ಅತೃಪ್ತ ಶಾಸಕರಿಗೆ ಡಿಕೆಶಿ ವಾರ್ನಿಂಗ್; ʼಕೈʼ ಕಮಾಂಡ್‌ನಿಂದ ಸ್ಪೀಕರ್ ಹೆಸರು; ಆಕ್ಷೇಪ; ಬೆಂಗಳೂರಿನಲ್ಲಿ ನ್ಯಾನೋ ಕ್ರಾಂತಿ
ಶಾಸಕರು ರಾಜೀನಾಮೆ ಕೊಟ್ಟರೆ ಆಂಗೀಕಾರ- ಸಿಎಂ ಡಿಕೆಶಿ; ಸ್ಪೀಕರ್ ಹೆಸರು - ಕಾಂಗ್ರೆಸ್‌ನಿಂದ ನಿಯಮ ಉಲ್ಲಂಘನೆ? 'ಬೆಂಗಳೂರು ಇಂಡಿಯಾ ನ್ಯಾನೋ'ಗೆ ಸಿಎಂ ಚಾಲನೆ
ರಾಜ್ಯ ಕಾಂಗ್ರೆಸ್ ಸರ್ಕಾರದಲ್ಲಿ ಸಂಪುಟ ರಚನೆ ಕಸರತ್ತು ಮುಗಿಯುತ್ತಿದ್ದಂತೆಯೇ, ಆಂತರಿಕ ಭಿನ್ನಮತದ ಅಲೆಗಳು ಜೋರಾಗಿವೆ. ಸಚಿವ ಪದವಿ ಕೈತಪ್ಪಿದ ಕೆಲ ಶಾಸಕರು ತಮ್ಮ ಅಸಮಾಧಾನವನ್ನು ಬಹಿರಂಗಪಡಿಸಿ, ರಾಜೀನಾಮೆ ನೀಡುವುದಾಗಿ ಎಂದು ಬೆದರಿಕೆ ಹಾಕುತ್ತಿರುವ ಹಿನ್ನೆಲೆಯಲ್ಲಿ, ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಅಸಮಾಧಾನಿತರಿಗೆ ಬಿಸಿ ಮುಟ್ಟಿಸಿದ್ದಾರೆ. ರಾಜೀನಾಮೆ ನೀಡಲು ಬಂದರೆ ತಡಮಾಡದೆ ಕೂಡಲೇ ಅಂಗೀಕರಿಸುತ್ತೇನೆ ಎಂದು ಹೇಳುವ ಮೂಲಕ ಸಿಎಂ ತಮ್ಮ ಆಡಳಿತದ ಶಿಸ್ತನ್ನು ಪ್ರದರ್ಶಿಸಿದ್ದಾರೆ. ಪಕ್ಷದ ಅಧಿಕಾರವನ್ನು ಅನುಭವಿಸುವಾಗ ನಿಯಮಗಳನ್ನು ಪಾಲಿಸಬೇಕು, ಆದರೆ ಆಕಾಂಕ್ಷೆಗಳು ಈಡೇರದಿದ್ದಾಗ ರಾಜೀನಾಮೆಯ ಅಸ್ತ್ರ ಬಳಸುವುದು ಅಕ್ಷಮ್ಯ ಎಂದು ಖಡಕ್ ಆಗಿ ನುಡಿದಿದ್ದಾರೆ.
