x

ಗೋಹತ್ಯೆ ಕಾಯ್ದೆಯಲ್ಲಿ ಸಣ್ಣ ರೈತರ ಹಿತ ಕಾಪಾಡಬೇಕು: ಡಾ. ಪೀಟರ್ ಮಚಾದೊ

ರೈತರು ದೇಶದ ಬೆನ್ನೆಲುಬಾಗಿದ್ದು, ಅವರ ಬದುಕಿಗೆ ತೊಂದರೆಯಾಗದಂತೆ ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ಪೀಟರ್ ಮಚಾದೊ ಒತ್ತಾಯಿಸಿದ್ದಾರೆ.


Click the Play button to hear this message in audio format

ಗೋಹತ್ಯೆ ನಿಷೇಧ ಕಾಯ್ದೆ ವಿಚಾರದಲ್ಲಿ ಸಣ್ಣ ರೈತರ ಹಿತಾಸಕ್ತಿಯನ್ನು ಕಾಪಾಡಬೇಕು ಎಂದು ಬೆಂಗಳೂರಿನ ಆರ್ಚ್ ಬಿಷಪ್ Most Rev. ಡಾ. ಪೀಟರ್ ಮಚಾದೊ ಒತ್ತಾಯಿಸಿದ್ದಾರೆ. ಗೋಹತ್ಯೆ ವಿಚಾರವನ್ನು ಕೇವಲ ಒಂದು ಸಮುದಾಯಕ್ಕೆ ಸಂಬಂಧಿಸಿದ ವಿಷಯವಾಗಿ ನೋಡಬಾರದು. ಬದಲಾಗಿ, ರೈತರ ಜೀವನೋಪಾಯ ಮತ್ತು ಅವರ ಆರ್ಥಿಕ ಪರಿಸ್ಥಿತಿಯ ದೃಷ್ಟಿಯಿಂದಲೂ ಚರ್ಚಿಸಬೇಕು ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಸಣ್ಣ ರೈತರ ಬದುಕಿನ ಪ್ರಶ್ನೆ

ಗೋಹತ್ಯೆ ವಿಚಾರದಲ್ಲಿ ‘ಸ್ಲಾಟರ್’ ಎಂಬ ಪದ ಬಳಕೆ ಸರಿಯಲ್ಲ ಎಂದು ಹೇಳಿದ ಆರ್ಚ್ ಬಿಷಪ್ ಪೀಟರ್ ಮಚಾದೊ, ರೈತರ ಬಳಿ ಒಂದು, ಎರಡು ಅಥವಾ ಮೂರು ಹಸುಗಳು ಅಥವಾ ಕರುಗಳಿರುತ್ತವೆ. ಅವು ವಯಸ್ಸಾದಾಗ ಅಥವಾ ನಿರ್ವಹಣೆ ಕಷ್ಟವಾದಾಗ, ಅವುಗಳನ್ನು ಇಟ್ಟುಕೊಳ್ಳಲು ರೈತರಿಗೆ ಸಾಧ್ಯವಾಗುವುದಿಲ್ಲ ಎಂದು ತಿಳಿಸಿದ್ದಾರೆ.

ಇಂತಹ ಸಂದರ್ಭದಲ್ಲಿ ಹಳೆಯ ಹಸುಗಳನ್ನು ಮಾರಾಟ ಮಾಡಿ, ಮತ್ತೊಂದು ಹಸು ಖರೀದಿಸಿ ತಮ್ಮ ಜೀವನೋಪಾಯ ಮುಂದುವರಿಸಬೇಕಾಗುತ್ತದೆ. ಎಲ್ಲರೂ ಗೋಹತ್ಯೆ ಮಾಡಬೇಕು ಎಂಬುದು ತಮ್ಮ ನಿಲುವಲ್ಲ. ಆದರೆ ಸಣ್ಣ ರೈತರಿಗೆ ಅನುಕೂಲವಾಗುವಂತಹ ವ್ಯವಸ್ಥೆ ರೂಪಿಸುವ ಅಗತ್ಯವಿದೆ ಎಂದು ಹೇಳಿದ್ದಾರೆ.

ರೈತರು ದೇಶದ ಬೆನ್ನೆಲುಬಾಗಿದ್ದು, ಅವರ ಬದುಕಿಗೆ ತೊಂದರೆಯಾಗದಂತೆ ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ಪೀಟರ್ ಮಚಾದೊ ಒತ್ತಾಯಿಸಿದ್ದಾರೆ.

