
ರೈತರ ಬೇಡಿಕೆಗೆ ಕೇಂದ್ರ ಒಪ್ಪದಿದ್ದರೆ ಅ.22ಕ್ಕೆ ರೈತರ ಜನಾಂದೋಲನದ ಎಚ್ಚರಿಕೆ
ರೈತರ ಬೃಹತ್ ಪಾದಯಾತ್ರೆಯು ಧಾರವಾಡ ತಾಲೂಕಿನ ಗುಳೇದಕೊಪ್ಪ ಗ್ರಾಮವನ್ನು ತಲುಪಲಿದ್ದು, ಅಲ್ಲಿ ರೈತರ ಜೊತೆ ಮಾತುಕತೆ ನಡೆಸಲು ಕೇಂದ್ರ ಸರ್ಕಾರದ ಉನ್ನತ ಮಟ್ಟದ ನಿಯೋಗವೊಂದು ಆಗಮಿಸುತ್ತಿದೆ.
ರೈತರ ಕೃಷಿ ಉತ್ಪನ್ನಗಳಿಗೆ ನ್ಯಾಯಯುತ ಬೆಲೆ ಹಾಗೂ ಶಾಸನಬದ್ಧ ಕನಿಷ್ಠ ಬೆಂಬಲ ಬೆಲೆ ಖಾತರಿಗಾಗಿ ಆಗ್ರಹಿಸಿ ನಡೆಯುತ್ತಿರುವ ಪಾದಯಾತ್ರೆ ನಿರ್ಣಾಯಕ ಘಟ್ಟ ತಲುಪಿದೆ. “ಕೇಂದ್ರದ ನಿಯೋಗವು ನಮ್ಮ ನ್ಯಾಯಯುತ ಬೇಡಿಕೆಗಳಿಗೆ ಒಪ್ಪಿಗೆ ಸೂಚಿಸಿದರೆ ನಾವು ರಸ್ತೆಯಲ್ಲೇ ಹಬ್ಬ ಮಾಡುತ್ತೇವೆ. ಒಂದು ವೇಳೆ ನಮ್ಮ ಮನವಿಯನ್ನು ತಿರಸ್ಕರಿಸಿದರೆ, ಇದೇ ಅಕ್ಟೋಬರ್ 22ರಂದು ಯರಿಕೊಪ್ಪ ಗ್ರಾಮದಲ್ಲಿ ಬರೊಬ್ಬರಿ 50 ಲಕ್ಷ ರೈತರನ್ನು ಒಗ್ಗೂಡಿಸಿ ದೇಶವೇ ಬೆಚ್ಚಿಬೀಳುವಂತಹ ಮಹಾ ಜನಾಂದೋಲನ ರೂಪಿಸಲಿದ್ದೇವೆ” ಎಂದು ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆಯ ರಾಜ್ಯಾಧ್ಯಕ್ಷ ಚೂನಪ್ಪ ಪೂಜಾರಿ ಕೇಂದ್ರ ಸರ್ಕಾರಕ್ಕೆ ನೇರ ಎಚ್ಚರಿಕೆ ನೀಡಿದ್ದಾರೆ.
ಧಾರವಾಡದಲ್ಲಿ ಭಾನುವಾರ ಮಾತನಾಡಿದ ಅವರು, ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಅವರ ಹೇಳಿಕೆಗಳಿಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಲ್ಲದೆ, ರೈತರ ಜ್ವಲಂತ ಸಮಸ್ಯೆಗಳನ್ನು ಬಗೆಹರಿಸಲು ಸಭೆಗೆ ಖುದ್ದು ಸಚಿವರೇ ಹಾಜರಾಗಬೇಕೆಂದು ಪಟ್ಟು ಹಿಡಿದಿದ್ದಾರೆ. ರೈತರ ಬೃಹತ್ ಪಾದಯಾತ್ರೆ ಬೆಳಗಾವಿ ಗಡಿ ದಾಟಿ ಧಾರವಾಡ ಜಿಲ್ಲೆಯತ್ತ ಮುನ್ನುಗ್ಗುತ್ತಿದೆ. ಪಾದಯಾತ್ರೆಯು ಧಾರವಾಡ ತಾಲೂಕಿನ ಗುಳೇದಕೊಪ್ಪ ಗ್ರಾಮವನ್ನು ತಲುಪಲಿದ್ದು, ಅಲ್ಲಿ ರೈತರ ಜೊತೆ ಮಾತುಕತೆ ನಡೆಸಲು ಕೇಂದ್ರ ಸರ್ಕಾರದ ಉನ್ನತ ಮಟ್ಟದ ನಿಯೋಗವೊಂದು ಆಗಮಿಸುತ್ತಿದೆ. "ಗುಳೇದಕೊಪ್ಪಕ್ಕೆ ಕೇಂದ್ರದ ನಿಯೋಗ ಆಗಮಿಸಲಿದ್ದು, ಅವರೊಂದಿಗೆ ಧಾರವಾಡ ಹಾಗೂ ಬೆಳಗಾವಿ ಜಿಲ್ಲಾಧಿಕಾರಿಗಳು ಭಾಗವಹಿಸಲಿದ್ದಾರೆ. ಜಿಲ್ಲಾಧಿಕಾರಿಗಳು ಮತ್ತು ಕೇಂದ್ರದ ಅಧಿಕಾರಿಗಳು ರೈತರ ಮುಖಾಮುಖಿ ಕುಳಿತು ನಮ್ಮ ಅಹವಾಲುಗಳನ್ನು ಆಲಿಸಲಿದ್ದಾರೆ. ಸಭೆಯಲ್ಲಿ ಕೇಂದ್ರದ ನಿಯೋಗ ನಮ್ಮ ಬೇಡಿಕೆಗಳಿಗೆ ಸಕಾರಾತ್ಮಕವಾಗಿ ಸ್ಪಂದಿಸಿದರೆ, ನಾವು ಹೋರಾಟವನ್ನು ವಿಜಯೋತ್ಸವದ ಹಬ್ಬವನ್ನಾಗಿ ಆಚರಿಸುತ್ತೇವೆ. ಇಲ್ಲವಾದಲ್ಲಿ, ನಮ್ಮ ಮುಂದಿನ ಹೆಜ್ಜೆ ಅತ್ಯಂತ ಕ್ರಾಂತಿಕಾರಕವಾಗಿರಲಿದೆ. ಆದ್ದರಿಂದ, ಧಾರವಾಡದ ಸಂಸದರೂ ಹಾಗೂ ಕೇಂದ್ರದ ಪ್ರಭಾವಿ ಸಚಿವರೂ ಆಗಿರುವ ಪ್ರಲ್ಹಾದ್ ಜೋಶಿ ಅವರು ಖುದ್ದಾಗಿ ಈ ಸಂಜೆಯ ಸಭೆಗೆ ಬರಲೇಬೇಕು" ಎಂದು ಆಗ್ರಹಿಸಿದರು.
"ಡಿ.ಕೆ. ಶಿವಕುಮಾರ್ ರೀತಿ ರಕ್ಷಣೆ ಕೊಡ್ತೇವೆ"
ರೈತರ ಸಭೆಗೆ ಬರಲು ಸಚಿವರು ಹಿಂದೇಟು ಹಾಕಬಾರದು ಎಂದು ಸ್ಪಷ್ಟಪಡಿಸಿದ ಚೂನಪ್ಪ ಪೂಜಾರಿ, ಸಚಿವರಿಗೆ ಸಂಪೂರ್ಣ ಭದ್ರತೆಯ ಭರವಸೆ ನೀಡಿದರು. "ಪ್ರಲ್ಹಾದ್ ಜೋಶಿ ಅವರು ನಮ್ಮ ಸಭೆಗೆ ಬರಲು ಯಾವುದೇ ಆತಂಕ ಪಡಬೇಕಿಲ್ಲ. ಅವರಿಗೆ ಯಾವುದೇ ಸಣ್ಣ ತೊಂದರೆಯೂ ಆಗದಂತೆ ನಾವೇ ಸ್ವತಃ ನೋಡಿಕೊಳ್ಳುತ್ತೇವೆ. ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ತಾವಾಗಿಯೇ ನಮ್ಮ ಹೋರಾಟದ ಸ್ಥಳಕ್ಕೆ ಬಂದು ಹೋದರು. ಅವರಿಗೆ ರೈತರಿಂದ ಯಾವುದೇ ರೀತಿಯ ಧಕ್ಕೆ ಅಥವಾ ಅಪಚಾರವಾಗದಂತೆ ನಾವು ಎಷ್ಟು ಗೌರವದಿಂದ ನಡೆಸಿಕೊಂಡಿದ್ದೇವೋ, ಅದೇ ರೀತಿ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಅವರಿಗೂ ಸಂಪೂರ್ಣ ಗೌರವ ಮತ್ತು ರಕ್ಷಣೆ ನೀಡುತ್ತೇವೆ. ರೈತರು ಶಾಂತಿಪ್ರಿಯರೇ ಹೊರತು ಹಿಂಸಾವಾದಿಗಳಲ್ಲ" ಎಂದು ಸ್ಪಷ್ಟಪಡಿಸಿದರು.
