
ಎಸ್‌ಐಆರ್ ವಿಚಾರದಲ್ಲಿ ರಾಜಕೀಯ ಬೇಡ: ವಿರೋಧ ಪಕ್ಷಗಳ ಆರೋಪಕ್ಕೆ ಸಿಎಂ ತಿರುಗೇಟು
ಎಸ್‌ಐಆರ್ ಸಂಪೂರ್ಣವಾಗಿ ಚುನಾವಣಾ ಆಯೋಗದ ವ್ಯಾಪ್ತಿಗೆ ಒಳಪಟ್ಟಿರುವ ವಿಚಾರವಾಗಿದ್ದು, ಸರ್ಕಾರವು ಕೇವಲ ನಾಗರಿಕರ ಮತದಾನದ ಹಕ್ಕನ್ನು ರಕ್ಷಿಸಲು ಜಾಗೃತಿ ಮೂಡಿಸುತ್ತಿದೆ.
ರಾಜ್ಯದಲ್ಲಿನ ಮತದಾರರ ಪಟ್ಟಿ ಪರಿಷ್ಕರಣೆ ಪ್ರಕ್ರಿಯೆಯು ರಾಜಕೀಯ ವಲಯದಲ್ಲಿ ತೀವ್ರ ಸಂಚಲನ ಮೂಡಿಸಿದೆ. ಈ ಪ್ರಕ್ರಿಯೆಯ ಕುರಿತಂತೆ ಪ್ರತಿಪಕ್ಷ ಬಿಜೆಪಿ ಮತ್ತು ಜೆಡಿಎಸ್ ಮಾಡುತ್ತಿರುವ ಟೀಕೆಗಳಿಗೆ ತಿರುಗೇಟು ನೀಡಿರುವ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಇದು ಸಂಪೂರ್ಣವಾಗಿ ಚುನಾವಣಾ ಆಯೋಗದ ವ್ಯಾಪ್ತಿಗೆ ಒಳಪಟ್ಟಿರುವ ವಿಚಾರವಾಗಿದ್ದು, ಸರ್ಕಾರವು ಕೇವಲ ನಾಗರಿಕರ ಮತದಾನದ ಹಕ್ಕನ್ನು ರಕ್ಷಿಸಲು ಜಾಗೃತಿ ಮೂಡಿಸುತ್ತಿದೆ ಎಂದು ಸ್ಪಷ್ಟಪಡಿಸಿದ್ದಾರೆ.
ವಿಧಾನಸೌಧದಲ್ಲಿ ಮಾತನಾಡಿದ ಅವರು, ಎಸ್.ಐ.ಆರ್ ಪ್ರಕ್ರಿಯೆಗೆ ಆಕ್ಷೇಪಗಳಿದ್ದರೂ, ಪ್ರಜಾಪ್ರಭುತ್ವದ ಹಿತದೃಷ್ಟಿಯಿಂದ ಜನರ ಮತದಾನದ ಹಕ್ಕು ಮೊಟಕುಗೊಳ್ಳಬಾರದು ಎಂಬುದು ಸರ್ಕಾರದ ಆಶಯವಾಗಿದೆ. ಈ ಪ್ರಕ್ರಿಯೆಯ ವೇಳಾಪಟ್ಟಿ ಮತ್ತು ಕೆಲವೊಂದು ನಿಯಮಗಳ ಬಗ್ಗೆ ನಮಗೆ ಅಸಮಾಧಾನವಿದೆ. ಈಗಾಗಲೇ ನಾವು ನ್ಯಾಯಾಲಯದ ಮೊರೆ ಹೋಗಿದ್ದೇವೆ ಮತ್ತು ನಮ್ಮ ಹೋರಾಟ ಮುಂದುವರಿಯಲಿದೆ. ಆದರೆ, ಈ ಪ್ರಕ್ರಿಯೆಯಲ್ಲಿ ಸಕ್ರಿಯವಾಗಿ ಪಾಲ್ಗೊಂಡು, ಜನರ ಹಕ್ಕುಗಳನ್ನು ರಕ್ಷಿಸುವ ಕೆಲಸವನ್ನು ನಾವು ಮಾಡುತ್ತಿದ್ದೇವೆ. ಇತರೆ ರಾಜ್ಯಗಳಿಗೆ ಹೋಲಿಸಿದರೆ ರಾಜ್ಯ ಸರ್ಕಾರವು ಚುನಾವಣಾ ಆಯೋಗದೊಂದಿಗೆ ಅತ್ಯಂತ ಸಹಕಾರದಿಂದ ಕೆಲಸ ಮಾಡುತ್ತಿದೆ. "ನಿಮ್ಮ ಮತದಾನದ ಹಕ್ಕು, ನಿಮ್ಮ ಬದುಕಿನ ಹಕ್ಕು" ಎಂಬ ಜಾಗೃತಿ ಅಭಿಯಾನವನ್ನು ಸರ್ಕಾರ ನಡೆಸುತ್ತಿದೆ. ಇದನ್ನು ಕಂಡು ವಿರೋಧ ಪಕ್ಷಗಳು ಭಯಭೀತರಾಗಿವೆ ಎಂದು ಲೇವಡಿ ಮಾಡಿದರು.
