ದಾವಣಗೆರೆ ದಕ್ಷಿಣ|ಘೋಷಣೆಗೆ ಮುನ್ನವೇ ನಾಮಪತ್ರ; ಶಾಮನೂರು ಮೊಮ್ಮಗ,  ಮುಸ್ಲಿಂ ನಾಯಕರಿಂದ ʼಕೈʼಕಮಾಂಡ್‌ಗೆ ಸವಾಲು!
x
ಶಾಮನೂರು ಶಿವಶಂಕರಪ್ಪ ಮೊಮ್ಮಗ ಸಮರ್ಥ್‌ ಶಾಮನೂರು ನಾಮಪತ್ರ ಸಲ್ಲಿಕೆ

ದಾವಣಗೆರೆ ದಕ್ಷಿಣ|ಘೋಷಣೆಗೆ ಮುನ್ನವೇ ನಾಮಪತ್ರ; ಶಾಮನೂರು ಮೊಮ್ಮಗ, ಮುಸ್ಲಿಂ ನಾಯಕರಿಂದ ʼಕೈʼಕಮಾಂಡ್‌ಗೆ ಸವಾಲು!

By Election-2026| ಬಿ-ಫಾರಂ ಸಿಗುವ ಮೊದಲೇ ಕಾಂಗ್ರೆಸ್‌ನ ಸಮರ್ಥ್‌, ಸಾದಿಕ್ ಪೈಲ್ವಾನ್‌, ಸುಬಾನ್ ಖಾನ್ ನಾಮಪತ್ರ ಸಲ್ಲಿಸಿರುವುದು ಕಾಂಗ್ರೆಸ್ ಹೈಕಮಾಂಡ್‌ಗೆ ನೇರ ಸವಾಲಾಗಿದೆ.


Click the Play button to hear this message in audio format

ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯ ಕಣ ಈಗ ರಂಗೇರಿದೆ. ಒಂದೆಡೆ ಶಾಮನೂರು ಕುಟುಂಬದ ಕುಡಿ ಸಮರ್ಥ್‌ ಶಾಮನೂರು ಅಬ್ಬರದ ನಾಮಪತ್ರ ಸಲ್ಲಿಕೆ ಮಾಡಿದ್ದರೆ, ಬೆನ್ನಲ್ಲೇ ಕಾಂಗ್ರೆಸ್‌ನ ಮುಸ್ಲಿಂ ಮುಖಂಡರು ಸಹ ಸಾಲು ಸಾಲಾಗಿ ನಾಮಪತ್ರ ಸಲ್ಲಿಕೆ ಮಾಡುವ ಮೂಲಕ ಕಾಂಗ್ರೆಸ್ ಹೈಕಮಾಂಡ್‌ಗೆ ಭಾರಿ ತಲೆನೋವು ತಂದಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿ ಘೋಷಣೆಗೂ ಮುನ್ನವೇ ನಡೆಯುತ್ತಿರುವ ಈ ಬೆಳವಣಿಗೆಗಳು ಕ್ಷೇತ್ರದಲ್ಲಿ 'ಬಂಡಾಯ'ದ ಮುನ್ಸೂಚನೆ ನೀಡಿವೆ.

ದಾವಣಗೆರೆ ದಕ್ಷಿಣ ಕ್ಷೇತ್ರದಲ್ಲಿ ಮುಸ್ಲಿಂ ಮತದಾರರು ನಿರ್ಣಾಯಕ ಪಾತ್ರ ವಹಿಸುತ್ತಾರೆ. ಈ ಬಾರಿ ಸಮುದಾಯಕ್ಕೆ ಟಿಕೆಟ್ ನೀಡಬೇಕು ಎಂಬ ಒತ್ತಾಯ ಕೇಳಿಬರುತ್ತಿರುವ ಬೆನ್ನಲ್ಲೇ, ಹಿರಿಯ ಕಾಂಗ್ರೆಸ್ ನಾಯಕ ಸಾದಿಕ್ ಪೈಲ್ವಾನ್ ಅವರು ಇಂದು ನಾಮಪತ್ರ ಸಲ್ಲಿಕೆ ಮಾಡಿದ್ದಾರೆ. ಸಾದಿಕ್ ಪೈಲ್ವಾನ್ ಅವರ ಬೆನ್ನಲ್ಲೇ ಮತ್ತೊಬ್ಬ ಮುಸ್ಲಿಂ ನಾಯಕ ಸುಬಾನ್ ಖಾನ್ ಕೂಡ ನಾಮಪತ್ರ ಸಲ್ಲಿಕೆ ಮಾಡಿರುವುದು ಕಾಂಗ್ರೆಸ್ ಪಾಳಯದಲ್ಲಿ ಸಂಚಲನ ಮೂಡಿಸಿದೆ.