ಇದೇ ವೇಳೆ ಮಾತನಾಡಿದ ಪ್ರಖರ ರೈತ ಮುಖಂಡ ಶಶಿಕಾಂತ್ ಗುರೂಜಿ, "ರೈತರು ನನ್ನನ್ನು ಟಾರ್ಗೆಟ್ ಮಾಡುತ್ತಿದ್ದಾರೆ" ಎಂಬ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಅವರ ಹೇಳಿಕೆಯನ್ನು ತೀವ್ರ ತರಾಟೆಗೆ ತೆಗೆದುಕೊಂಡರು. ಪ್ರಲ್ಹಾದ್ ಜೋಶಿ ಅವರೇ, ನೀವು ಕೇಂದ್ರ ಸರ್ಕಾರದ ಹಿರಿಯ ಮಂತ್ರಿಗಳು. ನಾವು ಇಡೀ ಜಗತ್ತಿಗೆ ಅನ್ನ ಕೊಡುವ ಸಾಮಾನ್ಯ ಅನ್ನದಾತರು. ನಿಮ್ಮಂತಹ ಜವಾಬ್ದಾರಿಯುತ ಸ್ಥಾನದಲ್ಲಿರುವ ಹಿರಿಯ ರಾಜಕಾರಣಿ ಬಾಯಲ್ಲಿ 'ರೈತರು ನನ್ನನ್ನು ಟಾರ್ಗೆಟ್ ಮಾಡುತ್ತಿದ್ದಾರೆ' ಎಂಬ ಶಬ್ದ ಬಳಕೆ ಶೋಭೆ ತರುವುದಿಲ್ಲ. ಇದು ನಿಮಗೆ ಸೌಜನ್ಯವಲ್ಲ. ನೀವು ಕಲ್ಲಿದ್ದಲು, ಗಣಿ, ಆಹಾರ ಮತ್ತು ಸಾರ್ವಜನಿಕ ವಿತರಣೆ ಹಾಗೂ ಸಕ್ಕರೆಯಂತಹ ಮೂರ್ನಾಲ್ಕು ಪ್ರಮುಖ ಖಾತೆಗಳನ್ನು ನಿಭಾಯಿಸುತ್ತಿರುವ ಅನುಭವಿಗಳು. ಬೀದಿಯಲ್ಲಿ ಕುಳಿತ ರೈತ ನಿಮ್ಮನ್ನು ಏಕೆ ಟಾರ್ಗೆಟ್ ಮಾಡುತ್ತಾನೆ? ಎಂದು ಪ್ರಶ್ನಿಸಿದರು.
ರಾಜಕೀಯ ಪ್ರೇರಿತ ಆರೋಪಕ್ಕೆ ತಿರುಗೇಟು
"ಜೋಶಿ ಅವರೇ, ನೀವೇನು ಬಂದು ನಮ್ಮ ಹಳ್ಳಿಯ ಗ್ರಾಮ ಪಂಚಾಯತ್ ಚುನಾವಣೆಗೆ ಸ್ಪರ್ಧಿಸುತ್ತಿದ್ದೀರಾ? ನಿಮ್ಮ ವಿರುದ್ಧ ರಾಜಕೀಯ ಮಾಡಲು ನಾವೇನು ನಿಮ್ಮ ಕ್ಷೇತ್ರದವರೇ? ನನ್ನ ಮತ ಇರುವುದು ಧಾರವಾಡ ಲೋಕಸಭಾ ಕ್ಷೇತ್ರದಲ್ಲಿ ಅಲ್ಲ, ಚಿಕ್ಕೋಡಿ ಲೋಕಸಭಾ ಕ್ಷೇತ್ರದಲ್ಲಿ! ರೈತ ಸಂಘದ ರಾಜ್ಯಾಧ್ಯಕ್ಷ ಚೂನಪ್ಪ ಪೂಜಾರಿ ಅವರ ಮತ ಇರುವುದೂ ಚಿಕ್ಕೋಡಿ ಕ್ಷೇತ್ರದಲ್ಲಿ. ಹೀಗಿರುವಾಗ ನಿಮ್ಮನ್ನು ರಾಜಕೀಯವಾಗಿ ಟಾರ್ಗೆಟ್ ಮಾಡುವ ಪ್ರಶ್ನೆ ಎಲ್ಲಿಂದ ಬರುತ್ತದೆ?" "ನಾವು ಯಾವುದೇ ರಾಜಕೀಯ ಪಕ್ಷದ ಏಜೆಂಟರಲ್ಲ. ರಾಜಕಾರಣ ಮುಕ್ತವಾಗಿ, ಜಾತಿ-ಧರ್ಮಗಳನ್ನು ಬದಿಗಿಟ್ಟು ಅನ್ನದಾತರು ರಸ್ತೆಯಲ್ಲಿ ಕುಳಿತಿದ್ದಾರೆ. ನಮ್ಮ ಹೋರಾಟಕ್ಕೆ ಕೇವಲ ರೈತರಷ್ಟೇ ಅಲ್ಲ, ಲಕ್ಷಾಂತರ ಸಾಮಾನ್ಯ ನಾಗರಿಕರು, ಹಿರಿಯ ವಕೀಲರು, ನೂರಾರು ವೈದ್ಯರು ಹಾಗೂ ಸಾರ್ವಜನಿಕ ಸಂಘಟನೆಗಳು ಬೆಂಬಲ ನೀಡಿವೆ. ಇವರೆಲ್ಲರೂ ನಿಮ್ಮನ್ನು ಟಾರ್ಗೆಟ್ ಮಾಡಲು ಬಂದಿದ್ದಾರೆಯೇ?" ಎಂದು ತೀಕ್ಷ್ಣವಾಗಿ ಪ್ರಶ್ನಿಸಿದರು.
