ಸರ್ಕಾರದ ಸೇಡಿನ ಕ್ರಮ; ಶಾಶ್ವತ ಕೃಷಿ ವಲಯ ಘೋಷಣೆಗೆ ದೇವನಹಳ್ಳಿ ರೈತರ ಆಕ್ರೋಶ
x

ಚನ್ನರಾಯಪಟ್ಟಣದಲ್ಲಿ ಪ್ರತಿಭಟನೆ ಮುಂದುವರಿಸುತ್ತಿರುವ ರೈತರು.

ಸರ್ಕಾರದ ಸೇಡಿನ ಕ್ರಮ; 'ಶಾಶ್ವತ ಕೃಷಿ ವಲಯ' ಘೋಷಣೆಗೆ ದೇವನಹಳ್ಳಿ ರೈತರ ಆಕ್ರೋಶ

ಶಾಶ್ವತ ಕೃಷಿ ವಲಯ" ಎಂದರೆ ಈ ಜಮೀನನ್ನು ಕೃಷಿಯೇತರ ಉದ್ದೇಶಗಳಿಗೆ ಬಳಸುವಂತಿಲ್ಲ ಮತ್ತು ಸುಲಭವಾಗಿ ಮಾರಾಟ ಮಾಡಲು ಅಥವಾ ಬೇರೆ ಉದ್ಯಮ ಸ್ಥಾಪಿಸಲು ಸಾಧ್ಯವಾಗುವುದಿಲ್ಲ.


Click the Play button to hear this message in audio format

ಐತಿಹಾಸಿಕ ಹೋರಾಟದ ಮೂಲಕ ತಮ್ಮ ಭೂಮಿ ಉಳಿಸಿಕೊಂಡಿದ್ದ ದೇವನಹಳ್ಳಿ ಭಾಗದ ರೈತರು, ಇದೀಗ ಸರ್ಕಾರದ ಹೊಸ ನಿರ್ಧಾರದ ವಿರುದ್ಧ ಸಿಡಿದೆದ್ದಿದ್ದಾರೆ. ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ ಸ್ವಾಧೀನಪಡಿಸಿಕೊಳ್ಳಲು ಉದ್ದೇಶಿಸಿದ್ದ 1,777 ಎಕರೆ ಜಮೀನನ್ನು ಸರ್ಕಾರ 'ಶಾಶ್ವತ ವಿಶೇಷ ಕೃಷಿ ವಲಯ' ಎಂದು ಘೋಷಿಸಿರುವುದು ರೈತರ ಆಕ್ರೋಶಕ್ಕೆ ಕಾರಣವಾಗಿದೆ.

ದೇವನಹಳ್ಳಿ ತಾಲೂಕಿನ ಚನ್ನರಾಯಪಟ್ಟಣ ಹೋಬಳಿಯ 13 ಹಳ್ಳಿಗಳ ಸುಮಾರು 1,777 ಎಕರೆ ಫಲವತ್ತಾದ ಕೃಷಿ ಭೂಮಿಯನ್ನು ಕೆಐಎಡಿಬಿ ಸ್ವಾಧೀನಪಡಿಸಿಕೊಳ್ಳಲು ಮುಂದಾಗಿತ್ತು. ಇದನ್ನು ವಿರೋಧಿಸಿ ರೈತರು ನಡೆಸಿದ ಅಹೋರಾತ್ರಿ ಧರಣಿ ರಾಷ್ಟ್ರಮಟ್ಟದಲ್ಲಿ ಸದ್ದು ಮಾಡಿತ್ತು. ರೈತ ನಾಯಕ ರಾಕೇಶ್ ಟಿಕಾಯತ್, ನಟ ಪ್ರಕಾಶ್ ರಾಜ್ ಸೇರಿದಂತೆ ಅನೇಕ ಗಣ್ಯರು ಈ ಹೋರಾಟಕ್ಕೆ ಬೆಂಬಲ ನೀಡಿದ್ದರು. ರೈತರ ಪಟ್ಟು ಮತ್ತು ತೀವ್ರ ವಿರೋಧಕ್ಕೆ ಮಣಿದ ರಾಜ್ಯ ಸರ್ಕಾರ, ಮುಖ್ಯಮಂತ್ರಿಗಳ ನೇತೃತ್ವದಲ್ಲಿ ಸಭೆ ನಡೆಸಿ ಭೂಸ್ವಾಧೀನ ಪ್ರಕ್ರಿಯೆಯನ್ನು ಕೈಬಿಡುವುದಾಗಿ ಘೋಷಿಸಿತ್ತು. ಇದು ರೈತರಿಗೆ ಸಿಕ್ಕ ದೊಡ್ಡ ಗೆಲುವಾಗಿತ್ತು.

