
Iran-israel War Impact| ಅಡುಗೆ ಎಣ್ಣೆ ದರ ಏರಿಕೆ ಬಿಸಿ; ʼಗಾಣದ ಎಣ್ಣೆʼ ಮೊರೆ ಹೋದ ಗ್ರಾಹಕರು!
ಯುದ್ಧಪೀಡಿತ ದೇಶಗಳಿಂದ ಎಣ್ಣೆ ಆಮದು ಮಾಡಿಕೊಳ್ಳದೇ ಹೋದರೂ ಮಾರುಕಟ್ಟೆ ಏರಿಳಿತದಿಂದ ಪೂರೈಕೆ ಕಡಿಮೆಯಾಗಿದೆ. ಭಾರತವು ಸೂರ್ಯಕಾಂತಿ ಹಾಗೂ ತಾಳೆ ಎಣ್ಣೆಯನ್ನು ಹೆಚ್ಚು ಆಮದು ಮಾಡಿಕೊಳ್ಳುತ್ತಿದೆ.
ಇರಾನ್-ಇಸ್ರೇಲ್ ಯುದ್ಧದಿಂದ ಸಿಲಿಂಡರ್ ಬೆಲೆ ಏರಿಕೆಯಾದ ಬೆನ್ನಲ್ಲೇ ಅಡುಗೆ ಎಣ್ಣೆ ದರವೂ ಗ್ರಾಹಕರಿಗೆ ದೊಡ್ಡ ಹೊಡೆತ ನೀಡಿದೆ.
ಕಳೆದ 15 ದಿನಗಳಿಂದ ಮಾರುಕಟ್ಟೆಯಲ್ಲಿ ಅಡುಗೆ ಎಣ್ಣೆ ಬೆಲೆ ಶರವೇಗದಲ್ಲಿ ಏರುತ್ತಿದೆ. ಶುದ್ಧೀಕರಿಸಿದ (ರಿಫೈನ್ಡ್) ಎಣ್ಣೆಯ ಬೆಲೆಗಳು ಲೀಟರ್‌ಗೆ 20-30 ರೂ. ಏರಿಕೆಯಾಗಿವೆ. ಯುದ್ಧದಿಂದ ಜಾಗತಿಕ ಮಾರುಕಟ್ಟೆಯಲ್ಲಿ ಉಂಟಾಗಿರುವ ತಲ್ಲಣವೇ ಬೆಲೆ ಏರಿಕೆಗೆ ಕಾರಣ ಎನ್ನಲಾಗಿದೆ. ಸೂರ್ಯಕಾಂತಿ ಮತ್ತು ತಾಳೆ ಎಣ್ಣೆಯ ಬೆಲೆಗಳು ಏರಿಕೆಯಾಗಿರುವ ಕಾರಣ ಗ್ರಾಹಕರು ಸಾಂಪ್ರದಾಯಿಕ ಗಾಣದ ಎಣ್ಣೆ ಬಳಕೆಯತ್ತ ವಾಲಿದ್ದಾರೆ.
ಯುದ್ಧಪೀಡಿತ ದೇಶಗಳಿಂದ ಎಣ್ಣೆ ಆಮದು ಮಾಡಿಕೊಳ್ಳದಿದ್ದರೂ ಮಾರುಕಟ್ಟೆ ಏರಿಳಿತದಿಂದ ಪೂರೈಕೆ ಕಡಿಮೆಯಾಗಿದೆ. ಭಾರತವು ಸೂರ್ಯಕಾಂತಿ ಹಾಗೂ ತಾಳೆ ಎಣ್ಣೆಯನ್ನು ಹೆಚ್ಚು ಆಮದು ಮಾಡಿಕೊಳ್ಳುತ್ತಿದೆ. ಆಮದು ಕಡಿಮೆಯಾದ ಹಿನ್ನೆಲೆಯಲ್ಲಿ ಕಂಪನಿಗಳು ಬೆಲೆ ಏರಿಕೆ ಮಾಡಿವೆ. ಪ್ರಸ್ತುತ, ಬ್ರ್ಯಾಂಡೆಡ್ ಎಣ್ಣೆ ಹಾಗೂ ಗಾಣದ ಎಣ್ಣೆಯ ಬೆಲೆಗಳಲ್ಲಿ ಹೆಚ್ಚು ವ್ಯತ್ಯಾಸವಿಲ್ಲದ ಕಾರಣ ಗ್ರಾಹಕರು ಗಾಣದ ಎಣ್ಣೆಯ ಮೊರೆ ಹೋಗಿದ್ದಾರೆ.
