ಎಸ್‌ಐಆರ್‌ಗೆ ಚಾಲನೆ : ಹೆಸರು ನೋಂದಾಯಿಸಿಕೊಳ್ಳದಿದ್ದರೆ ಸೌಲಭ್ಯ ಕಷ್ಟ - ಸಿಎಂ ಎಚ್ಚರಿಕೆ
x

ಎಸ್‌ಐಆರ್‌ಗೆ ಚಾಲನೆ : ಹೆಸರು ನೋಂದಾಯಿಸಿಕೊಳ್ಳದಿದ್ದರೆ ಸೌಲಭ್ಯ ಕಷ್ಟ - ಸಿಎಂ ಎಚ್ಚರಿಕೆ

ಅಧಿಕಾರಿಗಳ ಸಮ್ಮುಖದಲ್ಲಿ, ಡಿ.ಕೆ. ಶಿವಕುಮಾರ್ ಮತ್ತವರ ಪತ್ನಿ ಉಷಾ ಶಿವಕುಮಾರ್ ತಮ್ಮ ಎನ್ಯುಮರೇಶನ್ (ಗಣತಿ) ನಮೂನೆಗಳನ್ನು ಭರ್ತಿ ಮಾಡಿ ಸಹಿ ಹಾಕುವ ಮೂಲಕ ಪ್ರಕ್ರಿಯೆಯನ್ನು ಪೂರ್ಣಗೊಳಿಸಿದರು


Click the Play button to hear this message in audio format

ರಾಜ್ಯದಲ್ಲಿ ಪ್ರಜಾಪ್ರಭುತ್ವದ ಅಡಿಪಾಯವನ್ನು ಬಲಪಡಿಸುವ ಮತ್ತು ಮತದಾರರ ಪಟ್ಟಿಯನ್ನು ದೋಷರಹಿತಗೊಳಿಸುವ ಉದ್ದೇಶದಿಂದ ಕೈಗೊಂಡಿರುವ 'ವಿಶೇಷ ಮತದಾರರ ಪಟ್ಟಿ ಪರಿಷ್ಕರಣೆ' (ಎಸ್‌ಐಆರ್‌) ಪ್ರಕ್ರಿಯೆಗೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಮಂಗಳವಾರ ಅಧಿಕೃತವಾಗಿ ಚಾಲನೆ ನೀಡಿದರು. ತಮ್ಮ ಸದಾಶಿವನಗರ ನಿವಾಸದಲ್ಲಿ ಕುಟುಂಬದೊಂದಿಗೆ ಗಣತಿ ನಮೂನೆಯನ್ನು ಭರ್ತಿ ಮಾಡುವ ಮೂಲಕ ಅವರು ಅಭಿಯಾನಕ್ಕೆ ಹಸಿರು ನಿಶಾನೆ ತೋರಿದರು.

ಬೆಂಗಳೂರು ದಕ್ಷಿಣ ಜಿಲ್ಲೆಯ ಜಿಲ್ಲಾಧಿಕಾರಿಗಳು ಮತ್ತು ಹಿರಿಯ ಅಧಿಕಾರಿಗಳ ಸಮ್ಮುಖದಲ್ಲಿ, ಡಿ.ಕೆ. ಶಿವಕುಮಾರ್ ಮತ್ತು ಅವರ ಪತ್ನಿ ಉಷಾ ಶಿವಕುಮಾರ್ ಅವರು ತಮ್ಮ ಎನ್ಯುಮರೇಶನ್ (ಗಣತಿ) ನಮೂನೆಗಳನ್ನು ಭರ್ತಿ ಮಾಡಿ ಸಹಿ ಹಾಕುವ ಮೂಲಕ ಪ್ರಕ್ರಿಯೆಯನ್ನು ಪೂರ್ಣಗೊಳಿಸಿದರು. ಈ ಮೂಲಕ ಸಾರ್ವಜನಿಕರಿಗೆ ಮತದಾರರ ಪಟ್ಟಿಯಲ್ಲಿ ಹೆಸರು ನೋಂದಾಯಿಸಲು ಅಥವಾ ತಿದ್ದುಪಡಿ ಮಾಡಲು ಇದು ಸಕಾಲ ಎಂಬ ಸಂದೇಶವನ್ನು ರವಾನಿಸಿದರು. ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌, ಈ ಪ್ರಕ್ರಿಯೆಯು ಎಷ್ಟು ಸರಳ ಮತ್ತು ಮಹತ್ವದ್ದು ಎಂಬುದನ್ನು ವಿವರಿಸಿದರು. ನನ್ನ ಮನೆಯಿಂದಲೇ ಈ ಪ್ರಕ್ರಿಯೆಗೆ ಚಾಲನೆ ನೀಡಿದ್ದೇನೆ. ಮತದಾರರು ತಮ್ಮ ಹೆಸರು ಮತ್ತು ಈ ಹಿಂದೆ ನೀಡಿದ್ದ ಮೊಬೈಲ್ ಸಂಖ್ಯೆಯನ್ನು ನಮೂದಿಸಬೇಕು. ಒಂದು ವೇಳೆ ಮೊಬೈಲ್ ಸಂಖ್ಯೆ ಬದಲಾಗಿದ್ದರೆ, ಅಧಿಕಾರಿಗಳ ಮೂಲಕ ಹೊಸ ಸಂಖ್ಯೆಯನ್ನು ಸೇರ್ಪಡೆಗೊಳಿಸಲು ಅವಕಾಶವಿದೆ. ನೋಂದಾಯಿತ ಮೊಬೈಲ್ ಸಂಖ್ಯೆಗೆ ಬರುವ ಓಟಿಪಿ ಮೂಲಕವೇ ಮುಂದಿನ ಪ್ರಕ್ರಿಯೆ ನಡೆಯಲಿದೆ ಎಂದು ಮಾಹಿತಿ ನೀಡಿದರು.

