ದಾವಣಗೆರೆ ದಕ್ಷಿಣ ಉಪಚುನಾವಣೆ: ಕಾಂಗ್ರೆಸ್‌ನಲ್ಲಿ ಭಿನ್ನಮತ ಸ್ಫೋಟ, ಅಬ್ದುಲ್ ಜಬ್ಬಾರ್ ರಾಜೀನಾಮೆ
x
ಅಬ್ದುಲ್ ಜಬ್ಬಾರ್​

ದಾವಣಗೆರೆ ದಕ್ಷಿಣ ಉಪಚುನಾವಣೆ: ಕಾಂಗ್ರೆಸ್‌ನಲ್ಲಿ ಭಿನ್ನಮತ ಸ್ಫೋಟ, ಅಬ್ದುಲ್ ಜಬ್ಬಾರ್ ರಾಜೀನಾಮೆ

ದಾವಣಗೆರೆ ದಕ್ಷಿಣ ಕ್ಷೇತ್ರದಲ್ಲಿ ಸುಮಾರು 80,000 ಮುಸ್ಲಿಂ ಮತದಾರರಿದ್ದು, ಈ ಉಪಚುನಾವಣೆಯಲ್ಲಿ ಮುಸ್ಲಿಂ ಅಭ್ಯರ್ಥಿಗೆ ಟಿಕೆಟ್ ನೀಡಬೇಕೆಂದು ಸಮುದಾಯದ ನಾಯಕರು ಪಟ್ಟು ಹಿಡಿದಿದ್ದರು.


Click the Play button to hear this message in audio format

ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಉಪಚುನಾವಣೆ ಮುಕ್ತಾಯಗೊಂಡ ಬೆನ್ನಲ್ಲೇ, ರಾಜ್ಯ ಕಾಂಗ್ರೆಸ್‌ನಲ್ಲಿ ಮುಸ್ಲಿಂ ನಾಯಕರ ನಡುವಿನ ಆಂತರಿಕ ಭಿನ್ನಮತ ತಾರಕಕ್ಕೇರಿದೆ. ಈ ಬೆಳವಣಿಗೆಯ ಬೆನ್ನಲ್ಲೇ, ಕೆಪಿಸಿಸಿ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಸ್ಥಾನಕ್ಕೆ ಹಿರಿಯ ನಾಯಕ ಹಾಗೂ ವಿಧಾನ ಪರಿಷತ್ ಸದಸ್ಯ ಅಬ್ದುಲ್ ಜಬ್ಬಾರ್ ಅವರು ರಾಜೀನಾಮೆ ನೀಡಿದ್ದಾರೆ.

ದಾವಣಗೆರೆ ದಕ್ಷಿಣ ಕ್ಷೇತ್ರದಲ್ಲಿ ಸುಮಾರು 80,000 ಮುಸ್ಲಿಂ ಮತದಾರರಿದ್ದು, ಈ ಉಪಚುನಾವಣೆಯಲ್ಲಿ ಮುಸ್ಲಿಂ ಅಭ್ಯರ್ಥಿಗೆ ಟಿಕೆಟ್ ನೀಡಬೇಕೆಂದು ಸಮುದಾಯದ ನಾಯಕರು ಪಟ್ಟು ಹಿಡಿದಿದ್ದರು. ಆದರೆ, ದಿವಂಗತ ಶಾಸಕ ಶಾಮನೂರು ಶಿವಶಂಕರಪ್ಪ ಅವರ ಮೊಮ್ಮಗ ಸಮರ್ಥ್ ಶಾಮನೂರು ಅವರಿಗೆ ಟಿಕೆಟ್ ಒಲಿದಿತ್ತು. ಇದರಿಂದ ತೀವ್ರ ಅಸಮಾಧಾನಗೊಂಡಿದ್ದ ಸಚಿವ ಜಮೀರ್ ಅಹಮದ್ ಖಾನ್, ಸಿಎಂ ರಾಜಕೀಯ ಕಾರ್ಯದರ್ಶಿ ನಸೀರ್ ಅಹಮದ್ ಹಾಗೂ ಅಬ್ದುಲ್ ಜಬ್ಬಾರ್ ಸೇರಿದಂತೆ ಹಲವು ಪ್ರಭಾವಿ ಮುಸ್ಲಿಂ ನಾಯಕರು ಆರಂಭದಲ್ಲಿ ಪ್ರಚಾರದಿಂದ ದೂರ ಉಳಿದಿದ್ದರು. ಕೇವಲ ಕೊನೆಯ ಹಂತದಲ್ಲಿ ಜಮೀರ್ ಅಹಮದ್ ಅವರು ಪ್ರಚಾರದಲ್ಲಿ ಭಾಗವಹಿಸಿದ್ದರು.

