
ಚರ್ಚ್‌ಗಳಲ್ಲಿ ಧರ್ಮಾಧ್ಯಕ್ಷರಿಗೆ ಕನ್ನಡ ಕಲಿಕೆ ಕಡ್ಡಾಯ ಮಾಡಿ; ಸಾಹಿತಿ ಡಾ. ಎಲ್. ಹನುಮಂತಯ್ಯ
ಅಖಿಲ ಕರ್ನಾಟಕ ಕಥೋಲಿಕ್ ಕ್ರೈಸ್ತರ ಕನ್ನಡ ಸಂಘ ಹಮ್ಮಿಕೊಂಡಿದ್ದ ಧರಣಿಯಲ್ಲಿ ಚರ್ಚ್‌ಗಳ ಆಡಳಿತ ಮತ್ತು ಪೂಜಾ ವಿಧಿವಿಧಾನಗಳಲ್ಲಿ ಕನ್ನಡಕ್ಕೆ ಮೊದಲ ಆದ್ಯತೆ ನೀಡಬೇಕು ಎಂದು ಆಗ್ರಹಿಸಲಾಗಿದೆ.
ರಾಜ್ಯದ ಮಣ್ಣಿನಲ್ಲಿ ಧರ್ಮ ಪ್ರಚಾರ ಮಾಡುವವರು ಮತ್ತು ಆಧ್ಯಾತ್ಮಿಕ ನಾಯಕತ್ವ ವಹಿಸುವವರು ಇಲ್ಲಿನ ಭಾಷೆ ಮತ್ತು ಸಂಸ್ಕೃತಿ ಗೌರವಿಸುವುದು ಶಿಷ್ಟಾಚಾರವಲ್ಲ, ಅದು ಅನಿವಾರ್ಯ. ಇತರ ರಾಜ್ಯಗಳಿಂದ ಕರ್ನಾಟಕದ ಚರ್ಚ್‌ಗಳಿಗೆ ಧರ್ಮಾಧ್ಯಕ್ಷರಾಗಿ ನೇಮಕವಾಗಿ ಬರುವವರು ಕನಿಷ್ಠ ಆರು ತಿಂಗಳ ಕಾಲ ವ್ಯವಹಾರಿಕ ಕನ್ನಡ ಕಲಿತು ಬರಬೇಕು. ಇಲ್ಲದಿದ್ದರೆ ಇಲ್ಲಿನ ಧರ್ಮಾಧ್ಯಕ್ಷರ ಸ್ಥಾನ ಅಥವಾ ಪೀಠಕ್ಕೆ ಸಲ್ಲಬೇಕಾದ ಗೌರವ ಉಳಿಯುವುದಿಲ್ಲ ಎಂದು ಸಾಹಿತಿ ಹಾಗೂ ಮಾಜಿ ಸಂಸದ ಡಾ. ಎಲ್. ಹನುಮಂತಯ್ಯ ಆಕ್ರೋಶ ವ್ಯಕ್ತಪಡಿಸಿದರು.
ಶನಿವಾರ ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಅಖಿಲ ಕರ್ನಾಟಕ ಕ್ಯಾಥೋಲಿಕ್ ಕ್ರೈಸ್ತರ ಕನ್ನಡ ಸಂಘ ಹಮ್ಮಿಕೊಂಡಿದ್ದ ಧರಣಿಯಲ್ಲಿ ಭಾಗವಹಿಸಿ ಮಾತನಾಡಿದರು. ರಾಜ್ಯದ ವಿವಿಧೆಡೆಯಿಂದ ಬಂದಿದ್ದ ನೂರಾರು ಕನ್ನಡಿಗ ಕ್ರೈಸ್ತರು, ಚರ್ಚ್‌ಗಳ ಆಡಳಿತ ಮತ್ತು ಪೂಜಾ ವಿಧಿವಿಧಾನಗಳಲ್ಲಿ ಕನ್ನಡಕ್ಕೆ ಮೊದಲ ಆದ್ಯತೆ ನೀಡಬೇಕು ಎಂದು ಘೋಷಣೆ ಕೂಗಿ ಪ್ರತಿಭಟನೆ ನಡೆಸಿದರು.