ಗೋಶಾಲೆಗಳ ಕೊರತೆಯಿಂದ ರೈತರಿಗೆ ಸಂಕಷ್ಟ

ವಯಸ್ಸಾದ ಹಸುಗಳನ್ನು ಗೋಶಾಲೆಗಳಿಗೆ ಕಳುಹಿಸುವ ವ್ಯವಸ್ಥೆ ಸಮರ್ಪಕವಾಗಿದ್ದರೆ ರೈತರಿಗೆ ನೆರವಾಗುತ್ತಿತ್ತು. ಗೋಶಾಲೆಗಳಲ್ಲಿ ಸಾಕಷ್ಟು ಸ್ಥಳಾವಕಾಶ ಮತ್ತು ವ್ಯವಸ್ಥೆ ಇದ್ದರೆ, ರೈತರು ತಮ್ಮ ಹಸುಗಳನ್ನು ಅಲ್ಲಿ ಬಿಡಬಹುದಿತ್ತು ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಜೊತೆಗೆ, ಹಸುಗಳನ್ನು ಗೋಶಾಲೆಗಳಿಗೆ ತರುವ ರೈತರಿಗೆ ಸರ್ಕಾರ ಪರಿಹಾರ ನೀಡುವ ವ್ಯವಸ್ಥೆಯನ್ನೂ ಮಾಡಬಹುದಿತ್ತು. ಆದರೆ ಗೋಶಾಲೆಗಳ ಕೊರತೆ ಮತ್ತು ಸರ್ಕಾರದ ಸಮರ್ಪಕ ಕ್ರಮಗಳಿಲ್ಲದಿರುವುದು ರೈತರಿಗೆ ಸಮಸ್ಯೆಯಾಗಿದೆ. ರೈತರ ಹಿತದೃಷ್ಟಿಯಿಂದ ಈ ವಿಚಾರವನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಬೇಕು ಎಂದು ಹೇಳಿದ್ದಾರೆ.

ಎಲ್ಲ ಸಮುದಾಯಗಳ ಬೇಡಿಕೆಗಳಿಗೆ ಒಗ್ಗಟ್ಟಿನ ಹೋರಾಟ

ಮುಸ್ಲಿಂ ಸಮುದಾಯ ಸೇರಿದಂತೆ ಅಲ್ಪಸಂಖ್ಯಾತರು, ಹಿಂದುಳಿದ ವರ್ಗಗಳು ಮತ್ತು ರೈತರಿಗೆ ಸರ್ಕಾರ ನೀಡಿದ್ದ ಭರವಸೆಗಳು ಈಡೇರಿಲ್ಲ ಎಂದು ಆರ್ಚ್ ಬಿಷಪ್ ಪೀಟರ್ ಮಚಾದೊ ತಿಳಿಸಿದ್ದಾರೆ.

ಈ ಹಿನ್ನೆಲೆಯಲ್ಲಿ ಎಲ್ಲರೂ ಒಗ್ಗೂಡಿ ತಮ್ಮ ಬೇಡಿಕೆಗಳನ್ನು ಸರ್ಕಾರದ ಮುಂದೆ ಇಡಲು ನಿರ್ಧರಿಸಿದ್ದೇವೆ. ಮತಾಂತರ ಅಥವಾ ಧಾರ್ಮಿಕ ವಿಚಾರಗಳನ್ನು ಬದಿಗಿಟ್ಟು, ಎಲ್ಲ ಸಮುದಾಯಗಳಿಗೂ ಆಗಿರುವ ಅನ್ಯಾಯದ ವಿರುದ್ಧ ಒಟ್ಟಾಗಿ ಹೋರಾಡಬೇಕು ಎಂಬುದು ತಮ್ಮ ಉದ್ದೇಶ ಎಂದು ಹೇಳಿದ್ದಾರೆ.

ಸರ್ಕಾರ ನೀಡಿರುವ ಆಶ್ವಾಸನೆಗಳನ್ನು ಈಡೇರಿಸುವಂತೆ ಒತ್ತಾಯಿಸಲು ಎಲ್ಲರೂ ಒಂದಾಗಿ ಮುಂದೆ ಬಂದಿದ್ದೇವೆ. ಈ ನಿಟ್ಟಿನಲ್ಲಿ ಒಗ್ಗಟ್ಟಿನ ಸಭೆ ಹಾಗೂ ಶಾಂತಿ ಸಭೆಯನ್ನೂ ನಡೆಸಲಾಗಿದೆ ಎಂದು ಬೆಂಗಳೂರಿನ ಆರ್ಚ್ ಬಿಷಪ್ Most Rev. ಡಾ. ಪೀಟರ್ ಮಚಾದೊ ತಿಳಿಸಿದ್ದಾರೆ.

Read More
Next Story