
ಜೆಜೆಎಂ ಯೋಜನೆಯಲ್ಲಿ ‘ತೆಲಗಿ ಮಾದರಿ’ ನಕಲಿ ಸ್ಟಾಂಪ್ ದಂಧೆ: ಸಿಬಿಐ ತನಿಖೆಗೆ ಬಿಜೆಪಿ ಆಗ್ರಹ
ಶೃಂಗೇರಿ ಕ್ಷೇತ್ರದಲ್ಲಿ ಒಂದೇ ನಂಬರಿನ ಸ್ಟಾಂಪ್ ಪೇಪರ್ ಬಳಸಲಾಗಿದೆ. ಕೇಂದ್ರ ಕೋಟ್ಯಂತರ ರೂ. ಅನುದಾನ ನೀಡಿದರೂ ಒಂದೇ ಒಂದು ಮನೆಗೆ ನೀರು ಹರಿದಿಲ್ಲ ಎಂದು ಮಾಜಿ ಸಚಿವ ಡಿ.ಎನ್.ಜೀವರಾಜ್ ಕಿಡಿಕಾರಿದ್ದಾರೆ.
ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆಯ ಯೋಜನೆಯಾದ ಜಲಜೀವನ್ ಮಿಷನ್ (ಜೆಜೆಎಂ) ಯೋಜನೆಯಲ್ಲಿ ಬೃಹತ್ ಹಗರಣದ ಆರೋಪ ಕೇಳಿಬಂದಿದೆ. ನಕಲಿ ಛಾಪಾ ಕಾಗದ ಬಳಸಿ ಕೋಟ್ಯಂತರ ರೂಪಾಯಿ ಲೂಟಿ ಮಾಡಿರುವ ಆರೋಪಕ್ಕೆ ಸಂಬಂಧಿಸಿದಂತೆ ಸಿಬಿಐ ತನಿಖೆ ನಡೆಸುವಂತೆ ಬಿಜೆಪಿ ಒತ್ತಾಯಿಸಿದೆ.
ಶೃಂಗೇರಿ ವಿಧಾನಸಭಾ ಕ್ಷೇತ್ರದಲ್ಲಿ ಜಲಜೀವನ್ ಮಿಷನ್ ಯೋಜನೆಯಲ್ಲಿ ಕೋಟ್ಯಂತರ ರೂ. ಕಮಿಷನ್ ಪಡೆಯಲಾಗಿದೆ. ಇದಕ್ಕಾಗಿ ನಕಲಿ ಛಾಪಾ ಕಾಗದಗಳನ್ನು ಬಳಸಲಾಗಿದೆ ಎಂದು ಮಾಜಿ ಸಚಿವ ಡಿ.ಎನ್. ಜೀವರಾಜ್ ಗಂಭೀರ ಆರೋಪ ಮಾಡಿದ್ದಾರೆ.
ಬೆಂಗಳೂರಿನ ಮಲ್ಲೇಶ್ವರಂನ ಬಿಜೆಪಿ ರಾಜ್ಯ ಕಾರ್ಯಾಲಯ ‘ಜಗನ್ನಾಥ ಭವನ’ದಲ್ಲಿ ಬುಧವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಭ್ರಷ್ಟಾಚಾರ ಆರೋಪಕ್ಕೆ ಸಂಬಂಧಿಸಿ ದಾಖಲೆ ಬಿಡುಗಡೆ ಮಾಡಿದ್ದಾರೆ.
ತೆಲಗಿ ಮಾದರಿ ಹಗರಣ
ಅಬ್ದುಲ್ ಕರೀಂಲಾಲ್ ತೆಲಗಿ ವಿರುದ್ಧದ ಛಾಪಾ ಕಾಗದ ಹಗರಣದ ಮಾದರಿಯಲ್ಲೇ ಜಲಜೀವನ್ ಮಿಷನ್ ಯೋಜನೆಯಲ್ಲಿ ದೊಡ್ಡ ಮಟ್ಟದ ಕ್ರಿಮಿನಲ್ ಚಟುವಟಿಕೆಗಳು ನಡೆದಿವೆ. ಸರ್ಕಾರವು ಇ-ಸ್ಟಾಂಪಿಂಗ್ ವ್ಯವಸ್ಥೆ ಜಾರಿಗೆ ತಂದಿದ್ದು, ಅದರಲ್ಲಿ ಕ್ಯೂಆರ್ ಕೋಡ್ ಮತ್ತು ವಿಶಿಷ್ಟ ಸಂಖ್ಯೆ ಇರುತ್ತದೆ. ಆದರೆ, ಶೃಂಗೇರಿ ಕ್ಷೇತ್ರದ ಎನ್.ಆರ್. ಪುರ ಮತ್ತು ಕೊಪ್ಪ ತಾಲೂಕುಗಳಲ್ಲಿ ಜಿಲ್ಲಾ ಪಂಚಾಯತ್ ಜೊತೆ ಮಾಡಿಕೊಂಡ ಒಪ್ಪಂದಗಳಲ್ಲಿ ಒಂದೇ ನಂಬರಿನ ಸ್ಟಾಂಪ್ ಪೇಪರ್‌ಗಳನ್ನು ಬಳಸಲಾಗಿದೆ ಎಂದು ಮಾಜಿ ಸಚಿವ ಡಿ.ಎನ್. ಜೀವರಾಜ್ ಆರೋಪಿಸಿದ್ದಾರೆ.
