
By Election 2026|ಉಪಚುನಾವಣೆ: ಶಾಮನೂರು ಸಾಮ್ರಾಜ್ಯಕ್ಕೆ ಮುಸ್ಲಿಂ ನಾಯಕರ ಸವಾಲು!
ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಉಪಚುನಾವಣೆ ಕಣವು ಕಾಂಗ್ರೆಸ್‌ನಲ್ಲಿ ಆಂತರಿಕ ಭಿನ್ನಮತದಿಂದಾಗಿ ರಣಾಂಗಣವಾಗಿದೆ. ಕಾಂಗ್ರೆಸ್ ಭದ್ರಕೋಟೆಯಾಗಿದ್ದ ಕ್ಷೇತ್ರದಲ್ಲಿ ಟಿಕೆಟ್ ಹಂಚಿಕೆ ವಿಚಾರ ನುಂಗಲಾರದ ತುತ್ತಾಗಿದೆ
ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯ ಕಣವು ಕಾಂಗ್ರೆಸ್‌ನಲ್ಲಿ ಆಂತರಿಕ ಭಿನ್ನಮತದಿಂದಾಗಿ ರಣಾಂಗಣವಾಗಿದೆ. ದಶಕಗಳ ಕಾಲ ಕಾಂಗ್ರೆಸ್‌ನ ಭದ್ರಕೋಟೆಯಾಗಿದ್ದ ಈ ಕ್ಷೇತ್ರದಲ್ಲಿ ಈಗ ಟಿಕೆಟ್ ಹಂಚಿಕೆಯ ವಿಚಾರ ಪಕ್ಷದ ನಾಯಕರಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ.
ಕೆಪಿಸಿಸಿ ಉಸ್ತುವಾರಿ ಸಮಿತಿ ಸಭೆಯು ಗದ್ದಲ, ವಾಗ್ವಾದ ಮತ್ತು ಆಕ್ರೋಶಕ್ಕೆ ಸಾಕ್ಷಿಯಾಗುವ ಮೂಲಕ ಕೈ ಪಾಳಯದ ಒಳಜಗಳವನ್ನು ಬೀದಿಗೆ ತಂದಿದೆ. ಶಾಸಕ ಶಾಮನೂರು ಶಿವಶಂಕರಪ್ಪ ನಿಧನದಿಂದ ತೆರವಾಗಿರುವ ಕ್ಷೇತ್ರಕ್ಕೆ ಘೋಷಣೆಯಾಗಿರುವ ಉಪಚುನಾವಣೆಯು ಕೇವಲ ಒಂದು ಕ್ಷೇತ್ರದ ಆಯ್ಕೆಯಲ್ಲ, ಬದಲಾಗಿ ಶಾಮನೂರು ಕುಟುಂಬದ ರಾಜಕೀಯ ಭವಿಷ್ಯ ಮತ್ತು ದಾವಣಗೆರೆಯಲ್ಲಿ ಕಾಂಗ್ರೆಸ್-ಬಿಜೆಪಿ ನಡುವಿನ ಅಸ್ತಿತ್ವದ ಹೋರಾಟವಾಗಿದೆ.
ಉಪಚುನಾವಣೆಗೆ ಸಮರ್ಥ ಅಭ್ಯರ್ಥಿಯನ್ನು ಆಯ್ಕೆ ಮಾಡುವ ನಿಟ್ಟಿನಲ್ಲಿ ಕೆಪಿಸಿಸಿ ಆಯೋಜಿಸಿದ್ದ ಅಭಿಪ್ರಾಯ ಸಂಗ್ರಹ ಸಭೆಯು ಅಕ್ಷರಶಃ ಹೈಡ್ರಾಮಾವಾಗಿ ಮಾರ್ಪಟ್ಟಿತು. ಉಸ್ತುವಾರಿ ಸಮಿತಿ ಸದಸ್ಯ ಮತ್ತು ವಿಧಾನ ಪರಿಷತ್ ಸದಸ್ಯ ಮಂಜುನಾಥ್ ಬಂಡಾರಿ, ಮಾಜಿ ಸಚಿವ ಎಚ್. ಆಂಜನೇಯ ಮತ್ತು ಎಚ್.ಎಂ. ರೇವಣ್ಣ ಅವರು ಮುಖಂಡರ ಅಭಿಪ್ರಾಯ ಆಲಿಸಲು ತೆರಳಿದ್ದರು. ಆದರೆ, ಸಭೆ ಆರಂಭವಾಗುತ್ತಿದ್ದಂತೆಯೇ ಕಚೇರಿಯ ಆವರಣದಲ್ಲಿ ಎರಡು ಬಣಗಳ ನಡುವೆ ತೀವ್ರ ಪೈಪೋಟಿ ಶುರುವಾಯಿತು.
