
ದ್ವೇಷ ಭಾಷಣದ ಆರೋಪ: ವಿಧಾನ ಪರಿಷತ್ ಸದಸ್ಯ ಸಿ.ಟಿ. ರವಿ ಬಂಧನಕ್ಕೆ ಕರ್ನಾಟಕ ರಾಜ್ಯ ಮುಸ್ಲಿಮ್ ಒಕ್ಕೂಟ ಆಗ್ರಹ
ಸಮಾಜದಲ್ಲಿ ನಿರ್ದಿಷ್ಟ ಸಮುದಾಯದ ವಿರುದ್ಧ ದ್ವೇಷ ಬಿತ್ತುವ ಇಂತಹ ಪ್ರಚೋದನಕಾರಿ ಮಾತುಗಳ ವಿರುದ್ಧ ರಾಜ್ಯ ಸರ್ಕಾರ ತಕ್ಷಣವೇ ಎಚ್ಚೆತ್ತುಕೊಂಡು ಕಾನೂನು ಕ್ರಮ ಜರುಗಿಸಬೇಕು ಎಂದು ಒಕ್ಕೂಟವು ಒತ್ತಾಯಿಸಿದೆ.
ನೀಟ್ (NEET) ಪರೀಕ್ಷೆ ವಿವಾದಕ್ಕೆ ಸಂಬಂಧಿಸಿದಂತೆ ಚಿಕ್ಕಮಗಳೂರಿನಲ್ಲಿ ವಿವಾದಾತ್ಮಕ ಹೇಳಿಕೆ ನೀಡಿರುವ ವಿಧಾನ ಪರಿಷತ್ ಸದಸ್ಯ ಸಿ.ಟಿ. ರವಿ ಅವರನ್ನು ದ್ವೇಷ ಭಾಷಣದ ಆರೋಪದಡಿ ಕೂಡಲೇ ಬಂಧಿಸಬೇಕು ಎಂದು ಕರ್ನಾಟಕ ರಾಜ್ಯ ಮುಸ್ಲಿಮ್ ಒಕ್ಕೂಟ ಆಗ್ರಹಿಸಿದೆ.
ಈ ಕುರಿತು ಪತ್ರಿಕಾ ಪ್ರಕಟಣೆ ಹೊರಡಿಸಿರುವ ಒಕ್ಕೂಟದ ಮಾಧ್ಯಮ ವಕ್ತಾರ ಹಾಗೂ ಸಂಚಾಲಕ ಸುಹೇಲ್ ಮರೂರು, ಸಿ.ಟಿ. ರವಿ ಅವರ ಹೇಳಿಕೆಯು ಸಮಾಜದಲ್ಲಿ ಅಶಾಂತಿ ಸೃಷ್ಟಿಸುವ ಹಾಗೂ ಕೋಮು ದ್ವೇಷ ಹರಡುವ ಉದ್ದೇಶ ಹೊಂದಿದೆ ಎಂದು ಆರೋಪಿಸಿದ್ದಾರೆ.
ಗುರುವಾರ ಚಿಕ್ಕಮಗಳೂರಿನಲ್ಲಿ ಮಾತನಾಡಿದ್ದ ಸಿ.ಟಿ. ರವಿ, "ಮುಲ್ಲಾನಿಗೂ ನೀಟ್ ಪರೀಕ್ಷೆಗೂ ಏನು ಸಂಬಂಧ? ಎದೆ ಸೀಳಿದರೆ ಮೂರು ಅಕ್ಷರ ಬರಲ್ಲ" ಎಂದು ಹೇಳಿದ್ದರು. ಈ ಹೇಳಿಕೆಯು ಒಂದು ಧರ್ಮದ ಗೌರವಾನ್ವಿತ ಧರ್ಮಗುರುಗಳನ್ನು ಅವಮಾನಿಸುವ ಹಾಗೂ ಜನರನ್ನು ಧರ್ಮದ ಆಧಾರದಲ್ಲಿ ಪ್ರಚೋದಿಸುವಂತಿದೆ ಎಂದು ಒಕ್ಕೂಟ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ. ಈ ಹಿನ್ನೆಲೆಯಲ್ಲಿ ಚಿಕ್ಕಮಗಳೂರು ಜಾಮಿಯಾ ಮಸೀದಿ ಅಧ್ಯಕ್ಷ ಮುದಸ್ಸಿರ್ ಪಾಷಾ ಅವರು ಸಿ.ಟಿ. ರವಿ ವಿರುದ್ಧ ಈಗಾಗಲೇ ದೂರು ದಾಖಲಿಸಿದ್ದಾರೆ.