INKA 76845429815984 W ಎಂಬ ಸಂಖ್ಯೆಯ ಸ್ಟಾಂಪ್ ಪೇಪರ್ ಅಡಿಯಲ್ಲಿ ಒಂದೇ ದಿನ ಒಂದೇ ಸಮಯಕ್ಕೆ ಹಲವು ಒಪ್ಪಂದಗಳು ನಡೆದಿವೆ. ಪರಿಶೀಲಿಸಿದ ಕೇವಲ 30 ಒಪ್ಪಂದಗಳಲ್ಲೇ ಇಷ್ಟು ದೊಡ್ಡ ಮಟ್ಟದ ನಕಲಿ ದಂಧೆ ಪತ್ತೆಯಾಗಿದೆ. ಇನ್ನು ಪೂರ್ಣ ಪ್ರಮಾಣದ ತನಿಖೆ ನಡೆದರೆ ಸಾವಿರಾರು ಕೋಟಿ ಹಗರಣ ಬಯಲಾಗಬಹುದು. ಕೆಲವು ಪೇಪರ್‌ಗಳನ್ನು ಸ್ಕ್ಯಾನ್ ಮಾಡಿದರೆ ಅವು ಅಸಲಿ ಅಲ್ಲ ಎಂಬ ಮಾಹಿತಿ ಬರುತ್ತಿದೆ. ಕ್ಷೇತ್ರದ ಹಲವೆಡೆ ಬೋರ್‌ವೆಲ್ ಕೊರೆಯದೆಯೇ ಹಣ ಲೂಟಿ ಮಾಡಲಾಗಿದೆ. ಬಲಗಾರು ಗ್ರಾಮ ಪಂಚಾಯಿತಿಯಲ್ಲಿ ಬೋರ್‌ವೆಲ್ ಇಲ್ಲದಿದ್ದರೂ 1.49 ಲಕ್ಷ ರೂ. ಬಿಲ್ ಮಾಡಲಾಗಿದೆ. ಗೌರಿಹಳ್ಳದಲ್ಲಿಯೂ ಇದೇ ರೀತಿ 1.38 ಲಕ್ಷ ರೂ. ಬಿಲ್ ಎತ್ತಲಾಗಿದೆ. ಅಷ್ಟೇ ಅಲ್ಲದೆ, ಕೊರೆಸಿದ ಬೋರ್‌ವೆಲ್‌ಗಳ ಆಳದ ವಿಚಾರದಲ್ಲೂ ಭಾರೀ ವಂಚನೆ ನಡೆದಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕೊಳವೆಬಾವಿ, ಓವರ್ ಹೆಡ್ ಟ್ಯಾಂಕ್ ನಿರ್ಮಾಣದಲ್ಲೂ ಮೋಸ
ತಮ್ಮ ಸ್ವಂತ ಖರ್ಚಿನಲ್ಲಿ ಕ್ಯಾಮೆರಾ ಬಳಸಿ 10 ಕೊಳವೆಬಾವಿಗಳ ಆಳವನ್ನು ತಪಾಸಣೆ ಮಾಡಿಸಲಾಗಿದೆ. ಕೊಪ್ಪ ತಾಲೂಕಿನ ಕಡೇಗದ್ದೆ ತಳಮಕ್ಕಿಯಲ್ಲಿ ಕೇವಲ 228 ಅಡಿ ಆಳವಿರುವ ಕೊಳವೆಬಾವಿಗೆ 587 ಅಡಿ ಎಂದು ತೋರಿಸಿ ಬಿಲ್ ಪಡೆಯಲಾಗಿದೆ. ಮತ್ತೊಂದು ಕಡೆ 260 ಅಡಿ ಆಳಕ್ಕೆ 587 ಅಡಿ ಬಿಲ್ ಮಾಡಲಾಗಿದೆ. ಇದು ನೇರವಾಗಿ ಸರ್ಕಾರದ ಬೊಕ್ಕಸಕ್ಕೆ ಮಾಡುತ್ತಿರುವ ದ್ರೋಹ ಎಂದು ಕಿಡಿಕಾರಿದ್ದಾರೆ.