ಒಂದೆಡೆ ಕುಟುಂಬ ರಾಜಕಾರಣ, ಇನ್ನೊಂದೆಡೆ ಅಹಿಂದ
ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಬೆಂಬಲಿಗರು ಮತ್ತು ಶಾಮನೂರು ಕುಟುಂಬದ ಅಭಿಮಾನಿಗಳು ದೊಡ್ಡ ಸಂಖ್ಯೆಯಲ್ಲಿ ಜಮಾಯಿಸಿ, ಶಾಮನೂರು ಶಿವಶಂಕರಪ್ಪ ಮೊಮ್ಮಗ ಸಮರ್ಥ್ ಶಾಮನೂರು ಅವರಿಗೆ ಟಿಕೆಟ್ ನೀಡಬೇಕೆಂದು ಘೋಷಣೆ ಕೂಗಿದರು. ಇದು ಶಾಮನೂರು ಕುಟುಂಬದ ಪರಂಪರೆಯನ್ನು ಮುಂದುವರಿಸಲು ಅನಿವಾರ್ಯ ಎಂಬುದು ಅವರ ವಾದವಾಗಿತ್ತು. ಆದರೆ, ಇದಕ್ಕೆ ತದ್ವಿರುದ್ಧವಾಗಿ ಮುಸ್ಲಿಂ ಮುಖಂಡರು ಹಾಗೂ ಯುವ ಕಾರ್ಯಕರ್ತರು ಅಲ್ಪಸಂಖ್ಯಾತ ಅಥವಾ ಅಹಿಂದ ವರ್ಗದ ಅಭ್ಯರ್ಥಿಗೆ ಟಿಕೆಟ್ ನೀಡಬೇಕೆಂದು ಪಟ್ಟು ಹಿಡಿದರು. ದಾವಣಗೆರೆಯಲ್ಲಿ ಅಲ್ಪಸಂಖ್ಯಾತರು ಕಾಂಗ್ರೆಸ್‌ನ ಬೆನ್ನೆಲುಬಾಗಿ ನಿಂತಿದ್ದಾರೆ. ಪ್ರತಿ ಬಾರಿ ನಮಗೆ ಕೇವಲ ಭರವಸೆ ನೀಡಿ ಕೈಬಿಡಲಾಗುತ್ತಿದೆ. ಈ ಬಾರಿ ಅಲ್ಪಸಂಖ್ಯಾತರಿಗೆ ಅವಕಾಶ ನೀಡಲೇಬೇಕು ಎಂದು ಅವರು ಒತ್ತಾಯಿಸಿದರು.