ಸರಳೀಕೃತ ವ್ಯವಸ್ಥೆ ಹಾಗೂ ತಿದ್ದುಪಡಿ ಅವಕಾಶ

ಮತದಾರರ ಪಟ್ಟಿಯಲ್ಲಿ ಬದಲಾವಣೆಗಳನ್ನು ಮಾಡಿಕೊಳ್ಳಲು ಸರ್ಕಾರ ಸಾಕಷ್ಟು ವಿನಾಯಿತಿಗಳನ್ನು ನೀಡಿದೆ. ಕುಟುಂಬದ ಒಬ್ಬ ಸದಸ್ಯರೇ ಉಳಿದವರ ಪರವಾಗಿ ಸಹಿ ಮಾಡಿ ಅರ್ಜಿಗಳನ್ನು ಸಲ್ಲಿಸಬಹುದಾಗಿದೆ. ಒಬ್ಬ ಸದಸ್ಯರು ಸಹಿ ಮಾಡಿದರೂ ಸಾಕು, ಇಡೀ ಕುಟುಂಬದ ಅರ್ಜಿಗಳನ್ನು ಸ್ವೀಕರಿಸಲಾಗುವುದು. ಫೋಟೋ ಬದಲಾಯಿಸಬೇಕಿದ್ದರೆ ಹೊಸ ಫೋಟೋ ಸಲ್ಲಿಸಬಹುದು. ಹೊಸದಾಗಿ ಮತದಾರರ ಪಟ್ಟಿಗೆ ಸೇರುವವರು ನಿವಾಸ ದೃಢೀಕರಣ ಪತ್ರವನ್ನು ಕಡ್ಡಾಯವಾಗಿ ಸಲ್ಲಿಸಬೇಕು ಎಂದು ತಿಳಿಸಿದರು. ಅನಕ್ಷರಸ್ಥರು ಅಥವಾ ತಂತ್ರಜ್ಞಾನದ ಅರಿವಿಲ್ಲದವರಿಗೆ ಸಹಾಯ ಮಾಡಲು ಬಿಎಲ್‌ಒ ವ್ಯವಸ್ಥೆ ಇದೆ ಎಂದು ಸ್ಪಷ್ಟಪಡಿಸಿದರು. ಆಪ್ ಬಳಸಲು ಬಾರದವರು ಆತಂಕ ಪಡಬೇಕಿಲ್ಲ. ಬಿಎಲ್‌ಒಗಳನ್ನು ಸಂಪರ್ಕಿಸಿ ಆಫ್‌ಲೈನ್ ಮೂಲಕವೇ ಅರ್ಜಿಗಳನ್ನು ಭರ್ತಿ ಮಾಡಬಹುದು ಎಂದು ಹೇಳಿದರು.