“ಕೊಬ್ಬರಿ ಬೆಲೆ ಕೆ.ಜಿ.ಗೆ 70 ರೂ.ಗಳಿದ್ದಾಗ ಲೀಟರ್ ಗಾಣದ ಎಣ್ಣೆಯನ್ನು 170 ರೂ.ಗಳಂತೆ ಮಾರಾಟ ಮಾಡಲಾಗುತ್ತಿತ್ತು. ಈಗ ಕೊಬ್ಬರಿ ಬೆಲೆ 300 ರೂ.ಗಳಿಗೆ ಏರಿಕೆಯಾಗಿರುವುದರಿಂದ ಲೀಟರ್ ಎಣ್ಣೆಯನ್ನು 550 ರೂ.ಗಳಿಗೆ ಮಾರಾಟ ಮಾಡಲಾಗುತ್ತಿದೆ. ಅದೇ ರೀತಿ ಕಡಲೆಬೀಜ ಕೆ.ಜಿ.ಗೆ 95 ರೂ.ಗಳಿದ್ದಾಗ ಲೀಟರ್ ಎಣ್ಣೆಯನ್ನು 250 ರೂ.ಗಳಿಗೆ ಮಾರಾಟ ಮಾಡಲಾಗುತ್ತಿತ್ತು. ಪ್ರಸ್ತುತ, ಕಡಲೆಬೀಜದ ಬೆಲೆ ಹೆಚ್ಚಾಗಿದ್ದರೂ ಲೀಟರ್ ಎಣ್ಣೆಯನ್ನು 350-390 ರೂ.ಗಳಿಗೆ ಮಾರಾಟ ಮಾಡಲಾಗುತ್ತಿದೆ," ಎಂದು ತುಮಕೂರಿನ ಅತೋಶಿ ಆಯಿಲ್ ಮಿಲ್ ಮಾಲೀಕ ವಾಗೀಶ್ ‘ದ ಫೆಡರಲ್ ಕರ್ನಾಟಕ’ಕ್ಕೆ ತಿಳಿಸಿದರು.
ರಿಫೈನರಿ ಎಣ್ಣೆ ದರವೂ ಹೆಚ್ಚಳ
ಭಾರತವು ತನ್ನ ಅಡುಗೆ ಎಣ್ಣೆಯ ಅಗತ್ಯಕ್ಕಾಗಿ ವಿದೇಶಗಳ ಮೇಲೆ ಹೆಚ್ಚು ಅವಲಂಬಿತವಾಗಿದ್ದು, ಇದು ಬೆಲೆ ಏರಿಕೆಗೆ ಕಾರಣ ಎನ್ನಲಾಗುತ್ತಿದೆ.
ವಾರ್ಷಿಕವಾಗಿ 1 ಕೋಟಿ ಟನ್ ತಾಳೆ ಎಣ್ಣೆ ಆಮದಾಗುತ್ತಿದ್ದು, ಶೇ. 90ರಷ್ಟು ಎಣ್ಣೆ ಇಂಡೋನೇಷ್ಯಾ ಮತ್ತು ಮಲೇಷ್ಯಾದಿಂದ ಪೂರೈಕೆಯಾಗುತ್ತಿದೆ. ಇನ್ನು ಶೇ. 70 ರಿಂದ 90 ರಷ್ಟು ಸೂರ್ಯಕಾಂತಿ ಎಣ್ಣೆಯನ್ನು ರಷ್ಯಾ ಮತ್ತು ಉಕ್ರೇನ್ ಪೂರೈಸುತ್ತಿವೆ. ಯುದ್ಧದ ಭೀತಿಯಿಂದ ಅಡುಗೆ ಎಣ್ಣೆ ಪೂರೈಕೆಯಲ್ಲಿ ವ್ಯತ್ಯಯ ಕಂಡುಬಂದಿದೆ.
