
ದಲಿತರ ದೌರ್ಜನ್ಯ ಪ್ರಕರಣಗಳ ಹೆಚ್ಚಳ; ತನಿಖೆ ಮಾತ್ರ ವಿಳಂಬ
ದಲಿತರ ಮೇಲಿನ ದೌರ್ಜನ್ಯಗಳ ತಡೆಗೆ ರಾಜ್ಯ ಸರ್ಕಾರ ಎಲ್ಲಾ ಜಿಲ್ಲೆಗಳು ಹಾಗೂ ಬೆಂಗಳೂರು ನಗರ ಸೇರಿದಂತೆ ಒಟ್ಟು 33 ನಾಗರಿಕ ಹಕ್ಕು ಜಾರಿ ನಿರ್ದೇಶನಾಲಯ (DCRE) ಪೊಲೀಸ್ ಠಾಣೆಗಳನ್ನು ಸ್ಥಾಪಿಸಿದೆ.
ದಲಿತರ ರಕ್ಷಣೆಗಾಗಿ ಪರಿಶಿಷ್ಟ ಜಾತಿ- ಪಂಗಡಗಳ ದೌರ್ಜನ್ಯ ತಡೆ ಕಾಯ್ದೆ ಜಾರಿಯಲ್ಲಿದ್ದರೂ ಕರ್ನಾಟಕದಲ್ಲಿ ದಲಿತರ ಮೇಲಿನ ದೌರ್ಜನ್ಯಗಳು ಕಡಿಮೆಯಾಗಿಲ್ಲ. ದಲಿತರ ಮೇಲಿನ ದೌರ್ಜನ್ಯ ಪ್ರಕರಣಗಳು ಆತಂಕಕಾರಿ ರೀತಿಯಲ್ಲಿ ಏರುತ್ತಿರುವುದು ಕಳವಳ ಮೂಡಿಸಿದೆ. ಆದರೆ, ತನಿಖೆ ಮಾತ್ರ ಸಮಾಧಾಕರವಾಗಿಲ್ಲ.ಕರ್ನಾಟಕದಲ್ಲಿ ಕಳೆದ ಮೂರು ವರ್ಷಗಳಲ್ಲಿ ಒಟ್ಟು 7,358 ಪ್ರಕರಣಗಳು ದಾಖಲಾಗಿವೆ.
ದಲಿತರ ಮೇಲಿನ ದೌರ್ಜನ್ಯ ತಡೆಗೆ ರಾಜ್ಯ ಸರ್ಕಾರ ಸಾಕಷ್ಟು ಕ್ರಮಗಳನ್ನು ಕೈಗೊಂಡ ಹೊರತಾಗಿಯೂ ಪ್ರಕರಣಗಳಿಗೆ ಕಡಿವಾಣ ಬಿದ್ದಿಲ್ಲ. ಗೃಹ ಸಚಿವ ಡಾ.ಜಿ. ಪರಮೇಶ್ವರ್ ಅವರು ಬಿಡುಗಡೆ ಮಾಡಿರುವ ಜಿಲ್ಲಾವಾರು ಅಂಕಿ-ಅಂಶಗಳು ಬೆಚ್ಚಿ ಬೀಳಿಸುವಂತಿವೆ.
ದೌರ್ಜನ್ಯ ಪ್ರಕರಣಗಳಲ್ಲಿ ಏರಿಕೆ
ರಾಜ್ಯ ಸರ್ಕಾರ ಇತ್ತೀಚೆಗೆ ನೀಡಿರುವ ಅಂಕಿ-ಅಂಶಗಳ ಪ್ರಕಾರ, 2024ಕ್ಕೆ ಹೋಲಿಸಿದರೆ 2025ರಲ್ಲಿ ಪ್ರಕರಣಗಳ ಸಂಖ್ಯೆಯಲ್ಲಿ ಏರಿಕೆ ಕಂಡಿದೆ. 2023ರಲ್ಲಿ 2,447 ಪ್ರಕರಣಗಳು, 2024ರಲ್ಲಿ 2,396 ಪ್ರಕರಣಗಳು ಹಾಗೂ 2025ರಲ್ಲಿ 2,515 ಪ್ರಕರಣಗಳು ದಾಖಲಾಗಿವೆ.
ರಾಜ್ಯ ರಾಜಧಾನಿ ಬೆಂಗಳೂರು ನಗರದಲ್ಲೇ ದಲಿತರ ಮೇಲಿನ ದೌರ್ಜನ್ಯ ಪ್ರಕರಣಗಳು ಹೆಚ್ಚಿವೆ. ಜಿಲ್ಲಾವಾರು ಅಂಕಿ ಸಂಖ್ಯೆಗಳಲ್ಲಿ ಬೆಂಗಳೂರು ಮೊದಲ ಸ್ಥಾನದಲ್ಲಿದೆ. 2023ರಿಂದ 2025ರ ವರೆಗೆ ಕ್ರಮವಾಗಿ 338, 328 ಮತ್ತು 324 ಪ್ರಕರಣಗಳು ದಾಖಲಾಗಿವೆ.
ಬೆಳಗಾವಿ ಜಿಲ್ಲೆಯಲ್ಲಿ 2025ರಲ್ಲಿ 143 ಪ್ರಕರಣಗಳು, ಹಾಸನ ಜಿಲ್ಲೆಯಲ್ಲಿ 127 ಪ್ರಕರಣಗಳು ಮತ್ತು ತುಮಕೂರು ಜಿಲ್ಲೆಯಲ್ಲಿ 120 ಪ್ರಕರಣಗಳು ವರದಿಯಾಗಿದ್ದು, ವರ್ಷದಿಂದ ವರ್ಷಕ್ಕೆ ಪ್ರಕರಣಗಳ ಸಂಖ್ಯೆ ಏರಿಕೆಯಾಗಿರುವುದು ಕಂಡು ಬಂದಿದೆ.
