ಮೆಟ್ರೋ ಸೇರಿ ಮಹತ್ವದ ಯೋಜನೆಗಳಿಗೆ ಕೇಂದ್ರದ ಅನುಮತಿ ಕೋರಿದ ಡಿಕೆಶಿ
x

ಮೆಟ್ರೋ ಸೇರಿ ಮಹತ್ವದ ಯೋಜನೆಗಳಿಗೆ ಕೇಂದ್ರದ ಅನುಮತಿ ಕೋರಿದ ಡಿಕೆಶಿ

ಬೆಂಗಳೂರು ಮೆಟ್ರೋ ಹಂತ 2, 3 ಹಾಗೂ ಪ್ರಾದೇಶಿಕ ರೈಲು (RRTS) ಯೋಜನೆಗಳಿಗೆ ಶೀಘ್ರ ಕೇಂದ್ರದ ಅನುಮತಿ ಕೋರಿ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ದೆಹಲಿಯಲ್ಲಿ ಕೇಂದ್ರ ಸಚಿವ ಮನೋಹರ್ ಲಾಲ್ ಖಟ್ಟರ್ ಅವರನ್ನು ಭೇಟಿ ಮಾಡಿ ಪ್ರಸ್ತಾವನೆ ಸಲ್ಲಿಸಿದ್ದಾರೆ.


Click the Play button to hear this message in audio format

ರಾಜ್ಯದ ಹಲವು ಪ್ರಮುಖ ಮೂಲಸೌಕರ್ಯ ಮತ್ತು ಸಾರಿಗೆ ಯೋಜನೆಗಳಿಗೆ ವೇಗ ನೀಡಲು ಉಪಮುಖ್ಯಮಂತ್ರಿ ಹಾಗೂ ಬೆಂಗಳೂರು ನಗರಾಭಿವೃದ್ಧಿ ಸಚಿವ ಡಿ.ಕೆ. ಶಿವಕುಮಾರ್ ಅವರು ದೆಹಲಿಯಲ್ಲಿ ಭರ್ಜರಿ ಕಸರತ್ತು ನಡೆಸಿದ್ದಾರೆ. ಕೇಂದ್ರ ವಸತಿ ಮತ್ತು ನಗರಾಭಿವೃದ್ಧಿ ಸಚಿವ ಮನೋಹರ್ ಲಾಲ್ ಖಟ್ಟರ್ ಅವರನ್ನು ಭೇಟಿ ಮಾಡಿರುವ ಅವರು, ನಮ್ಮ ಮೆಟ್ರೋ ಹಾಗೂ ಪ್ರಾದೇಶಿಕ ರೈಲು ಯೋಜನೆಗಳಿಗೆ ಶೀಘ್ರ ಒಪ್ಪಿಗೆ ನೀಡುವಂತೆ ಮನವಿ ಸಲ್ಲಿಸಿದ್ದಾರೆ. ಕೇಂದ್ರ ಸಚಿವರಿಗೆ ಸಲ್ಲಿಕೆಯಾದ ಪ್ರಮುಖ ಪ್ರಸ್ತಾವನೆಗಳ ವಿವರಗಳು ಇಲ್ಲಿವೆ:

ಮೆಟ್ರೋ 3ನೇ ಹಂತದ ಡಬಲ್ ಡೆಕ್ಕರ್ ಯೋಜನೆ

ಬೆಂಗಳೂರು ಮೆಟ್ರೋ ಮೂರನೇ ಹಂತದ ಅಡಿಯಲ್ಲಿ ಒಟ್ಟು 44.65 ಕಿ.ಮೀ ಉದ್ದದ ಬೃಹತ್ ಡಬಲ್ ಡೆಕ್ಕರ್ ಮೇಲ್ಸೇತುವೆ ನಿರ್ಮಾಣಕ್ಕೆ ಬಿಎಂಆರ್ಸಿಎಲ್ ಮುಂದಾಗಿದ್ದು, ಈ ಯೋಜನೆಗೆ ತಗಲುವ ಸಂಪೂರ್ಣ 9,700 ಕೋಟಿ ರೂ. ವೆಚ್ಚವನ್ನು ಕರ್ನಾಟಕ ಸರ್ಕಾರವೇ ಭರಿಸಲಿದೆ. ಈ ಯೋಜನೆಗೆ ಈಗಾಗಲೇ ಕೇಂದ್ರ ಸರ್ಕಾರ ಒಪ್ಪಿಗೆ ನೀಡಿದ್ದರೂ, ಇತ್ತೀಚಿನ ಬಿಎಂಆರ್ಸಿಎಲ್ ಮಂಡಳಿ ಸಭೆಯಲ್ಲಿ ತರಲಾದ ಕೆಲವು ಸಣ್ಣ ತಾಂತ್ರಿಕ ಬದಲಾವಣೆಗಳಿಗೆ ಕೇಂದ್ರ ನಗರಾಭಿವೃದ್ಧಿ ಸಚಿವಾಲಯವು ತಕ್ಷಣದ ಅನುಮತಿ ನೀಡಬೇಕೆಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಪ್ರಸ್ತಾವನೆಯಲ್ಲಿ ಕೋರಿದ್ದಾರೆ.

ಮೆಟ್ರೋ 2ನೇ ಹಂತದ ಪರಿಷ್ಕೃತ ವೆಚ್ಚಕ್ಕೆ ಅನುಮೋದನೆ

ಒಟ್ಟು 72.095 ಕಿ.ಮೀ ಉದ್ದ ಹಾಗೂ 61 ನಿಲ್ದಾಣಗಳನ್ನು ಒಳಗೊಂಡಿರುವ ಬೆಂಗಳೂರು ಮೆಟ್ರೋ ಎರಡನೇ ಹಂತದ ಬೃಹತ್ ಯೋಜನೆಗೆ ಆರಂಭದಲ್ಲಿ 26,405.14 ಕೋಟಿ ರೂ. ವೆಚ್ಚ ಅಂದಾಜಿಸಲಾಗಿತ್ತು. ಆದರೆ, ಈಗ ಈ ಯೋಜನಾ ವೆಚ್ಚವು 14,019.88 ಕೋಟಿ ರೂ. ಯಷ್ಟು ಹೆಚ್ಚಳವಾಗಿದ್ದು, ಒಟ್ಟು ಮೊತ್ತ 40,425.02 ಕೋಟಿ ರೂ.ಗೆ ಏರಿಕೆಯಾಗಿದೆ. ಹೀಗಾಗಿ, ಈ ಪರಿಷ್ಕೃತ ಯೋಜನಾ ವೆಚ್ಚಕ್ಕೆ ಕೇಂದ್ರ ಸರ್ಕಾರವು ಆದಷ್ಟು ಬೇಗ ಒಪ್ಪಿಗೆ ನೀಡಬೇಕು ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಕೇಂದ್ರ ಸಚಿವರಿಗೆ ಒತ್ತಾಯಿಸಿದ್ದಾರೆ.

ಮೆಟ್ರೋ ಹಂತ 3 'ಎ' (ಸರ್ಜಾಪುರ - ಹೆಬ್ಬಾಳ ಮಾರ್ಗ)

• ಯೋಜನೆಯ ವಿವರ: ಸರ್ಜಾಪುರದಿಂದ ಹೆಬ್ಬಾಳದವರೆಗೆ ಒಟ್ಟು 37.804 ಕಿ.ಮೀ ಮಾರ್ಗ (14.28 ಕಿ.ಮೀ ಸುರಂಗ ಮತ್ತು 23.524 ಕಿ.ಮೀ ಮೇಲ್ಸೇತುವೆ).

