
ಡ್ರಗ್ಸ್ ಮಾಹಿತಿ ನೀಡಿದರೆ ಬಹುಮಾನ: ಪೊಲೀಸ್ ಇಲಾಖೆಯ ಹೊಸ ಯೋಜನೆಗೆ ಚಾಲನೆ
ಸಮಾಜದಲ್ಲಿ ಗೌರವಕ್ಕೆ ಧಕ್ಕೆ ಬರುತ್ತದೆ ಎಂಬ ಕಾರಣಕ್ಕೆ ನಿಮ್ಮ ಮಕ್ಕಳ ದುರಭ್ಯಾಸವನ್ನು ಮುಚ್ಚಿಡಬಾರದು. ಮುಚ್ಚಿಟ್ಟಷ್ಟೂ ಮಕ್ಕಳ ಭವಿಷ್ಯ ಹಾಳಾಗುತ್ತದೆ ಎಂದು ಸಿಎಂ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.
ರಾಜ್ಯವನ್ನು ಸಂಪೂರ್ಣವಾಗಿ ಮಾದಕ ವ್ಯಸನ ಮುಕ್ತವನ್ನಾಗಿ ಮಾಡುವ ಗುರಿಯನ್ನು ಸರ್ಕಾರ ಹೊಂದಿದ್ದು, 2028ರ ವೇಳೆಗೆ ನಶೆ ಮುಕ್ತ ಕರ್ನಾಟಕ ನಿರ್ಮಾಣವೇ ನಮ್ಮ ಸಂಕಲ್ಪ ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಘೋಷಿಸಿದ್ದಾರೆ.
ಕಂಠೀರವ ಕ್ರೀಡಾಂಗಣದಲ್ಲಿ ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆ ಆಯೋಜಿಸಿದ್ದ ಅಂತಾರಾಷ್ಟ್ರೀಯ ಮಾದಕ ವ್ಯಸನ ಮತ್ತು ಕಳ್ಳಸಾಗಣೆ ವಿರೋಧಿ ದಿನ - 2026 ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. "ನಶೆ ಬಿಡಿ, ಖುಷಿ ಪಡಿ" ಎಂಬ ಘೋಷವಾಕ್ಯದೊಂದಿಗೆ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಮಾದಕ ವಸ್ತುಗಳ ಪಿಡುಗು ಕೇವಲ ಸರ್ಕಾರದ ಸಮಸ್ಯೆಯಲ್ಲ, ಇದು ಪ್ರತಿಯೊಬ್ಬ ಕನ್ನಡಿಗನ ಆತಂಕವಾಗಬೇಕು ಎಂದರು. 2028ರೊಳಗೆ ಕರ್ನಾಟಕವನ್ನು ನಶೆ ಮುಕ್ತ ರಾಜ್ಯವನ್ನಾಗಿ ಮಾಡುವುದು ನಮ್ಮ ಗುರಿ. ಈ ನಿಟ್ಟಿನಲ್ಲಿ ರಾಜ್ಯದ ಯುವಜನತೆ, ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರು ಸರ್ಕಾರದೊಂದಿಗೆ ಕೈಜೋಡಿಸಿದರೆ ಮಾತ್ರ ಈ ಅನಿಷ್ಟವನ್ನು ಬುಡಸಮೇತ ಕಿತ್ತೊಗೆಯಲು ಸಾಧ್ಯ ಎಂದು ಕರೆ ನೀಡಿದರು.