ಡಾ. ಹನುಮಂತಯ್ಯ ಅವರು ಮುಂದುವರಿದು ಮಾತನಾಡಿ, ದೇವರು ಮತ್ತು ಭಕ್ತರ ನಡುವೆ ಸಂವಾದ ನಡೆಯುವಾಗ ಅಲ್ಲಿ ಭಾಷೆಯ ಕಂದಕವಿರಬಾರದು. ಪ್ರಪಂಚದ ಯಾವುದೇ ಧರ್ಮವಿರಲಿ, ಅದರ ಮೂಲಭೂತ ತತ್ವವೆಂದರೆ ದೇವರು ಮತ್ತು ಭಕ್ತರ ನಡುವಿನ ಸಂವಹನ. ಇದು ಇಬ್ಬರಿಗೂ ತಿಳಿದಿರುವ ಅಥವಾ ಅರ್ಥವಾಗುವ ಭಾಷೆಯಲ್ಲೇ ನಡೆಯಬೇಕು. ಭಕ್ತರಿಗೆ ಅರ್ಥವಾಗದ ಭಾಷೆಯಲ್ಲಿ ಧರ್ಮಗುರುಗಳು ಬೋಧನೆ ಮಾಡಿದರೆ, ಅದು ಕೇವಲ ಯಾಂತ್ರಿಕ ಪ್ರಕ್ರಿಯೆಯಾಗಲಿದೆಯೇ ಹೊರತು ಆಧ್ಯಾತ್ಮಿಕ ಅನುಸಂಧಾನವಾಗಲಾರದು. ಇದು ಅತ್ಯಂತ ಸರಳ ಸತ್ಯವಾಗಿದ್ದು, ಇದನ್ನು ಅರ್ಥಮಾಡಿಕೊಳ್ಳಲು ಪಾಂಡಿತ್ಯದ ಅಗತ್ಯವಿಲ್ಲ ಎಂದರು.
ನಾವು ವ್ಯಾಟಿಕನ್ ನಗರಕ್ಕೆ ಹೋಗಿ ಅಲ್ಲಿನ ಪೋಪ್ ಅಥವಾ ಆಡಳಿತಗಾರರನ್ನು ಕನ್ನಡದವರನ್ನೇ ನೇಮಿಸಿ ಎಂದು ಕೇಳುತ್ತಿಲ್ಲ. ನಮ್ಮ ಬೇಡಿಕೆ ಇರುವುದು ನಮ್ಮ ನೆಲದ ಬಗ್ಗೆ ಮಾತ್ರ. ಬೆಂಗಳೂರು ಸೇರಿದಂತೆ ರಾಜ್ಯದಾದ್ಯಂತ ಇರುವ ಚರ್ಚ್‌ಗಳಲ್ಲಿ ಕನ್ನಡದವರನ್ನೇ ಧರ್ಮಾಧ್ಯಕ್ಷರನ್ನಾಗಿ ನೇಮಕ ಮಾಡಿ ಎಂದು ಕೇಳುತ್ತಿದ್ದೇವೆ. ಇದು ನಮ್ಮ ಸಾಂವಿಧಾನಿಕ ಮತ್ತು ಪ್ರಾದೇಶಿಕ ಹಕ್ಕು. ನಮ್ಮ ನೆಲದ ಭಾಷೆಯನ್ನು ಆಡಳಿತದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಕೇಳುವುದರಲ್ಲಿ ಯಾವುದೇ ತಪ್ಪು ಇಲ್ಲ. ಈ ನ್ಯಾಯಯುತ ಬೇಡಿಕೆಯನ್ನು ಸುಪ್ರೀಂಕೋರ್ಟ್ ಸಹ ವಿರೋಧಿಸಲು ಸಾಧ್ಯವಿಲ್ಲ ಎಂದು ಪ್ರತಿಪಾದಿಸಿದರು.
