
Bomb Threat| ದೆಹಲಿ ಪೊಲೀಸರಿಂದ ಮೈಸೂರಿನಲ್ಲಿ ಆರೋಪಿ ಬಂಧನ
ವಿ.ವಿ. ಪುರಂ ಪೊಲೀಸರ ಸಹಕಾರದೊಂದಿಗೆ ಶನಿವಾರ ಮುಂಜಾನೆ ಶ್ರೀನಿವಾಸ್ ಮನೆ ಮೇಲೆ ದಾಳಿ ನಡೆಸಿದ ತಂಡ, ಆತನನ್ನು ವಶಕ್ಕೆ ಪಡೆದಿದೆ. ಆರೋಪಿಯಿಂದ ಒಂದು ಲ್ಯಾಪ್‌ಟಾಪ್ ಹಾಗೂ ಹಲವು ಸಿಮ್ ಕಾರ್ಡ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ.
ಕಳೆದ ಕೆಲ ದಿನಗಳಿಂದ ದೇಶದ ವಿವಿಧ ಭಾಗಗಳ ಸರ್ಕಾರಿ ಕಚೇರಿಗಳು, ಶಾಲೆಗಳು ಹಾಗೂ ನ್ಯಾಯಾಲಯಗಳಿಗೆ ಇ-ಮೇಲ್ ಮೂಲಕ ಬಾಂಬ್ ಬೆದರಿಕೆ ಸಂದೇಶ ರವಾನಿಸುತ್ತಿದ್ದ ಆರೋಪಿಯನ್ನು ದೆಹಲಿ ಪೊಲೀಸರ ವಿಶೇಷ ತಂಡ ಮೈಸೂರಿನಲ್ಲಿ ಬಂಧಿಸಿದೆ.
ಮೈಸೂರಿನ ಬೃಂದಾವನ ಬಡಾವಣೆ ನಿವಾಸಿ ಶ್ರೀನಿವಾಸ್ ಬಂಧಿತ ಆರೋಪಿ. ಮೈಸೂರಿನಲ್ಲೇ ಕುಳಿತು ದೆಹಲಿಯ ಶಾಲೆಗಳು, ನ್ಯಾಯಾಲಯಗಳಿಗೆ ಬೆದರಿಕೆ ಹಾಕುತ್ತಿದ್ದ. ತಾಂತ್ರಿಕ ಮಾರ್ಗಗಳ ಮೂಲಕ ಗುರುತನ್ನು ಮರೆಮಾಚಿ ಸಂದೇಶ ಕಳುಹಿಸುತ್ತಿದ್ದ ಎನ್ನಲಾಗಿದೆ.
ದೆಹಲಿ ವಿಧಾನಸಭಾ ಸಂಕೀರ್ಣ, ಹೈಕೋರ್ಟ್ ಹಾಗೂ ಪ್ರಮುಖ ಶಾಲೆಗಳಿಗೆ ನಿರಂತರವಾಗಿ ಬಾಂಬ್ ಬೆದರಿಕೆ ಇ-ಮೇಲ್ ಬಂದಿದ್ದವು. ಪ್ರಕರಣದ ಗಂಭೀರತೆ ಪರಿಗಣಿಸಿದ ದೆಹಲಿ ಪೊಲೀಸರ ವಿಶೇಷ ತಂಡವು ಸೈಬರ್ ತಜ್ಞರ ಸಹಾಯದೊಂದಿಗೆ ತನಿಖೆ ಆರಂಭಿಸಿತ್ತು. ಇ-ಮೇಲ್ ಐಪಿ ಅಡ್ರೆಸ್ ಜಾಡು ಹಿಡಿದು ಬಂದ ಅಧಿಕಾರಿಗಳಿಗೆ ಆರೋಪಿ ಮೈಸೂರಿನಲ್ಲಿರುವುದು ಖಚಿತವಾಯಿತು.