89 ಕೋಟಿ ರೂ. ಮೌಲ್ಯದ ಮಾದಕ ವಸ್ತುಗಳ ನಾಶ
ಕಳೆದ ಮೂರು ವರ್ಷಗಳ ಪೊಲೀಸ್ ಇಲಾಖೆಯ ಸಾಧನೆಯನ್ನು ಶ್ಲಾಘಿಸಿದ ಡಿ.ಕೆ. ಶಿವಕುಮಾರ್, ಹಿಂದಿನ ಗೃಹ ಸಚಿವ ಡಾ. ಜಿ. ಪರಮೇಶ್ವರ್ ಅವರ ನೇತೃತ್ವದಲ್ಲಿ ಇಲಾಖೆಯು ಸುಮಾರು 89 ಕೋಟಿ ರೂಪಾಯಿ ಮೌಲ್ಯದ ವಶಪಡಿಸಿಕೊಂಡಿದ್ದ ಮಾದಕ ವಸ್ತುಗಳನ್ನು ನಾಶಪಡಿಸಿದೆ ಎಂದು ತಿಳಿಸಿದರು. ಈ ಕಾರ್ಯಾಚರಣೆಯಲ್ಲಿ ಭಾಗಿಯಾದ ಉನ್ನತ ಪೊಲೀಸ್ ಅಧಿಕಾರಿಗಳು, ಕಾನ್‌ಸ್ಟೇಬಲ್‌ಗಳು ಮತ್ತು ಸಿಬ್ಬಂದಿಗಳಿಗೆ ಅಭಿನಂದನೆಗಳು ಎಂದರು. ಸಮಾಜದಲ್ಲಿ ಗೌರವಕ್ಕೆ ಧಕ್ಕೆ ಬರುತ್ತದೆ ಎಂಬ ಕಾರಣಕ್ಕೆ ನಿಮ್ಮ ಮಕ್ಕಳ ದುರಭ್ಯಾಸವನ್ನು ಮುಚ್ಚಿಡಬೇಡಿ. ನೀವು ಮುಚ್ಚಿಟ್ಟಷ್ಟೂ ಮಕ್ಕಳ ಭವಿಷ್ಯ ಹಾಳಾಗುತ್ತದೆ. ಯಾವುದೇ ಮುಜುಗರ ಇಲ್ಲದೆ ಪೊಲೀಸರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಿ. ನಿಮ್ಮ ಮಕ್ಕಳ ಹೆಸರು ಎಲ್ಲಿಯೂ ಬಹಿರಂಗಗೊಳ್ಳದಂತೆ ನೋಡಿಕೊಳ್ಳಲು ನಾನು ಪೊಲೀಸ್ ಇಲಾಖೆಗೆ ನಿರ್ದೇಶನ ನೀಡುತ್ತೇನೆ. ಅವರು ಅಪರಾಧಿಗಳಲ್ಲ, ವ್ಯಸನಕ್ಕೆ ಬಲಿಯಾದವರು. ಅವರನ್ನು ಸರಿಪಡಿಸುವುದು ನಮ್ಮೆಲ್ಲರ ಆದ್ಯತೆ ಎಂದು ಹೇಳಿದರು.
ಮಾಹಿತಿ ನೀಡಿದವರಿಗೆ ಬಹುಮಾನ
ಮಾದಕ ವಸ್ತುಗಳ ಜಾಲವನ್ನು ಬೇಧಿಸಲು ಸಾರ್ವಜನಿಕರ ಸಹಕಾರ ಅತ್ಯಗತ್ಯ ಎಂಬುದನ್ನು ಮನಗಂಡಿರುವ ಸರ್ಕಾರ, ಡ್ರಗ್ಸ್ ಸರಬರಾಜು ಮಾಡುವವರ ಬಗ್ಗೆ ಗುಪ್ತ ಮಾಹಿತಿ ನೀಡುವ ನಾಗರಿಕರಿಗೆ ಬಹುಮಾನ ಘೋಷಿಸಲು ನಿರ್ಧರಿಸಿದೆ. ಈ ಮೂಲಕ ಡ್ರಗ್ಸ್ ಸಪ್ಲೈ ಚೈನ್ ಅನ್ನು ಹತ್ತಿಕ್ಕಲು ಕಠಿಣ ಕ್ರಮ ಕೈಗೊಳ್ಳಲಾಗುವುದು. ಇತ್ತೀಚಿನ ದಿನಗಳಲ್ಲಿ ಪಾನ್ ಮಸಾಲಾ ಮತ್ತು ಗುಟ್ಕಾಗಳಲ್ಲಿ ಮಾರಕ ಅಮಲು ಪದಾರ್ಥಗಳನ್ನು ಬೆರೆಸುವ ಹೊಸ ದಂಧೆ ಬೆಳಕಿಗೆ ಬಂದಿದೆ. ಇಂತಹ ಕೃತ್ಯ ನಡೆಸುವವರ ಮೇಲೆ ಯಾವುದೇ ಮುಲಾಜಿಲ್ಲದೆ ಕಠಿಣ ಕ್ರಮ ಜರುಗಿಸುತ್ತೇವೆ. ಫೋನ್ ಮೂಲಕ ಆರ್ಡರ್ ಪಡೆದು ಮನೆ ಮನೆಗೆ ಡ್ರಗ್ಸ್ ತಲುಪಿಸುವ ಜಾಲವನ್ನು ಸದ್ಯದಲ್ಲೇ ಭೇದಿಸಲಾಗುವುದು ಎಂದು ಗೃಹ ಸಚಿವ ಪ್ರಿಯಾಂಕ್ ಖರ್ಗೆ ಅವರ ನೇತೃತ್ವದ ಇಲಾಖೆಯ ಕಾರ್ಯವೈಖರಿಯನ್ನು ಶ್ಲಾಘಿಸಿದರು.