ಕಾರ್ಯಕರ್ತರ ನಡುವಿನ ವಾಗ್ವಾದವು ವಿಕೋಪಕ್ಕೆ ಹೋಗಿ ತಳ್ಳಾಟ-ನೂಕಾಟ ನಡೆಯಿತು. ಪರಿಸ್ಥಿತಿ ಕೈಮೀರುತ್ತಿರುವುದನ್ನು ಗಮನಿಸಿದ ಪೊಲೀಸರು ತಕ್ಷಣ ಮಧ್ಯಪ್ರವೇಶಿಸಿ ಗಲಾಟೆಯನ್ನು ತಿಳಿಗೊಳಿಸಿದರು. ಇತ್ತ, ಕಾರ್ಯಕರ್ತರ ಶಿಸ್ತುಬದ್ಧವಲ್ಲದ ವರ್ತನೆಯಿಂದ ತೀವ್ರ ಬೇಸರಗೊಂಡ ಉಸ್ತುವಾರಿ ಸಮಿತಿ ಸದಸ್ಯರು ಸಭೆಯನ್ನು ಅರ್ಧಕ್ಕೇ ಮೊಟಕುಗೊಳಿಸಿ ಹೊರನಡೆದರು. ಯಾರಿಂದಲೂ ಅಧಿಕೃತವಾಗಿ ವೈಯಕ್ತಿಕ ಅಭಿಪ್ರಾಯ ಸಂಗ್ರಹಿಸಲು ಸಾಧ್ಯವಾಗದ ಕಾರಣ, ಕೇವಲ ಆಕಾಂಕ್ಷಿಗಳ ಪಟ್ಟಿಯನ್ನು ಹಿಡಿದು ಬೆಂಗಳೂರಿಗೆ ಮರಳಿದರು. ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸೇರಿದಂತೆ ಇತರೆ ಹಿರಿಯ ಮುಖಂಡರು ಸಭೆ ನಡೆಸಿ ಬೆಂಗಳೂರಿನಲ್ಲಿಯೇ ಟಿಕೆಟ್ ಅಂತಿಮಗೊಳಿಸುವ ಸಾಧ್ಯತೆ ಇದೆ ಎಂದು ಮೂಲಗಳು ಹೇಳಿವೆ.
ಶಾಮನೂರು ಉತ್ತರಾಧಿಕಾರದ ಸವಾಲು
ದಾವಣಗೆರೆ ಎಂದರೆ ಶಾಮನೂರು ಕುಟುಂಬ ಎಂಬಂತೆ ಇದ್ದ ರಾಜಕೀಯ ಚಿತ್ರಣವು ಈಗ ಹೊಸ ತಿರುವು ಪಡೆದುಕೊಂಡಿದೆ. ಶಾಮನೂರು ಶಿವಶಂಕರಪ್ಪ ನಿಧನದ ನಂತರ ಅವರ ಮೊಮ್ಮಗ, ಅಂದರೆ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಮತ್ತು ಸಂಸದೆ ಡಾ. ಪ್ರಭಾ ಮಲ್ಲಿಕಾರ್ಜುನ್ ದಂಪತಿಯ ಪುತ್ರ ಸಮರ್ಥ್ ಶಾಮನೂರ್ ಅವರನ್ನು ರಾಜಕೀಯಕ್ಕೆ ತರಲು ಸಿದ್ಧತೆಗಳು ನಡೆದಿವೆ. ನುಡಿನಮನ ಕಾರ್ಯಕ್ರಮದಲ್ಲೇ ಈ ಕುರಿತು ಪರೋಕ್ಷವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಮೇಲೆ ಪ್ರಭಾವ ಬೀರಲಾಗಿತ್ತು.