ದಶಕಗಳಿಂದಲೂ ದಾವಣಗೆರೆಯ ರಾಜಕೀಯ ಅಧಿಪತ್ಯವನ್ನು ತಮ್ಮ ಮುಷ್ಠಿಯಲ್ಲಿಟ್ಟುಕೊಂಡಿರುವ ಶಾಮನೂರು ಶಿವಶಂಕರಪ್ಪ ಕುಟುಂಬದ ಮೂರನೇ ತಲೆಮಾರಿನ ನಾಯಕ ಸಮರ್ಥ್‌ ಮಲ್ಲಿಕಾರ್ಜುನ ಶಾಮನೂರು ಈಗ ಅಧಿಕೃತವಾಗಿ ರಾಜಕೀಯ ರಂಗಕ್ಕೆ ಪಾದಾರ್ಪಣೆ ಮಾಡಿದ್ದಾರೆ. ಕಾಂಗ್ರೆಸ್ ಪಕ್ಷದ ಬಿ-ಫಾರಂ ಇನ್ನೂ ಕೈಸೇರದಿದ್ದರೂ, ಅದಕ್ಕೆ ಕಾಯದೆ ಚುನಾವಣಾ ಕಣಕ್ಕೆ ಧುಮುಕುವ ಮೂಲಕ ಸಮರ್ಥ ಅವರು ಸ್ವಪಕ್ಷೀಯರಿಗೆ ತಾವೇ ಅಭ್ಯರ್ಥಿ ಎಂಬ ಸಂದೇಶ ರವಾನಿಸಿದ್ದಾರೆ.

ಯುಗಾದಿ ಮತ್ತು ರಂಜಾನ್ ಹಬ್ಬದ ವೇಳೆ ರಾಜಕೀಯ ಜೀವನದ ಹೊಸ ಅಧ್ಯಾಯ ಆರಂಭಿಸಲು ನಿರ್ಧರಿಸಿದ ಸಮರ್ಥ ಶಾಮನೂರು, ನಾಮಪತ್ರ ಸಲ್ಲಿಕೆ ಮಾಡಿದರು. ತಮ್ಮ ತಾಯಿ ಮತ್ತು ಸಂಸದೆ ಪ್ರಭಾ ಮಲ್ಲಿಕಾರ್ಜುನ ಜತೆ ಆಗಮಿಸಿದ ಸಮರ್ಥ್, ಮೂರು ಸೆಟ್ ನಾಮಪತ್ರವನ್ನು ಸಲ್ಲಿಸಿದ್ದಾರೆ. ಮತ್ತೊಮ್ಮೆ ಸೋಮವಾರ ನಾಮಪತ್ರ ಸಲ್ಲಿಸುವುದಾಗಿ ಸಮರ್ಥ್ ಹೇಳುವ ಮೂಲಕ, ಟಿಕೆಟ್ ಶಾಮನೂರು ಕುಟುಂಬಕ್ಕೇ ಎಂದು ವಿಶ್ವಾಸದಿಂದ ಹೇಳಿದಂತಿದೆ. ನಾಮಪತ್ರ ಸಲ್ಲಿಕೆಗೂ ಮುನ್ನ ದಾವಣಗೆರೆಯ ದೇವಸ್ಥಾನಗಳಲ್ಲಿ ವಿಶೇಷ ಪೂಜೆ ಸಲ್ಲಿಸಿದರು.