ವಿಶ್ವ ಆರೋಗ್ಯ ಸಂಸ್ಥೆಯ ವರದಿಯ ಪ್ರಕಾರ, ದೇಶದಲ್ಲಿ ತಂಬಾಕು ಮತ್ತು ಮಾದಕ ವಸ್ತುಗಳ ಸೇವನೆಯಿಂದ ಪ್ರತಿ ವರ್ಷ ಸುಮಾರು 13 ರಿಂದ 14 ಲಕ್ಷ ಜನರು ಸಾವನ್ನಪ್ಪುತ್ತಿದ್ದಾರೆ. ನಮ್ಮಂತಹ ಸಾಂಸ್ಕೃತಿಕ ಪರಂಪರೆ ಇರುವ ದೇಶದಲ್ಲಿ ಇಂತಹ ಸಾವುಗಳು ಸಂಭವಿಸುವುದು ನಾಚಿಕೆಗೇಡಿನ ವಿಷಯ. ನಮ್ಮ ದೇಶದ ಕಡೆ ಇಡೀ ಪ್ರಪಂಚವೇ ನೋಡುತ್ತಿದೆ. ಹೀಗಾಗಿ ರಾಜ್ಯವು ಮಾದರಿಯಾಗಬೇಕೇ ಹೊರತು ದುಶ್ಚಟಗಳ ತಾಣವಾಗಬಾರದು. ಬೆಂಗಳೂರು ಇಂದು ಜಾಗತಿಕ ಹಬ್ ಆಗಿದೆ. ಪ್ರತಿ ವರ್ಷ ಇಲ್ಲಿಂದ ಲಕ್ಷಾಂತರ ನರ್ಸ್‌ಗಳು, ಸಾವಿರಾರು ವೈದ್ಯರು ಮತ್ತು ಎಂಜಿನಿಯರ್‌ಗಳು ಹೊರಬರುತ್ತಿದ್ದಾರೆ. ಇಂತಹ ಅದ್ಭುತ ಮಾನವ ಸಂಪನ್ಮೂಲವನ್ನು ಹೊಂದಿರುವ ನಮ್ಮ ರಾಜ್ಯದ ಯುವಜನತೆ ಮಾದಕ ವಸ್ತುಗಳ ಒತ್ತಡಕ್ಕೆ ಮಣಿಯಬಾರದು. ನಿಮ್ಮ ದೇಹ ಮತ್ತು ಮನಸ್ಸು ನಿಮ್ಮ ನಿಯಂತ್ರಣದಲ್ಲಿರಲಿ. ಜೀವನದಲ್ಲಿ ಸಾಧನೆ ಮಾಡದಿದ್ದರೆ ಸಾವಿಗೆ ಅವಮಾನ, ಆದರ್ಶವಿಲ್ಲದೆ ಬದುಕಿದರೆ ಬದುಕಿಗೆ ಅವಮಾನ ಎಂದು ಹೇಳಿದರು.
ಶಾಲಾ-ಕಾಲೇಜುಗಳಲ್ಲಿ ಈಗಾಗಲೇ 'ಸ್ಟುಡೆಂಟ್ ಪೊಲೀಸಿಂಗ್' ವ್ಯವಸ್ಥೆ ಜಾರಿಯಲ್ಲಿದೆ. ಇಲಾಖೆಯು ಅಸ್ತಿತ್ವಕ್ಕೆ ತಂದಿರುವ ಟಾಸ್ಕ್ ಫೋರ್ಸ್ ಮೂಲಕ ಡ್ರಗ್ಸ್ ಮುಕ್ತ ಕರ್ನಾಟಕ ನಿರ್ಮಾಣ ಮಾಡಲು ಸಾರ್ವಜನಿಕರು ಪೊಲೀಸ್ ಇಲಾಖೆಗೆ ಕಣ್ಣಾಗಿ ಕೆಲಸ ಮಾಡಬೇಕು. ಇದು ಕೇವಲ ಸರ್ಕಾರದ ಘೋಷಣೆಯಲ್ಲ, ಪ್ರತಿಯೊಬ್ಬ ಕನ್ನಡಿಗನ ಸಂಕಲ್ಪವಾಗಬೇಕು ಎಂದು ಇದೇ ವೇಳೆ ಕರೆ ನೀಡಿದರು.