ಮತದಾನದ ಹಕ್ಕು ಮತ್ತು ಸರ್ಕಾರದ ಸೌಲಭ್ಯಗಳ ನಂಟು

ಈ ಅಭಿಯಾನದ ಅತಿ ಮುಖ್ಯ ಅಂಶವೆಂದರೆ ಮತದಾನದ ಹಕ್ಕು ಮತ್ತು ಸರ್ಕಾರಿ ಸೌಲಭ್ಯಗಳ ನಡುವಿನ ನೇರ ಸಂಬಂಧ. ಡಿ.ಕೆ. ಶಿವಕುಮಾರ್ ಅವರು ಈ ಕುರಿತು ಎಚ್ಚರಿಕೆ ನೀಡಿದರು. ಎಲ್ಲರೂ ತಮ್ಮ ಮತದಾನದ ಹಕ್ಕನ್ನು ಉಳಿಸಿಕೊಳ್ಳಬೇಕು. ಒಂದು ವೇಳೆ ಮತದಾರರ ಪಟ್ಟಿಯಿಂದ ಹೆಸರು ಕಳೆದುಕೊಂಡರೆ, ಸರ್ಕಾರ ನೀಡುವ ಸೌಲಭ್ಯಗಳು ಮತ್ತು ಕಾರ್ಯಕ್ರಮಗಳನ್ನು ಪಡೆಯುವುದು ಕಷ್ಟವಾಗುತ್ತದೆ ಎಂದು ಹೇಳಿದರು. ಇದೇ ವೇಳೆ, ಬೇರೆ ರಾಜ್ಯಗಳ ಮಾದರಿಯನ್ನು ರಾಜ್ಯದಲ್ಲೂ ಅನುಷ್ಠಾನಗೊಳಿಸುವ ಸುಳಿವು ನೀಡಿದ ಅವರು, ಇತರ ರಾಜ್ಯಗಳಲ್ಲಿ ಕೇವಲ ಮತದಾರರಿಗೆ ಮಾತ್ರ ಸರ್ಕಾರಿ ಸೌಲಭ್ಯ ನೀಡಲಾಗುತ್ತಿದೆ. ಮತದಾನ ಹಕ್ಕು ಇಲ್ಲದವರಿಗೆ ಸೌಲಭ್ಯಗಳನ್ನು ತಡೆಹಿಡಿಯಲಾಗುತ್ತಿದೆ. ಅಂತಹ ವ್ಯವಸ್ಥೆ ಕರ್ನಾಟಕದಲ್ಲೂ ಬರಬಹುದು ಎಂದು ಅಭಿಪ್ರಾಯಪಟ್ಟರು. ತಮ್ಮ ಸರ್ಕಾರದ ಮಹತ್ವಾಕಾಂಕ್ಷಿ 'ಗ್ಯಾರಂಟಿ' ಯೋಜನೆಗಳ ಕುರಿತು ಮಾತನಾಡಿದ ಅವರು, ಈ ಯೋಜನೆಗಳು ಕೇವಲ ರಾಜ್ಯದ ಮತದಾರರಿಗಾಗಿ ಮಾತ್ರ ಎಂದು ತಿಳಿಸಿದರು. ನಮ್ಮ ರಾಜ್ಯದ ಮತದಾರರಿಗೆ ನಾವು ಗ್ಯಾರಂಟಿಗಳನ್ನು ನೀಡಬಹುದು. ಆದರೆ, ಬೇರೆ ರಾಜ್ಯದ ಮತದಾರರಿಗೆ ನಾವು ಏಕೆ ಗ್ಯಾರಂಟಿ ನೀಡಬೇಕು? ನಮ್ಮ ರಾಜ್ಯದ ಜನರಿಗೆ ಮಾತ್ರ ಸೌಲಭ್ಯ ಸೀಮಿತವಾಗಿರಬೇಕು ಎಂಬುದು ನಮ್ಮ ಚಿಂತನೆ ಎಂದು ಸ್ಪಷ್ಟಪಡಿಸಿದರು.

ರಾಜ್ಯದಲ್ಲಿ ಮತದಾರರ ಪಟ್ಟಿ ಪರಿಷ್ಕರಣೆಯು ಕೇವಲ ಒಂದು ಆಡಳಿತಾತ್ಮಕ ಪ್ರಕ್ರಿಯೆಯಲ್ಲ, ಇದು ಪ್ರಜಾಪ್ರಭುತ್ವದ ಭಾಗವಾಗಿರುವ ಪ್ರತಿಯೊಬ್ಬ ನಾಗರಿಕನ ಕರ್ತವ್ಯ. ಜನಸಾಮಾನ್ಯರಲ್ಲಿ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಮಹತ್ವದ್ದಾಗಿದೆ. ಮತದಾರರ ಪಟ್ಟಿಯಲ್ಲಿ ಹೆಸರು ಸೇರಿಸುವುದು, ತಿದ್ದುಪಡಿ ಮಾಡುವುದು ಅಥವಾ ವಿಳಾಸ ಬದಲಾವಣೆ ಮಾಡಿಕೊಳ್ಳಲು ಸರ್ಕಾರ ನೀಡಿರುವ ಈ ಅವಕಾಶವನ್ನು ಸಾರ್ವಜನಿಕರು ಸದುಪಯೋಗಪಡಿಸಿಕೊಳ್ಳಬೇಕು ಎಂದರು,

Read More
Next Story