ಧಾರವಾಡದಲ್ಲಿ ಉದ್ಯೋಗಾಕಾಂಕ್ಷಿಗಳ ಪ್ರತಿಭಟನೆ: ಶೀಘ್ರವೇ ನೇಮಕ ಎಂದ ಸಿಎಂ; ಸರ್ಕಾರದ ವಿರುದ್ಧ ಎಚ್‌ಡಿಕೆ ವಾಗ್ದಾಳಿ
x

ಧಾರವಾಡದಲ್ಲಿ ಉದ್ಯೋಗಾಕಾಂಕ್ಷಿಗಳ ಪ್ರತಿಭಟನೆ: ಶೀಘ್ರವೇ ನೇಮಕ ಎಂದ ಸಿಎಂ; ಸರ್ಕಾರದ ವಿರುದ್ಧ ಎಚ್‌ಡಿಕೆ ವಾಗ್ದಾಳಿ

ಕಾನೂನು ಮತ್ತು ರಚನಾತ್ಮಕ ಅಡೆತಡೆಗಳ ನಡುವೆಯೂ ರಾಜ್ಯ ಸರ್ಕಾರವು ಕಳೆದ ಎರಡೂವರೆ ವರ್ಷಗಳಲ್ಲಿ ವಿವಿಧ ಇಲಾಖೆಗಳಲ್ಲಿ 40,000ಕ್ಕೂ ಹೆಚ್ಚು ನೇಮಕಾತಿಗಳನ್ನು ಪೂರ್ಣಗೊಳಿಸಿದೆ ಎಂದು ಸಿಎಂ ಹೇಳಿದೆ.


Click the Play button to hear this message in audio format

ಸರ್ಕಾರಿ ಹುದ್ದೆಗಳ ನೇಮಕ ವಿಳಂಬ ಖಂಡಿಸಿ ಧಾರವಾಡದಲ್ಲಿ ಉದ್ಯೋಗಾಕಾಂಕ್ಷಿಗಳು ನಡೆಸುತ್ತಿರುವ ಬೃಹತ್ ಪ್ರತಿಭಟನೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪಂದಿಸಿ ಹೇಳಿಕೆ ನೀಡಿದ್ದಾರೆ.

ಪ್ರತಿಭಟನಾನಿರತ ಯುವಜನರ ಆತಂಕ, ನಿರಾಶೆ ಮತ್ತು ಅನಿಶ್ಚಿತತೆಯನ್ನು ತಾವು ಅರ್ಥಮಾಡಿಕೊಂಡಿರುವುದಾಗಿ ತಿಳಿಸಿರುವ ಅವರು, ಪ್ರತಿಯೊಬ್ಬ ಅಭ್ಯರ್ಥಿಯ ಕನಸು ಹಾಗೂ ಕಠಿಣ ಪರಿಶ್ರಮಕ್ಕೆ ಬೆಲೆ ಕೊಡುವ ನಿಟ್ಟಿನಲ್ಲಿ ಬಾಕಿ ಉಳಿದಿರುವ ಎಲ್ಲಾ ಖಾಲಿ ಹುದ್ದೆಗಳನ್ನು ಪಾರದರ್ಶಕವಾಗಿ ಹಾಗೂ ಕಾಲಮಿತಿಯೊಳಗೆ ಭರ್ತಿ ಮಾಡುವುದಾಗಿ ಅಭಯ ನೀಡಿದ್ದಾರೆ.

ಯುವಜನರು ವಿರೋಧ ಪಕ್ಷಗಳ ದಿಕ್ಕುತಪ್ಪಿಸುವ ಮಾತುಗಳಿಗೆ ಕಿವಿಗೊಡದೆ, ತಮ್ಮ ಶಿಕ್ಷಣ ಮತ್ತು ಸಿದ್ಧತೆಯ ಮೇಲೆ ವಿಶ್ವಾಸವಿಡಬೇಕು ಎಂದು ಅವರು ಮನವಿ ಮಾಡಿದ್ದು, ರಾಜ್ಯದಲ್ಲಿ ಉದ್ಭವಿಸಿರುವ ಈ ಬೃಹತ್ ಪ್ರಮಾಣದ ಖಾಲಿ ಹುದ್ದೆಗಳ ಸಮಸ್ಯೆಗೆ ಹಿಂದಿನ ಬಿಜೆಪಿ ಸರ್ಕಾರವೇ ನೇರ ಹೊಣೆ ಎಂದು ಮುಖ್ಯಮಂತ್ರಿಗಳು ಆರೋಪಿಸಿದ್ದಾರೆ.

ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಾಗ ರಾಜ್ಯದಲ್ಲಿ 2.64 ಲಕ್ಷಕ್ಕೂ ಹೆಚ್ಚು ಸರ್ಕಾರಿ ಹುದ್ದೆಗಳು ಖಾಲಿಯಿದ್ದವು. ಹಿಂದಿನ ಸರ್ಕಾರ ಸಕಾಲದಲ್ಲಿ ನೇಮಕಾತಿಗಳನ್ನು ಆರಂಭಿಸದಿರುವುದು ಮತ್ತು ಸೂಕ್ತ ಯೋಜನೆ ರೂಪಿಸದಿರುವುದೇ ಇಷ್ಟು ದೊಡ್ಡ ಮಟ್ಟದ ಹುದ್ದೆಗಳು ಖಾಲಿ ಉಳಿಯಲು ಕಾರಣವಾಗಿದೆ. ಇದರ ಜೊತೆಗೆ ಒಳ ಮೀಸಲಾತಿಗೆ ಸಂಬಂಧಿಸಿದಂತೆ ನ್ಯಾಯಾಲಯದಲ್ಲಿ ಪ್ರಕರಣಗಳಿದ್ದ ಕಾರಣ, ಕಾನೂನಿನ ಚೌಕಟ್ಟಿನಲ್ಲಿ ಜವಾಬ್ದಾರಿಯುತವಾಗಿ ವರ್ತಿಸುವ ಉದ್ದೇಶದಿಂದ ಕೆಲವು ನೇಮಕಾತಿ ಪ್ರಕ್ರಿಯೆಗಳನ್ನು ತಾತ್ಕಾಲಿಕವಾಗಿ ನಿಲ್ಲಿಸಬೇಕಾಯಿತು ಎಂದು ಅವರು ಸ್ಪಷ್ಟಪಡಿಸಿದ್ದಾರೆ.

40,000ಕ್ಕೂ ಹೆಚ್ಚು ಹುದ್ದೆಗಳ ನೇಮಕ

ಇಷ್ಟೆಲ್ಲಾ ಕಾನೂನು ಮತ್ತು ರಚನಾತ್ಮಕ ಅಡೆತಡೆಗಳ ನಡುವೆಯೂ ರಾಜ್ಯ ಸರ್ಕಾರವು ಕಳೆದ ಎರಡೂವರೆ ವರ್ಷಗಳಲ್ಲಿ ವಿವಿಧ ಇಲಾಖೆಗಳಲ್ಲಿ 40,000ಕ್ಕೂ ಹೆಚ್ಚು ನೇಮಕಾತಿಗಳನ್ನು ಪೂರ್ಣಗೊಳಿಸಿದೆ. ವರ್ಷಗಟ್ಟಲೆ ಕಾಯುತ್ತಿರುವ ಅಭ್ಯರ್ಥಿಗಳಿಗೆ ಅನ್ಯಾಯವಾಗಬಾರದು ಎಂಬ ಸದುದ್ದೇಶದಿಂದ ಮುಂಬರುವ ನೇಮಕಾತಿಗಳಿಗೆ ಗರಿಷ್ಠ ವಯೋಮಿತಿಯನ್ನು 5 ವರ್ಷಗಳವರೆಗೆ ಸಡಿಲಿಸಲಾಗಿದೆ. ವಿರೋಧ ಪಕ್ಷದ ನಾಯಕರು ತಮ್ಮ ರಾಜಕೀಯ ಬೇಳೆ ಬೇಯಿಸಿಕೊಳ್ಳಲು ನಿರಪರಾಧಿ ವಿದ್ಯಾರ್ಥಿಗಳನ್ನು ಬಳಸಿಕೊಳ್ಳುತ್ತಿರುವುದು ಖಂಡನೀಯ ಎಂದು ಸಿದ್ದರಾಮಯ್ಯ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಕುರ್ಚಿ ತಿಕ್ಕಾಟದಲ್ಲಿ 3 ವರ್ಷ ಪೋಲು: ಸರ್ಕಾರದ ವಿರುದ್ಧ ಎಚ್‌ಡಿಕೆ ಕಿಡಿ

