
ಡಿಸಿಎಂ ಡಿ.ಕೆ. ಶಿವಕುಮಾರ್
ನೀರಾವರಿ ಯೋಜನೆಗಳಿಗೆ ಅನುಮತಿ; ಮಧ್ಯಸ್ಥಿಕೆ ವಹಿಸಲು ಕೇಂದ್ರಕ್ಕೆ ಸಿಎಂ ಮನವಿ
ಕೃಷ್ಣಾ ಮೇಲ್ದಂಡೆ ಯೋಜನೆ ಜಾರಿಗೆ ಕೃಷ್ಣಾ ಜಲ ವಿವಾದ ನ್ಯಾಯಾಧಿಕರಣ-2ರ ತೀರ್ಪಿನ ಅಧಿಸೂಚನೆ ಬಾಕಿ ಇರುವುದರಿಂದ ರಾಜ್ಯದ ನೀರಾವರಿ ಅಭಿವೃದ್ಧಿಗೆ ಹಿನ್ನಡೆಯಾಗಿದೆ.
ಕರ್ನಾಟಕದ ಕುಡಿಯುವ ನೀರು, ನೀರಾವರಿ ಹಾಗೂ ಬರ ಪರಿಹಾರದ ತುರ್ತು ಅಗತ್ಯಗಳನ್ನು ಈಡೇರಿಸಲು ರಾಜ್ಯದ ಪ್ರಮುಖ ನೀರಾವರಿ ಯೋಜನೆಗಳಿಗೆ ಬಾಕಿ ಇರುವ ಅನುಮತಿಗಳನ್ನು ಶೀಘ್ರವೇ ಕಲ್ಪಿಸಬೇಕು ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಕೇಂದ್ರ ಸರ್ಕಾರವನ್ನು ಒತ್ತಾಯಿಸಿದ್ದಾರೆ. ದೆಹಲಿಯಲ್ಲಿ ಸೋಮವಾರ ಕೇಂದ್ರ ಜಲಶಕ್ತಿ ಸಚಿವ ಸಿ.ಆರ್. ಪಾಟೀಲ್ ಅವರನ್ನು ಭೇಟಿಯಾಗಿ, ಮನವಿ ಸಲ್ಲಿಸಿದ ನಂತರ ಸುದೀರ್ಘ ಚರ್ಚೆ ನಡೆಸಿದ್ದಾರೆ.
16,745 ಕೋಟಿ ರೂ. ವೆಚ್ಚದ ಮೇಕೆದಾಟು ಸಮತೋಲನ ಜಲಾಶಯ ಮತ್ತು ಕುಡಿಯುವ ನೀರಿನ ಯೋಜನೆಯ ಡಿಪಿಆರ್ ಪರಿಶೀಲನಾ ಪ್ರಕ್ರಿಯೆಯನ್ನು ಕೇಂದ್ರ ಜಲ ಆಯೋಗದ ಮಟ್ಟದಲ್ಲಿ ಚುರುಕುಗೊಳಿಸಿ, ಆದ್ಯತೆ ಮೇರೆಗೆ ಅನುಮೋದನೆ ನೀಡುವಂತೆ ಕೋರಲಾಗಿದೆ. ಯೋಜನೆ ಅನುಷ್ಠಾನಕ್ಕೆ ಯಾವುದೇ ಕಾನೂನು ಅಥವಾ ಇತರ ಗಂಭೀರ ಅಡೆತಡೆಗಳಿಲ್ಲ ಎಂದು ಸ್ಪಷ್ಟಪಡಿಸಲಾಗಿದೆ.
ಯುಕೆಪಿ-3 ಅಧಿಸೂಚನೆಗೆ ಮಧ್ಯಂತರ ಅರ್ಜಿ
ಕೃಷ್ಣಾ ಮೇಲ್ದಂಡೆ ಯೋಜನೆ ಜಾರಿಗೆ ಕೃಷ್ಣಾ ಜಲ ವಿವಾದ ನ್ಯಾಯಾಧಿಕರಣ-2ರ ತೀರ್ಪಿನ ಅಧಿಸೂಚನೆ ಬಾಕಿ ಇರುವುದರಿಂದ ರಾಜ್ಯದ ನೀರಾವರಿ ಅಭಿವೃದ್ಧಿಗೆ ಹಿನ್ನಡೆಯಾಗಿದೆ. ಈ ವಿಚಾರ ಸುಪ್ರೀಂ ಕೋರ್ಟ್ನ ಪರಿಶೀಲನೆಯಲ್ಲಿರುವ ಕಾರಣ, ಅಧಿಸೂಚನೆ ಹೊರಡಿಸುವ ಕುರಿತು ಜಲಶಕ್ತಿ ಸಚಿವಾಲಯವು ತುರ್ತು ಮಧ್ಯಂತರ ಅರ್ಜಿ ಸಲ್ಲಿಸಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.