ವಿರೋಧ ಪಕ್ಷಗಳ ಟೀಕೆಗೆ ಸವಾಲು
ಎಸ್.ಐ.ಆರ್ ವಿಚಾರವಾಗಿ ಕೇಂದ್ರ ಸಚಿವರಾದ ಎಚ್.ಡಿ.ಕುಮಾರಸ್ವಾಮಿ ಮತ್ತು ಪ್ರಹ್ಲಾದ್ ಜೋಶಿ ನೇತೃತ್ವದಲ್ಲಿ ಮುಖ್ಯ ಚುನಾವಣಾಧಿಕಾರಿಗೆ ದೂರು ನೀಡಲಾಗಿದೆ. ಅವರು ಅಧಿಕಾರದಲ್ಲಿದ್ದಾಗ ಅಕ್ರಮ ವಲಸಿಗರನ್ನು ಯಾಕೆ ಓಡಿಸಲಿಲ್ಲ? ಆಗ ಯಾರು ತಡೆದಿದ್ದರು? ರಾಜ್ಯದಲ್ಲಿ ಸುಮಾರು 4.50 ಕೋಟಿ ಜನರು ಜಾತಿ ಪ್ರಮಾಣಪತ್ರವನ್ನು ಪಡೆದಿದ್ದು, ಅದನ್ನು ಆನ್-ಲೈನ್ ಮೂಲಕ ಪಡೆಯಲು ಅವಕಾಶ ಕಲ್ಪಿಸಲಾಗಿದೆ. ಉಪ-ತಹಶೀಲ್ದಾರ್‌ಗಳಿಗೆ ನಿವಾಸ ದೃಢೀಕರಣ ಪತ್ರ ನೀಡುವ ಅಧಿಕಾರವನ್ನು ವಿಕೇಂದ್ರೀಕರಣಗೊಳಿಸಲಾಗಿದೆ. ಇಷ್ಟೆಲ್ಲಾ ಪಾರದರ್ಶಕ ವ್ಯವಸ್ಥೆಗಳಿದ್ದರೂ, ಅಕ್ರಮ ವಲಸಿಗರ ಪಟ್ಟಿಯನ್ನು ಮುಂದಿಟ್ಟುಕೊಂಡು ವಿರೋಧ ಪಕ್ಷಗಳು ರಾಜಕೀಯ ಲಾಭಕ್ಕಾಗಿ ಸುಳ್ಳು ಆರೋಪಗಳನ್ನು ಮಾಡುತ್ತಿವೆ ಎಂದು ಕಿಡಿಕಾರಿದರು.