ಸ್ಥಳೀಯ ವಿ.ವಿ. ಪುರಂ ಪೊಲೀಸರ ಸಹಕಾರದೊಂದಿಗೆ ಶನಿವಾರ ಮುಂಜಾನೆ ಶ್ರೀನಿವಾಸ್ ಮನೆ ಮೇಲೆ ದಾಳಿ ನಡೆಸಿದ ತಂಡ, ಆತನನ್ನು ವಶಕ್ಕೆ ಪಡೆದಿದೆ. ಆರೋಪಿಯಿಂದ ಒಂದು ಲ್ಯಾಪ್‌ಟಾಪ್ ಹಾಗೂ ಹಲವು ಸಿಮ್ ಕಾರ್ಡ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ.
ಸಾರ್ವಜನಿಕರಲ್ಲಿ ಭೀತಿ ಮೂಡಿಸಿದ್ದ ಬೆದರಿಕೆ ಸಂದೇಶ
ಆರೋಪಿಯು ಕೇವಲ ಒಂದು ತಿಂಗಳ ಅವಧಿಯಲ್ಲಿ ನೂರಾರು ಇ-ಮೇಲ್ಗಳನ್ನು ಕಳುಹಿಸಿರುವುದು ಬೆಳಕಿಗೆ ಬಂದಿದೆ. ದೆಹಲಿ ಮತ್ತು ಕರ್ನಾಟಕದ ಹಲವು ನ್ಯಾಯಾಲಯಗಳಿಗೆ ಬಾಂಬ್ ಬೆದರಿಕೆ ಹಾಕಿದ್ದ ಹಿನ್ನೆಲೆಯಲ್ಲಿ ಕಲಾಪಗಳನ್ನು ಸ್ಥಗಿತಗೊಳಿಸಲಾಗಿತ್ತು. ಹತ್ತಾರು ಪ್ರತಿಷ್ಠಿತ ಶಾಲೆಗಳಿಗೆ ರಜೆ ಘೋಷಿಸಿ ಮಕ್ಕಳನ್ನು ಮನೆಗೆ ಕಳುಹಿಸಲಾಗಿತ್ತು.
ಬಾಂಬ್ ನಿಷ್ಕ್ರಿಯ ದಳವು ಪ್ರತಿ ಇ-ಮೇಲ್ ಬಂದಾಗಲೂ ಹಗಲಿರುಳು ತಪಾಸಣೆ ನಡೆಸಿದ ಬಳಿಕ ಬೆದರಿಕೆ ಸಂದೇಶ ಹುಸಿ ಎಂಬುದು ಸಾಬೀತಾಗಿತ್ತು. ಆರೋಪಿ ಶ್ರೀನಿವಾಸ್ ಮಾನಸಿಕ ಅಸ್ವಸ್ಥನೋ ಅಥವಾ ಯಾವುದಾದರೂ ಉದ್ದೇಶದಿಂದ ಕೃತ್ಯ ಎಸಗುತ್ತಿದ್ದಾನೋ ಎಂಬುದರ ಬಗ್ಗೆ ತನಿಖೆಯಿಂದ ತಿಳಿದುಬರಲಿದೆ. ಸದ್ಯ ಆರೋಪಿಯನ್ನು ಹೆಚ್ಚಿನ ವಿಚಾರಣೆಗಾಗಿ ಟ್ರಾನ್ಸಿಟ್ ರಿಮ್ಯಾಂಡ್ ಮೂಲಕ ದೆಹಲಿಗೆ ಕರೆದೊಯ್ಯಲಾಗಿದೆ. ಆರೋಪಿ ಬಂಧನದಿಂದ ಸದ್ಯ ಸರಣಿ ಹುಸಿ ಬಾಂಬ್ ಕರೆಗಳ ಪ್ರಕರಣಗಳಿಗೆ ತೆರೆ ಬಿದ್ದಂತಾಗಿದೆ.