ಕುಟುಂಬದೊಳಗಿನ ಲೆಕ್ಕಾಚಾರ
ಆರಂಭದಲ್ಲಿ ಶಾಮನೂರು ಶಿವಶಂಕರಪ್ಪ ಎರಡನೇ ಪುತ್ರ ಎಸ್‌ಎಸ್ ಗಣೇಶ್ ಬಿಜೆಪಿ ಕಡೆಯಿಂದ ಸ್ಪರ್ಧಿಸಬಹುದು ಎಂಬ ಮಾತುಗಳು ಕೇಳಿಬಂದಿದ್ದವು. ಇದು ಜಿಲ್ಲೆಯಲ್ಲಿ ಅಣ್ಣನ ಮಗ ವರ್ಸಸ್ ಚಿಕ್ಕಪ್ಪ ಎಂಬ ಕಾಳಗಕ್ಕೆ ನಾಂದಿ ಹಾಡಬಹುದು ಎಂಬ ಕುತೂಹಲ ಮೂಡಿಸಿತ್ತು. ಆದರೆ, ಇತ್ತೀಚಿನ ಬೆಳವಣಿಗೆಯಲ್ಲಿ ಗಣೇಶ್ ಈ ಸ್ಪರ್ಧೆಯಿಂದ ಹಿಂದೆ ಸರಿದಿದ್ದಾರೆ. ಒಂದೇ ಕುಟುಂಬದ ಇಬ್ಬರು ಸದಸ್ಯರು ಎದುರಾಳಿಗಳಾಗಿ ಸ್ಪರ್ಧಿಸಿದರೆ, ಅದು ಸಾರ್ವಜನಿಕವಾಗಿ ತಪ್ಪು ಸಂದೇಶ ರವಾನಿಸುತ್ತದೆ. ಈಗಾಗಲೇ ಮಲ್ಲಿಕಾರ್ಜುನ್ ಸಚಿವರಾಗಿದ್ದಾರೆ, ಅವರ ಪತ್ನಿ ಪ್ರಭಾ ಮಲ್ಲಿಕಾರ್ಜುನ್ ಸಂಸದೆಯಾಗಿದ್ದಾರೆ. ಈಗ ಪುತ್ರನೂ ಶಾಸಕನಾದರೆ ಅಧಿಕಾರ ಕೇಂದ್ರೀಕರಣ ಎಂಬ ಟೀಕೆ ವ್ಯಕ್ತವಾಗಬಹುದು ಎಂಬ ಅರಿವಿನೊಂದಿಗೆ ಗಣೇಶ್ ಹಿಂದೇಟು ಹಾಕಿದ್ದಾರೆ ಎಂದು ಹೇಳಲಾಗಿದೆ.
ಈ ನಡುವೆ, ದಾವಣಗೆರೆ ಉಪಚುನಾವಣೆಯಲ್ಲಿ ಅಲ್ಪಸಂಖ್ಯಾತರು ಹೆಚ್ಚಿನ ಸಂಖ್ಯೆಯಲ್ಲಿರುವ ಕ್ಷೇತ್ರದಲ್ಲಿ ಈ ಬಾರಿ ಮುಸ್ಲಿಂ ಸಮುದಾಯದ ಅಭ್ಯರ್ಥಿಗೆ ಟಿಕೆಟ್ ನೀಡಬೇಕು ಎಂಬ ಬೇಡಿಕೆಯನ್ನು ಸಚಿವ ಜಮೀರ್ ಅಹ್ಮದ್ ಖಾನ್ ಪ್ರಬಲವಾಗಿ ಮಂಡಿಸಿದ್ದಾರೆ. ಇದು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಅವರನ್ನು ಕೆರಳಿಸಿದೆ. ನಮ್ಮ ಕ್ಷೇತ್ರದ ಬಗ್ಗೆ ಮಾತನಾಡಲು ಅವನಾರು? ಎಂದು ಏಕವಚನದಲ್ಲೇ ಜಮೀರ್ ವಿರುದ್ಧ ಮಲ್ಲಿಕಾರ್ಜುನ್ ವಾಗ್ದಾಳಿ ನಡೆಸಿರುವುದು ಪಕ್ಷದ ಹೈಕಮಾಂಡ್‌ಗೆ ಇಕ್ಕಟ್ಟು ತಂದಿದೆ.
ಬಿಜೆಪಿಯ ಒಗ್ಗಟ್ಟಿನ ಮಂತ್ರ
ಕಾಂಗ್ರೆಸ್‌ನಲ್ಲಿ ಟಿಕೆಟ್‌ಗಾಗಿ ಜಗಳ ನಡೆಯುತ್ತಿದ್ದರೆ, ಬಿಜೆಪಿಯಲ್ಲಿ ವ್ಯತಿರಿಕ್ತ ವಾತಾವರಣ ಕಂಡುಬರುತ್ತಿದೆ. ಯಾರಿಗೆ ಟಿಕೆಟ್ ನೀಡಿದರೂ ನಾವು ಒಟ್ಟಾಗಿ ಕೆಲಸ ಮಾಡುತ್ತೇವೆ ಎಂಬ ಒಗ್ಗಟ್ಟಿನ ಮಂತ್ರವನ್ನು ಬಿಜೆಪಿ ಆಕಾಂಕ್ಷಿಗಳು ಜಪಿಸುತ್ತಿದ್ದಾರೆ. ಇದು ಬಿಜೆಪಿಯ ಚುನಾವಣಾ ತಂತ್ರದ ಒಂದು ಭಾಗವೂ ಇರಬಹುದು.