ಮುಖ್ಯಮಂತ್ರಿಗಳ ಈ ಸಮಜಾಯಿಷಿಯ ಬೆನ್ನಲ್ಲೇ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ರಾಜ್ಯ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಧಾರವಾಡದಲ್ಲಿ ಅಸಂಖ್ಯಾತ ಉದ್ಯೋಗಾಕಾಂಕ್ಷಿಗಳು ಬೀದಿಗಿಳಿದಿರುವುದನ್ನು ರಾಜ್ಯ ಸರ್ಕಾರವು ಲಘುವಾಗಿ ಪರಿಗಣಿಸಬಾರದು ಎಂದು ಎಚ್ಚರಿಸಿದ್ದಾರೆ. ರಾಜ್ಯದಲ್ಲಿ 2.94 ಲಕ್ಷ ಸರ್ಕಾರಿ ಹುದ್ದೆಗಳು ಖಾಲಿ ಬಿದ್ದಿದ್ದರೂ, ಕೇವಲ ಸಂಪುಟ ದರ್ಜೆಯ ಹುದ್ದೆಗಳು ಮಾತ್ರ ಸೂಪರ್ ಫಾಸ್ಟ್ ಆಗಿ ಭರ್ತಿಯಾಗುತ್ತಿವೆ. ಆಡಳಿತ ಸುಧಾರಣೆ ಆಯೋಗದ ಆರ್.ವಿ. ದೇಶಪಾಂಡೆ ಅವರ ವರದಿಯ ಪ್ರಕಾರವೇ ರಾಜ್ಯದಲ್ಲಿ 7 ಲಕ್ಷ ನಿರುದ್ಯೋಗಿಗಳಿದ್ದಾರೆ. ಹಂತ ಹಂತವಾಗಿ ಖಾಲಿ ಹುದ್ದೆಗಳನ್ನು ಭರ್ತಿ ಮಾಡಬೇಕಿದ್ದ ಸರ್ಕಾರ, ಕುರ್ಚಿ ತಿಕ್ಕಾಟ ಹಾಗೂ ವರ್ಗಾವಣೆ ದಂಧೆಯಲ್ಲಿ ಅಮೂಲ್ಯವಾದ ಮೂರು ವರ್ಷಗಳನ್ನು ಪೋಲು ಮಾಡಿದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ನಿರುದ್ಯೋಗ ಎಂಬುದು ಸದಾ ಕುದಿಯುವ ಜ್ವಾಲಾಮುಖಿ ಎಂಬುದನ್ನು ಸರ್ಕಾರ ಮರೆಯಬಾರದು. ಶಿಕ್ಷಣ, ಆರೋಗ್ಯ ಹಾಗೂ ಪೊಲೀಸ್ ಇಲಾಖೆಗಳಲ್ಲಿ ಅತಿ ಹೆಚ್ಚು ಹುದ್ದೆಗಳು ಖಾಲಿ ಇವೆ. ರಾಜಧಾನಿ ಬೆಂಗಳೂರಿನ 18 ಆಯಕಟ್ಟಿನ ಪೊಲೀಸ್ ಠಾಣೆಗಳಲ್ಲಿ ಇನ್ಸ್‌ಪೆಕ್ಟರ್‌ಗಳೇ ಇಲ್ಲದಿರುವುದು ಸರ್ಕಾರದ ಆಡಳಿತ ವೈಫಲ್ಯಕ್ಕೆ ಕನ್ನಡಿ ಹಿಡಿದಿದೆ. ಆಡಳಿತಗಾರರು ಕೂಡಲೇ ಎಚ್ಚೆತ್ತು ಬಜೆಟ್‌ನಲ್ಲಿ ಪ್ರತ್ಯೇಕ ಹಣ ಮೀಸಲಿಟ್ಟು ನೇಮಕಾತಿಗೆ ಚಾಲನೆ ನೀಡಬೇಕು. ವಿಧಾನಸೌಧದ 3ನೇ ಮಹಡಿಯಿಂದ ಕೆಳಗಿಳಿದು ಬಂದು ಯುವಜನರ ದನಿ ಆಲಿಸಬೇಕು. ಇಲ್ಲವಾದರೆ ಕಾಂಗ್ರೆಸ್ ಸರ್ಕಾರ ಯುವಜನರ ಆಕ್ರೋಶಕ್ಕೆ ತಕ್ಕ ಬೆಲೆ ತೆರಬೇಕಾಗುತ್ತದೆ ಎಂದು ಗುಡುಗಿರುವ ಕುಮಾರಸ್ವಾಮಿ, ಪ್ರತಿಭಟನಾಕಾರರು ಶಾಂತಿಯುತವಾಗಿ ಹೋರಾಟ ಮಾಡುವಂತೆ ಸಲಹೆ ನೀಡಿದ್ದಾರೆ.

