ರಾಜ್ಯದ ಆರ್ಥಿಕತೆಗೆ ಎಂಎಸ್ಎಂಇಗಳೇ ಚಾಲಕ ಶಕ್ತಿ: ಡಾ. ಶಾಲಿನಿ ರಜನೀಶ್ ಹೇಳಿಕೆ
x

ರಾಜ್ಯದ ಆರ್ಥಿಕತೆಗೆ ಎಂಎಸ್ಎಂಇಗಳೇ ಚಾಲಕ ಶಕ್ತಿ: ಡಾ. ಶಾಲಿನಿ ರಜನೀಶ್ ಹೇಳಿಕೆ

ಎಂಎಸ್‌ಎಂಇಗಳು ಕೇವಲ ಆರ್ಥಿಕ ಚಟುವಟಿಕೆಗಳಲ್ಲ, ಬದಲಿಗೆ ಲಕ್ಷಾಂತರ ಕುಟುಂಬಗಳ ಬದುಕಿನ ಆಧಾರಸ್ತಂಭಗಳಾಗಿವೆ ಎಂದು ಸರ್ಕಾರದ ಮುಖ್ಯ ಕಾರ್ಯದರ್ಶಿ ಡಾ. ಶಾಲಿನಿ ರಜನೀಶ್ ಅಭಿಪ್ರಾಯಪಟ್ಟಿದ್ದಾರೆ.


Click the Play button to hear this message in audio format

ರಾಜ್ಯದ ಆರ್ಥಿಕ ಪ್ರಗತಿಯಲ್ಲಿ ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳು (ಎಂಎಸ್‌ಎಂಇ) ಮತ್ತು ಕುಟುಂಬ ಆಧಾರಿತ ಉದ್ಯಮಗಳು ವಹಿಸುತ್ತಿರುವ ಪಾತ್ರ ಅನನ್ಯ. ಇವು ಕೇವಲ ಆರ್ಥಿಕ ಚಟುವಟಿಕೆಗಳಲ್ಲ, ಬದಲಾಗಿ ಲಕ್ಷಾಂತರ ಕುಟುಂಬಗಳ ಬದುಕಿನ ಆಧಾರಸ್ತಂಭಗಳಾಗಿವೆ ಎಂದು ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಡಾ. ಶಾಲಿನಿ ರಜನೀಶ್ ಅಭಿಪ್ರಾಯಪಟ್ಟಿದ್ದಾರೆ.

ನಗರದ ಪ್ರೆಸ್ಟೀಜ್ ಟವರ್ಸ್‌ನಲ್ಲಿ ಎಫ್‌ಐಸಿಸಿಐ ಮತ್ತು ಯುಕೆ ಅಂಡ್ ಕೋ ಜಂಟಿಯಾಗಿ ಆಯೋಜಿಸಿದ್ದ ‘ಭಾರತ ಕುಟುಂಬ ಉದ್ಯಮ ಶೃಂಗಸಭೆ’ಯನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು. ಈ ಸಂದರ್ಭದಲ್ಲಿ ‘ಕರ್ನಾಟಕದ ಮುಂದಿನ ಬೆಳವಣಿಗೆಯ ಅಲೆ – ಎಸ್‌ಎಂಇ ಸಾಮರ್ಥ್ಯವನ್ನು ಅನಾವರಣಗೊಳಿಸುವುದು’ ಕುರಿತ ಸಮೀಕ್ಷಾ ವರದಿಯನ್ನು ಅವರು ಬಿಡುಗಡೆ ಮಾಡಿದರು. ಕಾರ್ಯಕ್ರಮದಲ್ಲಿ ಮಾತನಾಡಿದ ಡಾ. ಶಾಲಿನಿ ರಜನೀಶ್, "ರಾಜ್ಯದಲ್ಲಿ ಪ್ರಸ್ತುತ 50 ಲಕ್ಷಕ್ಕೂ ಹೆಚ್ಚು ನೋಂದಾಯಿತ ಎಂ.ಎಸ್.ಎಂ.ಇಗಳಿವೆ. ಇವು ಒಟ್ಟಾರೆ 2.3 ಕೋಟಿ ಜನರಿಗೆ ನೇರ ಮತ್ತು ಪರೋಕ್ಷ ಉದ್ಯೋಗಾವಕಾಶಗಳನ್ನು ಕಲ್ಪಿಸಿವೆ. ರಾಜ್ಯದ ಒಟ್ಟು ದೇಶೀಯ ಉತ್ಪನ್ನಕ್ಕೆ ಇವು ಶೇಕಡಾ 8.30ರಷ್ಟು ಕೊಡುಗೆ ನೀಡುತ್ತಿವೆ. ಗಮನಾರ್ಹ ಸಂಗತಿಯೆಂದರೆ, ಉತ್ಪಾದನಾ ವಲಯದ ಶೇಕಡಾ 45 ಮತ್ತು ಒಟ್ಟು ರಫ್ತಿನ ಶೇಕಡಾ 40ರಷ್ಟು ಪಾಲು ಈ ವಲಯದಿಂದಲೇ ಬರುತ್ತಿದೆ. ದೇಶದ ದಿಗ್ಗಜ ಕಂಪನಿಗಳ ಯಶಸ್ಸಿನ ಮೂಲ ಬೇರುಗಳು ಸಣ್ಣ ಕುಟುಂಬ ಆಧಾರಿತ ಉದ್ಯಮಗಳಲ್ಲೇ ಇವೆ" ಎಂದು ವಿವರಿಸಿದರು.