ಓಬಿಸಿ ಸಮುದಾಯಕ್ಕೆ ಸೇರಿದ ಜಿ.ಬಿ. ವಿನಯಕುಮಾರ್ ಅವರಿಗೆ ಟಿಕೆಟ್ ಸಿಗುವ ಸಾಧ್ಯತೆ ದಟ್ಟವಾಗಿದೆ. ಶಾಮನೂರು ಕುಟುಂಬವು ಲಿಂಗಾಯತ ಸಮುದಾಯದ ಪ್ರಬಲ ನಾಯಕರಾಗಿದ್ದರೂ, ಅಲ್ಪಸಂಖ್ಯಾತ ಮತ್ತು ಕುರುಬ ಸಮುದಾಯದ ಮತಗಳು ನಿರ್ಣಾಯಕವಾಗಿವೆ. ಒಂದು ವೇಳೆ ಕಾಂಗ್ರೆಸ್‌ನಿಂದ ಲಿಂಗಾಯತ ಅಭ್ಯರ್ಥಿ ಸಮರ್ಥ್ ಕಣಕ್ಕಿಳಿದರೆ, ಬಿಜೆಪಿ ಓಬಿಸಿ ಕಾರ್ಡ್ ಬಳಸಿ ಮತ ವಿಭಜನೆಗೆ ಮುಂದಾಗಬಹುದು ಎಂಬುದು ರಾಜಕೀಯ ಲೆಕ್ಕಾಚಾರವಾಗಿದೆ.
ಶಾಮನೂರು ಶಿವಶಂಕರಪ್ಪ ನಿಧನದಿಂದಾಗಿ ಜಿಲ್ಲೆಯಲ್ಲಿ ಒಂದು ರೀತಿಯ ಸಹಾನುಭೂತಿಯ ಅಲೆ ಇದೆ. ಇದನ್ನು ಬಳಸಿಕೊಳ್ಳಲು ಶಾಮನೂರು ಕುಟುಂಬ ಮುಂದಾಗಿದೆ. ದಾವಣಗೆರೆಯಲ್ಲಿ ಮುಸ್ಲಿಂ ಮತದಾರರು ನಿರ್ಣಾಯಕ ಪಾತ್ರ ವಹಿಸುತ್ತಾರೆ. ಜಮೀರ್ ಅಹ್ಮದ್ ಅವರ ಹೇಳಿಕೆಯ ನಂತರ, ಅಲ್ಪಸಂಖ್ಯಾತರು ಯಾರ ಪರ ನಿಲ್ಲುತ್ತಾರೆ ಎಂಬುದು ಕುತೂಹಲಕಾರಿಯಾಗಿದೆ. ಮಲ್ಲಿಕಾರ್ಜುನ್ ಹೇಳಿಕೆಐು ಅಲ್ಪಸಂಖ್ಯಾತ ಸಮುದಾಯದ ಮೇಲೆ ಯಾವ ರೀತಿ ಪ್ರಭಾವ ಬೀರುತ್ತದೆ ಎಂಬುದನ್ನು ಕಾದು ನೋಡಬೇಕಿದೆ. ಇನ್ನು, ಬಿಜೆಪಿಯು ಕ್ಷೇತ್ರದಲ್ಲಿ ಇರುವ ಕಾಂಗ್ರೆಸ್‌ನ ಆಂತರಿಕ ಭಿನ್ನಮತವನ್ನು ಬಳಸಿಕೊಳ್ಳಲು ರಾಜಕೀಯ ರಣತಂತ್ರ ಹೂಡಲು ಮುಂದಾಗಿದೆ.