ಇದೇ ವೇಳೆ ಪಕ್ಷದ ಹಿರಿಯ ನಾಯಕರ ಕಾಲದ ರಾಜಕೀಯವನ್ನು ಉಲ್ಲೇಖಿಸಿ, "ವೀರೇಂದ್ರ ಪಾಟೀಲ್, ಎಸ್. ಬಂಗಾರಪ್ಪ, ಮಲ್ಲಿಕಾರ್ಜುನ ಖರ್ಗೆ ಮತ್ತು ಧರಂ ಸಿಂಗ್ ಅವರಂತಹ ದಿಗ್ಗಜರ ಕಾಲದಲ್ಲಿಯೂ ಅನೇಕರಿಗೆ ಸಚಿವ ಸ್ಥಾನ ಸಿಕ್ಕಿರಲಿಲ್ಲ. ಸ್ವತಃ ನನಗೂ ಮತ್ತು ಡಾ. ಜಿ. ಪರಮೇಶ್ವರ್ ಅವರಿಗೂ ಹಲವು ಬಾರಿ ಮಂತ್ರಿ ಸ್ಥಾನ ಕೈತಪ್ಪಿದೆ. ಆಗ ನಾವು ಪಕ್ಷದ ವಿರುದ್ಧ ಬಂಡಾಯವೇಳಲಿಲ್ಲ ಅಥವಾ ಸರ್ಕಾರಕ್ಕೆ ತೊಂದರೆ ನೀಡಲಿಲ್ಲ. ಪಕ್ಷದ ಶಿಸ್ತಿಗೆ ಬದ್ಧರಾಗಿ ಕೆಲಸ ಮಾಡಿದ್ದರಿಂದಲೇ ಇಂದು ಈ ಮಟ್ಟಕ್ಕೆ ಬೆಳೆಯಲು ಸಾಧ್ಯವಾಯಿತು" ಎಂದು ತಮ್ಮ ಹಳೆಯ ದಿನಗಳನ್ನು ನೆನಪಿಸಿಕೊಂಡರು. ಹಿರಿಯರ ಅನುಭವವನ್ನು ಪಾಠವನ್ನಾಗಿ ಸ್ವೀಕರಿಸಬೇಕೆಂದು ಅವರು ಅತೃಪ್ತರಿಗೆ ಕಿವಿಮಾತು ಹೇಳಿದರು.
ಇನ್ನು, ಸಂಪುಟದ ಜೊತೆಗೆ ನಿಗಮ ಮತ್ತು ಮಂಡಳಿಗಳ ನೇಮಕಾತಿ ಬಗ್ಗೆಯೂ ಮಾತನಾಡಿ, ನೇಮಕವಾದವರಿಗೆ ಅಧಿಕಾರಾವಧಿಯ ನಿಯಮವನ್ನು ಮೊದಲೇ ಸ್ಪಷ್ಟಪಡಿಸಲಾಗಿದೆ. ನಿಗಮ ಮಂಡಳಿಗಳ ಅಧ್ಯಕ್ಷರುಗಳಿಗೆ 2.5 ವರ್ಷಗಳ ಅಧಿಕಾರಾವಧಿ ಎಂದು ಮೊದಲೇ ನಿಗದಿಪಡಿಸಿದ್ದೆವು. ಈ ಅವಧಿ ಮುಕ್ತಾಯಗೊಂಡಿರುವ ಹಿನ್ನೆಲೆಯಲ್ಲಿ ರಾಜೀನಾಮೆ ನೀಡಲು ಸೂಚನೆ ನೀಡಿದ್ದೇನೆ. ಮಂತ್ರಿಮಂಡಲ ರಚನೆಗೂ ಮುನ್ನವೇ ಇದು ಸ್ಪಷ್ಟವಾಗಿತ್ತು. ಈಗ ರಾಜೀನಾಮೆ ನೀಡುವ ಮೂಲಕ ಹೊಸಬರಿಗೆ ಅವಕಾಶ ನೀಡುವ ಪ್ರಕ್ರಿಯೆಗೆ ಸಹಕರಿಸಬೇಕು" ಎಂದು ಆದೇಶಿಸಿದ್ದಾರೆ. ಪಕ್ಷದ ಕಾರ್ಯಕರ್ತರು ಮತ್ತು ಶಾಸಕರ ನಡುವೆ ಸಮತೋಲನ ಕಾಯ್ದುಕೊಳ್ಳಲು ಈ ನಿರ್ಧಾರ ಅತ್ಯಗತ್ಯ ಎಂದು ಸಮರ್ಥಿಸಿಕೊಂಡಿದ್ದಾರೆ.