33 ಡಿಸಿಆರ್‌ಇ ಪೊಲೀಸ್ ಠಾಣೆ ಸ್ಥಾಪನೆ
ದೌರ್ಜನ್ಯ ಪ್ರಕರಣಗಳ ನಿಯಂತ್ರಣ ಮತ್ತು ತನಿಖೆಗಾಗಿ ಸರ್ಕಾರವು ಮಹತ್ವದ ಕ್ರಮ ಕೈಗೊಂಡಿದ್ದು, ರಾಜ್ಯದ ಎಲ್ಲಾ ಜಿಲ್ಲೆಗಳು ಹಾಗೂ ಬೆಂಗಳೂರು ನಗರ ಸೇರಿದಂತೆ ಒಟ್ಟು 33 ನಾಗರಿಕ ಹಕ್ಕು ಜಾರಿ ನಿರ್ದೇಶನಾಲಯ (DCRE) ಪೊಲೀಸ್ ಠಾಣೆಗಳನ್ನು ಸ್ಥಾಪಿಸಿದೆ. ಈ 33 ಠಾಣೆಗಳ ಪೈಕಿ 12 ಠಾಣೆಗಳಿಗೆ ಡಿವೈಎಸ್‌ಪಿ ದರ್ಜೆಯ ಅಧಿಕಾರಿಗಳನ್ನು ಠಾಣಾಧಿಕಾರಿಗಳನ್ನಾಗಿ ನೇಮಿಸಲಾಗಿದೆ.
ಉಳಿದ 21 ಠಾಣೆಗಳಲ್ಲಿ ಪ್ರಸ್ತುತ ಪೊಲೀಸ್ ಇನ್ಸ್‌ಪೆಕ್ಟರ್‌ಗಳು ಕಾರ್ಯನಿರ್ವಹಿಸುತ್ತಿದ್ದು, ಈ ಹುದ್ದೆಗಳನ್ನು ಡಿವೈಎಸ್‌ಪಿ ದರ್ಜೆಗೆ ಮೇಲ್ದರ್ಜೆಗೇರಿಸುವ ಪ್ರಸ್ತಾವನೆಯು ಸರ್ಕಾರದ ಪರಿಶೀಲನೆಯಲ್ಲಿದೆ ಎಂದು ಡಾ.ಜಿ. ಪರಮೇಶ್ವರ್ ಅವರು ವಿಧಾನಪರಿಷತ್‌ನಲ್ಲಿ ಸದಸ್ಯ ಪಿ.ಎಚ್.ಪೂಜಾರ್ ಕೇಳಿದ ಪ್ರಶ್ನೆಗೆ ಉತ್ತರಿಸಿದ್ದಾರೆ.
ದಲಿತರ ರಕ್ಷಣೆಗಾಗಿ ವಿಶೇಷ ಸೆಲ್‌ಗಳ ನೇಮಕ
ದಲಿತರ ಮೇಲಿನ ದೌರ್ಜನ್ಯ ತಡೆಗಟ್ಟಲು ರಾಜ್ಯದ ಎಂಟು ವಲಯಗಳಿಗೆ ತಲಾ ಒಬ್ಬರಂತೆ ಹಾಗೂ ಬೆಂಗಳೂರು ಮುಖ್ಯ ಕಚೇರಿಯಲ್ಲಿ ಇಬ್ಬರು ಸೇರಿದಂತೆ ಒಟ್ಟು 10 ಪೊಲೀಸ್ ವರಿಷ್ಠಾಧಿಕಾರಿಗಳು ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಅಲ್ಲದೆ, ಪ್ರತಿ ಘಟನೆಯನ್ನು ಸೂಕ್ಷ್ಮವಾಗಿ ಗಮನಿಸಿ ಕ್ರಮ ಕೈಗೊಳ್ಳಲು ಪ್ರತ್ಯೇಕ 'ಪ್ರೊಟೆಕ್ಷನ್ ಸೆಲ್' ಸಹ ಕಾರ್ಯನಿರ್ವಹಿಸುತ್ತಿದೆ ಎಂದು ರಾಜ್ಯ ಸರ್ಕಾರ ತಿಳಿಸಿದೆ.
ದೌರ್ಜನ್ಯ ಪ್ರಕರಣಗಳ ತನಿಖೆಯ ಜವಾಬ್ದಾರಿ ಡಿವೈಎಸ್‌ಪಿ ಗಳ ಮೇಲಿದೆ. ಆದರೆ, ಡಿವೈಎಸ್‌ಪಿಗಳ ಸಂಖ್ಯೆ ಕಡಿಮೆ ಇರುವುದರಿಂದ ಕೆಲ ಠಾಣೆಗಳಲ್ಲಿ ದಲಿತರ ದೌರ್ಜನ್ಯ ಪ್ರಕರಣಗಳ ತನಿಖೆಯ ಹೊಣೆಯನ್ನು ಪಿಎಸ್‌ಐ ಮತ್ತು ಅದಕ್ಕಿಂತ ಮೇಲ್ಪಟ್ಟ ದರ್ಜೆಯ ಅಧಿಕಾರಿಗಳಿಗೆ ವಹಿಸಲಾಗಿದೆ.