ಚುನಾವಣಾ ಆಯೋಗದ ಪಾತ್ರ
ಚುನಾವಣಾ ಆಯೋಗದ ನಿಯಮದಂತೆ ಪ್ರತಿ ರಾಜಕೀಯ ಪಕ್ಷಕ್ಕೂ ಬೂತ್ ಮಟ್ಟದ ಏಜೆಂಟರನ್ನು ನೇಮಕ ಮಾಡಲು ಅವಕಾಶವಿದೆ. ಕಾಂಗ್ರೆಸ್, ಬಿಜೆಪಿ ಮತ್ತು ಜೆಡಿಎಸ್ ಪಕ್ಷಗಳೆಲ್ಲವೂ ಈ ನಿಯಮವನ್ನು ಬಳಸಿಕೊಂಡಿವೆ. ಅಧಿಕಾರಿಗಳು ಚುನಾವಣಾ ಆಯೋಗದ ಮಾರ್ಗದರ್ಶನದಲ್ಲಿ ಕೆಲಸ ಮಾಡುತ್ತಿದ್ದಾರೆಯೇ ಹೊರತು, ರಾಜ್ಯ ಸರ್ಕಾರದ ಹಸ್ತಕ್ಷೇಪವಿಲ್ಲ. ಆದರೆ, ಸರ್ಕಾರವು ಜನರಿಗೆ ನೆರವಾಗಲು ಪ್ರತಿ ಬೂತ್ ಮಟ್ಟದಲ್ಲಿ ಸಹಾಯ ಕೇಂದ್ರಗಳನ್ನು ಸ್ಥಾಪಿಸಿರುವುದನ್ನು ಕಂಡು ವಿರೋಧ ಪಕ್ಷಗಳಿಗೆ ಸಹಿಸಲು ಸಾಧ್ಯವಾಗುತ್ತಿಲ್ಲ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಶಾಸಕರು ಮತ್ತು ಪರಾಜಿತ ಅಭ್ಯರ್ಥಿಗಳಿಗೆ ಮತದಾರರ ಪಟ್ಟಿಯ ರಕ್ಷಣೆ ಬಗ್ಗೆ ಮಾರ್ಗದರ್ಶನ ನೀಡುವುದು ನಮ್ಮ ಕರ್ತವ್ಯ. ಇದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ. ಎಲುಬಿಲ್ಲದ ನಾಲಿಗೆ, ಯಾರಾದರೂ ಏನಾದರೂ ಮಾತನಾಡಬಹುದು. ಆದರೆ, ಅವರ ಟೀಕೆಗಳು ಸತ್ತುಹೋಗುತ್ತವೆ, ನಮ್ಮ ಕೆಲಸಗಳು ಜನರ ಪಾಲಿಗೆ ಉಳಿಯುತ್ತವೆ ಎಂದು ಹೇಳಿದರು.
ರಾಜ್ಯದ ಕೆಲವು ಭಾಗಗಳಲ್ಲಿ ಮಳೆ ಚೇತರಿಸಿಕೊಳ್ಳುತ್ತಿದೆ. ಆಲಮಟ್ಟಿ ಮತ್ತು ತುಂಗಭದ್ರಾ ಜಲಾಶಯಗಳಿಗೆ ಒಳಹರಿವು ಆರಂಭವಾಗಿದೆ. ಕುಡಿಯುವ ನೀರಿಗೆ ಪ್ರಥಮ ಆದ್ಯತೆಯನ್ನು ನೀಡಲಾಗುತ್ತಿದೆ. ರಾಜ್ಯದ ಜನತೆಗೆ ನೀರಿನ ಅಭಾವವಾಗದಂತೆ ನೋಡಿಕೊಳ್ಳಲು ಸರ್ಕಾರ ಸರ್ವ ರೀತಿಯಲ್ಲೂ ಸಿದ್ಧತೆ ನಡೆಸಿದೆ ಎಂದು ಹೇಳಿದ ಅವರು, ಬೆಲೆ ಏರಿಕೆಯಿಂದ ತತ್ತರಿಸಿರುವ ಜನರಿಗೆ ಆಸರೆಯಾಗಲು ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತಂದಿದ್ದೇವೆ. ಬಿಜೆಪಿ ಆಡಳಿತವಿರುವ ರಾಜ್ಯಗಳಲ್ಲಿಯೂ ನಮ್ಮ ಯೋಜನೆಗಳನ್ನೇ ಕಾಪಿ ಮಾಡಿ ಅಲ್ಲಿನ ಸರ್ಕಾರಗಳು ಜಾರಿಗೊಳಿಸುತ್ತಿವೆ. ಚುನಾವಣೆ ಹತ್ತಿರ ಬರುತ್ತಿದ್ದಂತೆ ಹಣವನ್ನು ಹಂಚುವ ಬದಲು, ಜನರಿಗೆ ಬದುಕುವ ಭರವಸೆ ನೀಡುವ ಕೆಲಸಗಳನ್ನು ನಾವು ಮಾಡಿದ್ದೇವೆ ಎಂದರು.