ಸ್ಪೀಕರ್ ಹೆಸರು ಪ್ರಕಟಿಸಿದಕ್ಕೆ ಬಿಜೆಪಿ ಕಿಡಿ
ಭಾರತೀಯ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಶಾಸಕಾಂಗದ ಅತ್ಯುನ್ನತ ಸ್ಥಾನಗಳಾದ ವಿಧಾನಸಭಾ ಸಭಾಧ್ಯಕ್ಷ ಮತ್ತು ವಿಧಾನ ಪರಿಷತ್ ಸಭಾಪತಿ ಹುದ್ದೆಗಳ ಆಯ್ಕೆಯು ಇದೀಗ ತೀವ್ರ ರಾಜಕೀಯ ಚರ್ಚೆಗೆ ಗ್ರಾಸವಾಗಿದೆ. ಇತ್ತೀಚೆಗೆ ಎಐಸಿಸಿ ಈ ಹುದ್ದೆಗಳಿಗೆ ತಮ್ಮ ಪಕ್ಷದ ನಾಯಕರನ್ನು ಆಯ್ಕೆ ಮಾಡಿ ಘೋಷಿಸಿರುವುದನ್ನು ವಿರೋಧ ಪಕ್ಷವಾದ ಬಿಜೆಪಿ ತೀವ್ರವಾಗಿ ಖಂಡಿಸಿದೆ. "ಈ ಹುದ್ದೆಗಳು ಸಂವಿಧಾನಬದ್ಧವಾದವು, ಇವುಗಳನ್ನು ಆಯ್ಕೆ ಮಾಡಬೇಕಾದದ್ದು ಸದನದಲ್ಲಿ, ಪಕ್ಷದ ಕಚೇರಿಯಲ್ಲಲ್ಲ" ಎಂಬುದು ಪ್ರತಿಪಕ್ಷ ಬಿಜೆಪಿ-ಜೆಡಿಎಸ್‌ವಾದವಾಗಿದೆ.
ಪಕ್ಷದ ಸಭೆಯಲ್ಲಿ ಆಯ್ಕೆ ಮಾಡುವುದಕ್ಕೂ, ಎಐಸಿಸಿಯಂತಹ ದೆಹಲಿ ಮಟ್ಟದ ಹೈಕಮಾಂಡ್ ಘೋಷಣೆ ಮಾಡುವುದಕ್ಕೂ ವ್ಯತ್ಯಾಸವಿದೆ. ಹೈಕಮಾಂಡ್ ನೇರವಾಗಿ ಹೆಸರನ್ನು ಪ್ರಕಟಿಸುವುದು ಶಾಸಕಾಂಗದ ಸಾರ್ವಭೌಮತ್ವಕ್ಕೆ ಅವಮಾನ. ವಿಧಾನಸಭೆಯ ಆಯ್ಕೆಯಲ್ಲಿ ತಕರಾರುಗಳು ಇಲ್ಲ. ಆದರೆ, ವಿಧಾನಪರಿಷತ್ನಲ್ಲಿ ಈಗಾಗಲೇ ಬಸವರಾಜ ಹೊರಟ್ಟಿ ಅವರು ಸಭಾಪತಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಅವರನ್ನು ಆ ಸ್ಥಾನದಿಂದ ಕೆಳಗಿಳಿಸಬೇಕಾದರೆ ಸದನದ ನಿಯಮಗಳಿಗನುಗುಣವಾಗಿ ಇಳಿಸಬೇಕಾಗುತ್ತದೆ. ಆದರೆ, ಎಐಸಿಸಿ ಸ್ಥಾನಕ್ಕೆ ಘೋಷಣೆ ಮಾಡಿರುವುದಕ್ಕೆ ಬಿಜೆಪಿ-ಜೆಡಿಎಸ್ನಾಯಕರು ಕಿಡಿಕಾರಿದ್ದಾರೆ.