ರೈತರ ಆರ್ಥಿಕ ಅಸಹಾಯಕತೆ ಮತ್ತು ಬೇಡಿಕೆಯ ನ್ಯಾಯಸಮ್ಮತತೆಯನ್ನು ಎತ್ತಿಹಿಡಿದ ಶಶಿಕಾಂತ್ ಗುರೂಜಿ, ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಸಂವಿಧಾನದ ಆಶಯಗಳನ್ನು ಉಲ್ಲೇಖಿಸಿದರು. "ನಾವಿಲ್ಲಿ ಶೋಕಿಗಾಗಿ ಕುಳಿತಿಲ್ಲ. ತಿಂಗಳುಗಟ್ಟಲೆ ರಸ್ತೆಯಲ್ಲಿ ಬಿದ್ದು ಖರ್ಚು ಮಾಡಲು ನಮಗೆ ಸರ್ಕಾರದಿಂದ ತಿಂಗಳ ತಿಂಗಳು ಸಂಬಳ ಬರುತ್ತಿಲ್ಲ. ನಾವೇನು ದೇಶದ್ರೋಹದ ಕೆಲಸ ಮಾಡುತ್ತಿಲ್ಲ. ಬಾಬಾ ಸಾಹೇಬ್ ಅಂಬೇಡ್ಕರ್ ಅವರು ನಮಗೆ ನೀಡಿರುವ ಸಂವಿಧಾನಬದ್ಧ ಹಕ್ಕಿನ ಚೌಕಟ್ಟಿನಲ್ಲೇ ದೇಶದ ಸಚಿವರ ಮುಂದೆ ನಮ್ಮ ಬದುಕಿನ ಹಕ್ಕನ್ನು ಕೇಳುತ್ತಿದ್ದೇವೆ. ನಮಗೆ ಕೃಷಿ ಉತ್ಪನ್ನಗಳಿಗೆ ಖಾತರಿಯಾದ ಎಂಎಸ್ಪಿ ಜಾರಿ ಮಾಡಿಕೊಡಿ, ನಾವು ಇವತ್ತೇ ನಮ್ಮ ಊರುಗಳಿಗೆ, ಹೊಲಗಳಿಗೆ ಹಿಂತಿರುಗುತ್ತೇವೆ."
"ನೀವು ಆಹಾರ ಮತ್ತು ಸಕ್ಕರೆ ಖಾತೆಯ ಸಚಿವರಾಗಿರುವುದರಿಂದಲೇ ನಾವು ನಿಮ್ಮ ಬಳಿ ಬರುತ್ತಿದ್ದೇವೆ. ಒಂದು ವೇಳೆ ಈ ಖಾತೆಯನ್ನು ಬೇರೆ ಜಿಲ್ಲೆಯ ಅಥವಾ ಬೇರೆ ರಾಜ್ಯದ ಸಚಿವರಿಗೆ ಕೊಟ್ಟಿದ್ದರೆ, ನಮ್ಮ ಹೋರಾಟ ಅವರ ಕಡೆಗೆ ಹೋಗುತ್ತಿತ್ತು. ಅಧಿಕಾರದಲ್ಲಿದ್ದಾಗ ಜನರ ಕಣ್ಣೀರು ಒರೆಸಬೇಕೇ ಹೊರತು 'ಟಾರ್ಗೆಟ್' ಎಂಬ ಕುಂಟುನೆಪ ಹೇಳಬಾರದು. ಕೂಡಲೇ ಆ ಪದವನ್ನು ಹಿಂಪಡೆಯಿರಿ," ಎಂದು ಆಗ್ರಹಿಸಿದರು.