ಭದ್ರಾ ಮೇಲ್ದಂಡೆ ಯೋಜನೆಗೆ ಅನುದಾನ ಬಿಡುಗಡೆ
ಪರಿಷ್ಕೃತ ಅಂದಾಜು 21,167.93 ಕೋಟಿ ರೂ. ವೆಚ್ಚದ ಭದ್ರಾ ಮೇಲ್ದಂಡೆ ಯೋಜನೆಯನ್ನು 'ಪ್ರಧಾನಮಂತ್ರಿ ಕೃಷಿ ಸಿಂಚಾಯಿ ಯೋಜನೆ' ಅಡಿಯಲ್ಲಿ ಸೇರಿಸಬೇಕು. ಅಲ್ಲದೆ, 2023-24ರ ಕೇಂದ್ರ ಬಜೆಟ್ನಲ್ಲಿ ಘೋಷಿಸಲಾದ ವಿಶೇಷ ಅನುದಾನವನ್ನು ಶೀಘ್ರ ಬಿಡುಗಡೆ ಮಾಡುವ ಮೂಲಕ ಕಾಮಗಾರಿಗೆ ವೇಗ ನೀಡಬೇಕೆಂದು ಕೋರಲಾಗಿದೆ.
ರಾಜ್ಯದ ಹಿತಾಸಕ್ತಿ ರಕ್ಷಣೆಗೆ ಮನವಿ
ಗೋದಾವರಿ-ಕಾವೇರಿ ಹಾಗೂ ಬೇಡ್ತಿ-ವರದಾ (ಹಿರೆವಡ್ಡಟ್ಟಿ) ನದಿ ಜೋಡಣೆ ಯೋಜನೆಗಳಿಗೆ ಸಂಬಂಧಿಸಿದಂತೆ 2026ರ ಸೆ. 3ರಂದು ರಾಷ್ಟ್ರೀಯ ಜಲ ಅಭಿವೃದ್ಧಿ ಸಂಸ್ಥೆಗೆ ರಾಜ್ಯ ಸರ್ಕಾರ ತಾತ್ವಿಕ ಒಪ್ಪಿ ಗೆ ನೀಡಿದೆ. ಕೃಷ್ಣಾ ಮತ್ತು ಕಾವೇರಿ ಜಲಾನಯನ ಪ್ರದೇಶಗಳಲ್ಲಿ ಇತರೆ ರಾಜ್ಯಗಳಿಗೆ ಸಮಾನವಾಗಿ ಕರ್ನಾಟಕದ ಅಗತ್ಯತೆ ಹಾಗೂ ಹಿತಾಸಕ್ತಿಗಳನ್ನೂ ಕಾಪಾಡಲು ಎನ್ಡಬ್ಲ್ಯುಡಿಎಗೆ ನಿರ್ದೇಶನ ನೀಡಬೇಕೆಂದು ಮನವಿ ಮಾಡಲಾಗಿದೆ.
ರಾಜ್ಯದ ಜನಜೀವನ ಹಾಗೂ ಕೃಷಿ ವಲಯದ ಪ್ರಮುಖ ಬೇಡಿಕೆಗಳಾಗಿರುವ ಈ ಯೋಜನೆಗಳಿಗೆ ಕೇಂದ್ರ ಸರ್ಕಾರವು ಸಕಾರಾತ್ಮಕವಾಗಿ ಸ್ಪಂದಿಸಿ, ಶೀಘ್ರವೇ ಕಾನೂನು ಹಾಗೂ ತಾಂತ್ರಿಕ ಅಡೆತಡೆಗಳನ್ನು ನಿವಾರಿಸುವ ವಿಶ್ವಾಸವನ್ನು ರಾಜ್ಯ ಸರ್ಕಾರ ಹೊಂದಿದೆ.