ಸರ್ಕಾರಿ ನೀತಿಗಳಿಗೆ ಉದ್ಯಮಿಗಳಿಂದ ಮೆಚ್ಚುಗೆ

ಕೈಗಾರಿಕಾ ಮತ್ತು ಸೇವಾ ವಲಯದ ಸಮೀಕ್ಷೆಯಲ್ಲಿ ಭಾಗವಹಿಸಿದ ಬಹುತೇಕ ಉದ್ಯಮಿಗಳು ಕರ್ನಾಟಕ ಸರ್ಕಾರದ ಔದ್ಯೋಗಿಕ ನೀತಿಗಳು ಮತ್ತು ಯೋಜನೆಗಳ ಬಗ್ಗೆ ಸಕಾರಾತ್ಮಕ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಸಣ್ಣ ಉದ್ಯಮಗಳಲ್ಲಿ ಪ್ರತಿಭಾ ಸಂಪನ್ಮೂಲವನ್ನು ಬಲಪಡಿಸುವುದು ಮತ್ತು ಸರ್ಕಾರಿ ಯೋಜನೆಗಳ ಕುರಿತು ಗ್ರಾಮೀಣ ಮಟ್ಟದಲ್ಲಿ ಹೆಚ್ಚಿನ ಅರಿವು ಮೂಡಿಸುವಂತೆ ಉದ್ಯಮಿಗಳು ನೀಡಿದ ಶಿಫಾರಸುಗಳನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿದ್ದು, ಅವುಗಳನ್ನು ಅನುಷ್ಠಾನಗೊಳಿಸಲು ಬದ್ಧವಾಗಿದೆ. ಜಾಗತಿಕ ಮಟ್ಟದಲ್ಲಿ ತಂತ್ರಜ್ಞಾನ ಮತ್ತು ಪೂರೈಕೆ ಸರಪಳಿ ಬದಲಾಗುತ್ತಿವೆ. ಕುಟುಂಬ ಉದ್ಯಮಗಳು ದಶಕಗಳ ಕಾಲ ಮೌಲ್ಯಗಳ ತಳಹದಿಯ ಮೇಲೆ ನಿಂತಿವೆ. ಆದರೆ, ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ಬರೀ ಹಳೆಯದನ್ನು ಉಳಿಸಿಕೊಳ್ಳುವುದಲ್ಲ, ಬದಲಾಗಿ ತಂತ್ರಜ್ಞಾನದ ಜೊತೆ ಪರಿವರ್ತನೆಗೊಳ್ಳುವುದು ಅವಶ್ಯಕ. "ಒಂದು ಪೀಳಿಗೆಯಿಂದ ಇನ್ನೊಂದು ಪೀಳಿಗೆಗೆ ಮಾಲೀಕತ್ವ ವರ್ಗಾಯಿಸುವಾಗ ಕೇವಲ ಆಸ್ತಿ ಅಥವಾ ಅಧಿಕಾರವನ್ನಷ್ಟೇ ಹಸ್ತಾಂತರಿಸಬಾರದು; ಮೌಲ್ಯ, ಜ್ಞಾನ ಮತ್ತು ಜವಾಬ್ದಾರಿಯನ್ನು ವರ್ಗಾಯಿಸಬೇಕು. ಹೊಸ ಪೀಳಿಗೆಗೆ ನವೀನತೆ ಮತ್ತು ಸೃಜನಶೀಲತೆಗೆ ಸಂಪೂರ್ಣ ಸ್ವಾತಂತ್ರ್ಯ ನೀಡಿದರೆ ಮಾತ್ರ ಉದ್ಯಮಗಳು ದೀರ್ಘಕಾಲ ಬಾಳಿಕೆ ಬರುತ್ತವೆ" ಎಂದು ಸಲಹೆ ನೀಡಿದರು.