ಬೆಂಗಳೂರು ಇಂಡಿಯಾ ನ್ಯಾನೋ ಸಮ್ಮೇಳನಕ್ಕೆ ಚಾಲನೆ
ವಿಜ್ಞಾನ ಮತ್ತು ತಂತ್ರಜ್ಞಾನದ ಜಾಗತಿಕ ಕೇಂದ್ರವಾಗಿರುವ ಬೆಂಗಳೂರು ನಗರವು ಮತ್ತೊಮ್ಮೆ ಇತಿಹಾಸಕ್ಕೆ ಸಾಕ್ಷಿಯಾಗಿದೆ. ಅತ್ಯಾಧುನಿಕ ಸಂಶೋಧನೆಗಳು, ನಾವೀನ್ಯತೆ ಮತ್ತು ಕೈಗಾರಿಕಾ ಕ್ರಾಂತಿಯ ಭರವಸೆಯಾಗಿರುವ ಬೆಂಗಳೂರು ಇಂಡಿಯಾ ನ್ಯಾನೋ ಸಮ್ಮೇಳನಕ್ಕೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಅಧಿಕೃತವಾಗಿ ಚಾಲನೆ ನೀಡಿದರು. ಈ ಕಾರ್ಯಕ್ರಮವು ಭಾರತವನ್ನು ಜಾಗತಿಕ ಮಟ್ಟದಲ್ಲಿ ತಂತ್ರಜ್ಞಾನದ ದೈತ್ಯ ಶಕ್ತಿಯನ್ನಾಗಿ ರೂಪಿಸುವ ನಿಟ್ಟಿನಲ್ಲಿ ಇಟ್ಟಿರುವ ಮಹತ್ವದ ಹೆಜ್ಜೆಯಾಗಿದೆ.
ನ್ಯಾನೋ ತಂತ್ರಜ್ಞಾನ ಎಂದರೆ ಅತಿ ಸೂಕ್ಷ್ಮವಾದ, ಅಂದರೆ ಒಂದು ಮೀಟರ್‌ನ ನೂರರಲ್ಲಿ ಒಂದು ಭಾಗದಷ್ಟು ಚಿಕ್ಕ ಕಣಗಳನ್ನು ನಿರ್ವಹಿಸುವ ತಂತ್ರಜ್ಞಾನ. ಇದು ವಿಜ್ಞಾನದ ಅತ್ಯಂತ ರೋಚಕ ಕ್ಷೇತ್ರಗಳಲ್ಲಿ ಒಂದಾಗಿದೆ. ಇಂದಿನ ದಿನಗಳಲ್ಲಿ ನಾವು ಬಳಸುತ್ತಿರುವ ಸ್ಮಾರ್ಟ್ ಫೋನ್‌ಗಳಿಂದ ಹಿಡಿದು, ಕ್ಯಾನ್ಸರ್‌ನಂತಹ ಮಾರಕ ಕಾಯಿಲೆಗಳನ್ನು ಗುಣಪಡಿಸುವ ವೈದ್ಯಕೀಯ ಉಪಕರಣಗಳವರೆಗೆ ಎಲ್ಲದರಲ್ಲೂ ನ್ಯಾನೋ ತಂತ್ರಜ್ಞಾನದ ಪಾತ್ರವಿದೆ. ಇದೀಗ ಕೃತಕ ಬುದ್ಧಿಮತ್ತೆ ಮತ್ತು ಇತರೆ ಆಧುನಿಕ ತಂತ್ರಜ್ಞಾನಗಳ ಜೊತೆಗೆ ಇದು ವಿಲೀನಗೊಳ್ಳುತ್ತಿದ್ದು, ಭವಿಷ್ಯದ ಜಗತ್ತನ್ನು ಬದಲಿಸುವ ಸಾಮರ್ಥ್ಯವನ್ನು ಹೊಂದಿದೆ.ಈ ವೇದಿಕೆಯಲ್ಲಿ ದೇಶ-ವಿದೇಶಗಳ ಖ್ಯಾತ ವಿಜ್ಞಾನಿಗಳು, ಕೈಗಾರಿಕೋದ್ಯಮಿಗಳು, ನವೋದ್ಯಮಗಳ ಸಂಸ್ಥಾಪಕರು, ಹೂಡಿಕೆದಾರರು ಮತ್ತು ನೀತಿ ನಿರೂಪಕರು ಪಾಲ್ಗೊಂಡಿದ್ದಾರೆ. ಇವರೆಲ್ಲರೂ ಒಂದೆಡೆ ಸೇರಿ ಚರ್ಚೆ ನಡೆಸುವುದರಿಂದ ಹೊಸ ಹೊಸ ಆವಿಷ್ಕಾರಗಳಿಗೆ ನಾಂದಿ ಹಾಡಲು ಸಾಧ್ಯವಾಗುತ್ತದೆ.

