
ದುಬಾರೆ ದುರಂತ: ಪ್ರವಾಸಿ ಮಹಿಳೆಯ ಬೆನ್ನಲ್ಲೇ ಸಾವನ್ನಪ್ಪಿದ ಮಾರ್ತಾಂಡ ಆನೆ
ದಾಳಿಯಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಮಾರ್ತಾಂಡನನ್ನು ಉಳಿಸಿಕೊಳ್ಳಲು ಪಶುವೈದ್ಯರು ಇಡೀ ರಾತ್ರಿ ಶ್ರಮಿಸಿತು. ಆದರೆ, ಕಂಜನ್ ಆನೆಯ ದಂತಗಳು ಮಾರ್ತಾಂಡನ ಅಂಗಾಂಗಗಳಿಗೆ ತೀವ್ರ ಹಾನಿ ಮಾಡಿದ್ದವು.
ಕೊಡಗಿನ ಪ್ರವಾಸಿ ತಾಣವಾದ ದುಬಾರೆ ಆನೆ ಶಿಬಿರದಲ್ಲಿ ಸಾಕಾನೆಗಳ ನಡುವಿನ ಕಾದಾಟದ ಪರಿಣಾಮ ತೀವ್ರವಾಗಿ ಗಾಯಗೊಂಡಿದ್ದ ಮಾರ್ತಾಂಡ ಆನೆಯು ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದೆ.
ಸೋಮವಾರ ಮಧ್ಯಾಹ್ನ 12 ಗಂಟೆಯ ಸುಮಾರಿಗೆ ದುಬಾರೆ ಶಿಬಿರದ ಮಾರ್ತಾಂಡ ಮತ್ತು ಕಂಜನ್ ಎರಡು ಆನೆಗಳ ನಡುವೆ ಅನಿರೀಕ್ಷಿತವಾಗಿ ಕಾದಾಟ ನಡೆಯಿತು. ಈ ಕಾಳಗದ ರಭಸಕ್ಕೆ ಸಿಲುಕಿ ಚೆನ್ನೈ ಮೂಲದ ಪ್ರವಾಸಿ ಮಹಿಳೆಯೊಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದರು. ಪ್ರವಾಸಿ ಮಹಿಳೆಯ ಸಾವಿನ ಬೆನ್ನಲ್ಲೇ ಈಗ ಅರಣ್ಯ ಇಲಾಖೆಯ ಸಾಕಾನೆ ಮಾರ್ತಾಂಡ ಕೂಡ ಸಾವನ್ನಪ್ಪಿದೆ.
ದಾಳಿಯಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಮಾರ್ತಾಂಡನನ್ನು ಉಳಿಸಿಕೊಳ್ಳಲು ಪಶುವೈದ್ಯ ಡಾ. ಮುಜೀಬ್ ನೇತೃತ್ವದ ತಂಡ ಇಡೀ ರಾತ್ರಿ ಶ್ರಮಿಸಿತು. ಆದರೆ, ಕಂಜನ್ ಆನೆಯ ದಂತಗಳು ಮಾರ್ತಾಂಡನ ದೇಹದ ಒಳಗಿನ ಅಂಗಾಂಗಗಳಿಗೆ ತೀವ್ರ ಹಾನಿ ಮಾಡಿದ್ದವು. ಅತಿಯಾದ ರಕ್ತಸ್ರಾವ ಮತ್ತು ಆಂತರಿಕ ಸೋಂಕು ಮಾರ್ತಾಂಡನ ಸಾವಿಗೆ ಕಾರಣ ಎನ್ನಲಾಗಿದೆ. ಸೌಮ್ಯ ಸ್ವಭಾವಕ್ಕೆ ಹೆಸರಾಗಿದ್ದ ಮಾರ್ತಾಂಡ, ಅರಣ್ಯ ಇಲಾಖೆಯ ಹಲವು ಕಾರ್ಯಾಚರಣೆಗಳಲ್ಲಿ ಪಾಲ್ಗೊಂಡಿದ್ದ ಧೀರ ಆನೆ. ಇಂತಹ ಆನೆ ಈಗ ಶಿಬಿರದಲ್ಲಿ ಇಲ್ಲದಿರುವುದು ಪ್ರಾಣಿ ಪ್ರೇಮಿಗಳು ಮತ್ತು ಮಾವುತರ ಪಾಲಿಗೆ ದೊಡ್ಡ ಆಘಾತವಾಗಿದೆ.
ನಿರ್ಲಕ್ಷ್ಯದ ಆರೋಪಗಳು
ಈ ಘಟನೆಯು ಆಡಳಿತಾತ್ಮಕ ವೈಫಲ್ಯಗಳ ಕುರಿತು ಹಲವಾರು ಗಂಭೀರ ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಪ್ರವಾಸಿಗರು ಆನೆಗಳಿಗೆ ಸ್ನಾನ ಮಾಡಿಸುವಾಗ ಅಂತಹ ಉಗ್ರ ಸ್ವಭಾವದ ಆನೆಗಳನ್ನು ಯಾಕೆ ಹತ್ತಿರವಿರಿಸಲಾಗಿತ್ತು? ಪ್ರಾಣಿಗಳ ನಡುವಿನ ಹಠಾತ್ ಜಗಳವನ್ನು ನಿಯಂತ್ರಿಸಲು ಸಿಬ್ಬಂದಿ ಅಷ್ಟು ಹತ್ತಿರದಲ್ಲಿ ಇರಲಿಲ್ಲವೇ? ಕೇವಲ ಪ್ರವಾಸಿಗರನ್ನು ರಂಜಿಸುವುದಷ್ಟೇ ಶಿಬಿರದ ಗುರಿಯೇ? ವನ್ಯಜೀವಿಗಳ ಸುರಕ್ಷತೆ ಮತ್ತು ಪ್ರವಾಸಿಗರ ಭದ್ರತೆಗೆ ಆದ್ಯತೆ ಏಕೆ ಸಿಗಲಿಲ್ಲ? ಎಂಬ ಆರೋಪಗಳು ಕೇಳಿಬಂದಿವೆ.
ದುಬಾರೆ ಶಿಬಿರವು ಕೇವಲ ಆದಾಯದ ಮೂಲವಲ್ಲ, ಅದು ವನ್ಯಜೀವಿ ಸಂರಕ್ಷಣೆಯ ಕೇಂದ್ರವಾಗಿದೆ. ಕಾಡು ಪ್ರಾಣಿಗಳ ಸ್ವಭಾವದಲ್ಲಿ ಸಣ್ಣ ಬದಲಾವಣೆಯನ್ನೂ ಗ್ರಹಿಸುವ ಸಾಮರ್ಥ್ಯವನ್ನು ಸಿಬ್ಬಂದಿ ಹೊಂದಿರಬೇಕು. ಈಗ ಶಿಬಿರವನ್ನು ಎರಡು ದಿನಗಳ ಕಾಲ ಬಂದ್ ಮಾಡಲಾಗಿದೆ. ಆದರೆ ಇದು ಪರಿಹಾರವಲ್ಲ. ಪ್ರವಾಸಿಗರು ಆನೆಗಳ ಬಳಿ ಹೋಗುವ ಮುನ್ನ ಕಡ್ಡಾಯವಾಗಿ ಪಾಲಿಸಬೇಕಾದ ಸುರಕ್ಷತಾ ಅಂತರ ಮತ್ತು ಮಿತಿಗಳ ಬಗ್ಗೆ ಕಠಿಣ ನಿಯಮಗಳನ್ನು ಜಾರಿಗೆ ತರಬೇಕಿದೆ.