ಮಹಿಳಾ ಉದ್ಯಮಶೀಲತೆಗೆ ಸರ್ಕಾರದ ವಿಶೇಷ ಆದ್ಯತೆ

ರಾಜ್ಯದಲ್ಲಿ ಮಹಿಳೆಯರನ್ನು ಆರ್ಥಿಕವಾಗಿ ಸಬಲರನ್ನಾಗಿ ಮಾಡಲು ಸರ್ಕಾರ ವಿಶೇಷ ಯೋಜನೆಗಳನ್ನು ರೂಪಿಸಿದೆ. ಗೃಹಲಕ್ಷ್ಮಿ ಯೋಜನೆಯಡಿ ನೀಡಲಾಗುತ್ತಿರುವ ತಿಂಗಳ 2 ಸಾವಿರ ರೂಪಾಯಿ ಪ್ರೋತ್ಸಾಹಧನವು ಸಣ್ಣ ಉದ್ಯಮಗಳಿಗೆ ಆರಂಭಿಕ ಬಂಡವಾಳವಾಗಿ ಬಳಕೆಯಾಗುತ್ತಿದೆ. ಇದರ ಜೊತೆಗೆ, 3-4 ಮಹಿಳೆಯರು ಸೇರಿ ರಚಿಸಿಕೊಳ್ಳುವ ಜಂಟಿ ಹೊಣೆಗಾರಿಕೆ ಗುಂಪುಗಳಿಗೆ ಬ್ಯಾಂಕ್‌ಗಳಿಂದ ಯಾವುದೇ ಮೇಲಾಧಾರ ಇಲ್ಲದೆ ಸಾಲ ಸೌಲಭ್ಯ ಒದಗಿಸಲಾಗುತ್ತಿದೆ. ಉಚಿತ ಸಾರ್ವಜನಿಕ ಸಾರಿಗೆ ಸೌಲಭ್ಯವು ಮಹಿಳಾ ಉದ್ಯಮಿಗಳು ತಮ್ಮ ಸರಕು ಮತ್ತು ಸೇವೆಗಳನ್ನು ಮಾರುಕಟ್ಟೆಗೆ ತಲುಪಿಸಲು ಹೆಚ್ಚಿನ ಅನುಕೂಲ ಮಾಡಿಕೊಟ್ಟಿದೆ ಎಂದು ಅವರು ವಿವರಿಸಿದರು.

ಸುಲಭ ವಹಿವಾಟು ಹಾಗೂ ಮೂಲಸೌಕರ್ಯ ಬದ್ಧತೆ

ಉದ್ಯಮಿಗಳು ಯಾವುದೇ ಅಡೆತಡೆಯಿಲ್ಲದೆ ಬೆಳೆಯಲು ಅನುಕೂಲಕರ ಪರಿಸರ ನಿರ್ಮಿಸುವುದು ಸರ್ಕಾರದ ಆದ್ಯತೆ. 'ಈಸ್ ಆಫ್ ಡೂಯಿಂಗ್ ಬಿಸಿನೆಸ್' ಅಡಿಯಲ್ಲಿ ಸರಳ ನಿಯಮಗಳು, ಮೂಲಸೌಕರ್ಯಗಳ ಬಲವರ್ಧನೆ ಮತ್ತು ಕೌಶಲ್ಯಯುತ ಮಾನವ ಸಂಪನ್ಮೂಲಗಳ ಸೃಷ್ಟಿಯ ಮೇಲೆ ಸರ್ಕಾರ ಗಮನಹರಿಸಿದೆ. ಸ್ಥಳೀಯ ಎಂ.ಎಸ್.ಎಂ.ಇಗಳನ್ನು ಜಾಗತಿಕ ಮೌಲ್ಯ ಸರಪಳಿಯೊಂದಿಗೆ ಜೋಡಿಸುವ ಮೂಲಕ ಜಾಗತಿಕ ಮಟ್ಟದ ಮಾರುಕಟ್ಟೆ ಸಿಗುವಂತೆ ಮಾಡಲಾಗುವುದು ಎಂದರು.

Read More
Next Story