಂಘನೆಯ ಸ್ವರೂಪದ ಬಗ್ಗೆ ತಾಂತ್ರಿಕ ತಂಡ ಪ್ರಮುಖ ಮಾಹಿತಿ ಕಲೆಹಾಕಲಿದೆ.
ಇದೇ ವೇಳೆ ಲೋಕೋಪಯೋಗಿ ಇಲಾಖೆಯ ಯೋಜನೆಗಳಿಂದ ಪಡೆದ ಕಿಕ್‌ಬ್ಯಾಕ್ ಹಾಗೂ ಪ್ರಮುಖ ಗುತ್ತಿಗೆ ಕಂಪನಿಗಳಿಂದ ಸ್ವೀಕರಿಸಲಾದ ಹಣದ ಮೂಲ ಮತ್ತು ವಹಿವಾಟಿನ ದಾಖಲೆಗಳನ್ನೂ ಇಡಿ ಜಾಲಾಡುತ್ತಿದೆ.
ಖುದ್ದು ಇಡಿ ನಿರ್ದೇಶಕರೇ ಕರ್ನಾಟಕಕ್ಕೆ ಭೇಟಿ ನೀಡಿರುವುದು ರಾಜ್ಯ ರಾಜಕೀಯ ಹಾಗೂ ತನಿಖಾ ವಲಯದಲ್ಲಿ ತೀವ್ರ ಕುತೂಹಲ ಮೂಡಿಸಿದೆ.
ಇನ್ನು ಸಚಿವ ಜಾರಕಿಹೊಳಿ ಪ್ರಕರಣವಷ್ಟೇ ಅಲ್ಲದೇ, ರಾಜ್ಯದಲ್ಲಿ ಸದ್ದು ಮಾಡುತ್ತಿರುವ ಇತರ ಪ್ರಮುಖ ಹಗರಣಗಳಾದ ವಾಲ್ಮೀಕಿ, ಮುಡಾ, ಕೆಪಿಎಸ್ಸಿ ಅಕ್ರಮಗಳ ಕುರಿತ ತನಿಖಾ ಪ್ರಗತಿಯನ್ನೂ ರಾಹುಲ್ ನವೀನ್ ಖುದ್ದಾಗಿ ಪರಿಶೀಲಿಸಲಿದ್ದಾರೆ.
ಸರ್ಕಾರ ಇನ್ನೂ ಮುರ್ನಾಲ್ಕು ಸಚಿವರ ಮೇಲೆ ಇಡಿ ದಾಳಿ ನಡೆಯಲಿದೆ ಎಂದಿರುವ ಸಿಎಂ ಡಿ.ಕೆ.ಶಿವಕುಮಾರ್ ಹೇಳಿಕೆ ಕೂಡ ರಾಹುಲ್ ನವೀನ್ ಎಂಟ್ರಿಯಿಂದ ಮಹತ್ವ ಪಡೆದುಕೊಂಡಿದೆ.
ವಾಲ್ಮೀಕಿ ನಿಗಮದ ಹಗರಣದಲ್ಲಿ ರಾಜ್ಯ ಸರ್ಕಾರದ ವಿಶೇಷ ತನಿಖಾ ತಂಡ ಮಾಜಿ ಸಚಿವ ಬಿ. ನಾಗೇಂದ್ರ ಅವರಿಗೆ ಕ್ಲೀನ್ ಚಿಟ್ ನೀಡಿತ್ತು. ಆದರೆ, ಕೇಂದ್ರ ತನಿಖಾ ಸಂಸ್ಥೆಗಳಾದ ಸಿಬಿಐ ಮತ್ತು ಇಡಿ ನಡೆಸಿದ ಪ್ರತ್ಯೇಕ ತನಿಖೆಯಲ್ಲಿ ನಾಗೇಂದ್ರ ಅವರೇ ಈ ಹಗರಣದ ಮುಖ್ಯ ಸೂತ್ರಧಾರಿ ಎಂದು ಆರೋಪಿಸಿ, ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದವು.
ಇದನ್ನು ಗಮನಿಸಿದರೆ, ಸಚಿವ ಸತೀಶ್ ಜಾರಕಿಹೊಳಿ ಪ್ರಕರಣದಲ್ಲೂ ಇಡಿ ಅಧಿಕಾರಿಗಳ ನಡೆ ಅತ್ಯಂತ ನಿರ್ಣಾಯಕವಾಗಿದ್ದು, ರಾಜ್ಯ ರಾಜಕಾರಣದಲ್ಲಿ ದೊಡ್ಡ ಮಟ್ಟದ ತಲ್ಲಣ ಸೃಷ್ಟಿಸುವ ಮುನ್ಸೂಚನೆ ನೀಡಿದೆ.