ಪ್ಯಾಕೆಟ್ ಎಣ್ಣೆಗಳ ಬೆಲೆ ಏರಿಕೆ ಬೆನ್ನಲ್ಲೇ ಜನರು ಗಾಣದ ಎಣ್ಣೆ ಖರೀದಿಗೆ ಒಲವು ತೋರುತ್ತಿದ್ದಾರೆ. ಕಳೆದ ಎರಡು ವಾರಗಳಲ್ಲಿ ಗ್ರಾಹಕರ ಸಂಖ್ಯೆ ಹೆಚ್ಚಾಗಿದ್ದು, ಶೇ. 10 ರಷ್ಟು ವ್ಯಾಪಾರ ವೃದ್ಧಿಸಿದೆ ಎಂದು ಮೈಸೂರಿನ ಗಾಣದ ಎಣ್ಣೆ ಮಳಿಗೆ ಮಾಲೀಕ ಶೈಲೇಶ್ ಹೇಳುತ್ತಾರೆ.
ಬ್ರ್ಯಾಂಡೆಡ್ ಕಂಪನಿಯ ಅಡುಗೆ ಎಣ್ಣೆ ಬೆಲೆ ಹೇಗಿದೆ?
ವಿವಿಧ ಕಂಪನಿಗಳ ಸೂರ್ಯಕಾಂತಿ ಎಣ್ಣೆಯು ಲೀಟರ್‌ಗೆ 20 ರೂ. ಏರಿಕೆಯಾಗಿದೆ. ಈ ಹಿಂದೆ 155 ರೂ.ಗಳಿದ್ದ ಲೀಟರ್ ಎಣ್ಣೆಯ ಬೆಲೆ ಈಗ 175 ರೂ. ಮುಟ್ಟಿದೆ. 15 ಲೀಟರ್ ಟಿನ್ ಬೆಲೆ 1,600 ರಿಂದ 1,750 ರೂ.ಗಳಿಗೆ ಏರಿಕೆಯಾಗಿದೆ.
ತಾಳೆ ಎಣ್ಣೆ ಪ್ರತಿ ಲೀಟರ್‌ಗೆ 115 ರಿಂದ 135 ರೂ.ಗಳಿಗೆ ಏರಿಕೆಯಾಗಿದ್ದು, ಪ್ರತಿ ಟಿನ್ ಬೆಲೆ 1,170 ರೂ.ಗೆ ತಲುಪಿದೆ. ದೀಪದ ಎಣ್ಣೆ ದರವೂ ಕೂಡ ಲೀಟರ್‌ಗೆ 20 ರಿಂದ 30 ರೂ.ಗಳಷ್ಟು ಏರಿಕೆ ಕಂಡಿದೆ.
ಬಾದಾಮಿ ಎಣ್ಣೆ ಪ್ರತಿ ಲೀಟರ್‌ಗೆ 3,500 ರೂ.ಗಳಂತೆ ಮಾರಾಟವಾಗುತ್ತಿದೆ. ಪ್ಯಾಕೆಟ್ ಎಣ್ಣೆ ಮತ್ತು ಗಾಣದ ಎಣ್ಣೆಯ ಬೆಲೆ ವ್ಯತ್ಯಾಸ ಕಡಿಮೆಯಾಗುತ್ತಿರುವುದರಿಂದ ಜನರು ಗುಣಮಟ್ಟಕ್ಕೆ ಹೆಚ್ಚು ಆದ್ಯತೆ ನೀಡುತ್ತಿದ್ದು, ಗಾಣದ ಎಣ್ಣೆ ಖರೀದಿಯತ್ತ ಒಲವು ತೋರುತ್ತಿದ್ದಾರೆ.