• ಸ್ಥಿತಿ: ಕೇಂದ್ರ ಸರ್ಕಾರದ ನಿರ್ದೇಶನದಂತೆ ಈ ಯೋಜನೆಯಲ್ಲಿ ಕೆಲವು ಮಾರ್ಪಾಡುಗಳನ್ನು ಮಾಡಿ, 25,999 ಕೋಟಿ ರೂ. ಅಂದಾಜು ವೆಚ್ಚದ ಪರಿಷ್ಕೃತ ಡಿಪಿಆರ್ (DPR) ಅನ್ನು ಕೇಂದ್ರಕ್ಕೆ ಸಲ್ಲಿಸಲಾಗಿದ್ದು, ಅಂತಿಮ ಅನುಮತಿಗಾಗಿ ಕಾಯಲಾಗುತ್ತಿದೆ.

ಪ್ರಾದೇಶಿಕ ಕ್ಷಿಪ್ರ ರೈಲು ಸಾರಿಗೆ ವ್ಯವಸ್ಥೆ (RRTS) ಜಾರಿ

ಬೆಂಗಳೂರಿನ ಸುತ್ತಮುತ್ತಲಿನ ಜಿಲ್ಲೆಗಳ ಸಂಪರ್ಕ ಕ್ರಾಂತಿಗೆ ಕಾರಣವಾಗಬಲ್ಲ ಪ್ರಾದೇಶಿಕ ಕ್ಷಿಪ್ರ ರೈಲು ಸಾರಿಗೆ ವ್ಯವಸ್ಥೆ (RRTS) ಜಾರಿಗೆ ತರಲು ಕೇಂದ್ರದ ಅನುಮತಿ ಕೋರಲಾಗಿದೆ. ಈ ಯೋಜನೆ ಜಾರಿಯಾದರೆ ಬೆಂಗಳೂರಿನಿಂದ ಕೆಳಗಿನ ನಗರಗಳಿಗೆ ಕ್ಷಿಪ್ರ ರೈಲು ಸಂಚಾರ ಆರಂಭವಾಗಲಿದೆ:

• ಬೆಂಗಳೂರು - ಮೈಸೂರು

• ಬೆಂಗಳೂರು - ಕನಕಪುರ

• ಬೆಂಗಳೂರು - ತುಮಕೂರು

• ಬೆಂಗಳೂರು - ಚಿಕ್ಕಬಳ್ಳಾಪುರ

• ಬೆಂಗಳೂರು - ಕೋಲಾರ

"ರಾಜಕೀಯ ಚರ್ಚೆಯಿಲ್ಲ, ಕೇವಲ ಅಭಿವೃದ್ಧಿ"- ಡಿ.ಕೆ. ಶಿವಕುಮಾರ್ ಸ್ಪಷ್ಟನೆ

ಕೇಂದ್ರ ಸಚಿವರ ಭೇಟಿ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಡಿಕೆಶಿ, "ಕೇಂದ್ರ ಸಚಿವ ಮನೋಹರ ಲಾಲ್‌ ಕಟ್ಟರ್ ಅವರನ್ನು ಭೇಟಿ ಮಾಡಿ ಡಬಲ್ ಡೆಕ್ಕರ್ ಯೋಜನೆಗಳ ಕುರಿತು ಸುದೀರ್ಘ ಚರ್ಚೆ ನಡೆಸಿದ್ದೇನೆ. ಮುಂದೆ ನೀತಿ ಆಯೋಗದ ಸಭೆಯಲ್ಲೂ ಭಾಗಿಯಾಗುತ್ತಿದ್ದು, ಪ್ರಧಾನಮಂತ್ರಿಯವರು ಸಹಕಾರ ಕೊಡುವ ಭರವಸೆ ನೀಡಿದ್ದಾರೆ," ಎಂದರು.

ಇದೇ ವೇಳೆ ರಾಜ್ಯ ರಾಜಕಾರಣದ ಕುರಿತು ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಅವರು, "ಈ ದೆಹಲಿ ಪ್ರವಾಸದಲ್ಲಿ ಸಚಿವ ಸಂಪುಟ ವಿಸ್ತರಣೆಯ ಬಗ್ಗೆ ಯಾವುದೇ ರೀತಿಯ ಚರ್ಚೆ ನಡೆಸುವುದಿಲ್ಲ," ಎಂದು ಸ್ಪಷ್ಟಪಡಿಸಿದರು.

Read More
Next Story