ಧಾರವಾಡದಲ್ಲಿ ಭಾರಿ ಭದ್ರತೆ, ಕಮಿಷನರ್ ಮೊಕ್ಕಾಂ

ಸರ್ಕಾರಿ ನೇಮಕಾತಿ ಪ್ರಕ್ರಿಯೆಯಲ್ಲಿನ ವಿಳಂಬವನ್ನು ಖಂಡಿಸಿ ಅಖಿಲ ಕರ್ನಾಟಕ ರಾಜ್ಯ ವಿದ್ಯಾರ್ಥಿಗಳ ಸಂಘಟನೆ (ಅಕ್ಸಾ) ಹಾಗೂ ಬಿಜೆಪಿ ನೇತೃತ್ವದಲ್ಲಿ ಧಾರವಾಡದಲ್ಲಿ ಬೃಹತ್ ಪ್ರತಿಭಟನೆ ನಡೆಯುತ್ತಿದೆ. ಉದ್ಯೋಗದ ನಿರೀಕ್ಷೆಯಲ್ಲಿರುವ ಸಾವಿರಾರು ಅಭ್ಯರ್ಥಿಗಳು ಮತ್ತು ರಾಜಕೀಯ ಕಾರ್ಯಕರ್ತರು ಒಗ್ಗೂಡಿ ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕುತ್ತಿದ್ದಾರೆ. ಪ್ರತಿಭಟನೆಯ ಕಾವು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ನಗರದ ಪ್ರಮುಖ ವೃತ್ತಗಳಲ್ಲಿ, ವಿಶೇಷವಾಗಿ ಶ್ರೀನಗರ ವೃತ್ತ ಮತ್ತು ಸಪ್ತಾಪುರ ಭಾಗದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ. ಹುಬ್ಬಳ್ಳಿ-ಧಾರವಾಡ ಮಹಾನಗರ ಪೊಲೀಸ್ ಕಮಿಷನರ್ ಎನ್. ಶಶಿಕುಮಾರ್ ಅವರು ಖುದ್ದಾಗಿ ಸ್ಥಳದಲ್ಲಿ ಮೊಕ್ಕಾಂ ಹೂಡಿದ್ದು, ಕಾನೂನು ಸುವ್ಯವಸ್ಥೆ ಕಾಪಾಡಲು ಹೆಚ್ಚಿನ ಪೊಲೀಸ್ ತುಕಡಿಗಳನ್ನು ನಿಯೋಜಿಸಿದ್ದಾರೆ.

Read More
Next Story