ಅಂತಾರಾಷ್ಟ್ರೀಯ ಗ್ಯಾಂಗ್‌ಸ್ಟರ್‌ ಜೊತೆ ನಂಟು; ದೊಡ್ಡಬಳ್ಳಾಪುರದಲ್ಲಿ ಯುವಕನ ಬಂಧನ
x

ಅಂತಾರಾಷ್ಟ್ರೀಯ ಗ್ಯಾಂಗ್‌ಸ್ಟರ್‌ ಜೊತೆ ನಂಟು; ದೊಡ್ಡಬಳ್ಳಾಪುರದಲ್ಲಿ ಯುವಕನ ಬಂಧನ

ಪೊಲೀಸರು ಆರೋಪಿಯ ಮೊಬೈಲ್ ಫೋನ್ ವಶಪಡಿಸಿಕೊಂಡು ಪರಿಶೀಲಿಸಿದಾಗ, ಅದರಲ್ಲಿ ವಿವಿಧ ನಮೂನೆಯ ಬಂದೂಕು ಮತ್ತು ಪಿಸ್ತೂಲ್‌ಗಳ ನೂರಾರು ಫೋಟೋಗಳು ಕೂಡ ಕಂಡುಬಂದಿವೆ.


ಸಾಮಾಜಿಕ ಜಾಲತಾಣಗಳ ಮೂಲಕ ಸಮಾಜಘಾತುಕ ಹಾಗೂ ಅಂತಾರಾಷ್ಟ್ರೀಯ ಗ್ಯಾಂಗ್‌ಸ್ಟರ್‌ಗಳೊಂದಿಗೆ ನಂಟು ಹೊಂದಿದ್ದ ಆರೋಪದ ಮೇಲೆ ದೊಡ್ಡಬಳ್ಳಾಪುರ ನಗರದ ಇಸ್ಲಾಂಪುರ ನಿವಾಸಿ ಸೈಯದ್ ಅಬೂಬಕರ್ (28) ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ನಗರ ಇಸ್ಲಾಂಪುರದಲ್ಲಿ ಗುಪ್ತಚರ ಸಿಬ್ಬಂದಿಗೆ ದೊರೆತ ಮಾಹಿತಿ ಆಧರಿಸಿ ಆರೋಪಿಯನ್ನು ಕರೆತಂದು ವಿಚಾರಣೆ ನಡೆಸಿದಾಗ ಸ್ಫೋಟಕ ಸಂಗತಿ ಬಯಲಾಗಿದೆ. ಆರೋಪಿಯನ್ನು ದೊಡ್ಡಬಳ್ಳಾಪುರ ನಗರ ಠಾಣೆ ಪೊಲೀಸರು ವಶಕ್ಕೆ ಪಡೆದು, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

ಅನುಮಾನಾಸ್ಪದ ಚಟುವಟಿಕೆ

ಆರೋಪಿ ಸೈಯದ್ ಅಬೂಬಕರ್ ವೃತ್ತಿಯಲ್ಲಿ ಎಸಿ ಮೆಕ್ಯಾನಿಕ್ ಆಗಿ ಕೆಲಸ ಮಾಡುತ್ತಿದ್ದು, ಈತ ತನ್ನ ಇನ್‌ಸ್ಟಾಗ್ರಾಂನಲ್ಲಿ sayedabudakar313 ಎಂಬ ಖಾತೆ ಬಳಸುತ್ತಿದ್ದ. ಇನ್‌ಸ್ಟಾಗ್ರಾಂನಲ್ಲಿ Hammadmemon333 ಎಂಬ ಅಂತಾರಾಷ್ಟ್ರೀಯ ಖಾತೆಯಿಂದ ಪೋಸ್ಟ್ ಆಗುತ್ತಿದ್ದ ಗ್ಯಾಂಗ್‌ಸ್ಟರ್‌ಗಳಿಗೆ ಸಂಬಂಧಿಸಿದ ವೀಡಿಯೊ ರೀಲ್ಸ್‌ಗಳಿಗೆ ಆರೋಪಿ ಸತತ 'ಲೈಕ್' ಮಾಡುತ್ತಿದ್ದ. ಅಲ್ಲದೇ ಆ ವೀಡಿಯೊಗಳನ್ನು ತನ್ನ ಸ್ವಂತ ಖಾತೆಯಲ್ಲಿ ಸ್ಟೇಟಸ್ ಹಾಗೂ ಸ್ಟೋರಿಗಳನ್ನಾಗಿ ಹಾಕಿಕೊಳ್ಳುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ಪೊಲೀಸರು ಆರೋಪಿಯ ಮೊಬೈಲ್ ಫೋನ್ ವಶಪಡಿಸಿಕೊಂಡು ಪರಿಶೀಲಿಸಿದಾಗ, ಅದರಲ್ಲಿ ವಿವಿಧ ನಮೂನೆಯ ಬಂದೂಕು ಮತ್ತು ಪಿಸ್ತೂಲ್‌ಗಳ ನೂರಾರು ಫೋಟೋಗಳು ಕೂಡ ಕಂಡುಬಂದಿವೆ.

ದೇಶವಿರೋಧಿ ಕೃತ್ಯದ ಶಂಕೆ

ಆರೋಪಿಗೆ ಬಂದೂಕುಗಳ ಮೇಲೆ ತೀವ್ರ ಆಸಕ್ತಿ ಇರುವುದು ಕಂಡುಬಂದಿದ್ದು, ಮುಂದಿನ ದಿನಗಳಲ್ಲಿ ದೇಶದ ಸಾರ್ವಭೌಮತ್ವಕ್ಕೆ ಧಕ್ಕೆ ತರುವ ಯುವಕರನ್ನು ದೇಶವಿರೋಧಿ ಕೃತ್ಯಗಳಿಗೆ ಪ್ರಚೋದಿಸುವ ಅಥವಾ ಸಮಾಜದ ಶಾಂತಿ ಕದಡುವ ಕೃತ್ಯಗಳಲ್ಲಿ ಭಾಗಿಯಾಗುವ ಸಾಧ್ಯತೆಯಿದೆ ಎಂದು ಪೊಲೀಸರು ಸಂಶಯ ವ್ಯಕ್ತಪಡಿಸಿದ್ದಾರೆ. ಈ ಹಿನ್ನೆಲೆ ದೊಡ್ಡಬಳ್ಳಾಪುರ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Read More
Next Story