ಸರ್ಕಾರದ ಹೊಸ 'ಕಳ್ಳಾಟ'ದ ಆರೋಪ:

ಸ್ವಾಧೀನ ಕೈಬಿಟ್ಟ ಬೆನ್ನಲ್ಲೇ ಸರ್ಕಾರವು ಈ 1,777 ಎಕರೆ ಪ್ರದೇಶವನ್ನು 'ಶಾಶ್ವತ ವಿಶೇಷ ಕೃಷಿ ವಲಯ' ಎಂದು ಘೋಷಿಸಿದೆ. ಈ ನಡೆ ರೈತರನ್ನು ಕೆರಳಿಸಿದೆ. "ಶಾಶ್ವತ ಕೃಷಿ ವಲಯ" ಎಂದರೆ ಈ ಜಮೀನನ್ನು ಕೃಷಿಯೇತರ ಉದ್ದೇಶಗಳಿಗೆ ಬಳಸುವಂತಿಲ್ಲ ಮತ್ತು ಸುಲಭವಾಗಿ ಮಾರಾಟ ಮಾಡಲು ಅಥವಾ ಬೇರೆ ಉದ್ಯಮ ಸ್ಥಾಪಿಸಲು ಸಾಧ್ಯವಾಗುವುದಿಲ್ಲ.

ಈ ಬಗ್ಗೆ "ದ ಫೆಡರಲ್ ಕರ್ನಾಟಕ"ದೊಂದಿಗೆ ಮಾತನಾಡಿದ ರೈತರು, "ಸರ್ಕಾರ ನಮ್ಮ ಮೇಲೆ ದ್ವೇಷದ ರಾಜಕಾರಣ ಮಾಡುತ್ತಿದೆ. ನೇರವಾಗಿ ಭೂಮಿ ಪಡೆಯಲು ಸಾಧ್ಯವಾಗದಿದ್ದಾಗ, ಈ ರೀತಿ ಪರೋಕ್ಷವಾಗಿ ನಮ್ಮನ್ನು ಹಣಿಯಲು ಮುಂದಾಗಿದೆ. ಇದು ಶುದ್ಧ ಸೇಡಿನ ಕ್ರಮ. ನಮ್ಮನ್ನು ಬೆದರಿಸಿ, ನಾವೇ ಬೇಸತ್ತು ಭೂಮಿ ನೀಡುವಂತೆ ಮಾಡುವ ತಂತ್ರವಿದು. ಆದರೆ ನಾವು ಇದಕ್ಕೆ ಬಗ್ಗುವುದಿಲ್ಲ," ಎಂದು ಕಿಡಿಕಾರಿದ್ದಾರೆ.

ಫೆ. 27 ರಂದು 'ಭೂಮಿ ಹಬ್ಬ'

ಭೂಸ್ವಾಧೀನದಿಂದ ತಮ್ಮ ಜಮೀನು ಉಳಿಸಿಕೊಂಡ ಸಂತಸ ಹಾಗೂ ಮುಂದಿನ ಹೋರಾಟದ ರೂಪರೇಷೆ ನಿರ್ಧರಿಸಲು ರೈತರು ಇದೇ ಫೆಬ್ರವರಿ 27 ರಂದು ಚನ್ನರಾಯಪಟ್ಟಣದಲ್ಲಿ ಬೃಹತ್ "ಭೂಮಿ ಹಬ್ಬ" ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದಾರೆ. ಅಂದು ನಡೆದ ಹೋರಾಟಕ್ಕೆ ಬೆಂಬಲ ನೀಡಿದ್ದ ಎಲ್ಲಾ ಪ್ರಮುಖ ನಾಯಕರನ್ನು ಈ ಕಾರ್ಯಕ್ರಮಕ್ಕೆ ಆಹ್ವಾನಿಸಲಾಗಿದೆ. ಇದೇ ವೇದಿಕೆಯಲ್ಲಿ, ಸರ್ಕಾರದ 'ಶಾಶ್ವತ ವಿಶೇಷ ಕೃಷಿ ವಲಯ' ಘೋಷಣೆಯ ವಿರುದ್ಧ ಯಾವ ರೀತಿ ಹೋರಾಟ ನಡೆಸಬೇಕು ಎಂಬುದರ ಕುರಿತು ಮಹತ್ವದ ಚರ್ಚೆ ನಡೆಯಲಿದೆ.

ಸರ್ಕಾರ ಒಂದು ಕಡೆ ರೈತರ ಹಿತ ಕಾಯುವ ಮಾತುಗಳನ್ನಾಡುತ್ತಲೇ, ಇನ್ನೊಂದೆಡೆ ಇಂತಹ ಕಾನೂನು ತೊಡಕುಗಳನ್ನು ಸೃಷ್ಟಿಸುತ್ತಿರುವುದು ರೈತ ಸಮುದಾಯದ ನಂಬಿಕೆ ಕಳೆದುಕೊಳ್ಳುವಂತೆ ಮಾಡಿದೆ ಎಂಬುದು ಸದ್ಯದ ಅಭಿಪ್ರಾಯ.

Read More
Next Story