ನವಲಗುಂದ ಬಳಿ ಭೀಕರ ಅಪಘಾತ: ಲಾರಿ-ಕಾರು ಡಿಕ್ಕಿ, ಸ್ಥಳದಲ್ಲೇ ನಾಲ್ವರು ಸಾವು
x

ನವಲಗುಂದ ಬಳಿ ಭೀಕರ ಅಪಘಾತ: ಲಾರಿ-ಕಾರು ಡಿಕ್ಕಿ, ಸ್ಥಳದಲ್ಲೇ ನಾಲ್ವರು ಸಾವು

ಒಂದೇ ದಿನ ನಡೆದ ಎರಡು ಪ್ರತ್ಯೇಕ ಭೀಕರ ಅಪಘಾತಗಳಲ್ಲಿ ಐವರು ದಾರುಣವಾಗಿ ಮೃತಪಟ್ಟಿರುವ ಘಟನೆ ದಾರವಾಢ ಮತ್ತು ಬಾಗಲಕೋಟೆ ಜಿಲ್ಲೆಗಳಲ್ಲಿ ನಡೆದಿದೆ.


Click the Play button to hear this message in audio format

ರಾಜ್ಯದ ಹೆದ್ದಾರಿಗಳಲ್ಲಿ ಸಂಭವಿಸುತ್ತಿರುವ ರಸ್ತೆ ಅಪಘಾತಗಳು ನಾಗರಿಕರ ಪಾಲಿಗೆ ಮೃತ್ಯುಕೂಪಗಳಾಗಿ ಪರಿಣಮಿಸುತ್ತಿವೆ. ಒಂದೇ ದಿನ ನಡೆದ ಎರಡು ಪ್ರತ್ಯೇಕ ಭೀಕರ ಅಪಘಾತಗಳಲ್ಲಿ ಐವರು ದಾರುಣವಾಗಿ ಮೃತಪಟ್ಟಿರುವ ಘಟನೆ ದಾರವಾಢ ಮತ್ತು ಬಾಗಲಕೋಟೆ ಜಿಲ್ಲೆಗಳಲ್ಲಿ ನಡೆದಿದೆ.

ಧಾರವಾಡ ಜಿಲ್ಲೆಯ ನವಲಗುಂದ ತಾಲೂಕಿನ ಅಮರಗೋಳ ಗ್ರಾಮದ ಸಮೀಪ ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದ ಭೀಕರ ರಸ್ತೆ ಅಪಘಾತದಲ್ಲಿ ನಾಲ್ವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಹುಬ್ಬಳ್ಳಿಯಿಂದ ವಿಜಯಪುರದ ಕಡೆಗೆ ಪ್ರಯಾಣಿಸುತ್ತಿದ್ದ ಕಾರಿಗೆ, ಎದುರಿನಿಂದ ಅತಿವೇಗವಾಗಿ ಬಂದ ಕ್ಯಾಂಟರ್ ಲಾರಿ ಅಪ್ಪಳಿಸಿದೆ. ಡಿಕ್ಕಿಯ ರಭಸಕ್ಕೆ ಕಾರು ರಸ್ತೆಯ ಬದಿಗೆ ಎಸೆಯಲ್ಪಟ್ಟು ಸಂಪೂರ್ಣವಾಗಿ ನಜ್ಜುಗುಜ್ಜಾಗಿದೆ. ಕಾರಿನಲ್ಲಿದ್ದ ಪ್ರಯಾಣಿಕರಿಗೆ ಹೊರಬರಲು ಕೂಡ ಸಾಧ್ಯವಾಗದಷ್ಟು ವಾಹನ ಜಖಂಗೊಂಡಿತ್ತು. ಅಪಘಾತದಲ್ಲಿ ಮೃತಪಟ್ಟವರನ್ನು ಅಜಿತ್ (32), ರಾಕೇಶ (22), ಸಂದೀಪ್ (33) ಮತ್ತು ಶೃತಿ (28) ಎಂದು ಗುರುತಿಸಲಾಗಿದೆ. ಇವರು ಕೆಲಸದ ನಿಮಿತ್ತ ವಿಜಯಪುರದ ಕಡೆಗೆ ಪ್ರಯಾಣಿಸುತ್ತಿದ್ದರು ಎಂದು ತಿಳಿದುಬಂದಿದೆ.