ತಾತ ಶಾಮನೂರು ಶಿವಶಂಕರಪ್ಪ ಕಾರಿನಲ್ಲಿ ಬಂದ ಸಮರ್ಥ್

ಈ ಸಂದರ್ಭದಲ್ಲಿ ಸಮರ್ಥ್‌ ಅವರ ಬೆಂಬಲಿಗರು ಮತ್ತು ಕಾಂಗ್ರೆಸ್ ಕಾರ್ಯಕರ್ತರ ದಂಡೇ ನೆರೆದಿತ್ತು. ಶಾಮನೂರು ಕುಟುಂಬಕ್ಕೆ ಜಯವಾಗಲಿ ಎಂಬ ಘೋಷಣೆಗಳು ದಾವಣಗೆರೆಯ ಬೀದಿಬೀದಿಗಳಲ್ಲಿ ಮೊಳಗಿದವು. ಯಾವುದೇ ಅಧಿಕೃತ ಟಿಕೆಟ್ ಘೋಷಣೆಯಾಗುವ ಮೊದಲೇ ಇಷ್ಟೊಂದು ಜನಸ್ತೋಮ ಸೇರಿರುವುದು ಜಿಲ್ಲೆಯಲ್ಲಿ ಶಾಮನೂರು ಕುಟುಂಬಕ್ಕಿರುವ ಪ್ರಭಾವವನ್ನು ಮತ್ತೊಮ್ಮೆ ಸಾಬೀತುಪಡಿಸಿತು.

ಸಮರ್ಥ್‌ ಶಾಮನೂರು ಅವರ ನಾಮಪತ್ರ ಸಲ್ಲಿಕೆಯ ಪ್ರಕ್ರಿಯೆಯಲ್ಲಿ ಎಲ್ಲರ ಗಮನ ಸೆಳೆದದ್ದು ಅವರು ಆಗಮಿಸಿದ ವಾಹನವಾಗಿದೆ. ದಿವಂಗತ ಶಾಮನೂರು ಶಿವಶಂಕರಪ್ಪ ಅವರು ಬದುಕಿದ್ದಾಗ ಅತ್ಯಂತ ಪ್ರೀತಿಯಿಂದ ಬಳಸುತ್ತಿದ್ದ KA 51 MR 0555 ನೋಂದಣಿ ಸಂಖ್ಯೆಯ ಇನ್ನೋವಾ ಕಾರಿನಲ್ಲೇ ಸಮರ್ಥ್ ಚುನಾವಣಾ ಕಚೇರಿಗೆ ಆಗಮಿಸಿದರು. ಈ ಮೂಲಕ ತಾವು ಕೇವಲ ಒಬ್ಬ ಅಭ್ಯರ್ಥಿಯಲ್ಲ, ಬದಲಿಗೆ ಶಾಮನೂರು ಶಿವಶಂಕರಪ್ಪ ಅವರ ಪರಂಪರೆಯ ವಾರಸುದಾರ ಎಂಬುದನ್ನು ಸಾಂಕೇತಿಕವಾಗಿ ತೋರಿಸಿಕೊಟ್ಟರು. ತಾತನ ಆಶೀರ್ವಾದದೊಂದಿಗೇ ಹೊಸ ಹಾದಿ ಹಿಡಿದಿರುವ ಅವರ ಈ ನಡೆ ಕಾರ್ಯಕರ್ತರಲ್ಲಿ ಹೊಸ ಉತ್ಸಾಹ ತುಂಬಿದೆ.