ಕನ್ನಡ ಸಾಹಿತ್ಯ ಚರಿತ್ರೆಯನ್ನು ಗಮನಿಸಿದರೆ ಕ್ರೈಸ್ತರ ಕೊಡುಗೆ ಅಪಾರವಾದುದು. ರೆವರೆಂಡ್ ಫರ್ಡಿನೆಂಡ್ ಕಿಟ್ಟಲ್ ಅವರು ಕನ್ನಡಕ್ಕೆ ಬೃಹತ್ ನಿಘಂಟನ್ನು ನೀಡುವ ಮೂಲಕ ಭಾಷೆಯ ಶ್ರೀಮಂತಿಕೆಯನ್ನು ಜಗತ್ತಿಗೆ ಪರಿಚಯಿಸಿದರು. ಕ್ರೈಸ್ತ ಮಿಷನರಿಗಳು ರಾಜ್ಯದ ಮೂಲೆ ಮೂಲೆಗಳಲ್ಲಿ ಶಾಲೆಗಳನ್ನು ಸ್ಥಾಪಿಸಿ, ಅಂಚಿನಲ್ಲಿರುವ ಸಮುದಾಯಗಳಿಗೆ ಶಿಕ್ಷಣ ನೀಡಿದರು. ವಿಶೇಷವಾಗಿ ಸ್ಥಳೀಯ ಭಾಷೆಯಲ್ಲಿಯೇ ಶಿಕ್ಷಣ ನೀಡಬೇಕು ಎಂಬ ತತ್ವವನ್ನು ಅಂದೇ ಅವರು ಅಳವಡಿಸಿಕೊಂಡಿದ್ದರು. ಆದರೆ, ಇಂದು ಚರ್ಚ್‌ನ ಅತ್ಯುನ್ನತ ಸ್ಥಾನದಲ್ಲಿರುವ ಧರ್ಮಾಧ್ಯಕ್ಷರಿಗೆ ಈ ಮೂಲ ತತ್ವ ಏಕೆ ಅರ್ಥವಾಗುತ್ತಿಲ್ಲ? ಎಂದು ಕಿಡಿಕಾರಿದರು.
ಸಮಸ್ಯೆಗಳಿದ್ದರೆ ನಿವಾರಿಸಲು ಸಿದ್ಧ
ಕನ್ನಡ ಭಾಷೆಯಲ್ಲಿ ಒಂದು ವೇಳೆ ತೊಡಕುಗಳಿದ್ದರೆ ಅಥವಾ ಕಲಿಕೆಯಲ್ಲಿ ಸಮಸ್ಯೆಗಳಿದ್ದರೆ ಅದನ್ನು ನಿವಾರಿಸಲು ಸಾಹಿತ್ಯ ಪರಿಷತ್ತು, ಸರ್ಕಾರದ ಕನ್ನಡ ಅಭಿವೃದ್ಧಿ ಪ್ರಾಧಿಕಾರ ಮತ್ತು ಅನೇಕ ಕನ್ನಡ ಪರ ಸಂಸ್ಥೆಗಳು ಸದಾ ಸಿದ್ಧವಾಗಿವೆ. ಹೀಗಿದ್ದರೂ ಕನ್ನಡ ಕಲಿಯಲು ಅಥವಾ ಕನ್ನಡದವರನ್ನು ನೇಮಿಸಲು ಹಿಂದೇಟು ಹಾಕುತ್ತಿರುವುದು ಸರಿಯಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ನಗರದಲ್ಲಿ ಇಂದು ಅನ್ಯ ಭಾಷಿಗರು ಕನ್ನಡದ ಜಾಗವನ್ನು ಆಕ್ರಮಿಸಿಕೊಳ್ಳುತ್ತಿದ್ದಾರೆ. ಅನ್ನ ಮತ್ತು ಕೆಲಸ ಹುಡುಕಿಕೊಂಡು ನಗರಕ್ಕೆ ಬರುತ್ತಿರುವ ಹಿಂದಿ ವಲಸಿಗರ ಸಂಖ್ಯೆ ಹೆಚ್ಚಾಗುತ್ತಿದೆ. ಬಂದವರಲ್ಲಿ ಕೆಲವರು ಮಣ್ಣಿನ ಭಾಷೆಯನ್ನು ಕಲಿತು ನಮ್ಮೊಂದಿಗೆ ಬೆರೆಯುತ್ತಿದ್ದಾರೆ, ಇದು ಸ್ವಾಗತಾರ್ಹ. ಆದರೆ, ಇನ್ನೂ ಅನೇಕರು ಕನ್ನಡ ಕಲಿಯುವ ಮನಸ್ಸು ಮಾಡದೆ ಹಿಂದಿಯನ್ನೇ ಇಲ್ಲಿ ಹೇರಲು ಪ್ರಯತ್ನಿಸುತ್ತಿದ್ದಾರೆ. ಕೇಂದ್ರ ಸರ್ಕಾರವೂ ಸೇರಿದಂತೆ ಪ್ರಭುತ್ವವು ಹಿಂದಿ ಹೇರಿಕೆಯನ್ನು ವ್ಯವಸ್ಥಿತವಾಗಿ ಮಾಡುತ್ತಿದೆ. ನಮ್ಮ ಭಾಷಾ ಅಸ್ಮಿತೆಯನ್ನು ಉಳಿಸಿಕೊಳ್ಳಲು ಈ ಹಿಂದಿ ಹೇರಿಕೆಯನ್ನು ನಾವು ತೀವ್ರವಾಗಿ ವಿರೋಧಿಸಲೇಬೇಕು ಎಂದು ಹೇಳಿದರು.