ವಿಷಯ ತಿಳಿಯುತ್ತಿದ್ದಂತೆ ನವಲಗುಂದ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ಮತ್ತು ಸಿಬ್ಬಂದಿ ಘಟನಾ ಸ್ಥಳಕ್ಕೆ ದೌಡಾಯಿಸಿದರು. ಕ್ರೇನ್ ಸಹಾಯದಿಂದ ಕಾರಿನಲ್ಲಿದ್ದ ಮೃತದೇಹಗಳನ್ನು ಹೊರತೆಗೆಯಲಾಯಿತು. ಈ ಸಂಬಂಧ ಕ್ಯಾಂಟರ್ ಚಾಲಕನ ವಿರುದ್ಧ ಪ್ರಕರಣ ದಾಖಲಾಗಿದ್ದು, ಆತ ಪರಾರಿಯಾಗಿದ್ದಾನೆ ಎಂಬ ಮಾಹಿತಿ ಲಭ್ಯವಾಗಿದೆ. ಮೃತರ ಕುಟುಂಬಸ್ಥರಿಗೆ ಮಾಹಿತಿ ನೀಡಲಾಗಿದ್ದು, ಮರಣೋತ್ತರ ಪರೀಕ್ಷೆಯ ನಂತರ ಮೃತದೇಹಗಳನ್ನು ಹಸ್ತಾಂತರಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.

ಇಳಕಲ್ ಹೆದ್ದಾರಿಯಲ್ಲಿ ಸ್ಕಾರ್ಪಿಯೋ ಡಿವೈಡರ್‌ಗೆ ಡಿಕ್ಕಿ

ಬಾಗಲಕೋಟೆ ಜಿಲ್ಲೆಯ ಇಳಕಲ್ ನಗರದ ಹೊರವಲಯದಲ್ಲಿ ಮತ್ತೊಂದು ದುರ್ಘಟನೆ ಸಂಭವಿಸಿದೆ. ರಾಷ್ಟ್ರೀಯ ಹೆದ್ದಾರಿಯ ದರ್ಗಾ ಸಮೀಪ ವೇಗವಾಗಿ ಬಂದ ಸ್ಕಾರ್ಪಿಯೋ ಕಾರು ಚಾಲಕನ ನಿಯಂತ್ರಣ ತಪ್ಪಿ ಹೆದ್ದಾರಿಯ ಡಿವೈಡರ್‌ಗೆ ಭೀಕರವಾಗಿ ಡಿಕ್ಕಿ ಹೊಡೆದಿದೆ. ಆಂಧ್ರಪ್ರದೇಶದ ಗುಂತಕಲ್ ಮೂಲದ ಪ್ರಯಾಣಿಕರು ಸ್ಕಾರ್ಪಿಯೋ ಕಾರಿನಲ್ಲಿ ಪ್ರಯಾಣಿಸುತ್ತಿದ್ದಾಗ ಈ ಘಟನೆ ನಡೆದಿದೆ. ಅತಿಯಾದ ವೇಗ ಮತ್ತು ನಿರ್ಲಕ್ಷ್ಯವೇ ಅಪಘಾತಕ್ಕೆ ಕಾರಣ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ. ಡಿಕ್ಕಿಯ ರಭಸಕ್ಕೆ ಕಾರಿನ ಮುಂಭಾಗ ಸಂಪೂರ್ಣವಾಗಿ ನುಜ್ಜುಗುಜ್ಜಾಗಿದ್ದು, ಗಾಜುಗಳು ಚೂರಾಗಿ ರಸ್ತೆಯ ತುಂಬೆಲ್ಲಾ ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದವು.

ಅಪಘಾತದಲ್ಲಿ 35 ವರ್ಷದ ಇಮ್ರಾನ್ ದಾದಾಕಲೇದರ್ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಕಾರು ಚಾಲಕ ಅದೃಷ್ಟವಶಾತ್ ಸಣ್ಣಪುಟ್ಟ ಗಾಯಗಳೊಂದಿಗೆ ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಘಟನೆಯನ್ನು ಕಂಡ ಸ್ಥಳೀಯರು ಕೂಡಲೇ 108 ಆಂಬ್ಯುಲೆನ್ಸ್‌ಗೆ ಕರೆ ಮಾಡಿ ಮಾಹಿತಿ ನೀಡಿದರು. ಇಳಕಲ್ ನಗರ ಠಾಣೆಯ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

Read More
Next Story