"ನೀಟ್ ಹೋರಾಟ ಹತ್ತಿಕ್ಕಲು ವಿಷಯಾಂತರ"
ನೀಟ್ ಹಗರಣ ಖಂಡಿಸಿ ದೇಶಾದ್ಯಂತ ವಿದ್ಯಾರ್ಥಿಗಳು ಬೀದಿಗಿಳಿದು ಕೇಂದ್ರ ಸರ್ಕಾರವನ್ನು ಪ್ರಶ್ನಿಸುತ್ತಿದ್ದಾರೆ. ಶಿಕ್ಷಣ ಸಚಿವರ ರಾಜೀನಾಮೆಗೆ ಆಗ್ರಹಿಸಿ ದೆಹಲಿಯಲ್ಲಿ ಬೃಹತ್ ಪ್ರತಿಭಟನೆಗಳು ನಡೆಯುತ್ತಿವೆ. ಈ ಜನಾಂದೋಲನವನ್ನು ಎದುರಿಸಲು ಅಸಹಾಯಕವಾಗಿರುವ ಬಿಜೆಪಿ, ಜನರ ಗಮನ ಬೇರೆಡೆ ಸೆಳೆಯಲು ಹಾಗೂ ವಿಷಯಾಂತರ ಮಾಡಲು ಮುಸ್ಲಿಮ್ ದ್ವೇಷದ ನೀತಿಯನ್ನು ಅನುಸರಿಸುತ್ತಿದೆ ಎಂದು ಒಕ್ಕೂಟ ಟೀಕಿಸಿದೆ. ವಿದ್ಯಾರ್ಥಿಗಳಿಗೆ ಬೆಂಬಲ ನೀಡಬೇಕಿದ್ದ ಬಿಜೆಪಿ, ಜನವಿರೋಧಿ ಪ್ರತಿಭಟನೆಗಳನ್ನು ನಡೆಸುತ್ತಾ ಇಂತಹ ಕೀಳುಮಟ್ಟದ ಹೇಳಿಕೆಗಳನ್ನು ನೀಡುತ್ತಿದೆ ಎಂದು ಪ್ರಕಟಣೆಯಲ್ಲಿ ದೂರಲಾಗಿದೆ.
ಬಿಜೆಪಿಯ ದ್ವಂದ್ವ ನೀತಿಗೆ ಖಂಡನೆ
ಇದೇ ವೇಳೆ ಮಾಜಿ ಸಂಸದ ಪ್ರತಾಪ್ ಸಿಂಹ ಅವರ ಹೇಳಿಕೆಯನ್ನೂ ಒಕ್ಕೂಟ ಖಂಡಿಸಿದೆ. ದೆಹಲಿಯಲ್ಲಿ ಹೋರಾಟ ಮಾಡುತ್ತಿರುವವರಿಗೆ ಮುಲ್ಲಾಗಳು ಬಿರಿಯಾನಿ ನೀಡುತ್ತಿದ್ದಾರೆ ಎಂಬ ಅವರ ಹೇಳಿಕೆಯು, ಪ್ರಶ್ನಿಸುವ ಪ್ರಜ್ಞಾವಂತ ನಾಗರಿಕರನ್ನು ಅವಮಾನಿಸುವಂತಿದೆ ಎಂದಿದೆ.
ಶಿಕ್ಷಣದ ವಿಚಾರದಲ್ಲಿ ಬಿಜೆಪಿಯ ದ್ವಂದ್ವ ನೀತಿಯನ್ನು ಪ್ರಶ್ನಿಸಿರುವ ಒಕ್ಕೂಟ, "ಒಂದೆಡೆ ಹಿಜಾಬ್ ನೆಪದಲ್ಲಿ ಮುಸ್ಲಿಮ್ ಹೆಣ್ಣುಮಕ್ಕಳ ಶಿಕ್ಷಣವನ್ನು ವಿರೋಧಿಸುತ್ತಾರೆ, ಸಂವಿಧಾನಬದ್ಧ ಮೀಸಲಾತಿಯನ್ನು ರದ್ದು ಮಾಡುತ್ತಾರೆ ಮತ್ತು ಉತ್ತರ ಪ್ರದೇಶದಲ್ಲಿ ಜೌಹರ್ ವಿಶ್ವವಿದ್ಯಾಲಯದ ಕಟ್ಟಡಗಳನ್ನು ಧ್ವಂಸ ಮಾಡುತ್ತಾರೆ. ಮತ್ತೊಂದೆಡೆ ಮುಸ್ಲಿಮರಿಗೆ ಅಕ್ಷರ ಜ್ಞಾನವಿಲ್ಲ ಎಂದು ಮೂದಲಿಸುತ್ತಾರೆ. ಬಿಜೆಪಿಗೆ ಮುಸ್ಲಿಮರ ಶಿಕ್ಷಣದ ಬಗ್ಗೆ ನೈಜ ಕಳಕಳಿಯಿಲ್ಲ; ಕೇವಲ ರಾಜಕೀಯ ಲಾಭಕ್ಕಾಗಿ ಸಮುದಾಯವನ್ನು ಬಳಸಿಕೊಳ್ಳಲಾಗುತ್ತಿದೆ" ಎಂದು ಆಕ್ರೋಶ ವ್ಯಕ್ತಪಡಿಸಿದೆ.
ಸಮಾಜದಲ್ಲಿ ನಿರ್ದಿಷ್ಟ ಸಮುದಾಯದ ವಿರುದ್ಧ ದ್ವೇಷ ಬಿತ್ತುವ ಇಂತಹ ಪ್ರಚೋದನಕಾರಿ ಮಾತುಗಳ ವಿರುದ್ಧ ರಾಜ್ಯ ಸರ್ಕಾರ ತಕ್ಷಣವೇ ಎಚ್ಚೆತ್ತುಕೊಂಡು ಕಾನೂನು ಕ್ರಮ ಜರುಗಿಸಬೇಕು ಎಂದು ಒಕ್ಕೂಟವು ಒತ್ತಾಯಿಸಿದೆ.