ವರಿಷ್ಠರಿಗೆ ದೂರು ಮತ್ತು ವರದಿ

ಸಮರ್ಥ್ ಶಾಮನೂರು ಅವರ ಗೆಲುವಿಗೆ ಶ್ರಮಿಸದೆ, ಈ ನಾಯಕರು ಅಸಹಕಾರ ತೋರಿದ್ದಾರೆ ಎಂದು ಎಐಸಿಸಿ ಉಸ್ತುವಾರಿ ಕಾರ್ಯದರ್ಶಿ ಅಭಿಷೇಕ್ ದತ್ತ ಅವರು ಹೈಕಮಾಂಡ್‌ಗೆ ವರದಿ ಸಲ್ಲಿಸಿದ್ದಾರೆ. ಇದೇ ವೇಳೆ, ಶಾಸಕ ರಿಜ್ವಾನ್ ಅರ್ಷದ್ ಹಾಗೂ ಪರಿಷತ್ ಸದಸ್ಯ ಸಲೀಂ ಅಹಮದ್ ಅವರು ಸುದ್ದಿಗೋಷ್ಠಿ ನಡೆಸಿ, "ಪಕ್ಷದ ಅಭ್ಯರ್ಥಿಯನ್ನು ಸೋಲಿಸಲು ನಮ್ಮದೇ ಸಮುದಾಯದ ಕೆಲವು ಹಿರಿಯ ನಾಯಕರು ಷಡ್ಯಂತ್ರ ರೂಪಿಸಿದ್ದರು" ಎಂದು ಬಹಿರಂಗವಾಗಿ ಆರೋಪಿಸಿದ್ದರು.

ಜಬ್ಬಾರ್ ಪ್ರತಿಕ್ರಿಯೆ ಮತ್ತು ರಾಜೀನಾಮೆ

ತಮ್ಮ ಮೇಲಿನ ಆರೋಪಗಳನ್ನು ತಳ್ಳಿಹಾಕಿರುವ ಅಬ್ದುಲ್ ಜಬ್ಬಾರ್, "ಸಚಿವ ಜಮೀರ್ ಅಹಮದ್ ಅವರಿಂದ ಯಾವುದೇ ತಪ್ಪಾಗಿಲ್ಲ. ಅವರು ಪ್ರಚಾರಕ್ಕೆ ಹೋದ ಬಳಿಕವೇ ಪಕ್ಷದ ಪರ ಒಲವು ಹೆಚ್ಚಾಗಿತ್ತು. ಪಕ್ಷದ ಕಚೇರಿಯಲ್ಲೇ ಕುಳಿತು ಸ್ವಪಕ್ಷೀಯ ನಾಯಕರ ವಿರುದ್ಧವೇ ಆರೋಪ ಮಾಡುವುದು ಸರಿಯಲ್ಲ" ಎಂದು ರಿಜ್ವಾನ್ ಅರ್ಷದ್ ಮತ್ತು ಸಲೀಂ ಅಹಮದ್ ವಿರುದ್ಧ ಕಿಡಿಕಾರಿದ್ದಾರೆ. ಅಲ್ಲದೆ, ಉಪಚುನಾವಣೆಯ ತಂತ್ರಗಾರಿಕೆ ವಿಚಾರದಲ್ಲಿ ತಮ್ಮನ್ನು ವಿಶ್ವಾಸಕ್ಕೆ ತೆಗೆದುಕೊಂಡಿರಲಿಲ್ಲ ಹಾಗೂ ಅಭ್ಯರ್ಥಿ ಆಯ್ಕೆ ಪ್ರಕ್ರಿಯೆಯಲ್ಲಿ ಕಡೆಗಣಿಸಲಾಗಿತ್ತು ಎಂಬ ಅಸಮಾಧಾನದಿಂದಾಗಿ ತಾವು ಏಪ್ರಿಲ್ 3ರಂದೇ ರಾಜೀನಾಮೆ ಸಲ್ಲಿಸಿದ್ದಾಗಿ ಜಬ್ಬಾರ್ ಸ್ಪಷ್ಟಪಡಿಸಿದ್ದಾರೆ.

ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ಅಬ್ದುಲ್ ಜಬ್ಬಾರ್ ಅವರ ರಾಜೀನಾಮೆಯನ್ನು ಪರಿಶೀಲಿಸುತ್ತಿರುವುದಾಗಿ ತಿಳಿಸಿದ್ದು, ಸ್ಥಳೀಯ ನಾಯಕರಿಂದ ವರದಿ ಕೇಳಿದ್ದಾರೆ. ಒಟ್ಟಾರೆಯಾಗಿ, ಈ ಉಪಚುನಾವಣೆಯು ರಾಜ್ಯ ಕಾಂಗ್ರೆಸ್‌ನಲ್ಲಿನ ಮುಸ್ಲಿಂ ನಾಯಕರ ಬಣಗಳ ನಡುವಿನ ತಿಕ್ಕಾಟವನ್ನು ಸಂಪೂರ್ಣವಾಗಿ ಬಟಾಬಯಲು ಮಾಡಿದೆ.

Read More
Next Story