ಸಂಘದ ಅಧ್ಯಕ್ಷ ಎ. ಐಸಾಕ್ ಅವರು ಮಾತನಾಡಿ, ಎರಡನೇ ವಾಟಿಕನ್ ಕೌನ್ಸಿಲ್ ನೀಡಿದ ಸೂಚನೆಯಂತೆ, ಪ್ರಾದೇಶಿಕ ಭಾಷೆಯೇ ಪೂಜಾ ವಿಧಿಯ ಮುಖ್ಯ ಭಾಷೆಯಾಗಬೇಕು. ಅದರಂತೆ ಕರ್ನಾಟಕದ ಚರ್ಚ್‌ಗಳಲ್ಲಿ ಕನ್ನಡವನ್ನು ಪ್ರಾಂತೀಯ ಭಾಷೆಯಾಗಿ ಪರಿಗಣಿಸಿ ಎಲ್ಲಾ ಪೂಜೆಗಳನ್ನು ಕನ್ನಡದಲ್ಲೇ ನಡೆಸಬೇಕು. ಕನ್ನಡದ ಸಂಸ್ಕೃತಿ ಮತ್ತು ಭಾಷೆಯ ತಿಳುವಳಿಕೆ ಇರುವ ಧರ್ಮಗುರುಗಳನ್ನು ಸಿದ್ಧಪಡಿಸಲು ಪ್ರತ್ಯೇಕ ಪ್ರಾದೇಶಿಕ ಗುರುಮಠಗಳನ್ನು ಸ್ಥಾಪಿಸಬೇಕು. ಬೆಂಗಳೂರಿನ ಸಂತ ಪೇತ್ರರ ಗುರುಮಂದಿರದ ಸಂಪೂರ್ಣ ಆಡಳಿತವನ್ನು ಕರ್ನಾಟಕದ ಧರ್ಮಾಧ್ಯಕ್ಷರಿಗೇ ಮೀಸಲಿಡಬೇಕು. ಇಲ್ಲಿ ಅನ್ಯ ರಾಜ್ಯದವರ ಹಸ್ತಕ್ಷೇಪ ನಿಲ್ಲಬೇಕು. ಧರ್ಮಾಧ್ಯಕ್ಷರ ನೇಮಕಾತಿಯಲ್ಲಿ ಕನ್ನಡ ಭಾಷೆ ಮತ್ತು ಸಂಸ್ಕೃತಿಯ ಅರಿವಿರುವ ಕನ್ನಡಿಗರಿಗೇ ಮೊದಲ ಆದ್ಯತೆ ನೀಡಬೇಕು ಎಂದು ಆಗ್ರಹಿಸಿದರು.
ಡಾ. ರಾಜ್‌ಕುಮಾರ್ ಅಭಿಮಾನಿಗಳ ಸಂಘದ ಅಧ್ಯಕ್ಷರಾದ ಸಾ.ರಾ. ಗೋವಿಂದ್ ಮಾತನಾಡಿ, ಕನ್ನಡದ ನೆಲದಲ್ಲಿ ಕನ್ನಡವೇ ಮೊದಲು ಎಂಬ ತತ್ವವನ್ನು ಚರ್ಚ್‌ಗಳು ಪಾಲಿಸಬೇಕು. ಧಾರ್ಮಿಕ ಸಂಸ್ಥೆಗಳು ಭಾಷಾ ಸೌಹಾರ್ದತೆಯನ್ನು ಕಾಪಾಡುವಲ್ಲಿ ಮಾದರಿಯಾಗಬೇಕು ಎಂದು ಹೇಳಿದರು.