ಟಿಕೆಟ್‌ ಸಿಗುವ ವಿಶ್ವಾಸ ಇದೆ

ನಾಮಪತ್ರ ಸಲ್ಲಿಕೆಗೂ ಮುನ್ನ ಸುದ್ದಿಗಾರರ ಜತೆ ಮಾತನಾಡುವ ವೇಳೆ 'ಅಧಿಕೃತವಾಗಿ ಬಿ-ಫಾರಂ ಸಿಕ್ಕಿದೆಯಾ?' ಎಂಬ ಪ್ರಶ್ನೆ ಕೇಳಲಾಯಿತು. ಇದಕ್ಕೆ ಅತ್ಯಂತ ಆತ್ಮವಿಶ್ವಾಸದಿಂದ ಉತ್ತರಿಸಿದ ಅವರು, 'ಶಾಮನೂರು ಶಿವಶಂಕರಪ್ಪ ಅವರ ಬಗ್ಗೆ ನೀವು ಓದಿದ್ದೀರಾ? ಈ ಪಕ್ಷವನ್ನು ಕಟ್ಟಿದವರೇ ಅವರು. ನಮ್ಮ ಪಾರ್ಟಿ ಕಾರ್ಯಕರ್ತರ ಮೇಲೆ ನಮಗೆ ನಂಬಿಕೆ ಇದೆ, ಟಿಕೆಟ್ ನಮಗೆ ಸಿಗುತ್ತದೆ ಎಂಬ ವಿಶ್ವಾಸವಿದೆ ಎಂದು ಉತ್ತರಿಸಿದರು. ಅಲ್ಲದೆ, ಕಳೆದ 6 ತಿಂಗಳಿಂದ ಕ್ಷೇತ್ರದಲ್ಲಿ ಸಕ್ರಿಯವಾಗಿ ಕೆಲಸ ಮಾಡುತ್ತಿದ್ದು, ಜನರ ವಿಶ್ವಾಸ ಗಳಿಸಿದ್ದೇನೆ. ಜನರ ಕಷ್ಟಸುಖಗಳಿಗೆ ಸ್ಪಂದಿಸುತ್ತಿದ್ದೇನೆ. ಹಿರಿಯರ ಆಶೀರ್ವಾದ ಮತ್ತು ಯುವಜನತೆಯ ಬೆಂಬಲ ನನಗಿದೆ ಎಂದರು.

ನಿಷ್ಠಾವಂತ ಕಾರ್ಯಕರ್ತ

ನಾಮಪತ್ರ ಸಲ್ಲಿಕೆ ಬಳಿಕ ಮಾತನಾಡಿದ ಸಾದಿಕ್ ಪೈಲ್ವಾನ್, ನಾನು ಪ್ರತಿ ಚುನಾವಣೆಯಲ್ಲೂ ನಾಮಪತ್ರ ಸಲ್ಲಿಕೆ ಮಾಡುತ್ತಾ ಬಂದಿದ್ದೇನೆ. ಪಕ್ಷದ ನಿಷ್ಠಾವಂತ ಕಾರ್ಯಕರ್ತನಾಗಿ ಈ ಬಾರಿಯೂ ಕಾಂಗ್ರೆಸ್ ಬಿ-ಫಾರಂ ನನಗೇ ಸಿಗುವ ನಂಬಿಕೆ ಇದೆ. ಈ ಬಾರಿ ಮುಸ್ಲಿಂ ಸಮುದಾಯಕ್ಕೆ ಟಿಕೆಟ್ ಸಿಗಲೇಬೇಕು ಎಂಬುದು ನಮ್ಮ ಆಗ್ರಹವಾಗಿದೆ. ಅಲ್ಲದೆ, ನಮ್ಮ ಪರವಾಗಿ ಸಚಿವ ಜಮೀರ್ ಅಹ್ಮದ್ ಖಾನ್ ಬೆಂಬಲ ನೀಡಲಿದ್ದಾರೆ. ಈಗ ಕಾಂಗ್ರೆಸ್ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದೇನೆ, ಬರುವ ಸೋಮವಾರ ಅಧಿಕೃತವಾಗಿ ಮತ್ತೊಮ್ಮೆ ನಾಮಪತ್ರ ಸಲ್ಲಿಸುತ್ತೇನೆ ಎಂದರು. ಒಂದು ವೇಳೆ ಪಕ್ಷವು ತಮಗೆ ಅಥವಾ ಮುಸ್ಲಿಂ ಸಮುದಾಯಕ್ಕೆ ಬಿ-ಫಾರಂ ನಿರಾಕರಿಸಿದರೆ ಸಮಾಜದ ಮುಖಂಡರ ಜೊತೆ ಚರ್ಚೆ ಮಾಡಿ ಮುಂದಿನ ತೀರ್ಮಾನ ತೆಗೆದುಕೊಳ್ಳುತ್ತೇನೆ ಎಂದು ಹೇಳುವ ಮೂಲಕ ಬಂಡಾಯ ಸ್ಪರ್ಧೆಯ ಪರೋಕ್ಷ ಎಚ್ಚರಿಕೆ ನೀಡಿದರು.

Read More
Next Story