ಹಿಂಡಿಗೂ ಹೆಚ್ಚಿದ ಬೇಡಿಕೆ
ಗಾಣದಲ್ಲಿ ಕಡಲೆಬೀಜ ಹಾಗೂ ಕೊಬ್ಬರಿ ಎಣ್ಣೆ ಸಂಸ್ಕರಣೆಯ ಬಳಿಕ ಉಳಿಯುವ ಘನತ್ಯಾಜ್ಯವು ಹಿಂಡಿಯಾಗಿ ಬಳಕೆಯಾಗಲಿದ್ದು, ಅದಕ್ಕೂ ಬೇಡಿಕೆ ಹೆಚ್ಚುತ್ತಿದೆ.
ಗಾಣದಿಂದ ತಯಾರಾದ ಹಿಂಡಿಯು ಪ್ರಾಣಿಗಳ ಆಹಾರವಾಗಿ ಬಳಕೆಯಾಗುತ್ತಿದ್ದು, ಪ್ರತಿ ಕೆ.ಜಿ. ಹಿಂಡಿಯನ್ನು 50 ರೂ.ಗಳಂತೆ ಮಾರಾಟ ಮಾಡಲಾಗುತ್ತಿದೆ. ರಿಫೈನರಿ ಎಣ್ಣೆಯ ಬೆಲೆ ಏರಿಕೆಯಾದರೂ ಗಾಣದ ಎಣ್ಣೆಯ ಬೆಲೆಗಳು ಸ್ಥಿರವಾಗಿವೆ. "ಯುದ್ಧದ ಪರಿಣಾಮ ಅತ್ಯಲ್ಪ ದರ ಏರಿಸಿದ್ದೇವೆ. ಬ್ರ್ಯಾಂಡೆಡ್ ಅಡುಗೆ ಎಣ್ಣೆಯ ದರ ಏರಿಕೆಯಿಂದ ಹೆಚ್ಚಿನ ಗ್ರಾಹಕರು ಗಾಣದ ಎಣ್ಣೆಯನ್ನು ಅವಲಂಬಿಸಿದ್ದಾರೆ. ಇದರಿಂದ ವ್ಯವಹಾರವೂ ಉತ್ತಮವಾಗಿದೆ," ಎಂದು ಅತೋಶಿ ಆಯಿಲ್ ಮಿಲ್ ಮಾಲೀಕ ವಾಗೀಶ್ ಹೇಳಿದರು.
ಕಳೆದ ವರ್ಷ ಬಿತ್ತನೆ ಹಾಗೂ ಕೊಯ್ಲು ಸಂದರ್ಭದಲ್ಲಿ ಮಳೆಯಾದ ಕಾರಣ ಶೇಂಗಾ ಬೆಳೆಯ ಇಳುವರಿ ಕಡಿಮೆಯಾಗಿತ್ತು. ಈ ವರ್ಷ ಎರಡೂ ಅವಧಿಯಲ್ಲಿ ಉತ್ತಮ ಮಳೆಯಾಗಿ ಭರಪೂರ ಬೆಲೆ ಬಂದಿದೆ. ಕಡಲೆಬೀಜದ ಪೂರೈಕೆ ಹೆಚ್ಚಾಗುವ ಹಿನ್ನೆಲೆಯಲ್ಲಿ ಬೆಲೆಗಳು ಇನ್ನಷ್ಟು ಕಡಿಮೆಯಾಗಲಿವೆ. "ನಮಗೆ ಎಣ್ಣೆಯ ಬೆಲೆ ಏರಿಕೆಯಿಂದ ಬರುವ ಲಾಭಕ್ಕಿಂತ ಹಿಂಡಿ ಮಾರಾಟದಿಂದ ಬರುವ ಲಾಭವೇ ಪ್ರಧಾನವಾಗಿದೆ. ಹಿಂಡಿಗಾಗಿ ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ ಹಾಗೂ ಕೋಲಾರ ಜಿಲ್ಲೆಗಳಿಂದ ಹೆಚ್ಚು ಬೇಡಿಕೆ ಬರುತ್ತಿದೆ," ಎಂದು ವಿವರಿಸಿದರು.