ಈ ಹಗರಣವು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ ಅವರ ಇಲಾಖೆಯಡಿ ಬರಲಿದೆ. ಶೃಂಗೇರಿ ಶಾಸಕರ ಕೃಪಾಶೀರ್ವಾದದಿಂದಲೇ ಈ ಹಗರಣ ನಡೆಯುತ್ತಿದೆ. ಶಾಸಕರ ಎಡ-ಬಲದಲ್ಲಿರುವವರೇ ಈ ದಂಧೆಯ ಹಿಂದಿದ್ದಾರೆ ಎಂಬುದು ಸಾರ್ವಜನಿಕವಾಗಿ ಚರ್ಚೆಯಾಗುತ್ತಿದೆ. ಕಾಂಗ್ರೆಸ್ ಜಿಲ್ಲಾಧ್ಯಕ್ಷ ಅಂಶುಮಂತ್ ಅವರೇ ಕೆಡಿಪಿ ಸಭೆಯಲ್ಲಿ ಜೆಜೆಎಂ ಯೋಜನೆಯಲ್ಲಿ ಮೋಸ ನಡೆಯುತ್ತಿದೆ ಎಂಬುದಾಗಿ ಎಚ್ಚರಿಸಿದ್ದರು. ಜಿಲ್ಲಾ ಪಂಚಾಯಿತಿ ಸದಸ್ಯ ಎಚ್.ಎಂ. ಸತೀಶ್ ಕೂಡ ಈ ಬಗ್ಗೆ ಸಾರ್ವಜನಿಕವಾಗಿ ಧ್ವನಿ ಎತ್ತಿದ್ದಾರೆ. ಅಂದರೆ, ಈ ಹಗರಣ ಸ್ವತಃ ಕಾಂಗ್ರೆಸ್ ನಾಯಕರಿಗೂ ತಿಳಿದಿದೆ ಎಂದು ಜೀವರಾಜ್ ಹೇಳಿದ್ದಾರೆ.
ಕೇವಲ ಬೋರ್‌ವೆಲ್ ಅಷ್ಟೇ ಅಲ್ಲದೆ, ಪೈಪ್‌ಲೈನ್ ಅಳವಡಿಕೆ ಮತ್ತು ಓವರ್ ಹೆಡ್ ಟ್ಯಾಂಕ್ ನಿರ್ಮಾಣದಲ್ಲೂ ಭಾರೀ ಅವ್ಯವಹಾರ ನಡೆದಿದೆ. ನಿಗದಿತ ಆಳದ ಕಾಲುವೆ ತೋಡದೆ, ಕಳಪೆ ಗುಣಮಟ್ಟದ ಪೈಪ್‌ಗಳನ್ನು ಬಳಸಲಾಗಿದೆ. ಇದರಿಂದಾಗಿ ಕೇಂದ್ರ ಸರ್ಕಾರ 150 ಕೋಟಿ ರೂ.ಗೂ ಹೆಚ್ಚು ಹಣ ನೀಡಿದ್ದರೂ ಒಂದೇ ಒಂದು ಮನೆಗೆ ಸಮರ್ಪಕವಾಗಿ ನೀರು ತಲುಪಿಲ್ಲ ಎಂದು ದೂರಿದ್ದಾರೆ.
ಇದು ಕೇವಲ ಆಡಳಿತಾತ್ಮಕ ಲೋಪವಲ್ಲ, ಇದೊಂದು ವ್ಯವಸ್ಥಿತ ಕ್ರಿಮಿನಲ್ ಸಂಚು ಆಗಿದೆ. ಸ್ಥಳೀಯ ಅಧಿಕಾರಿಗಳಿಂದ ತನಿಖೆ ನಡೆಸಿದರೆ ಇದನ್ನು ಮುಚ್ಚಿಹಾಕುವ ಸಾಧ್ಯತೆ ದಟ್ಟವಾಗಿದೆ. ಆದ್ದರಿಂದ, ಸರ್ಕಾರ ಕೂಡಲೇ ಈ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಬೇಕು ಎಂದು ಒತ್ತಾಯಿಸಿದ್ದಾರೆ.

